ADVERTISEMENT

ರೈತರಿಗೆ ನೆರವಾಗುವ ಮೈಅಗ್ರಿಗುರು ಆ್ಯಪ್‌

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 19:30 IST
Last Updated 28 ಫೆಬ್ರುವರಿ 2017, 19:30 IST
ರೈತರಿಗೆ ನೆರವಾಗುವ ಮೈಅಗ್ರಿಗುರು ಆ್ಯಪ್‌
ರೈತರಿಗೆ ನೆರವಾಗುವ ಮೈಅಗ್ರಿಗುರು ಆ್ಯಪ್‌   
ಈ ವಾರ ಆ್ಯಪ್‌ ಮಾರುಕಟ್ಟೆಯಲ್ಲಿ ರೈತರಿಗಾಗಿ ವಿಶೇಷವಾಗಿ ವಿನ್ಯಾಸ ಮಾಡಿರುವ ಮೈಅಗ್ರಿಗುರು ಆ್ಯಪ್‌ ಬಿಡುಗಡೆಯಾಗಿದೆ. ಹಾಗೆಯೇ ರೈಲು ಅಪಘಾತಗಳನ್ನು ತಪ್ಪಿಸುವ ಮತ್ತು ಗುಣಮಟ್ಟದ ರೈಲು ಸಂಚಾರಕ್ಕಾಗಿ  ರೈಲ್ವೆ ಕ್ವಾಲಿಟಿ ಆ್ಯಪ್‌ ಬಿಡುಗಡೆ ಆಗಿದೆ.
 
ರೈತರಿಗಾಗಿ ಮೈಅಗ್ರಿಗುರು ಆ್ಯಪ್‌
ಮಹೀಂದ್ರ ಅಗ್ರಿ ಸಲ್ಯೂಷನ್‌ ಲಿಮಿಟೆಡ್‌ ಕಂಪೆನಿಯು ರೈತರಿಗೆ ಸಲಹೆ ಮತ್ತು ಮಾರುಕಟ್ಟೆ ವಿಷಯಗಳನ್ನು ತಿಳಿಸುವ ಮೈ ಅಗ್ರಿಗುರು ಎಂಬ ನೂತನ ಆ್ಯಪ್‌  ಬಿಡುಗಡೆ ಮಾಡಿದೆ. ಆಂಡ್ರಾಯ್ಡ್‌ ಮಾದರಿಯಲ್ಲಿ ಲಭ್ಯವಿರುವ ಈ ಆ್ಯಪ್‌ ಅನ್ನು ರೈತರು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.  ಈ ಆ್ಯಪ್‌ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿದೆ.  2025ರ ಒಳಗೆ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಈ ಆ್ಯಪ್‌ ಸೌಲಭ್ಯ ವಿಸ್ತರಣೆ ಆಗಲಿದೆ. 
 
ಈ ಆ್ಯಪ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ.  ಈ ಆ್ಯಪ್ ಬಳಕೆದಾರ ರೈತರು ಹೊಸದಾಗಿ ವೇದಿಕೆಯನ್ನು ಸೃಷ್ಟಿಮಾಡಿಕೊಂಡು ಕೃಷಿಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚೆ ಮಾಡಬಹುದು. ಪ್ರಮುಖವಾಗಿ ಮಾರುಕಟ್ಟೆ ದರಗಳು, ಹವಾಮಾನ, ನೂತನ ಕೃಷಿ ತಂತ್ರಜ್ಞಾನ, ಬೆಳೆಗಳು, ವ್ಯವಸಾಯ ಕ್ರಮ, ರಸಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಎಲ್ಲ ಸಮಗ್ರ ಮಾಹಿತಿಯನ್ನು ಈ ಆ್ಯಪ್ ನೀಡುತ್ತದೆ.
 
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾದ ಒಂದು ಭಾಗವಾಗಿ ಈ ಆ್ಯಪ್ ರೂಪಿಸಲಾಗಿದೆ. ಮುಂದಿನ ಹತ್ತು ವರ್ಷಗಳಲ್ಲಿ 7 ಕೋಟಿ ರೈತರನ್ನು ತಲುಪುವ ಗುರಿ ಹೊಂದಲಾಗಿದೆ.
ಗೂಗಲ್ ಪ್ಲೇಸ್ಟೋರ್‌: MyAgriGuru
 
**
ಐನೊ ಆ್ಯಪ್‌...
ಗ್ರಾಹಕರು ಮತ್ತು  ಬ್ರ್ಯಾಂಡೆಡ್‌ ಉತ್ಪನ್ನಗಳ ತಯಾರಕ ಕಂಪೆನಿಗಳ ನಡುವೆ ಸಂಪರ್ಕ ಬೆಸೆಯುವ ‘ಐನೊ’ ಆ್ಯಪ್‌ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
 
ಗ್ರಾಹಕ ಸ್ನೇಹಿಯಾಗಿರುವ ಈ ಆ್ಯಪ್‌   200ಕ್ಕೂ ಹೆಚ್ಚು ಬ್ರ್ಯಾಂಡೆಡ್‌ ಕಂಪೆನಿಗಳ   ಉತ್ಪನ್ನಗಳ ಮಾಹಿತಿಯನ್ನು ನೀಡುತ್ತದೆ.  ಉದಾಹರಣೆಗೆ ಗ್ರಾಹಕರೊಬ್ಬರು ಸೋನಿ ಟೀವಿಯನ್ನು ಖರೀದಿಸುತ್ತಾರೆ. ಕೆಲವು ದಿನಗಳ ನಂತರ ಟೀವಿಯಲ್ಲಿ ಸಮಸ್ಯೆ ಕಂಡು ಬಂದರೆ ಗ್ರಾಹಕರು ಸೋನಿ ಕಂಪೆನಿಯ ಗ್ರಾಹಕ ಕೇಂದ್ರಕ್ಕೆ ಕರೆ ಮಾಡಬೇಕಾಗುತ್ತದೆ. ಆದರೆ ಈ ಆ್ಯಪ್‌ ಬಳಕೆ ಮಾಡಿದರೆ ಗ್ರಾಹಕರು ಸೋನಿ ಕಂಪೆನಿಯ ಗ್ರಾಹಕ ಕೇಂದ್ರವನ್ನು ಸಂಪರ್ಕಿಸ ಬೇಕಾಗಿಲ್ಲ! 
 
 
ನೇರವಾಗಿ ‘ಐನೊ’ಗೆ ಕರೆ ಮಾಡಿದರೆ ಅಲ್ಲಿರುವ ಗ್ರಾಹಕ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.  ಭಾರತ ಮಾತ್ರವಲ್ಲದೆ ವಿಶ್ವದ ಎಲ್ಲ ಕಡೆಗಳಿಂದಲೂ ಈ ಸೌಲಭ್ಯ ಪಡೆಯಬಹುದು. 
 
ಗ್ರಾಹಕರು ದೂರುಗಳನ್ನು ಸಲ್ಲಿಸುವುದು ಮಾತ್ರವಲ್ಲದೆ, 200 ಬ್ರ್ಯಾಂಡೆಡ್‌ ಕಂಪೆನಿಗಳ ಉತ್ಪನ್ನಗಳ ಮಾಹಿತಿಯನ್ನು ಪಡೆಯಬಹುದು. 
 
ಆ್ಯಂಡ್ರಾಯ್ಡ್, ಐಒಎಸ್ (iOS) ಮತ್ತು ವಿಂಡೋಸ್ ಮಾದರಿಗಳಲ್ಲಿ ಈ ಆ್ಯಪ್‌ ಲಭ್ಯವಿದೆ.
ಗೂಗಲ್‌  ಪ್ಲೇಸ್ಟೋರ್‌: Aino App
 
**
ರೈಲು ಸಂಚಾರದ ಆ್ಯಪ್‌...
ಬ್ರಿಟನ್‌ನಲ್ಲಿ ರೈಲು ಅಪಘಾತಗಳನ್ನು ತಪ್ಪಿಸುವ ಮತ್ತು ಗುಣಮಟ್ಟದ ರೈಲು ಸಂಚಾರಕ್ಕಾಗಿ ಬರ್ಮಿಂಗ್‌ಹ್ಯಾಮ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ನೂತನ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.  ಈ ಆ್ಯಪ್‌ಗೆ ರೈಲ್ವೆ ಕ್ವಾಲಿಟಿ ಆ್ಯಪ್‌ ಎಂದು ಹೆಸರಿಡಲಾಗಿದೆ.ಆಂಡ್ರಾಯ್ಡ್, ಐಒಎಸ್  ಮತ್ತು ವಿಂಡೋಸ್  ಮಾದರಿಗಳಲ್ಲಿ ಲಭ್ಯವಿರುವ ಆ್ಯಪ್‌ ಅನ್ನು ರೈಲು ಪ್ರಯಾಣಿಕರು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಂಡು ಬಳಕೆ ಮಾಡಬಹುದು.
 
ಗೂಗಲ್ ಮ್ಯಾಪಿಂಗ್ ಮತ್ತು  ಆಕ್ಸಿಲೋಮೀಟರ್‌ ಸಹಾಯದೊಂದಿಗೆ ಈ ಆ್ಯಪ್‌ ಕೆಲಸ ಮಾಡುತ್ತದೆ. ಆ್ಯಪ್‌  ಆಕ್ಸಿಲೋಮೀಟರ್ ಮೂಲಕ ರೈಲು ಹಳಿಗಳ ಗಟ್ಟಿತನದ ಬಗ್ಗೆ ಮಾಹಿತಿ ನೀಡುತ್ತದೆ. ಒಂದು ವೇಳೆ ಹಳಿಗಳು ಸಡಿಲವಾಗಿದ್ದರೆ,  ವೈಬ್ರೆಷನ್‌ ಸದ್ದು ಕೇಳುತ್ತಿದ್ದರೆ  ಬಳಕೆದಾರರಿಗೆ ಎಚ್ಚರಿಕೆ ಸಂದೇಶ ರವಾನಿಸುತ್ತದೆ. ನಂತರ ಗ್ರಾಹಕರು ರೈಲ್ವೆ ಸಹಾಯವಾಣಿ ಸಂಪರ್ಕಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
 
 
 ರೈಲು ಬೋಗಿಗಳಲ್ಲಿ ಏನಾದರೂ ಅವಘಡಗಳು, ಕಳ್ಳತನ, ದೌರ್ಜನ್ಯ, ಲೈಂಗಿಕ ಕಿರುಕುಳದಂತಹ ಘಟನೆಗಳು  ಸಂಭವಿಸಿದಾಗ ರೈಲ್ವೆ ಪೊಲೀಸರಿಗೆ ಈ ಆ್ಯಪ್‌ ಮೂಲಕವೇ ದೂರು ಸಲ್ಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಆ್ಯಪ್ ಸದ್ಯಕ್ಕೆ ಬ್ರಿಟನ್‌ನಲ್ಲಿ ಮಾತ್ರ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.