ಸ್ವರೈಲ್ ಆ್ಯಪ್
ದಿನನಿತ್ಯ ರೈಲುಗಳಲ್ಲಿ ಸಂಚರಿಸುವ ಕೋಟ್ಯಂತರ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆಯು ‘ಸ್ವರೈಲ್’ (SwaRail) ಎನ್ನುವ ಆ್ಯಪ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಸದ್ಯ ಇದು ಬೇಟಾ ಆವೃತ್ತಿಯಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ತಂತ್ರಾಂಶದ ಫೋನ್ ಬಳಕೆದಾರರಿಗೆ ಲಭ್ಯವಿದೆ.
ಸೆಂಟರ್ ಫಾರ್ ರೈಲ್ವೆ ಇನ್‌ಫರ್ಮೇಷನ್ ಸಿಸ್ಟಮ್ (ಸಿಆರ್‌ಐಎಸ್) ಅಭಿವೃದ್ಧಿ ಪಡಿಸಿರುವ ‘ಸ್ವರೈಲ್’ ಅನ್ನು ‘ಸೂಪರ್‌ಆ್ಯಪ್’ ಎಂದು ರೈಲ್ವೆ ಇಲಾಖೆ ಬಣ್ಣಿಸಿದೆ. ಈ ಆ್ಯಪ್‌ನ ಮೂಲಕ ರೈಲ್ವೆಗೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ಒಂದೇ ವೇದಿಕೆಯ ವ್ಯಾಪ್ತಿಗೆ ಅದು ತಂದಿದೆ. ಇಲ್ಲಿಯವರೆಗೂ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವುದು ಸೇರಿದಂತೆ, ಪ್ರಯಾಣಕ್ಕೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಪಡೆಯಲು ಐಆರ್‌ಟಿಸಿ ರೈಲ್ ಕನೆಕ್ಟ್, ಯುಟಿಎಸ್ ಮೊಬೈಲ್ ಸೇರಿದಂತೆ ಬೇರೆ ಬೇರೆ ಆ್ಯಪ್‌ಗಳನ್ನು ಬಳಸಬೇಕಿತ್ತು. ವಿವಿಧ ಆ್ಯಪ್‌ಗಳಲ್ಲಿ ಲಭ್ಯವಿದ್ದ ಸೇವೆಗಳೆಲ್ಲವೂ ಈಗ ಸ್ವರೈಲ್ ಆ್ಯಪ್ ಮೂಲಕ ಒಂದೇ ಯೂಸರ್ ಇಂಟರ್‌ಫೇಸ್‌ನಲ್ಲಿ ಲಭ್ಯವಿದ್ದು, ಪ್ರಯಾಣಿಕರು ಹಲವು ಆ್ಯಪ್‌ಗಳನ್ನು ಅವಲಂಬಿಸುವ ಅನಿವಾರ್ಯತೆ ತಪ್ಪಲಿದೆ. ಹೊಸ ಆ್ಯಪ್‌ನ ವಿನ್ಯಾಸ ಚೆನ್ನಾಗಿದ್ದು, ಬಳಕೆದಾರ ಸ್ನೇಹಿಯೂ ಆಗಿದೆ.
ಯಾವೆಲ್ಲ ಸೇವೆಗಳು?
ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ (ರಿಸರ್ವ್ಡ್ ಟಿಕೆಟ್ ಬುಕಿಂಗ್), ಪ್ರಯಾಣದ ದಿನ ಸಾಮಾನ್ಯ ದರ್ಜೆಯ (ಜನರಲ್ ಕ್ಲಾಸ್) ಪ್ರಯಾಣದ ಟಿಕೆಟ್ (ಅನ್‌ರಿಸರ್ವ್ಡ್ ಟಿಕೆಟ್) , ಪ್ಲಾಟ್‌ಫಾರ್ಮ್ ಟಿಕೆಟ್ ಕಾಯ್ದಿರಿಸುವುವಿಕೆ, ಪಾರ್ಸೆಲ್ ಮತ್ತು ಸರಕುಗಳಿಗೆ ಸಂಬಂಧಿಸಿದ ವಿಚಾರಣೆ, ರೈಲುಗಳ ವೇಳಾಪಟ್ಟಿ, ಪಿಎನ್‌ಆರ್ ಸ್ಟೇಟಸ್ ಪರಿಶೀಲನೆ, ರೈಲಿನಲ್ಲಿ ಆಹಾರದ ಖರೀದಿ, ಕುಂದುಕೊರತೆಗಳ ಬಗ್ಗೆ ದೂರು ನೀಡುವುದು – ಇಂಥ ಹಲವು ಸೌಲಭ್ಯಗಳನ್ನು ಈ ಆ್ಯಪ್ ಹೊಂದಿದೆ.
ಆ್ಯಪ್‌ನಲ್ಲಿ ‘ಆರ್–ವ್ಯಾಲೆಟ್’ ಎಂಬ ಡಿಜಿಟಲ್ ವ್ಯಾಲೆಟ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸುವಾಗ ಪಾವತಿಸಬೇಕಾದ ಹಣವನ್ನು ಮೊದಲೇ ಇದರಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಅವಕಾಶ ಕಲ್ಪಿಸುತ್ತದೆ (ಈಗ ಬಳಕೆಯಲ್ಲಿರುವ ಯುಟಿಎಸ್ ಮೊಬೈಲ್ ಆ್ಯಪ್‌ನಲ್ಲೂ ಈ ಸೌಲಭ್ಯ ಇದೆ).
ರೈಲು ಸಂಚಾರದ ಬಗ್ಗೆ ಮಾಹಿತಿ ಪಡೆಯುವ, ಅಂದರೆ ಸದ್ಯ ರೈಲು ಯಾವ ಪ್ರದೇಶದಲ್ಲಿ ಸಂಚರಿಸುತ್ತಿದೆ ಎಂಬುದು ಸೇರಿದಂತೆ ನಿಲ್ದಾಣಕ್ಕೆ ಬರುವ, ಹೊರಡುವ ವಿವರಗಳನ್ನು ಆ್ಯಪ್‌ನಲ್ಲಿ ತಿಳಿಯಬಹುದು. ಪ್ಲಾಟ್‌ಫಾರ್ಮ್‌ನಲ್ಲಿ ರೈಲಿನ ನಿರ್ದಿಷ್ಟ ಬೋಗಿ ಯಾವ ಸ್ಥಳದಲ್ಲಿ ನಿಂತಿರುತ್ತದೆ ಎಂಬುದನ್ನೂ ಅರಿಯಬಹುದು ಎಂದು ಭಾರತೀಯ ರೈಲ್ವೆ ಹೇಳಿದೆ.
ಲಾಗಿನ್ ಸುಲಭ
ರೈಲ್ವೆ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಈಗಾಗಲೇ ‘ಐಆರ್‌ಸಿಟಿಸಿ ರೈಲ್ ಕನೆಕ್ಟ್’ ಅಥವಾ ‘ಯುಟಿಎಸ್ ಮೊಬೈಲ್ ಆ್ಯಪ್’ಗಳನ್ನು ಬಳಸುತ್ತಿದ್ದರೆ ಅದರ ವಿವರಗಳನ್ನೇ (ಯೂಸರ್ ಐಡಿ) ಸ್ವರೈಲ್ ಆ್ಯಪ್‌ನಲ್ಲಿ ನಮೂದಿಸಿ ಸುಲಭವಾಗಿ ಲಾಗಿನ್ ಆಗಬಹುದು. ಹೊಸ ಬಳಕೆದಾರರಾಗಿದ್ದರೆ ಮಾತ್ರ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿದ ಬಳಿಕ ನೋಂದಣಿ ಮಾಡಿಕೊಳ್ಳಬೇಕು. ಪಾಸ್‌ವರ್ಡ್, ಎಂಪಿನ್, ಬಯೋಮೆಟ್ರಿಕ್ (ಹೆಬ್ಬಟ್ಟು, ಮುಖಚಹರೆ ಗುರುತು) ವಿಧಾನದ ಮೂಲಕವೂ ಲಾಗಿನ್ ಆಗಲು ಅವಕಾಶ ಕಲ್ಪಿಸಲಾಗಿದೆ.
ಸದ್ಯ ಆ್ಯಪ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಬಳಕೆಗೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳನ್ನೂ ಅಳವಡಿಸಿಕೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ.
ಸಲಹೆ ಸೂಚನೆಗೆ ಮನ್ನಣೆ
ಸದ್ಯ ಸ್ವರೈಲ್ ಆ್ಯಪ್ ಪರೀಕ್ಷಾರ್ಥ ಹಂತದಲ್ಲಿದ್ದು ರೈಲ್ವೆಯು ಬಳಕೆದಾರರ ಅನುಭವದ ಬಗ್ಗೆ ಪ್ರತಿಕ್ರಿಯೆಯನ್ನು ಬಯಸಿದೆ. ಬಳಕೆದಾರರು ಸಿಆರ್‌ಐಎಸ್‌ಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡಬಹುದು. ಅಗತ್ಯವಿರುವ ಸುಧಾರಣಾ ಕ್ರಮಗಳ ಬಗ್ಗೆ ಸಲಹೆಗಳನ್ನೂ ನೀಡಬಹುದು. ಬಳಕೆದಾರರು ನೀಡುವ ಅಭಿಪ್ರಾಯಗಳನ್ನು ಆ್ಯಪ್‌ನಲ್ಲಿ ಅಳವಡಿಸಿಕೊಂಡ ನಂತರ ಆ್ಯಪ್‌ನ ಅಂತಿಮ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.
ಡೌನ್‌ಲೋಡ್ ಮಾಡುವುದು ಹೇಗೆ?
ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಐಫೋನ್‌ಗಳಲ್ಲಿ ಆ್ಯಪ್‌ಸ್ಟೋರ್‌ನಲ್ಲಿ ನೇರವಾಗಿ ಆ್ಯಪ್ ಲಭ್ಯವಿಲ್ಲ. ಬದಲಿಗೆ ‘ಟೆಸ್ಟ್‌ಫ್ಲೈಟ್’ ಎಂಬ ಪ್ಲಾಟ್‌ಫಾರಂ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದಕ್ಕಾಗಿ ಬಳಕೆದಾರರು ಟೆಸ್ಟ್‌ಫ್ಲೈಟ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.