ತಂತ್ರಜ್ಞಾನ: ಬರುತ್ತಿವೆ ಪಾರದರ್ಶಕ ದೃಶ್ಯಪರದೆಗಳು!
ನಾವು ಭವಿಷ್ಯದ ತಂತ್ರಜ್ಞಾನವನ್ನು ಹೇಗೆ ಕಲ್ಪಿಸಿಕೊಳ್ಳುತ್ತೇವೆ? ನಿಮ್ಮ ಕಾರಿನ ಗಾಜಿನ ಮೇಲೆ ನೀವು ಪ್ರಯಾಣಿಸಬೇಕಿರುವ ಹಾದಿಯ ಜಾಡಿನ (ನ್ಯಾವಿಗೇಶನ್) ಮಾಹಿತಿ ಕಾಣುವಂತಾದರೆ? ಅಥವಾ ಅಂಗಡಿಗಳ ಗಾಜಿನ ಮೇಲೆಯೇ ಉತ್ಪನ್ನಗಳ ವಿವರಗಳು, ಬೆಲೆ ಮತ್ತು ಗ್ರಾಹಕರ ವಿಮರ್ಶೆಗಳು ಕಾಣಿಸಿದರೆ?
ಈ ಎಲ್ಲವೂ ಈಗ ಕೇವಲ ವಿಜ್ಞಾನದ ಕಲ್ಪನೆಯಾಗಿ ಉಳಿದಿಲ್ಲ. ಪಾರದರ್ಶಕ ದೃಶ್ಯಪರದೆಗಳ ಮೂಲಕ ಇವು ವಾಸ್ತವವಾಗಿ ಬದಲಾಗುತ್ತಿವೆ.
ಪಾರದರ್ಶಕ ದೃಶ್ಯಪರದೆಯು ಚಾಲನೆಯಲ್ಲಿ ಇಲ್ಲದಿದ್ದಾಗ ಸಾಮಾನ್ಯ ಪಾರದರ್ಶಕ ಗಾಜಿನಂತೆ ವರ್ತಿಸಿ ದೃಶ್ಯಪರದೆಯ ಆಚೆ ಬದಿಯ ವಸ್ತುಗಳನ್ನು ನೋಡಲು ಸಾಧ್ಯವಾಗಿಸುತ್ತದೆ. ದೃಶ್ಯಪರದೆಯನ್ನು ಚಾಲನೆ ಗೊಳಿಸಿದಾಗ ಅದು ನೋಡುಗರಿಗೆ ಏಕಕಾಲದಲ್ಲಿ, ದೃಶ್ಯಪರದೆಯಲ್ಲಿ ಚಿತ್ರಗಳು ಹಾಗೂ ಡಿಜಿಟಲ್ ಮಾಹಿತಿಯನ್ನು ತೋರಿಸುವುದರ ಜೊತೆಗೆ ಸಾಮಾನ್ಯ ಪಾರದರ್ಶಕ ಗಾಜಿನಂತೆ, ದೃಶ್ಯಪರದೆಯ ಆಚೆ ಬದಿಯ ವಸ್ತುಗಳನ್ನು ನೋಡಲು ಸಾಧ್ಯವಾಗಿಸುತ್ತದೆ. ಇದರಿಂದ ನೋಡುಗರಿಗೆ ಚಿತ್ರಗಳು ಗಾಳಿಯಲ್ಲಿ ಸೃಷ್ಟಿಯಾಗಿ ಕಾಣುತ್ತಿರುವಂಥ ಅನುಭವ ಉಂಟಾಗುತ್ತದೆ.
ಸ್ಯಾಮ್ಸಂಗ್ ಕಂಪನಿಯು 2012ರಲ್ಲಿ ಅಮೆರಿಕಾದ ಲಾಸ್ ವೇಗಸ್‌ನಲ್ಲಿ ನಡೆದ ಪ್ರದರ್ಶನವೊಂದರಲ್ಲಿ, ಪ್ರಥಮ ಬಾರಿಗೆ 46 ಇಂಚಿನ ಪಾರದರ್ಶಕ ದೃಶ್ಯಪರದೆಯನ್ನು ಜಗತ್ತಿಗೆ ಪರಿಚಯಿಸಿತು. ಅಲ್ಲಿಂದ ಈಚೆಗೆ ಹಲವು ಕಂಪನಿಗಳು ಪಾರದರ್ಶಕ ದೃಶ್ಯಪರದೆಗಳನ್ನು ಸಾಮಾನ್ಯ ಬಳಕೆಯಲ್ಲಿ ಉಪಯೋಗಿಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸುತ್ತಿವೆ.
ಪಾರದರ್ಶಕ ದೃಶ್ಯಪರದೆಗಳು ‘ಪಾರದರ್ಶಕ ಒಎಲ್ಇಡಿ’ ಅಥವಾ ‘ಮೈಕ್ರೋಎಲ್ಇಡಿ’ ತಾಂತ್ರಿಕತೆಯು ಮೇಲೆ ಅವಲಂಬಿತವಾಗಿವೆ. ಸಾಂಪ್ರದಾಯಿಕ ಟಿವಿಗಳು ‘ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ’ಯನ್ನು ಉಪಯೋಗಿಸುತ್ತವೆ. ಈ ತಾಂತ್ರಿಕತೆಯಲ್ಲಿ ಹಿಂಬದಿಯ ಬೆಳಕು ಮತ್ತು ಇವುಗಳನ್ನು ಅಡಕಗೊಳಿಸುವ ಕಪಾಟಿನ ಅವಶ್ಯಕತೆ ಇರುತ್ತದೆ. ಆದರೆ ಪಾರದರ್ಶಕ ಒಎಲ್ಇಡಿ ದೃಶ್ಯಪರದೆಗಳಲ್ಲಿ ಪ್ರತಿಯೊಂದು ಚಿತ್ರಮೂಲಾಂಶದ (ಪಿಕ್ಸೆಲ್) ತನ್ನ ಮೂಲಕ ವಿದ್ಯುತ್ ಶಕ್ತಿಯು ಪ್ರವಹಿಸಿದಾಗ ಅದು ತನ್ನದೇ ಬೆಳಕನ್ನು ಸೂಸುತ್ತ ಬೆಳಗುತ್ತದೆ. ಎಂದರೆ ‘ಪಿಕ್ಸೆಲ್‘ಗಳಲ್ಲಿರುವ ಕೆಂಪು, ಹಸಿರು ಮತ್ತು ನೀಲಿಬಣ್ಣಗಳು (ಆರ್‌ಜಿಬಿ) ಪಾರದರ್ಶಕ ಪರದೆಗಳಂತೆಯೇ ಪರಿವರ್ತಿತವಾಗುತ್ತವೆ. ಇದರ ತಾತ್ಪರ್ಯ, ಪಾರದರ್ಶಕವಾಗಿರುವ ಈ ಒಎಲ್ಇಡಿಗಳು ಪರದೆ ಮತ್ತು ಕಪಾಟು ಎಂಬ ಭೇದದಿಂದ ಮುಕ್ತವಾಗುತ್ತವೆ. ಹೀಗಾಗಿ ಸಾಂಪ್ರದಾಯಿಕ ದೃಶ್ಯಪರದೆಗಳಲ್ಲಿ ಅವಶ್ಯಕವಾಗಿರುವ ಹಿಂಬದಿಯ ಬೆಳಕಿನ ಆಕರ ಮತ್ತು ಅವುಗಳನ್ನು ಅಡಕಗೊಳಿಸುವ ಕಪಾಟಿನ ಅವಶ್ಯಕತೆಯನ್ನು ಇಲ್ಲವಾಗಿಸುತ್ತದೆ. ಚಾಲನೆಗೊಳಿಸದ ಪಾರದರ್ಶಕ ಒಎಲ್ಇಡಿ ಪಿಕ್ಸೆಲ್‌ಗಳೇ ಪಾರದರ್ಶಕವಾಗುತ್ತವೆ; ಬೆಳಕನ್ನು ತಮ್ಮ ಮೂಲಕ ಹಾದು ಹೋಗಲು ಅನುವು ಮಾಡಿಕೊಡುತ್ತವೆ; ಚಾಲನೆಗೊಳಿಸಿದಾಗ ಬೆಳಕನ್ನು ಸೂಸಿ ಪ್ರತಿಬಿಂಬವನ್ನು ಮೂಡಿಸುತ್ತವೆ. ಪರದೆ ಮತ್ತು ಕಪಾಟಿನ ಪ್ರತ್ಯೇಕತೆ ಇಲ್ಲದಿರುವುದರಿಂದ ಪಾರದರ್ಶಕ ಪರದೆಗಳು ತುಂಬ ತೆಳುವಾಗಿಯೂ ಇರುತ್ತವೆ.
ಭವಿಷ್ಯದಲ್ಲಿ ಪಾರದರ್ಶಕ ದೃಶ್ಯಪರದೆಗಳನ್ನು ಕಾರು ಮತ್ತು ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಬಳಸುವುದರ ಮೂಲಕ ನ್ಯಾವಿಗೇಶನ್, ವೇಗ ಮತ್ತು ಸುರಕ್ಷತಾ ಎಚ್ಚರಿಕೆಗಳನ್ನು ವಾಹನಚಾಲಕರಿಗೆ ಅವರ ನೋಟಕ್ಕೆ ಅಡ್ಡಬಾರದಂತೆ ವಾಹನಗಳ ಗಾಜಿನ ಮೇಲೆ ತೋರಿಸಲು ಸಾಧ್ಯವಾಗುತ್ತದೆ.
ಪಾರದರ್ಶಕ ದೃಶ್ಯಪರದೆಗಳನ್ನು ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿಯೂ ಉಪಯೋಗಿಸಿಕೊಳ್ಳಬಹುದು. ಇದು ಕಲಿಕೆಯಲ್ಲಿ ಹೊಸ ಆಯಾಮವನ್ನು ಉಂಟುಮಾಡಬಲ್ಲವು. ಇವುಗಳ ಬಳಕೆಯು ಸಂವೇದನೆಯನ್ನು ಚುರುಕುಗೊಳಿಸುತ್ತದೆ; ತಲ್ಲಿನತೆಯನ್ನೂ ಹೆಚ್ಚಿಸುತ್ತದೆ. ಜೊತೆಗೆ ವಿದ್ಯಾರ್ಥಿಗಳ ಏಕಾಗ್ರತೆಯೂ ತೀವ್ರವಾಗಬಹುದು. ವಿದ್ಯಾಭ್ಯಾಸದ ಅನುಭವವನ್ನು ಹೆಚ್ಚಿಸಲು ಉಪಯೋಗಿಸಬಹುದು. ಉದಾಹರಣೆಗೆ, ಅಂಗರಚನಶಾಸ್ತ್ರದ ತರಗತಿಗಳಲ್ಲಿ ಪಾರದರ್ಶಕ ದೃಶ್ಯಪರದೆಗಳನ್ನು ಸ್ನಾಯುಗಳ ಮತ್ತು ಮೂಳೆಗಳ, ದೇಹದ ಇತರ ಅಂಗಾಂಗಗಳ ವಿವಿಧ ಸ್ತರದ ಚಿತ್ರಗಳನ್ನು ನೈಜವಾದ ರೀತಿಯಲ್ಲಿಯೇ ತೋರಿಸಲು ಉಪಯೋಗಿಸಬಹುದು.
ಪಾರದರ್ಶಕ ದೃಶ್ಯಪರದೆಗಳನ್ನು ಆರೋಗ್ಯಕ್ಷೇತ್ರದಲ್ಲಿಯೂ ಉಪಯೋಗಿಸಬಹುದು. ರೋಗನಿರ್ಣಯ ಮತ್ತು ಶಸ್ತ್ರಚಿಕಿತ್ಸೆಗಳಲ್ಲಿ ಇದನ್ನು ಬಳಸಿ ಚಿಕಿತ್ಸೆಯ ಗುಣಮಟ್ಟವನ್ನು ಹೆಚ್ಚಿಸಬಹುದು. ಭವಿಷ್ಯದಲ್ಲಿ ವಸ್ತುಸಂಗ್ರಹಾಲಯಗಳಲ್ಲಿ ಕಲಾಕೃತಿಗಳನ್ನು ನೈಜವಾದ ರೀತಿಯಲ್ಲಿ ತೋರಿಸಲು ಕೂಡ ಪಾರದರ್ಶಕ ದೃಶ್ಯಪರದೆಗಳನ್ನು ಬಳಸಬಹುದು.
ತಾಂತ್ರಿಕತೆಯು ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವಂತಹ ಈ ಶತಮಾನದಲ್ಲಿ, ಪಾರದರ್ಶಕ ಟಿವಿ ಹಾಗೂ ಕಂಪ್ಯೂಟರ್ ಪರದೆಗಳು ತಾಂತ್ರಿಕ ಪ್ರಪಂಚದ ಹೊಸ ಕಲ್ಪನೆಯ ಕ್ರಿಯಾಶೀಲತೆಗೆ ದೊಡ್ಡ ಉದಾಹರಣೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.