ADVERTISEMENT

'ಜೆಲ್ಲಿ 2' ಜಗತ್ತಿನ ಅತಿ ಚಿಕ್ಕ 4ಜಿ ಆ್ಯಂಡ್ರಾಯ್ಡ್ 10 ಸ್ಮಾರ್ಟ್‌ಫೋನ್

ಏಜೆನ್ಸೀಸ್
Published 23 ಜುಲೈ 2020, 8:28 IST
Last Updated 23 ಜುಲೈ 2020, 8:28 IST
'ಜೆಲ್ಲಿ 2' ಫೋನ್‌
'ಜೆಲ್ಲಿ 2' ಫೋನ್‌   

ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ಗಳು ಕನಿಷ್ಠ 6 ಇಂಚು ಡಿಸ್‌ಪ್ಲೇ ಒಳಗೊಂಡಿರುತ್ತವೆ. ಆಗಾಗ್ಗೆ ಫೋನ್‌ ಕೈಯಿಂದ ಜಾರಿಸಿಕೊಳ್ಳುವವರು ಹಾಗೂ ಜೇಬಿನಲ್ಲಿಟ್ಟು ಓಡಾಡುವವರಿಗೆ ದೊಡ್ಡದಾಗಿರುವ ಫೋನ್‌ ಗಾತ್ರವು ಸಮಸ್ಯೆಯೇ ಆಗಿದೆ. ಅದಕ್ಕೊಂದು ಪರಿಹಾರ 'ಜೆಲ್ಲಿ 2' ಫೋನ್‌.

ಜಗತ್ತಿನ ಅತ್ಯಂತ ಚಿಕ್ಕ 4ಜಿ ಮತ್ತು ಆ್ಯಂಡ್ರಾಯ್ಡ್‌ 10 ಫೋನ್‌ ಚೀನಾ ಮೂಲದ ಯೂನಿಹರ್ಟ್ಸ್‌ನ ಜೆಲ್ಲಿ 2. ಈ ಫೋನ್‌ನ ಡಿಸ್‌ಪ್ಲೇ ಅಳತೆ ಕೇವಲ 3 ಇಂಚು (480x854). ಒಂದು ಬೆರಳಿನಷ್ಟು ಉದ್ದ ಇರುವ ಜೆಲ್ಲಿ 2 ಅನ್ನು ಜಾಗಿಂಗ್‌, ರಾತ್ರಿಯ ವಾಕ್‌ ಎಲ್ಲಿಗೆ ಹೋದರು ಸುಲಭವಾಗಿ ಒಯ್ಯಬಹುದು. ಜೀನ್ಸ್‌ ಪ್ಯಾಂಟ್‌ನ ಪುಟ್ಟ ಪಾಕೆಟ್‌ನೊಳಗೆ ಇಟ್ಟು ಸಾಗಬಹುದು. ಒಟ್ಟಾರೆ ಇದರ ಗಾತ್ರ ನಿಮ್ಮ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ನಷ್ಟು.

2017ರಲ್ಲಿ ಬಿಡುಗಡೆಯಾಗಿದ್ದ ಜೆಲ್ಲಿ ಮಾದರಿಯ ಫೋನ್‌ನಲ್ಲಿ ಬ್ಯಾಟರಿ ಬಾಳಿಕೆ ಅವಧಿ ಹಾಗೂ ಆ್ಯಪ್‌ಗಳ ಬಳಕೆಯೊಂದಿಗೆ ಹ್ಯಾಂಗ್‌ ಆಗುವ ಸಮಸ್ಯೆ ಎದುರಾಗಿತ್ತು. ಹೊಸ ಫೋನ್‌ನಲ್ಲಿ 2000ಎಂಎಎಚ್‌ ಬ್ಯಾಟರಿ ಹಾಗೂ 6ಜಿಬಿ ರ್‍ಯಾಮ್‌ ಅಳವಡಿಸಿರುವುದರಿಂದ ಹಿಂದಿನ ಎರಡೂ ಸಮಸ್ಯೆಗಳು ಜೆಲ್ಲಿ 2 ಫೋನ್‌ನಲ್ಲಿ ಇಲ್ಲ. ಆದರೆ, ಚಿಕ್ಕ ಡಿಸ್‌ಪ್ಲೇ ಕಾರಣದಿಂದಾಗಿ ಟೈಪಿಸುವುದು, ಹೆಚ್ಚಿನ ಸಂದೇಶಗಳ ಓದು, ವಿಡಿಯೊ ವೀಕ್ಷಣೆ, ಗೇಮಿಂಗ್‌ ತ್ರಾಸದಾಯಕವಾಗುತ್ತದೆ.

ADVERTISEMENT

ಆ್ಯಂಡ್ರಾಯ್ಡ್‌ 10 ಒಎಸ್‌ ಬಳಕೆ ಇರುವುದರಿಂದ ಇತರೆ ಸ್ಮಾರ್ಟ್‌ಫೋನ್‌ಗಳಲ್ಲಿರುವ ಎಲ್ಲ ಆಯ್ಕೆಗಳು ಇದರಲ್ಲಿ ಲಭ್ಯವಿದೆ. ಹೀಲಿಯೊ ಪಿ60 ಪ್ರೊಸೆಸರ್‌ ಒಳಗೊಂಡಿರುವ ಫೋನ್‌ನಲ್ಲಿ ಒಂದೇ ಸಲಕ್ಕೆ ಹಲವು ಅಪ್ಲಿಕೇಷನ್‌, ಹಲವು ಕಾರ್ಯಗಳನ್ನು ನಡೆಸಲು ಪ್ರಯತ್ನಿಸಬಹುದು. ಸ್ಕ್ರೀನ್‌ ಅಳತೆಯಿಂದಾಗಿ ಮಲ್ಟಿಟಾಸ್ಕಿಂಗ್‌ ಸಹಿನೀಯವಾಗದು.

ಫೋನ್‌ ಹಿಂಬದಿಯಲ್ಲಿ 16ಎಂಪಿ ಕ್ಯಾಮೆರಾ ಹಾಗೂ ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾ ನೀಡಲಾಗಿದೆ.

16.5ಮಿ.ಮೀ ದಪ್ಪ ಇರುವ ಫೋನ್‌ ಹೆಡ್‌ಫೋನ್‌ ಜ್ಯಾಕ್‌, ಹಿಂಬದಿಯಲ್ಲಿ ಫಿಂಗರ್‌ ಪ್ರಿಂಟ್‌ ಸೆನ್ಸರ್‌, ಡ್ಯೂಯಲ್‌ ಸಿಮ್‌ ಸ್ಲಾಟ್‌, ವೈ–ಫೈ ವ್ಯವಸ್ಥೆ ಅಳವಡಿಸಿಕೊಂಡಿದೆ. 6ಜಿಬಿ ರ‍್ಯಾಮ್‌ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯವಿದೆ. ಕಿಕ್‌ಸ್ಟಾರ್ಟರ್‌ ವೆಬ್‌ಸೈಟ್‌ನಲ್ಲಿ ನಮೂದಿಸಿರುವ ಪ್ರಕಾರ, ಈ ಫೋನ್‌ ಆರಂಭಿಕ ಬೆಲೆ 129 ಡಾಲರ್‌ (ಸುಮಾರು ₹9,600). ಈಗ ಬುಕ್‌ ಮಾಡಿದರೆ ಡಿಸೆಂಬರ್‌ 2020ರ ವೇಳೆಗೆ ಫೋನ್‌ ತಲುಪುತ್ತದೆ. ಆದರೆ, ಫೋನ್‌ ಡೆಲಿವರಿಗೆ ಕೆಲವು ರಾಷ್ಟ್ರಗಳಿಗೆ ಮಾತ್ರ ಇದೆ ಹಾಗೂ ತೆರಿಗೆ, ಡೆಲಿವರಿ ಶುಲ್ಕ ಪ್ರತ್ಯೇಕ.

ಜೆಲ್ಲಿ 2 ಫೋನ್‌ ಗುಣಲಕ್ಷಣಗಳು:

ಡಿಸ್‌ಪ್ಲೇ: 3 ಇಂಚು
ಸಾಮರ್ಥ್ಯ: 6ಜಿಬಿ ರ್‍ಯಾಮ್‌; 128ಜಿಬಿ ಸಂಗ್ರಹ
ಪ್ರೊಸೆಸರ್‌: ಹೀಲಿಯೊ ಪಿ60
ಬ್ಯಾಟರಿ: 2000ಎಂಎಎಚ್‌
ಕ್ಯಾಮೆರಾ: ಸೆಲ್ಫಿಗಾಗಿ 8ಎಂಪಿ; 16ಎಂಪಿ
ಒಎಸ್‌: ಆ್ಯಂಡ್ರಾಯ್ಡ್‌ 10
ಸಂಪರ್ಕ: 4ಜಿ (ಗ್ಲೋಬಲ್‌ ಎಲ್‌ಟಿಇ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.