ADVERTISEMENT

ವಿದ್ಯುತ್ ಉಳಿಸುವ `ಬುದ್ಧಿವಂತ'

ರವಿ ಎಸ್.ಬಳೂಟಗಿ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ವಿದ್ಯುತ್ ಅಪವ್ಯಯ ತಡೆಯುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಲಿವೆ. ಅದರ ಲಭ್ಯತೆ ಹಾಗೂ ಬೇಡಿಕೆ ನಡುವಿನ ವ್ಯತ್ಯಾಸವೂ ಅಗಾಧ. ಪರ್ಯಾಯ ಶಕ್ತಿ ಮೂಲಗಳ ಹುಡುಕಾಟದ ಜತೆಗೆ ವಿದ್ಯುತ್ ಪೋಲು ತಡೆಯುವುದು ಇಂದಿನ ಅವಶ್ಯಕತೆ.

ಮೈಸೂರಿನ `ವಿಗ್ಯಾನ್ ಲ್ಯಾಬ್' ಈ ನಿಟ್ಟಿನಲ್ಲಿ ಕೊಂಚಮಟ್ಟಿಗೆ ಯಶಸ್ಸು ಸಾಧಿಸಿದೆ. ಇಲ್ಲಿ ರೂಪಿಸಿರುವ  (intelligent power management paltform) ಎಂಬ ತಂತ್ರಾಂಶ ವಿದ್ಯುತ್ ಉಳಿತಾಯ ಮಾಡಬಲ್ಲದು.
ಕಂಪ್ಯೂಟರ್ ಬಹುಪಯೋಗಿ ಸಾಧನ. ಡಾಟಾ ಎಂಟ್ರಿ, ಗೂಗಲ್‌ನಲ್ಲಿ ಮಾಹಿತಿ ಶೋಧ, ಇ-ಮೇಲ್ ರವಾನೆ, ಫೇಸ್‌ಬುಕ್ ವೀಕ್ಷಣೆ.... ಹೀಗೆ ಹಲವಾರು ಕೆಲಸಗಳಿಗೆ ಅಂತರ್ಜಾಲ ಹಾಗೂ ಕಂಪ್ಯೂಟರ್ ಬಳಸುತ್ತೇವೆ.

ಬಹುತೇಕ ಖಾಸಗಿ ಕಚೇರಿಗಳು ಈಗ ಗಣಕೀಕರಣಗೊಂಡಿವೆ. ನಮ್ಮ ಇಂದಿನ ಬಹಳಷ್ಟು ಅಗತ್ಯಗಳಿಗೆ ಕಂಪ್ಯೂಟರ್ ಆಶ್ರಯಿಸಿದ್ದೇವೆ. ಈ ಗಣಕಯಂತ್ರ ಸುಸೂತ್ರವಾಗಿ ಕಾರ್ಯನಿರ್ವಹಿಸಲು ನಿರಂತರ ವಿದ್ಯುತ್ ಶಕ್ತಿ ಬೇಕೇಬೇಕು.
ಬಳಕೆದಾರ ತನ್ನ ಕಾರ್ಯಕ್ಕೆ ಆಗಾಗ ಬಿಡುವು ನೀಡುತ್ತಾನೆ. ದೂರವಾಣಿ ಸಂಭಾಷಣೆ, ತುರ್ತು ಕೆಲಸದ ನಿಮಿತ್ತ ಹೊರಗೆ ಹೋಗುವುದು, ಸಿಬ್ಬಂದಿಯೊಂದಿಗಿನ ಮಾತುಕತೆ...

ಇಂತಹ ಸಣ್ಣ ಕ್ರಿಯೆಗಳಿಂದ ಕಂಪ್ಯೂಟರ್‌ಲ್ಲಿ ಮಾಡುತ್ತಿದ್ದ ಕೆಲಸ ಕೆಲವು ನಿಮಿಷ-ಗಂಟೆಗಳವರೆಗೆ ಸ್ಥಗಿತವಾಗುತ್ತದೆ. ಆದರೆ, ಕಂಪ್ಯೂಟರ್ `ಆಫ್' ಆಗಿರುವುದಿಲ್ಲ. ಮಾನಿಟರ್ ಬಂದ್ ಮಾಡಿದರೆ ಡಾಟಾ ಮಾಯವಾಗುವ ಆತಂಕ ಕಾಡುತ್ತದೆ. ಇಲ್ಲವೇ ಮೊದಲಿನಿಂದ ಕೆಲಸ ಆರಂಭಿಸಬೇಕಾಗಬಹುದು ಎಂಬ ಚಿಂತೆ ಎದುರಾಗುತ್ತದೆ. ಹೀಗಾಗಿ ಕಂಪ್ಯೂಟರ್ ನಿರಂತರವಾಗಿ ವಿದ್ಯುತ್ ಬಳಸುತ್ತಿರುತ್ತದೆ. ಇಂತಹ `ಅಲ್ಪ ವಿರಾಮ'ದ ಸಮಯದಲ್ಲಿ ವಿದ್ಯುತ್ ಪೋಲು ತಡೆಯುತ್ತದೆ `ಐಪಿಎಂ+'.

ಕೆಲಸ ನಡೆಯದ ಸಮಯದಲ್ಲಿ ಮಾನಿಟರ್ ಅನ್ನು `ಐಪಿಎಂ+' ಸ್ಲೀಪ್ ಮೋಡ್‌ನಲ್ಲಿ ಇರಿಸುತ್ತದೆ. ಡೆಸ್ಕ್‌ಟಾಪ್‌ನ ನಮ್ಮ `ಅಪ್ಲಿಕೇಷನ್‌ಗೆ ಧಕ್ಕೆ ಮಾಡದೆ ವಿದ್ಯುತ್ ಉಳಿತಾಯವನ್ನೂ ಮಾಡುತ್ತದೆ. ಅಪೂರ್ಣ ಕೆಲಸದತ್ತ ಚಿತ್ತ ಹರಿಸಿದಾಗ ಮೊದಲಿನಂತೆಯೇ ಕಾರ್ಯ ಮುಂದುವರಿಸಬಹುದು.

ಎಲ್ಲೆಲ್ಲಿ ಬಳಕೆ ಸೂಕ್ತ
`ಪರಿಸರ ಹಿತ'ದೊಂದಿಗೆ ಸಾಗೋಣ ಎಂಬ ಮಂತ್ರ ಪಠಿಸುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಈ ತಂತ್ರಾಂಶ ಸೂಕ್ತ. ಇಲ್ಲಿನ ಕಚೇರಿ, ಶಾಖೆ, ಘಟಕಗಳಲ್ಲಿ ಏಕಕಾಲಕ್ಕೆ ಸಾವಿರಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಕಾರ್ಯ ನಿರ್ವಹಿಸುತ್ತವೆ. ಕೆಲಸದ ನಡುವೆ ಸಣ್ಣ-ಪುಟ್ಟ ಅಡೆತಡೆ ಬಂದಾಗ ವಿದ್ಯುತ್ ಖರ್ಚಾಗುತ್ತಲೇ ಇರುತ್ತದೆ.

ಈ ಕಿರು ಅವಧಿಯೇ ಲಕ್ಷಾಂತರ ರೂಪಾಯಿ ಬಿಲ್ ತರಬಲ್ಲದು. `ಐಪಿಎಂ+' ತಂತ್ರಾಂಶ ಅಳವಡಿಸಿದ ಕಂಪ್ಯೂಟರಲ್ಲಿ ಹೀಗೆ ವಿದ್ಯುತ್ ಶಕ್ತಿ ಪೋಲಾಗುವ ಪ್ರಮಾಣವನ್ನು ಶೇ 50ರಷ್ಟು ತಗ್ಗಿಸಬಹುದು. ಜನರೇಟರ್‌ಗೆ ಬಳಕೆಯಾಗುವ ಡೀಸೆಲ್ ಕೂಡ ಉಳಿಸಬಹುದು. ಈ `ಉಳಿತಾಯ' ಲೆಕ್ಕಾಚಾರದ ಪರಿಣಾಮ ಈಗಾಗಲೇ ಸಾಬೀತಾಗಿದೆ ಎಂದು ಅಭಯ ನೀಡುತ್ತಾರೆ ಹೊಸ ತಂತ್ರಾಂಶ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವರದರಾಜನ್. `ವಿಗ್ಯಾನ್‌ಲ್ಯಾಬ್'ನ ಪರಿಣಿತ ಎಂಜಿನಿಯರುಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಮೂರು ವರ್ಷಗಳ ಶ್ರಮ ಈ ತಂತ್ರಾಂಶದ ಹಿಂದಿದೆ.

ಪರಿಸರ ಸ್ನೇಹಿ ವಾತಾವರಣವನ್ನೂ ಸಹ ಈ ತಂತ್ರಾಂಶ ನಿರ್ಮಿಸುತ್ತದೆ. ಸಾಮಾನ್ಯವಾಗಿ ಕಂಪ್ಯೂಟರ್ ಬಳಸುವಾಗ ಕಾರ್ಬನ್ ಡೈ ಆಕ್ಸೈಡ್ (ಸಿಒ-2) ಹೊರಬೀಳುತ್ತದೆ. `ಐಪಿಎಂ+' ತಂತ್ರಾಂಶ `ಸಿಒ2' ಹೊರಸೂಸುವುದನ್ನು ತಗ್ಗಿಸುತ್ತದೆ. ಕಂಪ್ಯೂಟರ್‌ನ ಬಾಳಿಕೆ, ಯುಪಿಎಸ್, ಬ್ಯಾಟರಿಯ ಕಾರ್ಯಕ್ಷಮತೆಯೂ ಹೆಚ್ಚಾಗುತ್ತದೆ. ಮೊಬೈಲ್‌ಗಳಿಗೂ ಅಳವಡಿಸಿ ಸಕಾರಾತ್ಮಕ ಫಲಿತಾಂಶ ಕಾಣಲಾಗಿದೆ. ಇಷ್ಟು ಪ್ರಮಾಣದ ವಿದ್ಯುತ್ ಉತ್ಪಾದನೆಗೆ ಪರಿಸರದ ಮೇಲೆ ನಡೆಸುವ ದಾಳಿಯೂ ನಿಲ್ಲಲಿದೆ.

ಯಶ ಕಂಡ ಸೂತ್ರ
ಮೊಟ್ಟ ಮೊದಲು `ವಿಗ್ಯಾನ್ ಲ್ಯಾಬ್'ನ 20 ಕಂಪ್ಯೂಟರ್‌ಗೆ ಈ ತಂತ್ರಾಶ ಅಳವಡಿಸಿದಾಗ ಉತ್ತಮ ಫಲಿತಾಂಶ ಲಭಿಸಿತು. ನಂತರ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್(ಎಸ್‌ಜೆಸಿಇ) ಕಾಲೇಜಿನ ವಿವಿಧ ವಿಭಾಗಗಳ ಒಟ್ಟು ಸಾವಿರ ಕಂಪ್ಯೂಟರ್‌ಗಳನ್ನು ಇದರ ವ್ಯಾಪ್ತಿಗೆ ತರಲಾಯಿತು. ಅದರ ಫಲಿತಾಂಶದ ಬಳಿಕ ಕ್ಯಾಂಪಸ್‌ನ ಎಲ್ಲ ವಿಭಾಗಗಳ ಕಂಪ್ಯೂಟರುಗಳಿಗೂ `ಐಪಿಎಂ+' ಅಳವಡಿಸಲಾಗಿದೆ.

ಇದರಿಂದ ಕಾಲೇಜು ಪ್ರತಿ ತಿಂಗಳು ಭರಿಸುತ್ತಿದ್ದ ಭಾರಿ ಮೊತ್ತದ ವಿದ್ಯುತ್ ಬಿಲ್‌ನಲ್ಲಿ ಸಾಕಷ್ಟು ಉಳಿತಾಯವಾಗಿದೆ. ಮೈಸೂರಿನ ಕೆಲವು ಖಾಸಗಿ ಕಂಪೆನಿಗಳು ಸಹ ಈ ತಂತ್ರಾಂಶ ಬಳಕೆ ಬಗ್ಗೆ ಆಸಕ್ತಿ ತೋರಿವೆ. ಕಾಲೇಜು ಹೊರತಾದ 12 ಸಾವಿರ ಕಂಪ್ಯೂಟರುಗಳಲ್ಲಿ ಈ ತಂತ್ರಾಂಶ ಅಳವಡಿಸುವ ಮೂಲಕ ಯಶಸ್ಸು ಸಾಧಿಸಲಾಗಿದೆ ಎನ್ನುತ್ತಾರೆ ವರದರಾಜನ್.

`100 ಕಂಪ್ಯೂಟರ್‌ಗಳು ದಿನಕ್ಕೆ 10 ಗಂಟೆಯಂತೆ ವರ್ಷದ 250 ದಿನ  ಕಾರ್ಯ ನಿರ್ವಹಿಸುತ್ತವೆ ಎಂದು ಭಾವಿಸಿದರೆ ವಾರ್ಷಿಕ 5,32,500 ಕಿಲೋವಾಟ್ ವಿದ್ಯುತ್ ಬಳಕೆಯಾಗಿರುತ್ತದೆ. ಆ ಎಲ್ಲ ಕಂಪ್ಯೂಟರುಗಳಿಗೂ `ಐಪಿಎಂ+' ಅಳವಡಿಸಿದಾಗ ಅಷ್ಟೇ ದಿನಗಳಿಗೆ ವಾರ್ಷಿಕ 34,500 ಕಿ.ವಾ. ವಿದ್ಯುತ್ ಮಾತ್ರ ವ್ಯಯವಾಗುತ್ತದೆ. ಅಂದರೆ ಇದರಿಂದ ರೂ. 1.72 ಲಕ್ಷ ಹಣವನ್ನೂ ಉಳಿಸಬಹುದಾಗಿದೆ. ಕಡಿಮೆ ದಕ್ಷತೆಯ ಕಂಪ್ಯೂಟರ್‌ಗಳಲ್ಲಿ ಶೇ 40ರಷ್ಟು ವಿದ್ಯುತ್ ಉಳಿಯಾಯಕ್ಕೆ ಮೋಸವಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಕಂಪ್ಯೂಟರ್, ಲ್ಯಾಪ್‌ಟಾಪ್ ಬಳಸುವ ಐ.ಟಿ ಕಂಪೆನಿಗಳಿಗೆ ಈ ತಂತ್ರಾಂಶ ಬಹಳ ಉಪಯುಕ್ತ' ಎನ್ನುತ್ತಾರೆ ವರದರಾಜನ್.

`ದೇಶದಲ್ಲಿ ವಾರ್ಷಿಕ ಒಂದು ಕೋಟಿ ಲ್ಯಾಪ್‌ಟಾಪ್ ಮಾರಾಟವಾಗುತ್ತವೆ. ಇವುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮುನ್ನ ಈ ತಂತ್ರಾಂಶ ಅಳವಡಿಸುವುದು ಒಳಿತು. ಹೆಚ್ಚು ವಿದ್ಯುತ್ ಉತ್ಪಾದನೆಯಿಂದ ಪರಿಸರದ ಮೇಲಾಗುವ ಹಾನಿಯೂ ತಪ್ಪುತ್ತದೆ. ದೊಡ್ಡ ಕಂಪೆನಿಗಳು ಈ ತಂತ್ರಾಂಶದ ಹಕ್ಕುಸ್ವಾಮ್ಯ ಖರೀದಿಗೆ ಮುಂದೆ ಬಂದಿವೆ. ಇದಕ್ಕಾಗಿ ಮಾತುಕತೆ ನಡೆದಿದೆ' ಎನ್ನುತ್ತಾರೆ ಅವರು.

ಸಂಸ್ಥೆಯ ವೆಬ್‌ಸೈಟ್‌ನಿಂದ ತಂತ್ರಾಂಶ ಡೌನ್‌ಲೋಡ್ ಮಾಡಿಕೊಳ್ಳಬಹುದು. 30 ದಿನಗಳವರೆಗೆ ಬಳಕೆ ಉಚಿತವಾಗಿದೆ. `ಉಪಯೋಗದಿಂದ ಅನುಕೂಲವಿದೆ' ಎಂಬುದು ಖಾತ್ರಿಯಾದರೆ ನಿಗದಿತ ಹಣ ಪಾವತಿಸಿ ತಂತ್ರಾಂಶವನ್ನು ಖರೀದಿಸಬಹುದು. ಆನ್‌ಲೈನ್ ಖರೀದಿಯೂ ಸಾಧ್ಯ. ತಂತ್ರಾಂಶ ಡೌನ್‌ಲೋಡ್‌ಗೆ ವೆಬ್‌ಸೈಟ್  http://info@vigyanlabs.com ಅಥವಾ 0821- 2413890 ಸಂಪರ್ಕಿಸಬಹುದು. 

ADVERTISEMENT

ಅಮೆರಿಕದ ಪೇಟೆಂಟ್ ಗರಿ

`ಐಪಿಎಂ' ತಂತ್ರಾಂಶಕ್ಕೆ ಅಮೆರಿಕದ ಪೇಟೆಂಟ್ ಸಹ ಲಭಿಸಿದೆ (ಪೇಟೆಂಟ್ ನಂ. ಯುಸ್ 8201007). ಈ ಪೇಟೆಂಟ್‌ಗೆ 2010ರಲ್ಲೇ `ಎಸ್‌ಜೆಸಿಇ' ಅರ್ಜಿ ಸಲ್ಲಿಸಿತ್ತು. 2012ರ ಜೂನ್ ತಿಂಗಳಲ್ಲಿ ಆ ಹಕ್ಕು ಒದಗಿದೆ. ಇತ್ತೀಚೆಗೆ ನಾಸ್ಕಾಂ ಸಂಸ್ಥೆ ಒಂದು ಸ್ಪರ್ಧೆ ಏರ್ಪಡಿಸಿತ್ತು. ಅಲ್ಲಿ ಗುರುತಿಸಿದ ವಿದ್ಯುತ್ ಉಳಿಸುವ ಐದು ಅತ್ಯುತ್ತಮ ತಂತ್ರಾಂಶಗಳಲ್ಲಿ ಇದೂ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.