ADVERTISEMENT

ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಕರೆ ಮಾಡಬೇಕಿದ್ದರೆ 0 ಬಳಸಿ!

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 10:15 IST
Last Updated 25 ನವೆಂಬರ್ 2020, 10:15 IST
ಮೊಬೈಲ್ ನಂಬರ್ ಡಯಲ್ ಮಾಡುವ 0 ಬಳಸಿ
ಮೊಬೈಲ್ ನಂಬರ್ ಡಯಲ್ ಮಾಡುವ 0 ಬಳಸಿ   

ಮುಂದಿನ ವರ್ಷಾರಂಭದಿಂದ ಸ್ಥಿರ ದೂರವಾಣಿಯಿಂದ ಮೊಬೈಲ್ ಫೋನ್ ಸಂಖ್ಯೆಗೆ ಕರೆ ಮಾಡಬೇಕಿದ್ದರೆ ಹೊಸ ವಿಧಾನ ಅನುಸರಿಸಬೇಕಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಕಳೆದ ಮೇ ತಿಂಗಳಲ್ಲಿ ಮಾಡಿದ ಶಿಫಾರಸಿಗೆ ಕೇಂದ್ರ ದೂರಸಂಪರ್ಕ ಇಲಾಖೆಯು ಅನುಮೋದನೆ ನೀಡಿದೆ.

ಏಕೀಕೃತ ಸಂಖ್ಯಾ ಯೋಜನೆ ರೂಪಿಸುವ ಉದ್ದೇಶದಲ್ಲಿ ಈ ಶಿಫಾರಸು ಮಾಡಲಾಗಿದ್ದು, ಜ.1ರಿಂದ ಸ್ಥಿರ ದೂರವಾಣಿ (ಲ್ಯಾಂಡ್‌ಲೈನ್) ಬಳಸಿ ಮೊಬೈಲ್ ದೂರವಾಣಿಗಳಿಗೆ ಕರೆ ಮಾಡಬೇಕಿದ್ದರೆ ಆರಂಭದಲ್ಲಿ ಸೊನ್ನೆ (0) ಡಯಲ್ ಮಾಡಬೇಕಾಗುತ್ತದೆ.

ಟ್ರಾಯ್ ಮೇ ತಿಂಗಳ 29ರಂದು ಈ ಕುರಿತ ಶಿಫಾರಸನ್ನು ಟೆಲಿಕಾಂ ಇಲಾಖೆಗೆ ಕಳುಹಿಸಿತ್ತು. ಇದಕ್ಕೆ ಟೆಲಿಕಾಂ ಇಲಾಖೆ ಅಸ್ತು ಎಂದಿದೆ. ಹೀಗೆ ಮಾಡುವುದರಿಂದ ಸ್ಥಿರ ದೂರವಾಣಿಯಿಂದ ಡಯಲ್ ಮಾಡುವಾಗ ಈಗಿರುವ 10 ಅಂಕಿಗಳ ಬದಲು 11 ಅಂಕಿಗಳನ್ನು ಒತ್ತಬೇಕಾಗುತ್ತದೆ.

ADVERTISEMENT

ಆದರೆ, ಇದರರ್ಥ, ಮೊಬೈಲ್ ದೂರವಾಣಿ ಸಂಖ್ಯೆಯೇ 11 ಅಂಕಿಗಳಿಗೆ ಬದಲಾಗುತ್ತದೆ ಎಂದಲ್ಲ ಎಂದು ಕೂಡ ಟ್ರಾಯ್ ಸ್ಪಷ್ಟಪಡಿಸಿದೆ. ಹೊರ ರಾಜ್ಯದ (ಬೇರೆ ಟೆಲಿಕಾಂ ಸರ್ಕಲ್) ಮೊಬೈಲ್ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಲು ಅನುಸರಿಸಬೇಕಾದ ವಿಧಾನವನ್ನು ಇನ್ನು ನಾವಿರುವ ಟೆಲಿಕಾಂ ಸರ್ಕಲ್‌ನಲ್ಲೂ ಬಳಸಬೇಕಾಗುತ್ತದೆಯಷ್ಟೆ. ಮೊಬೈಲ್ ಫೋನ್‌ಗಳಲ್ಲಿ ಈಗಾಗಲೇ +91 ಎಂಬ ಅಂಕಿ ಸೇರ್ಪಡೆಯಾಗಿರುತ್ತದೆ.

ಈ ಕುರಿತು ದೂರಸಂಪರ್ಕ ಇಲಾಖೆಯ ಜಾಲತಾಣದಲ್ಲಿ ಸುತ್ತೋಲೆಯನ್ನು ಹೊರಡಿಸಲಾಗಿದೆ. ಮೊಬೈಲ್ ಫೋನ್‌ಗಳಿಗೆ ಕರೆ ಮಾಡುವಾಗ, ಆರಂಭದಲ್ಲಿ '0' ಒತ್ತುವಂತೆ ಬಳಕೆದಾರರಿಗೆ ಸೂಚಿಸುವ ವ್ಯವಸ್ಥೆಯಾಗಬೇಕು, ಎಲ್ಲ ಸ್ಥಿರ ದೂರವಾಣಿ ಬಳಕೆದಾರರಿಗೂ '0' ಡಯಲಿಂಗ್ ಅಥವಾ ಎಸ್‌ಟಿಡಿ ಡಯಲಿಂಗ್ ವ್ಯವಸ್ಥೆಯನ್ನು ಒದಗಿಸಬೇಕು ಎಂದು ಟೆಲಿಕಾಂ ಸೇವಾದಾತರಿಗೆ ಸೂಚಿಸಲಾಗಿದೆ. ಈ ಮೂಲಸೌಕರ್ಯ ಅಳವಡಿಸುವುದಕ್ಕಾಗಿ ಜನವರಿ 01, 2021ವರೆಗೆ ಸಮಯಾವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.