ADVERTISEMENT

ಕೋವಿಡ್‌ ಪತ್ತೆಗೆ ರಿಸ್ಟ್ ಬ್ಯಾಂಡ್‌: ಆಗಸ್ಟ್‌ ವೇಳೆಗೆ ಮಾರುಕಟ್ಟೆಗೆ

ಪಿಟಿಐ
Published 25 ಜುಲೈ 2020, 7:56 IST
Last Updated 25 ಜುಲೈ 2020, 7:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌–19 ಲಕ್ಷಣಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವ, ವಾಚ್‌ನಂತೆ ಕೈಗೆ ಕಟ್ಟಿಕೊಳ್ಳಬಹುದಾದ ರಿಸ್ಟ್‌ ಬ್ಯಾಂಡ್‌ ಮಾದರಿಯ ಉಪಕರಣವೊಂದನ್ನು ಐಐಟಿ ಮದ್ರಾಸ್‌ನ ಹಳೆ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದು, ಆಗಸ್ಟ್‌ ವೇಳೆಗೆ ಇದು ಮಾರುಕಟ್ಟೆ ಪ್ರವೇಶಿಸಲಿದೆ.

₹22 ಕೋಟಿ ಸಾಲ ಪಡೆದು, ಈ ವಿದ್ಯಾರ್ಥಿಗಳ ತಂಡವು ಎನ್‌ಐಟಿ ವಾರಂಗಲ್‌ನ ಹಳೆ ವಿದ್ಯಾರ್ಥಿಗಳ ಜತೆ ಸೇರಿಕೊಂಡು ನವೋದ್ಯಮ ಸ್ಥಾಪಿಸಿ ಈ ಉಪಕರಣದ ಉತ್ಪಾದನೆಯನ್ನು ಆರಂಭಿಸಿದೆ. 70 ದೇಶಗಳಲ್ಲಿ ಈ ಉಪಕರಣಗಳ ಮಾರಾಟ ನಡೆಸಲಾಗುವುದು ಎಂದು ತಂಡ ತಿಳಿಸಿದೆ.

ವಾಚ್‌ನಂತೆ ಕೈಗೆ ಕಟ್ಟಿಕೊಳ್ಳಬಹುದಾದ ಈ ಉಪಕರಣದಲ್ಲಿ ಸೆನ್ಸರ್‌ ಇರುತ್ತದೆ. ಇದು ಸತತನಾಗಿ ಚರ್ಮದ ಉಷ್ಣಾಂಶ, ಎದೆಬಡಿತದ ಗತಿ ಹಾಗೂ ರಕ್ತದಲ್ಲಿನ ಆಮ್ಲಜನಕದ ಶುದ್ಧತೆಯ ಪರೀಕ್ಷೆ ನಡೆಸುತ್ತಲೇ ಇರುತ್ತದೆ. ಬ್ಲೂಟೂತ್‌ ಸಹಾಯದಿಂದ ಈ ಉಪಕರಣಕ್ಕೆ ‘ಮ್ಯೂಸ್‌ ಹೆಲ್ತ್‌ ಆ್ಯಪ್‌’ ಮೂಲಕ ಫೋನ್‌ಗೆ ಸಂಪರ್ಕ ನೀಡಬಹುದು. ಉಪಕರಣವನ್ನು ಧರಿಸಿದವರ ಆರೋಗ್ಯದ ಮಾಹಿತಿಯನ್ನು ಫೋನ್‌ ಹಾಗೂ ಸರ್ವರ್‌ ಎರಡೂ ಕಡೆ ಸಂಗ್ರಹಿಸಬಹುದಾಗಿದೆ.

ADVERTISEMENT

ಉಪಕರಣವನ್ನು ಧರಿಸಿದವರು ಕೋವಿಡ್‌ ಕಂಟೈನ್‌ಮೆಂಟ್‌ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ಆರೋಗ್ಯ ಸೇತು ಆ್ಯಪ್‌ ಮೂಲಕ ನೋಟಿಫಿಕೇಷನ್‌ ಪಡೆಯಬಹುದು. ಯಾವುದೇ ಆರೋಗ್ಯ ಸಮಸ್ಯೆ ಎದುರಾದರೆ ಈ ಉಪಕರಣದ ಮೂಲಕ ತುರ್ತು ಅಲರ್ಟ್‌ (ಎಸ್‌ಒಎಸ್‌) ನೀಡಬಹುದಾಗಿದೆ.

‘ಪ್ರಸಕ್ತ ಸಾಲಿನಲ್ಲಿ ಎರಡು ಲಕ್ಷ ಉಪಕರಣಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ. 2022ರ ವೇಳೆಗೆ ಮಾರಾಟ ಪ್ರಮಾಣವನ್ನು 10 ಲಕ್ಷಕ್ಕೆ ಹೆಚ್ಚಿಸುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಐಐಟಿ ಮದ್ರಾಸ್‌ನ ಹಳೆ ವಿದ್ಯಾರ್ಥಿ ಕೆ.ಎಲ್‌.ಎನ್‌. ಸಾಯಿಪ್ರಶಾಂತ್‌ ತಿಳಿಸಿದ್ದಾರೆ.

ಸುಮಾರು ₹3,500 ಬೆಲೆಯ ಈ ಉಪಕರಣವು ಆಗಸ್ಟ್‌ ವೇಳೆಗೆ 70ದೇಶಗಳ ಮಾರುಕಟ್ಟೆಗಳನ್ನು ಪ್ರವೇಶಿಸಲಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.