ADVERTISEMENT

Anthropic AI: ಐಟಿ ಲೋಕದ ‘ಮಹಾ ಪ್ರಳಯ’ದ ಹಿಂದಿನ ಶಕ್ತಿ ಕನ್ನಡಿಗ ರಾಹುಲ್ ಪಾಟೀಲ!

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:27 IST
Last Updated 10 ಫೆಬ್ರುವರಿ 2026, 6:27 IST
<div class="paragraphs"><p>ರಾಹುಲ್ ಪಾಟೀಲ</p></div>

ರಾಹುಲ್ ಪಾಟೀಲ

   

ಬೆಂಗಳೂರು: ಅದು ಇದೇ ವರ್ಷ ಫೆಬ್ರುವರಿ 4. ಅವತ್ತು ಅಮೆರಿಕ, ಭಾರತದಲ್ಲಿ ಐಟಿ ಸೇವೆಗಳು, ಕಾನೂನು ಸೇವೆಗಳನ್ನು ಒದಗಿಸುವ ಕೆಲವು ಕಂಪನಿಗಳ ಷೇರುಗಳ ಮೌಲ್ಯವು ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಒಂದೇ ದಿನ ಷೇರುಪೇಟೆ 28,500 ಕೋಟಿ ಡಾಲರ್‌ಗಳ ನಷ್ಟ ಅನುಭವಿಸಿತ್ತು. ಭಾರತದ ಷೇರು ಪೇಟೆಯಲ್ಲಿ ಇನ್ಫೊಸಿಸ್, ವಿಪ್ರೊ, ಟಿಸಿಎಸ್‌ ಮುಂತಾದ ಐಟಿ ಕಂಪನಿಗಳ ಷೇರುಗಳ ಮೌಲ್ಯ ಶೇ 7ರಷ್ಟು ಕುಸಿತ ಕಂಡರೆ, ಅಮೆರಿಕದ ಕಂಪನಿಗಳ ಷೇರುಗಳು ಶೇ 12ರಷ್ಟು ಕುಸಿತ ದಾಖಲಿಸಿದವು. ‘ಸಾಫ್ಟ್‌ವೇರ್ ಸೇವೆಗಳಲ್ಲಿ ಮಹಾಪ್ರಳಯ’ (SaaSpocalypse) ಎಂದೇ ಅದನ್ನು ಕರೆಯಲಾಯಿತು.

ಇಂಥ ಮಹಾಪತನಕ್ಕೆ ಕಾರಣವಾಗಿದ್ದು ಒಂದು ಎಐ ಟೂಲ್‌!

ADVERTISEMENT

ಆಂತ್ರೊಪಿಕ್ ಎನ್ನುವ ಕೃತಕ ಬುದ್ಧಿಮತ್ತೆ (ಎಐ) ಕಂಪನಿಯು ಇದೇ ಜನವರಿಯಲ್ಲಿ ಕ್ಲಾಡ್ ಕೋವರ್ಕ್ (Claude Cowork) ಎನ್ನುವ ಎಐ ಏಜೆಂಟ್‌ ಅನ್ನು ಬಿಡುಗಡೆ ಮಾಡಿತ್ತು. ಆಂತ್ರೊಪಿಕ್‌ನ ಕ್ಲಾಡ್ ಚಾಟ್‌ಬಾಟ್ ಅಲ್ಪ ಅವಧಿಯಲ್ಲೇ ಭಾರಿ ಜನಪ್ರಿಯತೆ ಗಳಿಸಿತ್ತು. ಸಾಫ್ಟ್‌ವೇರ್ ಕೋಡಿಂಗ್ ಮಾಡುವವರಿಗಾಗಿಯೇ ಕ್ಲಾಡ್ ಕೋಡ್ ವಿಶೇಷ ಆವೃತ್ತಿ ಬಿಡುಗಡೆ ಮಾಡಿತ್ತು. ಅದರ ಕ್ಷಿಪ್ರ ಯಶಸ್ಸಿನಿಂದ ಸ್ಫೂರ್ತಿ ಪಡೆದ ಆಂತ್ರೊಪಿಕ್ ಕಂಪನಿಯು, ಕ್ಲಾಡ್ ‌ಗೆ ಹೆಚ್ಚುವರಿ ಜನವರಿ ಅಂತ್ಯದಲ್ಲಿ ಪ್ಲಗ್‌–ಇನ್‌ಗಳನ್ನು ಬಿಡುಗಡೆ ಮಾಡಿತು. ಸ್ವಯಂಚಾಲಿತವಾಗಿ ಕೆಲಸ ಮಾಡುವ ಇವುಗಳು ವಿಶ್ಲೇಷಣೆ, ಕೋಡಿಂಗ್‌ನಂತಹ ಸಂಕೀರ್ಣ ಕೆಲಸಗಳನ್ನೂ ಮಾಡುತ್ತವೆ. ಫೆಬ್ರುವರಿ ಮೊದಲ ವಾರದಲ್ಲಿ ಅದರ ಕಾರ್ಯನಿರ್ವಹಣೆಯ ವಿವರಗಳು ಬಹಿರಂಗಗೊಂಡಿದ್ದು ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟು ಮಾಡಿತು.

ಆಂತ್ರೊಪಿಕ್ ಹಿಂದಿನ ಶಕ್ತಿ ಕನ್ನಡಿಗ!

ಆಂತ್ರೊಪಿಕ್, ಅಮೆರಿಕದ ಎಐ ಸ್ಟಾರ್ಟ್‌ಅಪ್‌ ಆಗಿದ್ದು, ಎಐ ಭದ್ರತೆ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡಿದೆ. ವಿಶ್ವಾಸಾರ್ಹವಾದ ಎಐ ವ್ಯವಸ್ಥೆಯನ್ನು ನಿರ್ಮಿಸುವುದು, ಎಐಗೆ ಸಂಬಂಧಿಸಿದ ಅವಕಾಶಗಳು ಮತ್ತು ಅಪಾಯಗಳ ಬಗ್ಗೆ ಸಂಶೋಧನೆ ಮಾಡುವುದು ತನ್ನ ಗುರಿ ಎಂದು ಕಂಪನಿ ಹೇಳಿಕೊಂಡಿದೆ. ಓಪನ್‌ ಎಐನಲ್ಲಿದ್ದ ತಂತ್ರಜ್ಞರು ಸೇರಿ 2021ರಲ್ಲಿ ಸ್ಥಾಪಿಸಿದ ಈ ಕಂಪನಿಯು ಕ್ಲಾಡ್ ಕೋಡ್‌ನಿಂದ ಅತ್ಯಲ್ಪ ಅವಧಿಯಲ್ಲೇ ಭಾರಿ ಯಶಸ್ಸು ಗಳಿಸಿದೆ.

ಆಂತ್ರೊಪಿಕ್‌ ಕಂಪನಿಯಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿ ಆಗಿರುವುದು (ಸಿಟಿಒ) ಕನ್ನಡಿಗ ರಾಹುಲ್ ಪಾಟೀಲ. ಇವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ನಗರದ ಬಾಲ್ಡ್‌ವಿನ್ ಬಾಲಕರ ಪ್ರೌಢಶಾಲೆ, ಸೇಂಟ್ ಜೋಸೆಫ್ಸ್ ಪದವಿ ಪೂರ್ವ ಕಾಲೇಜು ಮತ್ತು ಪಿಇಎಸ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಓದಿದ ಇವರು, ಅರಿಝೋನಾ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ವಾಷಿಂಗ್ಟನ್‌ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ‍ಪಡೆದರು. ಮೈಕ್ರೊಸಾಫ್ಟ್, ಅಮೆಜಾನ್ ವೆಬ್ ಸರ್ವೀಸಸ್ ಮತ್ತು ಒರಾಕಲ್ ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್‌ ಮುಂತಾದ ಕಂಪನಿಗಳಲ್ಲಿ ದಶಕಕ್ಕೂ ಹೆಚ್ಚು ಕಾಲದ ದುಡಿದ ಇವರು, 2025ರ ಅಕ್ಟೋಬರ್‌ನಲ್ಲಿ ಸಿಟಿಒ ಆಗಿ ಆಂತ್ರೊಪಿಕ್ ಸೇರಿದರು. ಕಂಪನಿಯು ಎಐ ಕ್ಷೇತ್ರದಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದು, ರಾಹುಲ್ ಅವರ ಕೌಶಲವೂ ಆಂತ್ರೊಪಿಕ್ ಬೆಳವಣಿಗೆಯ ಹಿಂದಿದೆ. ಅಮೆರಿಕದ ಹೊರಗೆ ಟೋಕಿಯೊದಲ್ಲಿ ಕಾರ್ಪೊರೇಟ್ ಕಚೇರಿ ಹೊಂದಿರುವ ಆಂತ್ರೊಪಿಕ್, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿಯೂ ಕಚೇರಿ ಆರಂಭ ಮಾಡಲಿದೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.