ADVERTISEMENT

History of Glass: ಗಾಜು ನಡೆದು ಬಂದ ದಾರಿ!

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 0:54 IST
Last Updated 21 ಜನವರಿ 2026, 0:54 IST
<div class="paragraphs"><p>History of Glass: ಗಾಜು ನಡೆದು ಬಂದ ದಾರಿ!</p></div>

History of Glass: ಗಾಜು ನಡೆದು ಬಂದ ದಾರಿ!

   

‘ಗಾಜಿನ ಮನೆಯಲ್ಲಿ ಕೂತು‌ ಕಲ್ಲನ್ನು ಎಸೆಯಬಾರದು’ – ಎನ್ನುವ ಗಾದೆಯ ಮಾತೊಂದಿದೆ. ಇವತ್ತು ಪಟ್ಟಣಗಳಲ್ಲಿ ನೋಡಿದಲ್ಲೆಲ್ಲಾ ಗಾಜಿನ ಕಟ್ಟಡಗಳು. ಅಲ್ಲಿ‌ ಕೂತೇ ಜನರು ಗುಂಡು ಹೊಡೆಯುವುದು! ನಮಗೆ,‌ನಮ್ಮ ಪರಿಸರಕ್ಕೆ ಗಾಜಿನ ಮನೆ ಒಳಿತೋ, ಕೆಡಕೋ ಗೊತ್ತಿಲ್ಲ ಆದರೆ ವೈಭವಯುತವಾದ ಗಾಜಿನ ಮಹಲನ್ನು ಕಟ್ಟಿ ನಿಲ್ಲಿಸದರೆ ಅಲ್ಲಿದ್ದವರಿಗೆ ನೆಮ್ಮದಿಯ ಭ್ರಮೆ. ಗಾಜು ಮನುಷ್ಯ ಕಂಡುಕೊಂಡ ಅತ್ಯಾಕರ್ಷಕ ವಸ್ತುಗಳಲ್ಲಿ ಮೊದಲಿನದಾಗಿರಬಹುದೇನೋ? ಏಕೆಂದರೆ ಗಾಜಿನ ಇತಿಹಾಸ ಕ್ರಿ.ಪೂ. 3500ಕ್ಕೂ ಹಿಂದಕ್ಕೆ ಹೋಗುತ್ತದೆ! ಅತ್ಯಂತ ಹೆಚ್ಚಿನ ಉಷ್ಣಾಂಶದಲ್ಲಿ ಮರಳು, ಸೋಡಿಯಂ ಕಾರ್ಬೋನೇಟ್ (ಸೋಡಾ ಆ್ಯಶ್) ಹಾಗೂ ಸುಣ್ಣದ ಕಲ್ಲಿನ ಮಿಶ್ರಣವನ್ನು ಬಳಸುತ್ತಿರುವಾಗ ಆತನಿಗೆ ಅಕಸ್ಮಿಕವಾಗಿ ಜಗಮಗ ಹೊಳೆಯುವ ಪದರೊಂದು ಕಾಣಿಸಿರಬೇಕು. ಅದುವೇ ಗಾಜಿನ ಅವಿಷ್ಕಾರಕ್ಕೆ ಕಾರಣ. ಮೆಸೊಪಟ್ಯಾಮಿಯಾದ ನಾಗರಿಕತೆಯ ಕಾಲದಲ್ಲಿ‌ ಅಲ್ಲಿಯ ಕುಶಲಕರ್ಮಿಗಳು ಮಣ್ಣಿನ ಮಡಿಕೆಗಳನ್ನು ಮಾಡುತ್ತಿರುವಾಗ ಗಾಜು ಹುಟ್ಟಿಕೊಂಡಿತು ಎನ್ನಬಹುದು. ಅಲ್ಲಿಂದಲೇ ಮಾನವನಿರ್ಮಿತ ಸೀಸದ ತಯಾರಿಕೆಯ ಪಯಣದ ಶುರು.

ಈ ಹೊಸದಾದ, ಮನಮೋಹಿಸುವ ವಸ್ತುವಿನ ಪ್ರವೇಶವಾದಾಗ ಅದರ ಮೊದಲ ಬಳಕೆ ಆಗಿನ ಕಾಲದಲ್ಲಿ ಆ‌ ನಗರಗಳನ್ನು ಆಳುತ್ತಿದ್ದ ರಾಜರಾಣಿಯರನ್ನು ಶೃಂಗರಿಸುವ ಆಭರಣಗಳಲ್ಲಾಗಿರಬೇಕು. ಅನಂತರ ಕಾಲಕ್ರಮೇಣ ಜನರು ತಾವು ಕಂಡುಕೊಂಡ ಹೊಸ ತಂತ್ರಜ್ಞಾನವನ್ನು ಮುತ್ತುಗಳನ್ನು, ಮಣಿಗಳನ್ನು, ಬಣ್ಣ ಬಣ್ಣದ ಗಾಜಿನ ಪಾತ್ರೆಗಳನ್ನು ತಯಾರಿಸಲು ಬಳಸಿದರು. ಎರಡು ಸಾವಿರ ವರ್ಷಗಳ ಕಾಲ ಇದರಲ್ಲಿ ಹೆಚ್ಚು ಬದಲಾವಣೆಗಳೇನು ಆಗಿರಲಿಲ್ಲ. ಕ್ರಿ.ಪೂ. 1500ರ ಸುಮಾರಿಗೆ ಈಜಿಪ್ಟಿನಲ್ಲಿ ಅಲ್ಲಿಯ ತನಕ ನಡೆದುಕೊಂಡು ಬರುತ್ತಿದ್ದ ಗಾಜಿನ ತಯಾರಿಕೆಯ ಪ್ರಕ್ರಿಯೆಯನ್ನು ಬದಲಾಯಿಸಿದರು. ಅವರು ಹೊಸ ಪ್ರಕ್ರಿಯೆಯ ಮೂಲಕ ಕೊಳವೆ, ಕುಡಿಕೆಗಳು ಹಾಗೂ ಸಂಕೀರ್ಣವಾದ ಆಭರಣದ ತಯಾರಿಕೆಗೆ ಶುರುಮಾಡಿದ್ದು. ಗಾಜಿನ ವ್ಯಾಪಕವಾದ ಬಳಕೆ ಶುರುವಾಗಿದ್ದು ಅಲ್ಲಿಂದ ಎಂದು ಹೇಳಬೇಕು. ಆದರೂ ಗಾಜು‌ ಅಷ್ಟೊಂದು ಜನಪ್ರಿಯವಾಗಿರಲಿಲ್ಲ. ರೋಮನರ ಕಾಲದಲ್ಲಿ ಅಲ್ಲಿಯ ಕುಶಲಕರ್ಮಿಗಳು ಗಾಜಿನ ತಯಾರಿಕೆಯಲ್ಲಿ ಮ್ಯಾಂಗನೀಸನ್ನು ಸೇರಿಸಿ ಪಾರದರ್ಶಕತೆಯನ್ನು ಹೆಚ್ಚಿಸಿದರು. ಕ್ರಿ. ಶ. ಒಂದನೆಯ ಶತಮಾನದ ಹೊತ್ತಿಗೆ ಸಾರ್ವಜನಿಕ ಸ್ನಾನಗೃಹಗಳು ಈ ಹೊಸ ಬಗೆಯ ಗಾಜಿನಿಂದ ನಿರ್ಮಿಸಲ್ಪಡುತ್ತಿದ್ದವು. ಗಾಜಿನ ಜನಪ್ರಿಯತೆ ಹೆಚ್ಚಿದ್ದು ರೋಮನರ ಕಾಲದಲ್ಲಿ.

ADVERTISEMENT

ಪ್ರತಿಯೊಂದು ತಂತ್ರಜ್ಞಾನದಲ್ಲೂ ಒಂದು ಮಹತ್ವದ ತಿರುವು ಬರುತ್ತದೆ. ಗಾಜಿನ ತಂತ್ರಜ್ಞಾನದಲ್ಲಿ ಇಂತಹುದೇ ಒಂದು ‘ಬ್ರೇಕ್ ಥ್ರೂ’ ನಡೆದಿದ್ದು ಮಧ್ಯಕಾಲೀನ ಯುಗದಲ್ಲಿ. ವೆನೆಟಿಯನ್ ಗಾಜು ತಯಾರಕರು ಪಾರದರ್ಶಕ ಗಾಜಿನ ತಯಾರಿಕೆಯಲ್ಲಿ ನಿಪುಣರು. ಅವರು ಅದಕ್ಕೆ ‘ಕ್ರಿಸ್ಟಿಲೋ’ ಎಂದು ಕರೆಯುತ್ತಿದ್ದರು. ಇವತ್ತು ನಾವು ಬಳಸುವ ‘ಕ್ರಿಸ್ಟಲ್ ಕ್ಲಿಯರ್’ ಎನ್ನುವ ಶಬ್ದವು ಅಲ್ಲಿಂದಲೇ ಬಂದಿದ್ದು. ಅವರು ಈ ತಂತ್ರಜ್ಞಾನವನ್ನು ಹೊರಗೆ ಬಿಟ್ಟುಕೊಟ್ಟಿರಲಿಲ್ಲ. ಹೀಗಾಗಿ ಆ ಸಮಯದಲ್ಲಿ ವ್ಯಾಪಾರ ಹಾಗೂ ಕಳ್ಳಸಾಗಾಣಿಕೆ ತುಂಬಾ ಹೆಚ್ಚಿತು. ಕೆಲವರ ಕಪಿಮುಷ್ಟಿಯಲ್ಲಿ ಇದ್ದ ಗಾಜು ತಯಾರಿಕೆಯ ತಂತ್ರಜ್ಞಾನಕ್ಕೆ ಮುಕ್ತಿ ಸಿಕ್ಕಿದ್ದು ಕೈಗಾರಿಕಾ ಕ್ರಾಂತಿಯು ಶುರುವಾದಾಗ. ಬಳಕೆಯು ಹೆಚ್ಚುತ್ತಿದ್ದಂತೆ ‘ಮಾಸ್ ಪ್ರೊಡಕ್ಷನ್’ನ ಬೇಡಿಕೆಯೂ ಹೆಚ್ಚಿತು. ಗಾಜಿನ ತಯಾರಿಕನ್ನು ಕೈಗಾರಿಕರಣಕ್ಕೆ ಅನುವು ಮಾಡಿಕೊಟ್ಟಿದ್ದು 1959ರಲ್ಲಿ ಅಲಾಸ್ಟೇರ್ ಪಿಕಿಂಗ್‌ ಎನ್ನುವಾತನ ಫ್ಲೋಟಿಂಗ್ ಗ್ಲಾಸ್ ವಿಧಾನ. ದ್ರವರೂಪದಲ್ಲಿಯ ಗಾಜು ತವರಿನ ಪದರಿನ ಮೇಲೆ ಹರಿಯುತ್ತಾ ಚಪ್ಪಟೆಯಾದ ಹಾಳೆಯನ್ನಾಗಿ ಮಾಡುವ ಈ ತಂತ್ರಜ್ಞಾನವು ಗಾಜಿನ ಬಳಕೆಯಲ್ಲಿ ಹೊಸದೊಂದು ಕ್ರಾಂತಿಯನ್ನೇ ತಂದಿತು. ಹತ್ತಾರು ಮಹಡಿಯು ಕಟ್ಟಡಗಳಲ್ಲಿ, ವಾಹನಗಳ ವಿನ್ಯಾಸದಲ್ಲಿ ಗಾಜಿನ ಬಳಕೆಯು ಶುರುವಾಗಿದ್ದು ಅಲ್ಲಿಂದ. ಆದರೂ ಗಾಜು ತುಂಬಾ ಭಿದುರ ವಸ್ತುವಾಗಿಯೇ ಪರಿಗಣಸಲ್ಪಟ್ಟಿತ್ತು. ಸದೃಢವಾದ ಗಾಜಿನ ಅಭಿವೃದ್ಧಿಯು ಆಮೆಯ ವೇಗದಲ್ಲಿ ನಡೆಯುತ್ತಿರುವಾಗ ಮೂಲೆ ಗುಂಪಾಗಿ ಬಿದ್ದಿದ್ದ ಗೋರಿಲ್ಲಾ ಗಾಜಿನ ತಂತ್ರಜ್ಞಾನವನ್ನು ಮತ್ತೆ 2007ರಲ್ಲಿ ಹೊರಗಡೆಗೆ ತಂದು ಕೊರ್ನಿಂಗ್ ಇಂಕ್ ಎನ್ನುವ ಕಂಪನಿ. ಈ ತಂತ್ರಜ್ಞಾನದ ಜನಕ ಸ್ಟೇನ್ಲಿ ಡೊನಾಲ್ಡ್ ಸ್ಟೂಕಿ. ಆತ ಕೊರ್ನಿಂಗ್‌ಯ ವಿಜ್ಞಾನಿ. ಗಾಜು ಹಾಗೂ ಸಿರಾಮಿಕ್ಸ್ ತಂತ್ರಜ್ಞಾನದ ಮೇಲೆ ಅವರದ್ದು ಅರವತ್ತಕ್ಕೂ‌ ಹೆಚ್ಚು ಅವಿಷ್ಕಾರಗಳಿವೆ. ಗೋರಿಲ್ಲಾ ಗಾಜು ಪ್ರಾಜೆಕ್ಸ್ ಮಸಲ್‌ನ ಫಲಿತಾಂಶ; ರಾಸಾಯನಿಕ ಸಮೀಕರಣದಲ್ಲಿ ಆಯನ್ ಸೇರಿಸಿ ಹಾಗೂ ಸೋಡಿಯಂ ಬದಲು ಪೊಟ್ಯಾಸಿಯಮ್‌ ಬಳಸಿದ್ದರಿಂದ ಒಂದೂವರೆ ಮೀಟರ್ ಎತ್ತರದಿಂದ ಬೀಳಿಸಿದರೂ ಒಡೆಯದಂತಹ ಸದೃಢ ಗಾಜನ್ನು ತಯಾರಿಸಲು ಸಾಧ್ಯವಾಯಿತು. ಈ ತಂತ್ರಜ್ಞಾನವೀಗ ಲಕ್ಷಾಂತರ ಮೊಬೈಲ್ ಫೋನ್‌ಗಳಲ್ಲಿ, ಇಲೆಕ್ಟ್ರಾನಿಕ್ ಉಪಕರಣಗಳ ಪರದೆಯಲ್ಲಿ ಬಳಕೆಯಾಗುತ್ತಿದೆ!

ಇಂದು ಗಾಜು ಕೇವಲ ನಿಷ್ಕ್ರಿಯವಾದ ವಸ್ತುವಲ್ಲ, ಅದು ಉಳಿದ ವಸ್ತುಗಳ ಹಾಗೆಯೇ ‘ಸ್ಮಾರ್ಟ್’ ಆಗುತ್ತಿದೆ. ಎಲೆಕ್ಟ್ರೊಕ್ರೊಮಿಕ್ ಗ್ಲಾಸ್ ಇದು ಕಟ್ಟಡಗಳಲ್ಲಿ ಬಳಕೆಯಾಗುತ್ತಿದ್ದು ಬೆಳಕಿನ ತೀವ್ರತೆಗೆ ತಕ್ಕಂತೆ ಸೂರ್ಯಕಿರಣವನ್ನು ಹೀರುವ ಕ್ಷಮತೆಯಲ್ಲಿ ವೈಪರೀತ್ಯಗಳನ್ನು ತಂದು ಕಟ್ಟಡದ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಇದನ್ನು ‘ಡೈನಾಮಿಕ್ ಶೇಡಿಂಗ್’ ಎಂದೂ ಕರೆಯುತ್ತಾರೆ. ‘ಫೋಟೊವೊಲ್ಟಿಕ್ ಇಂಟಿಗ್ರೇಟೆಡ್’ ಗಾಜುಗಳು ಕಿಟಕಿಗಳನ್ನು ಸೌರಫಲಕವಾಗಿ ಬದಲಾಗಿಸುತ್ತವೆ. ವಿದ್ಯುತ್ ತಯಾರಿಕೆಯ ಜೊತೆಗೆ ಪಾರದರ್ಶಕತೆ ಇದು ಇದರ ‘ಟು ಇನ್ ವನ್’ ಉಪಯೋಗ! ಆಪ್ಟಿಕ್ಸ್ ಅಥವಾ ದೃಗ್ವಿಜ್ಞಾನ ಕ್ಷೇತ್ರದಲ್ಲಂತೂ ಗಾಜಿನ ಬಳಕೆಯು ಅತ್ಯಂತ ಮಹತ್ವವನ್ನು ಪಡೆಯುತ್ತಿದೆ. ಸೂಕ್ಷ್ಮದರ್ಶಕದ ತಯಾರಿಕೆಗೆ ಗಾಜಿನ ಪಾತ್ರ ಅತ್ಯಂತ ದೊಡ್ಡದು. ಕ್ವಾಂಟಮ್ ಮೆಕ್ಯಾನಿಕ್ಸ್ ಅನ್ನು ಬಳಸಿ ತಯಾರಿಸಬಲ್ಲ ಕ್ವಾಂಟಮ್ ಗಾಜುಗಳು ಮಂಗಳನ ಮೇಲೆ ವಸತಿಯನ್ನು ನಿರ್ಮಿಸಬಲ್ಲ ಸಾಧ್ಯತೆಗೆ ತೆರವು ಮಾಡಿಕೊಟ್ಟಿವೆ. ‘ಸೆಲ್ಫ್‌ ಹೀಲಿಂಗ್’ ಅಥವಾ ಸ್ವ-ಚಿಕಿತ್ಸಕ ಗಾಜುಗಳು ಅಂತರಿಕ್ಷ ವಿಜ್ಞಾನದ ಉಪಕರಣಗಳ ವಿನ್ಯಾಸದಲ್ಲಿ ಹೊಸ ಭರವಸೆಗಳನ್ನು ಹುಟ್ಟುಹಾಕಿವೆ. ಮನುಷ್ಯನ ಕೂದಲಿನ ಎಳೆಗಿಂತಲೂ ಕಡಿಮೆ ತೆಳ್ಳಗಿರುವ ಗಾಜಿನ ಎಳೆಗಳು ಮಡಚಬಹುದಾದ ಪರದೆಗಳ ನಿರ್ಮಾಣಕ್ಕೆ ಅತಿ ಅವಶ್ಯಕ. ಸ್ಯಾಮ್‌ಸಂಗ್‌ ಕಂಪನಿಯ ಯುಟಿಜಿ (ಅಲ್ಟ್ರಾ ಥಿನ್ ಗ್ಲಾಸ್) ಎರಡು ಲಕ್ಷ ಬಾರಿ ಮಡಚಿದರೂ ಸುಕ್ಕುಗಟ್ಟದು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ದೊಡ್ಡ ಪುಸ್ತಕವನ್ನೇ ಬರೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.