ADVERTISEMENT

ಆಪ್ತ ಪರಿಚಾರಿಕೆ ‘ಅಲೆಕ್ಸಾ’

​ಕೇಶವ ಜಿ.ಝಿಂಗಾಡೆ
Published 14 ಆಗಸ್ಟ್ 2018, 19:30 IST
Last Updated 14 ಆಗಸ್ಟ್ 2018, 19:30 IST
ಅಲೆಕ್ಸಾ ಎಕೊ ಸ್ಮಾರ್ಟ್‌ ಪರಿಕರ
ಅಲೆಕ್ಸಾ ಎಕೊ ಸ್ಮಾರ್ಟ್‌ ಪರಿಕರ   

‘ಅಲೆಕ್ಸಾ, ಹೌ ಇಸ್‌ ದ ವ್ಹೆದರ್‌’ ಎನ್ನುತ್ತಿದ್ದಂತೆ ಬೆಂಗಳೂರಿನ ಆ ಹೊತ್ತಿನ ಹವಾಮಾನದ ತಾಜಾ ಮಾಹಿತಿ ಮತ್ತು ಮುನ್ಸೂಚನೆ ಕೇಳಿ ಬರುತ್ತದೆ. ‘ಅಲೆಕ್ಸಾ, ವಾಟ್ಸ್‌ ದ ಕ್ಯಾಪಿಟಲ್‌ ಆಫ್‌ ಎಂಪಿ’ ಪ್ರಶ್ನೆಗೆ, ಭೋಪಾಲ್‌ ಎನ್ನುತ್ತಾಳೆ. ’ಎಂಪಿ’ ಶಬ್ದವು ಸಂಸತ್‌ ಸದಸ್ಯ ಸೇರಿದಂತೆ ಹಲವಾರು ಅರ್ಥಗಳನ್ನು ಧ್ವನಿಸುತ್ತಿದ್ದರೂ ಆ ಬಗ್ಗೆ ಗೊಂದಲಕ್ಕೀಡಾಗದೇ ಮಧ್ಯಪ್ರದೇಶದ ರಾಜಧಾನಿ ಹೆಸರನ್ನು ಉಲಿಯುತ್ತಾಳೆ. ಅಲೆಕ್ಸಾ– ಸ್ವಿಚ್‌ ಆನ್‌ ಮೀಟಿಂಗ್‌ ರೂಂ ಲೈಟ್ಸ್‌ ಎಂದರೆ, ದೀಪ ಬೆಳಗಿಸುತ್ತಾಳೆ. ದೀಪಗಳನ್ನು ಮಂದಗೊಳಿಸು ಎಂದರೆ ಲೈಟ್‌ ಡಿಮ್‌ ಮಾಡುತ್ತಾಳೆ.

‘ಅಲೆಕ್ಸಾ, ಹೂ ಇಸ್‌ ಯುವರ್‌ ಕನ್ನಡಾ ಫೇವರೇಟ್‌ ಆ್ಯಕ್ಟರ್‌’ ಎಂದರೆ, ತಟ್ಟನೆ ಶಂಕರನಾಗ್‌ ಎನ್ನುತ್ತಾಳೆ. ‘ಅಲೆಕ್ಸಾ – ಹೂ ಇಸ್‌ ಡಾಕ್ಟರ್‌ ರಾಜ್‌ಕುಮಾರ್‌‘ ಎನ್ನುತ್ತಿದ್ದಂತೆ, ರಾಜ್‌ ಕುರಿತ ವಿವರಗಳನ್ನೆಲ್ಲ ಪಟಪಟನೆ ಹೇಳುತ್ತಾಳೆ. ‘ಅಲೆಕ್ಸಾ ವಾಟ್ಸ್‌ದ ವ್ಯಾಲ್ಯು ಆಫ್‌ ಪೈ’ ಎಂದರೂ ಸೈ. ಅದಕ್ಕೂ ಉತ್ತರ ನೀಡುತ್ತಾಳೆ.

ಅರೆ, ಏನಿದು. ಇದು ಯಾವ ತಂತ್ರಜ್ಞಾನ ಎನ್ನುವವರಿಗೆ ಅಮೆಜಾನ್‌ ಅಭಿವೃದ್ಧಿಪಡಿಸಿರುವ ಪುಟ್ಟ ಸ್ಮಾರ್ಟ್‌ ಸ್ಪೀಕರ್‌ ಮತ್ತು ಕೃತಕ ಬುದ್ಧಿಮತ್ತೆಯಿಂದ ಇದೆಲ್ಲ ಸಾಧ್ಯ ಎನ್ನುವ ಉತ್ತರ ನೀಡಬೇಕಾಗುತ್ತದೆ.

ADVERTISEMENT

ಇದಕ್ಕೆಲ್ಲ, ಮೊಬೈಲ್‌, ಕಂಪ್ಯೂಟರ್‌ನಲ್ಲಿ ಲಾಗ್ ಇನ್‌ ಆಗಿ, ಮಾಹಿತಿ ಶೋಧದ ಗೂಗಲ್‌ ಮತ್ತಿತರ ಅಂತರ್ಜಾಲ ತಾಣಗಳಿಗೆ ಹೋಗಿ ಟೈಪಿಸಿ ಉತ್ತರ ಪಡೆದುಕೊಳ್ಳುವ ಅಗತ್ಯ ಇಲ್ಲ. ಪುಟ್ಟ ಸ್ವೀಕರ್‌ ಸಾಧನಕ್ಕೆ ಧ್ವನಿ ಮೂಲಕವೇ ಕೇಳಿ, ನಿರ್ದೇಶಿಸಿ ಉತ್ತರ ಪಡೆಯುವ ಸಾಧನಗಳು ಈಗ ಬಳಕೆಗೆ ಬಂದಾಗಿದೆ.

ಮಕ್ಕಳ ಜ್ಞಾನಾರ್ಜನೆಗೆ ನೆರವಾಗುವ ಗಣಿತದ ಪ್ರಶ್ನೆ, ಇತಿಹಾಸ, ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಖಚಿತ ಉತ್ತರ, ಎಲ್ಲ ವಯೋಮಾನದ ಸಂಗೀತ ಪ್ರೇಮಿಗಳ ಅಚ್ಚುಮೆಚ್ಚಿನ ಹಾಡು, ವಿಡಿಯೊ ಕರೆಗಳನ್ನೂ ಮಾಡಬಹುದಾದ ಸ್ಮಾರ್ಟ್‌ ಸ್ಪೀಕರ್‌ಗಳನ್ನು ಅಮೆಜಾನ್‌ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಅಲೆಕ್ಸಾ, ಭಾರತದ ಇಂಗ್ಲಿಷ್‌ ಭಾಷಾ ಉಚ್ಚಾರಣೆಯನ್ನು ಅರ್ಥೈಸಿಕೊಳ್ಳುತ್ತಾಳೆ. ಆ್ಯಪ್‌ನಲ್ಲಿ ಅಮೆರಿಕ, ಇಂಗ್ಲೆಂಡ್‌ ಇಂಗ್ಲಿಷ್‌ ಸೇರಿದಂತೆ ಸದ್ಯಕ್ಕೆ ಐದಾರು ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ಮುಂದೊಂದು ದಿನ ಕನ್ನಡದಲ್ಲಿಯೂ ಬರಲೂಬಹುದು.

ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಆ್ಯಪ್‌ನಲ್ಲಿ ಭರ್ತಿ ಮಾಡುವ ಭೌಗೋಲಿಕ ಮಾಹಿತಿ ಆಧರಿಸಿ ಇದು ಸ್ಥಳೀಯ ಸಮಗ್ರ ಮಾಹಿತಿ ನೀಡುತ್ತದೆ. ಚಿಣ್ಣರ ಗಣಿತದ ಸಮಸ್ಯೆಗೆ ಪರಿಹಾರ ನೀಡುವುದರ ಜತೆಗೆ, ಕಠಿಣ ಶಬ್ದಗಳ ಸ್ಪೆಲಿಂಗ್‌ ಉಚ್ಚರಿಸುತ್ತಾಳೆ.

ಇದೊಂದು ಕ್ಲೌಡ್‌ ಮೂಲಕ ಕಾರ್ಯನಿರ್ವಹಿಸುವ ಕೃತಕ ಬುದ್ಧಿಮತ್ತೆ ಆಧರಿಸಿದ ಸೌಲಭ್ಯವಾಗಿದೆ. ಈ ಎಕೊ ಸಾಧನಗಳ ಬಳಕೆಗೆ ಇಂಟರ್‌ನೆಟ್‌ ಮತ್ತು ಬ್ಲೂಟೂಥ್‌ ಸಂಪರ್ಕ ಇರಬೇಕಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಅಲೆಕ್ಸಾ ಕಿರುತಂತ್ರಾಂಶ (ಆ್ಯಪ್‌) ಡೌನ್‌ಲೋಡ್‌ ಮಾಡಿಕೊಂಡಿರಬೇಕು.

ಅಲಾರಂ, ರಿಮೈಂಡರ್ಸ್‌, ಟೈಮರ್ ನಿಗದಿಪಡಿಸಲು, ನಿರ್ದಿಷ್ಟ ದಿನ ನಿರ್ವಹಿಸಬಹುದಾದ ಕಾರ್ಯಕ್ರಮಗಳ ವೇಳಾಪಟ್ಟಿ ನಿಭಾಯಿಸಲೂ ಈ ಪುಟ್ಟ ಸಾಧನ ನೆರವಾಗುತ್ತದೆ. ಮುಂಚಿತವಾಗಿ ಧ್ವನಿ ಮೂಲಕ ಆದೇಶ ನೀಡಿದ್ದರೆ, ಸರಿಯಾದ ಸಮಯಕ್ಕೆ ನೆನಪಿಸುತ್ತಾಳೆ. ಇಂಟರ್‌ನೆಟ್‌, ವಿದ್ಯುತ್‌ ಸಂಪರ್ಕವು ನಿರಂತರವಾಗಿ ಲಭ್ಯ ಇರುವಂತೆ ಇರುವಂತೆ ಎಚ್ಚರವಹಿಸಿರಬೇಕಷ್ಟೆ.

ಧ್ವನಿ ಮೂಲಕವೇ ಸ್ಪೀಕರ್‌ನ ಧ್ವನಿಯ ಮಟ್ಟವನ್ನೂ ನಿಯಂತ್ರಿಸಬಹುದು. ಅನೇಕ ಸಂಗತಿಗಳನ್ನು ಅಲೆಕ್ಸ್‌ ಕರಗತ ಮಾಡಿಕೊಂಡಿದ್ದಾಳೆ. ವ್ಯಕ್ತಿ, ನದಿ, ಪರ್ವತ ಮತ್ತಿತರ ಸ್ಥಳಗಳ ಬಗ್ಗೆಯೂ ಉತ್ತರಿಸುತ್ತಾಳೆ. ಅಪಾರ ಮಾಹಿತಿಯ ಜ್ಞಾನ ಭಂಡಾರ ಈ ‍ಪುಟ್ಟ ಸಾಧನದಲ್ಲಿ ಇದೆ. ಹೇಳಿದ್ದನ್ನು ಪಾಲಿಸುವ ವಿಧೇಯ ಪರಿಚಾರಿಕೆ ಆಗಿಯೂ ಅಲೆಕ್ಸಾ ಕಾರ್ಯನಿರ್ವಹಿಸುತ್ತಾಳೆ.

ಈ ಸಾಧನಗಳ ಪಟ್ಟಿಗೆ ಈಗ ‘ಎಕೊ ಸ್ಪಾಟ್‌’ ಹೆಸರಿನ ಪುಟ್ಟ ಪರದೆಯ ಸ್ಪೀಕರ್‌ ಸೇರ್ಪಡೆಯಾಗಿದೆ. ಇದರ ನೆರವಿನಿಂದ ವಿಡಿಯೊ ಕರೆಗಳನ್ನೂ ಮಾಡಬಹುದು. ಸಮೀಪದ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಲನಚಿತ್ರಗಳ ಪಟ್ಟಿಯನ್ನೂ ತಿಳಿದುಕೊಳ್ಳಬಹುದು. ಮನೆ ಬಳಕೆಗೆ ಖರೀದಿಸುವ ಸರಕುಗಳ ಪಟ್ಟಿಗೆ ಹೊಸದನ್ನು ಸೇರ್ಪಡೆ ಮಾಡಲೂ ಈಕೆಯ ನೆರವು ಪಡೆಯಬಹುದು.

ಸಂಗೀತ ಪ್ರಿಯರಿಗಂತೂ ಇದು ಅಚ್ಚುಮೆಚ್ಚಿನ ಸಾಧನವಾಗಿದೆ. ಅಮೆಜಾನ್‌ ಪ್ರೈಂ ಮ್ಯೂಸಿಕ್‌ನಿಂದ ಬೇಕಾದ ಹಾಡು ಕೇಳಿ ಬರುತ್ತದೆ. ಅಲೆಕ್ಸಾ, ನೆಸ್ಟ್‌ ಸಾಂಗ್‌ ಪ್ಲೀಸ್‌ ಅಂದರೆ, ತಕ್ಷಣ ಆ ಹಾಡು ನಿಲ್ಲಿಸಿ ಮುಂದಿನ ಹಾಡಿಗೆ ಹೋಗುತ್ತಾಳೆ. ನಿರ್ದಿಷ್ಟ ಹಾಡು ಬರೆದವರು, ಸಂಗೀತ ನೀಡಿದವರ ಮಾಹಿತಿಯನ್ನೂ ನೀಡುತ್ತಾಳೆ.

ಸ್ಮಾರ್ಟ್‌ ಸ್ಪೀಕರ್‌ಗಳು
ಅಮೆಜಾನ್‌ ಎಕೊ ಉಪಕರಣಗಳು ಧ್ವನಿ ಆಧರಿಸಿ ಕಾರ್ಯನಿರ್ವಹಿಸುವ ಸ್ಮಾರ್ಟ್ ಸ್ಪೀಕರ್‌ಗಳಾಗಿವೆ. ಈ ವಿಶಿಷ್ಟ ಉಪಕರಣಗಳ ಹಿಂದಿನ ಮಿದುಳು ಅಲೆಕ್ಸಾ. ಒಂದು ಪ್ರಶ್ನೆ ಕೇಳಿದರೆ ಸಾಕು, ಅಲೆಕ್ಸಾ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾಳೆ. ಸಂಗೀತ ನುಡಿಸುತ್ತಾಳೆ, ‘ಸ್ಮಾರ್ಟ್‌ ಹೋಂ’ನ ದೀಪಗಳನ್ನು ಬೆಳಗಿಸುತ್ತಾಳೆ, ಆರಿಸುತ್ತಾಳೆ. ಕ್ರೀಡಾ ಸ್ಕೋರುಗಳನ್ನೂ ನೀಡುತ್ತಾಳೆ. ಹವಾಮಾನದ ವರದಿ ನೀಡುತ್ತಾಳೆ, ನೀವು ಸೂಚಿಸಿದವರಿಗೆ ಕರೆ ಕೂಡ ಮಾಡುತ್ತಾಳೆ.

ಧ್ವನಿ ನಿರ್ದೇಶನದ ಮೂಲಕವೇ ಮಾಹಿತಿ ನೀಡುವ, ಹೇಳಿದ್ದನ್ನೆಲ್ಲ ಮಾಡುವ ಈ ಜಾಣ ಪರಿಕರಗಳು ನಾಲ್ಕು ವಿಧದಲ್ಲಿ ಲಭ್ಯ ಇವೆ. ಎಕೊ ಡಾಟ್, ಎಕೊ, ಎಕೊ ಸ್ಪಾಟ್ ಹಾಗೂ ಎಕೊ ಪ್ಲಸ್. ಇವುಗಳ ಬೆಲೆ ಕ್ರಮವಾಗಿ ₹ 4,999 ರಿಂದ ₹ 14,999 ಇದೆ. ಇತರ ಸ್ಪೀಕರ್‌ಗೆ ಬ್ಲೂಟೂತ್ ಮೂಲಕ, ಮನೆಯಲ್ಲಿನ ಮನರಂಜನೆಯ ಸಿಸ್ಟಮ್‌ಗೆ ಕೇಬಲ್ ಬಳಸಿ ಸಂಪರ್ಕಿಸಬಹುದು.

ಎಕೊ ಪ್ಲಸ್, ಬಿಲ್ಟ್-ಇನ್ ಸ್ಮಾರ್ಟ್ ಹೋಮ್ ಹಬ್ ಹೊಂದಿದೆ. ಮನೆಯಲ್ಲಿನ ಸ್ಮಾರ್ಟ್ ಗೃಹೋಪಕರಣಗಳಿಗೆ ಸಂಪರ್ಕಿಸುವುದನ್ನು ಇದು ಸುಲಭಗೊಳಿಸುತ್ತದೆ. ‘ಸ್ಮಾರ್ಟ್‌ ಹೋಂ’ಗಳಲ್ಲಿನ ಏ.ಸಿ, ಟಿ.ವಿ, ಸೆಟ್‌ಟಾಪ್‌ ಬಾಕ್ಸ್‌ಗಳನ್ನೂ ನಿಯಂತ್ರಿಸಬಹುದು.

ಮಾತಿನ ಮಧ್ಯೆ ಅಲೆಕ್ಸಾ ಅಂದ್ರೆ ಸಾಕು. ಆಕೆ ಏನು, ಏನೋ ಕೇಳಿದ್ರಲ್ಲಾ ಅಂತ ಮೂಗು ತೂರಿಸಿಯೇ ಬಿಡುತ್ತಾಳೆ. ಇವೆಲ್ಲ ಸಂಭಾಷಣೆ ಇಂಗ್ಲಿಷ್‌ನಲ್ಲಿ ಇರುವುದೊಂದೇ ಅಲೆಕ್ಸಾಳ ಮಿತಿ.

ವಿವಿಧ ಕ್ಷೇತ್ರಗಳ ಖ್ಯಾತನಾಮರು, ಇತಿಹಾಸದಲ್ಲಿ ದಾಖಲಾದ ವಿಶಿಷ್ಟ ದಿನಗಳು, ಪ್ರಮುಖ ಸ್ಥಳಗಳು, ಕಠಿಣ ಶಬ್ದಗಳ ಸ್ಪೆಲಿಂಗ್‌ – ಹೀಗೆ ಏನೆಲ್ಲಾ ಪ್ರಶ್ನೆ ಕೇಳಿದರೂ, ಅಲೆಕ್ಸಾಳಲ್ಲಿ ಅದಕ್ಕೆಲ್ಲ ಉತ್ತರ ಇದೆ. ಬೇಜಾರಾಗಿದ್ರೆ, ಅಲೆಕ್ಸಾ, ಜೋಕ್‌ ಹೇಳು ಎಂದು ಕೇಳಿದ್ರೆ ನಗೆ ಚಟಾಕಿಯನ್ನೂ ಹಾರಿಸುತ್ತಾಳೆ.

ಹಲವಾರು ಬಗೆಯ ಮಾಹಿತಿ ಶೋಧಿಸಲು ಅಂತರ್ಜಾಲ ಜಾಲಾಡುವ ಕೆಲಸವನ್ನು ‘ಅಲೆಕ್ಸಾ’ ತುಂಬ ಹಗುರಗೊಳಿಸಿದ್ದಾಳೆ. ಮುಂಗಾರು ಮಳೆ ಚಿತ್ರದ ಮಳೆ ಹನಿ ಹಾಡಿಗೆ ಮೇಲ್‌ ಹನಿ ಎಂದು ಸದ್ಯಕ್ಕೆ ತಪ್ಪಾಗಿ ಉಚ್ಚರಿಸುತ್ತಾಳೆ. ಇಂತಹ ಕೆಲ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಲೇ ದಿನೇ ದಿನೇ ಹೆಚ್ಚೆಚ್ಚು ಚುರುಕಾಗುತ್ತಿದ್ದಾಳೆ. ‘ಅಲೆಕ್ಸಾ’ ದಿನೇ ದಿನೇ ಹೊಸ ಹೊಸ ವಿಷಯ ಸಂಗ್ರಹಿಸುತ್ತ ಹೆಚ್ಚೆಚ್ಚು ಸ್ಮಾರ್ಟ್‌ ಆಗುತ್ತಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.