ADVERTISEMENT

4ಜಿ–5ಜಿಗಳ ‘ಕರೆ’ದಾಟ

ಕೃಷ್ಣ ಭಟ್ಟ
Published 16 ಸೆಪ್ಟೆಂಬರ್ 2025, 23:30 IST
Last Updated 16 ಸೆಪ್ಟೆಂಬರ್ 2025, 23:30 IST
   

ನಮ್ಮ ಕೆಲವು ಸೌಲಭ್ಯಗಳು ನಮ್ಮ ಬಳಿ ಇಲ್ಲದಿದ್ದಾಗಲೂ ಇದೆ ಎಂದು ಭಾವಿಸುವುದರಲ್ಲೇ ಖುಷಿ ಇರುತ್ತದೆ! ಈಗ ನೋಡಿ, ಸುಮಾರು ಒಂದು ವರ್ಷದಿಂದಲೂ  5ಜಿಯನ್ನು ಬಳಸುತ್ತಿದ್ದೇವೆ. ವಾಟ್ಸ್ಯಾಪ್‌ನಲ್ಲಿ ಮೆಸೇಜ್, ಫೋಟೋ ಸೆಂಡ್ ಬಟನ್ ಒತ್ತುತ್ತಿದ್ದ ಹಾಗೆಯೇ ಆ ಕಡೆ ಇದ್ದವನಿಗೆ ತಲುಪುತ್ತದೆ. ಯೂಟ್ಯೂಬ್‌ ತೆರೆದರೆ ಸಾಕು ಒಂದು ಚೂರೂ ಸ್ಕ್ರೀನ್‌ ಮೇಲೆ ಉಂಡೆ ಕಟ್ಟದೇ ಡೇಟಾ ಬರುತ್ತಿರುತ್ತದೆ. ಇನ್‌ಸ್ಟಾಗ್ರಾಮ್‌ ಕೂಡ ಅಷ್ಟೇ ಸ್ಪೀಡ್.

ಅದೇ ಖುಷಿಯಲ್ಲಿ ಯಾರಿಗಾದರೂ ಫೋನ್ ಮಾಡಿದರೆ ಕೂಡ ನಮಗೆ ಡೇಟಾ ಸಿಕ್ಕ ಸ್ಪೀಡಲ್ಲೇ ನಮ್ಮ ಕಾಲ್ ಡೇಟಾ ಕೂಡ ಹೋಗುತ್ತಿದೆ ಎಂದು ನಾವು ಅಂದುಕೊಳ್ಳುತ್ತಿದ್ದೇವೆ.

ಆದರೆ ವಾಸ್ತವ ಹಾಗಿಲ್ಲ. ನಾವು ಇನ್ನೂ 4ಜಿಯಲ್ಲೇ ಫೋನ್ ಮಾಡುತ್ತಿದ್ದೆವು. ಈಗ, ಅಂದರೆ ವರ್ಷಕ್ಕೂ ಹೆಚ್ಚು ಕಾಲ ಕಳೆದ ಮೇಲೆ ನಮಗೆ ‘VoNR’ ಸೌಲಭ್ಯ ಸಿಗುತ್ತಿದೆ. ಇದು ಬಹುತೇಕ ನೆಟ್‌ವರ್ಕ್‌ ಕಂಪನಿಗಳ ಮಟ್ಟದಲ್ಲೇ ನಡೆಯುವುದರಿಂದ ನಮಗೆ ಇದರ ಅರಿವಿಗೆ ಬರುವುದಿಲ್ಲ. ನಮಗೆ ಅರಿವಿಗೆ ಬರುವುದು ಯಾವಾಗ ಎಂದರೆ, ಫೋನ್‌ ಕಾಲ್‌ನಲ್ಲಿ ಇದ್ದಾಗ ನಮ್ಮ ಸ್ಮಾರ್ಟ್‌ಫೋನ್‌ನ ನೆಟ್‌ವರ್ಕ್‌ ಸ್ಟೇಟಸ್ ತೋರಿಸುವ ಜಾಗದಲ್ಲಿ 5G ಬದಲಿಗೆ ‘LTE’ ಎಂದು ಕಾಣಿಸುತ್ತದೆ. ತೀರಾ ಸೂಕ್ಷ್ಮವಾಗಿ ಗಮನಿಸಿದವರಿಗೆ ಇದು ಗೊತ್ತಾಗಿರಬಹುದು.

ADVERTISEMENT

ಸಾಮಾನ್ಯವಾಗಿ ಡೇಟಾ ವೇಗ ಹೆಚ್ಚಾದ ವೇಗದಲ್ಲೇ ಕರೆ ಸೌಲಭ್ಯದ ತಂತ್ರಜ್ಞಾನವೂ ಬದಲಾಗುವುದಿಲ್ಲ. ಇದಕ್ಕೆ ಕಾರಣ ಇಷ್ಟೇ; ಇವೆರಡೂ ಬೇರೆ ಬೇರೆ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ.

ಈ 4G ಡೇಟಾ ಬಳಕೆಗೆ ಬಂದ ಸುಮಾರು ಒಂದು ವರ್ಷಕ್ಕೂ ಹೆಚ್ಚು ತಡವಾಗಿ ‘ವಾಯ್ಸ್‌ ಓವರ್ ಎಲ್‌ಟಿಇ’ ಎಂಬ ತಂತ್ರಜ್ಞಾನ ಬಂದಿತ್ತು. ಇದರಿಂದ ನಾವು ಅಲ್ಲಿಯವರೆಗೆ ರೇಡಿಯೋ ಫ್ರೀಕ್ವೆನ್ಸಿಯಲ್ಲಿ ಫೋನ್‌ ಕರೆಗಳನ್ನು ಮಾಡುತ್ತಿದ್ದ ಕಾಲವನ್ನು ಹಿಂದೆ ಹಾಕಿ ಡೇಟಾ ಬಳಸಿ ಫೋನ್ ಮಾಡುವ ಕಾಲಕ್ಕೆ ದಾಪುಗಾಲು ಹಾಕಿದ್ದೆವು. ಆಗ ರೇಡಿಯೋ ಫ್ರೀಕ್ವೆನ್ಸಿಯಲ್ಲಿ ನಾವು ಮಾಡುತ್ತಿದ್ದ ಕರೆ ಗುಣಮಟ್ಟ ತೀರಾ ಕಡಿಮೆ ಇತ್ತು. VoLTE ಬರುತ್ತಿದ್ದ ಹಾಗೆಯೇ ಕರೆ ಗುಣಮಟ್ಟದಲ್ಲಿ ಅಗಾಧ ವ್ಯತ್ಯಾಸವಾಯಿತು. ಧ್ವನಿಯಲ್ಲಿ ಸ್ಪಷ್ಟತೆ ಬಂತು. ಅಲ್ಲಿಯವರೆಗೆ ನಾವು ರೇಡಿಯೋ ಫ್ರೀಕ್ವೆನ್ಸಿಯಲ್ಲಿ ಕರೆ ಮಾಡುತ್ತಿದ್ದುದರಿಂದ ಜನರ ಅಸಲಿ ಧ್ವನಿಗಿಂತ ವಿಭಿನ್ನವಾದ ಧ್ವನಿ ನಮಗೆ ಫೋನ್‌ನಲ್ಲಿ ಕೇಳಿಸುತ್ತಿತ್ತು. ಆದರೆ, VoLTE ಬಂದ ಮೇಲೆ ಹಾಗಾಗಲಿಲ್ಲ. ಅಲ್ಲಿ ಫ್ರೀಕ್ವೆನ್ಸಿಯ ಆಟ ಇರಲಿಲ್ಲ. ಅದು ನಮ್ಮ ಫೋನ್‌ನಲ್ಲೇ ನಾವು ಮಾತನಾಡಿದ್ದನ್ನು ಡೇಟಾ ರೂಪದಲ್ಲಿ ಸೆರೆಹಿಡಿದು ಅದನ್ನು ಡೇಟಾ ರೂಪದಲ್ಲೇ ಕಳುಹಿಸುತ್ತಿತ್ತು.

ಈಗಲೂ ನಾವು VoLTEಯಲ್ಲೇ ಕರೆ ಮಾಡುತ್ತಿದ್ದೇವೆ. ಈಗ 5G ಯಲ್ಲಿ ನಾವು ಕರೆ ಮಾಡಬೇಕು ಎಂದರೆ ಟೆಲಿಕಾಂ ಕಂಪನಿಗಳು ವಾಯ್ಸ್‌ ಓವರ್ ನ್ಯೂ ರೇಡಿಯೋ ಅಥವಾ ವಾಯ್ಸ್‌ ಓವರ್ 5G ಎಂಬ ತಂತ್ರಜ್ಞಾನವನ್ನು ತಮ್ಮ ನೆಟ್‌ವರ್ಕ್‌ನಲ್ಲಿ ಅಳವಡಿಸಬೇಕು. ಇಡೀ ನೆಟ್‌ವರ್ಕ್ ಈ ತಂತ್ರಜ್ಞಾನದಿಂದ ಅಪ್‌ಗ್ರೇಡ್ ಆಗಬೇಕು. ಆಗ ಮಾತ್ರ ನಾವು 5G ಪೂರ್ಣ ಪ್ರಯೋಜನ ಪಡೆಯಬಹುದು.

ಏನಿದು VoNR?

VoLTE ಇದ್ದ ಹಾಗೆಯೇ ಇದೊಂದು ಹೊಸ ತಂತ್ರಜ್ಞಾನ. ಇದರಲ್ಲಿ ವಾಯ್ಸ್ ಓವರ್‌ ಲಾಂಗ್‌ ಟರ್ಮ್ ಇವಾಲ್ಯುಶನ್‌ನಲ್ಲಿ ಇದ್ದ ಧ್ವನಿಯನ್ನು ಡೇಟಾಗೆ ಪರಿವರ್ತಿಸುವ ಕೊಡೆಕ್‌ಗಳು ಇದರಲ್ಲಿ ಹೊಸ ರೂಪ ತಾಳಿರುತ್ತವೆ. ಈ ಕೊಡೆಕ್‌ಗಳು ಇನ್ನಷ್ಟು ಸ್ಪಷ್ಟ ಧ್ವನಿಯನ್ನು ಸಾಗಿಸುವುದಕ್ಕೆಂದು ಧ್ವನಿಯನ್ನು ಹೆಚ್ಚು ಡೇಟಾ ಇರುವ ಪ್ಯಾಕೆಟ್ ಆಗಿ ಸಿದ್ಧಪಡಿಸುತ್ತದೆ. ಆಗ ಧ್ವನಿ ಇನ್ನಷ್ಟು ಸ್ಪಷ್ಟವಾಗುತ್ತದೆ. ಅಲ್ಲದೆ, ಇದರ ಇನ್ನೊಂದು ಮುಖ್ಯ ಅನುಕೂಲವೆಂದರೆ ಕರೆ ಕನೆಕ್ಟ್ ಆಗುವ ಸಮಯ ಕಡಿಮೆಯಾಗುತ್ತದೆ. ಈಗಾಗಲೇ ರೇಡಿಯೋ ಫ್ರೀಕ್ವೆನ್ಸಿಗೆ ಹೋಲಿಸಿದರೆ VoLTE ಯಲ್ಲಿ ಈ ಅನುಕೂಲ ಸಿಕ್ಕಿದೆ. ಅದಕ್ಕಿಂತಲೂ ಇನ್ನೂ ಬೇಗ VoNRನಲ್ಲಿ ಕಾಲ್ ಕನೆಕ್ಟ್ ಆಗುತ್ತದೆ. ಅಂದರೆ, ನಾವು ಕರೆ ಬಟನ್ ಒತ್ತಿದ ನಂತರ ಆ ಕಡೆ ಇದ್ದವನ ಮೊಬೈಲ್ ರಿಂಗ್ ಆಗಲು ಶುರುವಾಗುವ ವರೆಗಿನ ಸಮಯ ಕಡಿಮೆಯಾಗುತ್ತದೆ. ಕರೆ ಬಟನ್ ಒತ್ತಿದ ತಕ್ಷಣವೇ ಆ ಕಡೆ ಇದ್ದವನಿಗೆ ರಿಂಗ್ ಆಗುತ್ತದೆ. ಈಗ ವಾಟ್ಸಾಪ್‌ ಕರೆ ಮಾಡುವಾಗ ಎಷ್ಟು ತಕ್ಷಣ ಕರೆ ಹೋಗುತ್ತದೆಯೋ ಅಷ್ಟೇ ಬೇಗ VoNR ನಲ್ಲೂ ನಾವು ಕರೆ ಮಾಡಬಹುದು. ಯಾಕೆಂದರೆ, 4Gಗೆ ಹೋಲಿಸಿದರೆ 5G ನೆಟ್‌ವರ್ಕ್‌ ಲ್ಯಾಟೆನ್ಸಿ ತುಂಬಾ ಕಡಿಮೆ ಇದೆ. ಇದರಲ್ಲಿ ಡೇಟಾ ತುಂಬಾ ಬೇಗ ಚಲಿಸುತ್ತದೆ.

ಕಾಲ್ ಡ್ರಾಪ್ ಸಮಸ್ಯೆಗೆ ಪರಿಹಾರ ಸಿಕ್ಕೀತೇ?

ಎಲ್ಲರ ಮೊದಲ ಪ್ರಶ್ನೆ ಬರುವುದೇ ಕರೆ ಡ್ರಾಪ್ ಆಗುವ ಸಮಸ್ಯೆ ಈ ಹೊಸ ತಂತ್ರಜ್ಞಾನದಲ್ಲಾದರೂ ಸರಿ ಹೋದೀತೇ ಎಂಬುದು. ಸದ್ಯದ ಮಟ್ಟಿಗೆ ಹೇಳುವುದಾದರೆ, ಈ ಸಮಸ್ಯೆ ಸಂಪೂರ್ಣ ನಿವಾರಣೆಯಾಗುವುದು ಅನುಮಾನ. ಏಕೆಂದರೆ, ಕರೆ ಮಾಡುತ್ತಿರುವಾಗ ನಾವು 5ಜಿಯಲ್ಲೇ ಇದ್ದಾಗ ಕಾಲ್ ಡ್ರಾಪ್ ಆಗದೇ ಇರಬಹುದು. ಆದರೆ, ಕರೆ ಮಾಡುತ್ತಿರುವಾಗ ನೆಟ್‌ವರ್ಕ್‌ 5ಜಿ ಇಂದ 4ಜಿ ಗೆ ಇಳಿದರೆ ಕಾಲ್ ಡ್ರಾಪ್ ಆಗುತ್ತದೆ. ಹೀಗಾಗಿ, ಈ ಕಾಲ್ ಡ್ರಾಪ್ ಸಮಸ್ಯೆಗೆ ಸದ್ಯಕ್ಕಂತೂ ಸಂಪೂರ್ಣ ಪರಿಹಾರ ಸಿಗುವ ಸಾಧ್ಯತೆ ಕಡಿಮೆ ಇದೆ. ಆದರೆ, ಕರೆಯ ಗುಣಮಟ್ಟದಲ್ಲಿ ಅಗಾಧ ವ್ಯತ್ಯಾಸವಾಗುವುದಂತೂ ಖಚಿತ.

ಸ್ಮಾರ್ಟ್‌ಫೋನ್‌ಗಳು ಈ ಹೊಸ VoNR ಗೆ ಸಪೋರ್ಟ್ ಮಾಡುತ್ತವೆಯೇ?

4G ಬಂದಾಗ ಬಹಳ ಫೋನ್‌ಗಳು VoLTE ಸಪೋರ್ಟ್ ಮಾಡುತ್ತಿರಲಿಲ್ಲ. ಅದಕ್ಕಾಗಿಯೇ ರಿಲಾಯನ್ಸ್ ಜಿಯೋ ಒಂದು ಆ್ಯಪ್ ಅನ್ನೂ ಕೂಡ ಸಿದ್ಧಪಡಿಸಿತ್ತು. ಆದರೆ, 5ಜಿಯಲ್ಲಿ ಈ ಸಮಸ್ಯೆ ಇಲ್ಲ. 2022ರ ನಂತರ ಬಂದ 5G ಸಪೋರ್ಟ್ ಮಾಡುವ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳೂ ಈ ಹೊಸ ತಂತ್ರಜ್ಞಾನವನ್ನು ಬೆಂಬಲಿಸುತ್ತವೆ. ಹೀಗಾಗಿ, ಯಾರಿಗೋ ಒಬ್ಬರಿಗೆ 5G ಯಲ್ಲಿ ಕಾಲ್ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಸಮಸ್ಯೆ ಇರುವುದಿಲ್ಲ.

ಭಾರತದಲ್ಲಿ VoNR ಲಭ್ಯವಿದೆಯೇ?

ಇದಿಷ್ಟನ್ನೂ ಬರೆಯುವುದಕ್ಕೆ ಕಾರಣವೇ ಭಾರತದಲ್ಲಿ ಈಗ VoNR ಸೌಲಭ್ಯ ಸಿಗುವುದಕ್ಕೆ ಆರಂಭವಾಗಿದೆ. ಸದ್ಯಕ್ಕೆ ರಿಲಾಯನ್ಸ್ ಜಿಯೋ ಕೆಲವು ದಿನಗಳಿಂದ ಇಡೀ ದೇಶದಲ್ಲಿ VoNR ಸೌಲಭ್ಯವನ್ನು ಸಕ್ರಿಯಗೊಳಿಸಿದ್ದೇವೆ ಎಂದು ಹೇಳಿಕೊಂಡಿದೆ. ಅಷ್ಟೇ ಅಲ್ಲ, ರಿಲಾಯನ್ಸ್ ಜಿಯೋ ಇದನ್ನು ತನ್ನದೇ ತಂತ್ರಜ್ಞಾನವನ್ನು ಬಳಸಿ ಅಭಿವೃದ್ಧಿಪಡಿಸಿಕೊಂಡಿದೆ. ಅಂದರೆ, VoLTE ಯಲ್ಲಿ ಆಗುತ್ತಿದ್ದ ಹಾಗೆ ಇದಕ್ಕೆ ವಿದೇಶದ ತಂತ್ರಜ್ಞಾನ ಕಂಪನಿಗಳ ಸಹಾಯವನ್ನು ಪಡೆದುಕೊಂಡಿಲ್ಲ. ಆದರೆ, ಇನ್ನುಳಿದ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್‌ ಮತ್ತು ವೊಡಾಫೋನ್ ಇದನ್ನು ಯಾವಾಗ ಜಾರಿ ಮಾಡುತ್ತೇವೆ ಎಂಬ ಬಗ್ಗೆ ತಿಳಿಸಿಲ್ಲ. ಹೀಗಾಗಿ, ಈ ಕಂಪನಿಯ ಗ್ರಾಹಕರಿಗೆ ಈ ಸೌಲಭ್ಯ ಸದ್ಯದಲ್ಲಿ ಸಿಗದೇ ಇರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.