ADVERTISEMENT

ಇ–ಕಾಮರ್ಸ್‌ನಲ್ಲಿ ಮೌನಕ್ರಾಂತಿ: ಕೃಷ್ಣ ಭಟ್ ಅವರ ಲೇಖನ

ಕೃಷ್ಣ ಭಟ್ಟ
Published 17 ಮೇ 2023, 0:30 IST
Last Updated 17 ಮೇ 2023, 0:30 IST
   

ಏಳು ವರ್ಷಗಳ ಹಿಂದೆ ಭಾರತೀಯ ರಾಷ್ಟ್ರೀಯ ಪಾವತಿ ಕಾರ್ಪೊರೇಶನ್‌ ಸಂಸ್ಥೆಯು ‘ಯುಪಿಐ’ ಎಂಬ ಹೊಸ ಪಾವತಿ ವಿಧಾನವನ್ನು ಘೋಷಿಸಿ, ಇಡೀ ಡಿಜಿಟಲ್‌ ಪಾವತಿ ಕ್ಷೇತ್ರದಲ್ಲೊಂದು ಕ್ರಾಂತಿಯನ್ನು ಎಬ್ಬಿಸಿತ್ತೋ ಅಂಥದ್ದೇ ಕ್ರಾಂತಿಯೊಂದು ನಿಧಾನವಾಗಿ ಇ-ಕಾಮರ್ಸ್‌ ಕ್ಷೇತ್ರದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ. ಅದೇ ‘ಒನ್‌ಡಿಸಿ’. ಅಂದರೆ ‘ಓಪನ್ ನೆಟ್‌ವರ್ಕ್‌ ಫಾರ್‌ ಡಿಜಿಟಲ್‌ ಕಾಮರ್ಸ್‌’.

ಇದೇನು ಎಂಬುದನ್ನು ನೋಡುವುದಕ್ಕೂ ಮೊದಲು ನಾವು ಈಗ ಇ-ಕಾಮರ್ಸ್ ಕ್ಷೇತ್ರ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಗಮನಿಸಬೇಕು. ಸಾಮಾನ್ಯವಾಗಿ ನಾವು ಬಳಸುವ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಇತ್ಯಾದಿ ಆ್ಯಪ್‌ಗಳು ಕೇವಲ ಪ್ಲಾಟ್‌ಫಾರಂ. ಅವು ಅಂಗಡಿಗಳಿದ್ದ ಹಾಗೆ. ಅಲ್ಲಿ ಯಾವುದೇ ವಸ್ತು ಉತ್ಪಾದನೆಯಾಗುವುದಿಲ್ಲ. ಅವು ಬೇರೆ ಬೇರೆ ಉತ್ಪಾದಕರಿಂದ ಸಾಮಗ್ರಿಗಳನ್ನು ತಂದು ತಮ್ಮ ಗೋಡೌನ್‌ನಲ್ಲಿ ಇಟ್ಟುಕೊಳ್ಳುತ್ತವೆ. ನಂತರ ಅದನ್ನು ಅವರ ಆ್ಯಪ್‌ನಲ್ಲಿ ಲಿಸ್ಟ್ ಮಾಡಿರುತ್ತಾರೆ. ಗ್ರಾಹಕ ಅದನ್ನು ನೋಡಿದೊಡನೆ ಖರೀದಿ ಮಾಡಬೇಕು ಎನಿಸಿದಾಗ ಅಲ್ಲಿಗೆ, ಪೇಮೆಂಟ್ ಮಾಡುವ ಸೌಲಭ್ಯ ಒದಗಿಸುವವರ ಬಳಿ ಗ್ರಾಹಕರನ್ನು ಕಳುಹಿಸುತ್ತಾರೆ. ಅಲ್ಲಿ ಪಾವತಿ ಮಾಡಿದ ನಂತರ, ಆ ಖರೀದಿ ಮಾಡಿದ ವಸ್ತುವನ್ನು ಗ್ರಾಹಕನ ಮನೆ ಬಾಗಿಲಿಗೆ ತಲುಪಿಸುವುದಕ್ಕೆ ಕೊರಿಯರ್ ಸೇವೆ ಬೇಕಲ್ಲ. ಅದನ್ನು ನಿರ್ವಹಿಸುವವರೂ ಬೇರೆಯವರು. ಅಲ್ಲಿಗೆ ಗ್ರಾಹಕ ಖರೀದಿ ಮಾಡಿದ ಐಟಂ ತೆರಳುತ್ತದೆ. ಇವೆಲ್ಲವೂ ಸಂಕೀರ್ಣ ಪ್ರಕ್ರಿಯೆಯಾಗಿದ್ದರೂ, ಕೆಲವೇ ಕ್ಲಿಕ್‌ಗಳಲ್ಲಿ ನಡೆದುಹೋಗುವುದರಿಂದ ಗ್ರಾಹಕನಿಗೆ ಇದರ ಹಿಂದಿರುವ ಹಕೀಕತ್ತು ಗೊತ್ತಾಗುವುದಿಲ್ಲ.

ಇಲ್ಲಿ, ದೊಡ್ಡ ದೊಡ್ಡ ಕಂಪನಿಗಳು ತಮ್ಮದೇ ಪೇಮೆಂಟ್ ಇಂಟರ್‌ಫೇಸ್ ಅನ್ನೂ, ಲಾಜಿಸ್ಟಿಕ್ಸ್‌ ಸೇವೆಯನ್ನೂ, ದೊಡ್ಡ ದೊಡ್ಡ ಕಂಪನಿಗಳ ಜೊತೆಗೆ ನೇರವಾಗಿ ಒಪ್ಪಂದವನ್ನೂ ಮಾಡಿಕೊಳ್ಳುವುದರಿಂದ ಕಡಿಮೆ ದರದಲ್ಲಿ ಗ್ರಾಹಕನಿಗೆ ವಸ್ತುಗಳನ್ನು ಕೊಡಲು ಸಾಧ್ಯವಾಗುತ್ತದೆ. ಇದರಿಂದ ನಿಧಾನವಾಗಿ ದೊಡ್ಡ ಇಕಾಮರ್ಸ್‌ ಕಂಪನಿಗಳಿಗೆ ಹೆಚ್ಚಿನ ಏಕಸ್ವಾಮ್ಯ ಲಭಿಸುತ್ತದೆ. ಆದರೆ, ಸಣ್ಣ ಕಂಪನಿಗಳು ಲಾಜಿಸ್ಟಿಕ್ಸ್ ಸೇವೆ, ಪೇಮೆಂಟ್ ಸೌಲಭ್ಯ ಇತ್ಯಾದಿಯನ್ನು ಹೊರಗುತ್ತಿಗೆ ನೀಡುವ ಅಗತ್ಯ ಉಂಟಾಗುವುದರಿಂದ ಲಾಭಾಂಶ ಕಡಿಮೆಯಾಗಿ, ಅವು ನಿಧಾನವಾಗಿ ಮಾರುಕಟ್ಟೆಯಿಂದ ಹೊರಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ.

ADVERTISEMENT

ಇದನ್ನು ತಡೆಯುವುದಕ್ಕಾಗಿಯೇ ಸರ್ಕಾರ ಇಂಥದ್ದೊಂದು ‘ಓಪನ್ ನೆಟ್‌ವರ್ಕ್‌ ಫಾರ್ ಡಿಜಿಟಲ್‌ ಕಾಮರ್ಸ್’ ಅನ್ನು ಆರಂಭಿಸಿದೆ. ಇದೊಂದು ಮುಕ್ತ ವೇದಿಕೆ! ಇದರಲ್ಲಿ ಲಾಜಿಸ್ಟಿಕ್ಸ್ ಸೇವೆಯನ್ನು ಒದಗಿಸುವವರು ಸೇರಿಕೊಂಡು, ಲಾಜಿಸ್ಟಿಕ್ಸ್ ಸೇವೆಯನ್ನಷ್ಟೇ ಒದಗಿಸಬಹುದು. ಇನ್ನು, ವಿವಿಧ ಉತ್ಪನ್ನಗಳನ್ನು ತಯಾರಿಸುವವರೂ ಈ ವೇದಿಕೆಗೆ ಸೇರಿಕೊಂಡು ಇಲ್ಲಿನ ಎಲ್ಲ ಸೇವೆಗಳನ್ನು ಬಳಸಿಕೊಳ್ಳಬಹುದು.

ಇದರ ಅನುಕೂಲ ಏನೆಂದರೆ, ಹೆಚ್ಚು ಹೆಚ್ಚು ಸಂಸ್ಥೆಗಳು ಇದರ ವ್ಯಾಪ್ತಿಗೆ ಬಂದಷ್ಟೂ ಸೇವೆಯ ವೆಚ್ಚ ಕಡಿಮೆಯಾಗುತ್ತದೆ. ಉದಾಹರಣೆಗೆ, ಒಬ್ಬ ಲಾಜಿಸ್ಟಿಕ್ ಸೇವೆ ಒದಗಿಸುವವನಿಗೆ ಒಂದು ಬೀದಿಯಲ್ಲಿ ಒಂದು ಪಾರ್ಸೆಲ್ ಡೆಲಿವರಿಯನ್ನು ಮಾಡುವ ವೆಚ್ಚಕ್ಕೂ, 10 ಡೆಲಿವರಿ ಮಾಡುವ ವೆಚ್ಚಕ್ಕೂ ವ್ಯತ್ಯಾಸವಾಗುತ್ತದೆ. ಒಂದು ಬೀದಿಗೆ ಒಂದು ಪಾರ್ಸೆಲ್ ಡೆಲಿವರಿ ಮಾಡಿದರೆ, ಅವನಿಗೆ ಖರ್ಚು ಹೆಚ್ಚು. ಅದೇ ಬೀದಿಯಲ್ಲಿನ 10 ಮನೆಗಳಿಗೆ ಹತ್ತು ಪಾರ್ಸೆಲ್ ಡೆಲಿವರಿ ಮಾಡಿದರೆ, ಅವನಿಗೆ ಓಡಾಟ, ಸಮಯದ ವೆಚ್ಚ ಉಳಿತಾಯವಾಗುತ್ತದೆ. ಆ ಉಳಿತಾಯವೇ ಈ ಒಎನ್‌ಡಿಸಿ ವೇದಿಕೆಯ ಅನುಕೂಲ! ಎಲ್ಲ ಸಣ್ಣ ಸಣ್ಣ ವ್ಯಾಪಾರಿಗಳೂ, ಲಾಜಿಸ್ಟಿಕ್ಸ್ ಸೇವೆ ಸಲ್ಲಿಸುವವರೂ ಒಟ್ಟಾದರೆ, ಆಗ ವಹಿವಾಟಿನ ಮೊತ್ತ ಅಧಿಕವಾಗುತ್ತದೆ. ಅವರೆಲ್ಲರೂ ಒಂದೇ ಲಾಜಿಸ್ಟಿಕ್ಸ್ ಸೇವೆ, ಪೇಮೆಂಟ್ ಇಂಟರ್‌ಫೇಸ್‌ ಇತ್ಯಾದಿಯನ್ನು ಬಳಸಿದಾಗ ಎಲ್ಲರಿಗೂ ಲಾಭದ ಪ್ರಮಾಣ ಹೆಚ್ಚುತ್ತದೆ. ಆಗ ಸುಲಭವಾಗಿಯೇ ದೊಡ್ಡ ದೊಡ್ಡ ಕಂಪನಿಗಳನ್ನು ಎದುರಿಸುವ ಸಾಮರ್ಥ್ಯವೊಂದು ನಿರ್ಮಾಣವಾಗುತ್ತದೆ.

ಈ ಓಪನ್ ನೆಟ್‌ವರ್ಕ್‌ ಪಾರ್ ಡಿಜಿಟಲ್ ಕಾಮರ್ಸ್ ಎಂಬ ವೇದಿಕೆಯನ್ನು ಸ್ಥಾಪಿಸಿದ್ದು, ಕೇಂದ್ರ ಸರ್ಕಾರದ ಉದ್ಯಮ ಮತ್ತು ಆಂತರಿಕ ವ್ಯಾಪಾರ ಉದ್ದೇಜನ ಇಲಾಖೆ. 2021ರಲ್ಲಿ ಇದು ಆರಂಭವಾಯಿತು. ಆರಂಭವಾದಾಗ ಇದರ ಬಗ್ಗೆ ಸುದ್ದಿಯಾಗಿದ್ದು, ಸದ್ದು ಮೂಡಿದ್ದು ಕಡಿಮೆ. ಆದರೆ, ಈ ಸಂಸ್ಥೆಯ ಅವಿರತ ಪರಿಶ್ರಮದಿಂದ ಈಗ ಒಂದು ಹಂತಕ್ಕೆ ಇ-ಕಾಮರ್ಸ್‌ ವಲಯದಲ್ಲಿ ಸದ್ದು ಮಾಡುತ್ತಿದೆ. ಹೊಸ ಹೊಸ ಕಂಪನಿಗಳು ತಮ್ಮ ಸೇವೆಯನ್ನು ಈ ಪ್ಲಾಟ್‌ಫಾರಂ ಅಡಿಯಲ್ಲಿ ಒದಗಿಸುತ್ತಿವೆ. ಆರಂಭದ ದಿನಗಳಲ್ಲಿ ಸಹಜವಾಗಿಯೇ ಇದಕ್ಕೆ ಅಪಾರ ಉತ್ತೇಜನ, ಪ್ರೋತ್ಸಾಹ ಅಗತ್ಯವಿದೆ. ಒಮ್ಮೆ ಒಂದು ಹಂತಕ್ಕೆ ಬೆಳೆದು ನಿಂತ ಮೇಲೆ ಈ ಉತ್ತೇಜನದ ಅಗತ್ಯವಿರುವುದಿಲ್ಲ. ಏಕೆಂದರೆ, ಇದರಲ್ಲಿ ತೊಡಗಿಸಿಕೊಂಡ ಸಂಸ್ಥೆಗಳು ಸ್ವತಃ ಲಾಭದ ರುಚಿ ನೋಡುತ್ತವೆ.

ಸದ್ಯ ಇಕಾರ್ಟ್‌, ಡುನ್‌ಜೋ, ಪೇಟಿಎಂ ಹಾಗೂ ಫೋನ್‌ಪೆ ಸೇರಿದಂತೆ ಹಲವು ಸಂಸ್ಥೆಗಳು ತಮ್ಮ ಸೇವೆಯನ್ನು ಈ ಪ್ಲಾಟ್‌ಫಾರಂ ಅಡಿಯಲ್ಲಿ ಒದಗಿಸುತ್ತಿವೆ. ಕಳೆದ ಐದಾರು ತಿಂಗಳಲ್ಲಿ 20ಕ್ಕೂ ಹೆಚ್ಚು ಸಂಸ್ಥೆಗಳ ಜೊತೆಗೆ ಒನ್‌ಡಿಸಿ ಸಿಇಒ ಥಂಪಿ ಕೋಶಿ ಮಾತುಕತೆ ನಡೆಸುತ್ತಿದ್ದು, ಅವರನ್ನು ಈ ಪ್ಲಾಟ್‌ಫಾರಂ ಅಡಿಯಲ್ಲಿ ತರುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಒನ್‌ಡಿಸಿ ಉದ್ದೇಶ ಆರಂಭದಲ್ಲಿ ಸಣ್ಣ ಸಣ್ಣ ಕಂಪನಿಗಳನ್ನು ಈ ಪ್ಲಾಟ್‌ಫಾರಂ ಅಡಿಯಲ್ಲಿ ತರುವುದೇ ಆಗಿದ್ದರೂ, ಕೆಲವು ದೊಡ್ಡ ದೊಡ್ಡ ಕಂಪನಿಗಳೂ ಈ ಪ್ಲಾಟ್‌ಫಾರಂಗೆ ಬರದ ಹೊರತು ಈ ಸೌಲಭ್ಯ ನಿರೀಕ್ಷಿಸಿದ ಮಟ್ಟಕ್ಕೆ ತಲುಪದು ಎಂಬುದು ಸಂಸ್ಥೆಗೆ ಅರ್ಥವಾದಂತಿದೆ. ಹೀಗಾಗಿ, ಈಗ ದೊಡ್ಡ ದೊಡ್ಡ ಕಂಪನಿಗಳ ಜೊತೆಗೂ ಮಾತುಕತೆ ನಡೆದಿದೆ. ಒಂದು ವೇಳೆ ಒಎನ್‌ಡಿಸಿ ಇದೇ ವೇಗದಲ್ಲಿ ಮುನ್ನಡೆದರೆ ಮುಂದಿನ ಕೆಲವು ವರ್ಷಗಳಲ್ಲಿ ಇಡೀ ದೇಶದಲ್ಲಿ ಯುಪಿಐ ರೀತಿಯಲ್ಲಿ, ಇ-ಕಾಮರ್ಸ್‌ ವಲಯದಲ್ಲೊಂದು ಮಹತ್ವದ ಮೈಲಿಗಲ್ಲು ಆಗುವ ಎಲ್ಲ ಸಾಧ್ಯತೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.