ADVERTISEMENT

ಈ ಜೀವಿಗೆ ಬದುಕಲು ಆಕ್ಸಿಜನ್‌ ಬೇಕಿಲ್ಲ; ಮೀನಿನೊಳಗೆ ಪತ್ತೆಯಾದ ಅಪರೂಪದ ಜೀವಿ

ಏಜೆನ್ಸೀಸ್
Published 29 ಫೆಬ್ರುವರಿ 2020, 7:04 IST
Last Updated 29 ಫೆಬ್ರುವರಿ 2020, 7:04 IST
ಸಾಲ್ಮೊನ್‌ ಮೀನು– ಸಾಂದರ್ಭಿಕ ಚಿತ್ರ
ಸಾಲ್ಮೊನ್‌ ಮೀನು– ಸಾಂದರ್ಭಿಕ ಚಿತ್ರ   
""

ಜೆರುಸಲೆಮ್‌: ಆಮ್ಲಜನಕ ಹೀರದೆಯೂ ಜೀವಿಸುವ ಹಾಗೂ ಬೆಳೆಯುವ ಜೀವಿ ಇದ್ದರೆ? ಬಹುಶಃ ಅನ್ಯಗ್ರಹದಿಂದ ಬಂದಿದ್ದೇ ಆಗಿರಬಹುದು...! ನಮ್ಮ ಇದೇ ಭೂಮಿಯಲ್ಲಿ ಅಂಥದ್ದೊಂದು ಅಪರೂಪದ ಜೀವಿಯನ್ನುಜೆರುಸಲೆಮ್‌ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಭೂಮಿಯಲ್ಲಿ ಯಾವುದೇ ಜೀವಿ ಬದುಕಲು ಆಮ್ಲಜನಕ ಅತ್ಯಗತ್ಯ. ಆದರೆ, ಆಮ್ಲಜನಕದ ಅವಶ್ಯಕತೆ ಇಲ್ಲದೆಯೇ ಶಕ್ತಿ ಉತ್ಪಾದಿಸಿಕೊಂಡು ಬದುಕುತ್ತಿರುವ ಜೀವಿಯ ವಿವರ ಜಗತ್ತಿನ ಗಮನ ಸೆಳೆದಿದೆ. ಈ ಶೋಧ ಕಾರ್ಯ ಪ್ರಾಣಿ ಜಗತ್ತಿನ ಕುರಿತ ವಿಜ್ಞಾನಿಗಳ ದೃಷ್ಟಿಕೋನವನ್ನೇ ಬದಲಿಸಿ ಬಿಡಬಹುದು.

ಮೀನುಗಳ ಎಳೆಗೆಂಪು ಮಾಂಸದಲ್ಲಿ (salmon muscle) ಅಂಟಿಕೊಂಡು ಬೆಳೆಯುವ 10ಕ್ಕಿಂತಲೂ ಕಡಿಮೆ ಜೀವ ಕೋಶಗಳಿರುವ, ಸೂಕ್ಷ್ಮ ಪರಾವಲಂಬಿ ಜೀವಿ 'ಹೆನೆಗುಯಾ ಸಾಲ್ಮಿನಿಕೋಲಾ' (Henneguya salminicola).ಈ ಬಗ್ಗೆ ಪಿಎನ್‌ಎಎಸ್‌ ಜರ್ನಲ್‌ನಲ್ಲಿ ಸಂಶೋಧನಾ ಲೇಖನ ಪ್ರಕಟಗೊಂಡಿದೆ.

ADVERTISEMENT

ಆಮ್ಲಜನಕ ಹೀರಿಕೊಂಡು ಪ್ರಾಣಿಗಳು ಜೀವಿಸುತ್ತವೆ ಎಂಬುದು ಈವರೆಗೂ ನಂಬಿರುವ ಸಂಗತಿ. ಆದರೆ, ಈ ಜೀವಿಯ ವಿಷಯವೇ ಬೇರೆ ಎಂದಿದ್ದಾರೆ ಇಸ್ರೇಲ್‌ ಟೆಲ್‌ ಅವಿವ್‌ ಯೂನಿವರ್ಸಿಟಿಯ ಪ್ರೊಫೆಸರ್‌ ಡೊರೋಥೀ ಹುಕೊನ್‌. ಜೆಲ್ಲಿ ಫಿಶ್‌ ಮತ್ತು ಹವಳ ಜೀವಿಗಳ ವರ್ಗಕ್ಕೆ ಸೇರಿದಸೂಕ್ಷ್ಮ ಜೀವಿ 'ಹೆನೆಗುಯಾ ಸಾಲ್ಮಿನಿಕೋಲಾ' ಎಂದು ಗುರುತಿಸಲಾಗಿದೆ.

ಸಾಲ್ಮೊನ್‌ ಒಳಗೆ ಜೀವಿಸುವ ಸೂಕ್ಷ್ಮ ಜೀವಿಯು ಸಿದ್ಧ ಪೌಷ್ಠಿಕಾಂಶವನ್ನು ಹೀರಿಕೊಳ್ಳುತ್ತದೆ ಹಾಗೂ ನೇರವಾಗಿ ಆಮ್ಲಜನಕ ಹೀರುವುದಿಲ್ಲ. ಆಮ್ಲಜನಕ ಕಡಿಮೆ ಇರುವ ಭಾಗದಲ್ಲಿ ಈ ಪರಾವಲಂಬಿ ಜೀವಿಯು ಬದುಕು ಸಾಗಿಸುತ್ತದೆ. ಸಾಲ್ಮೊನ್‌ ಮಾಂಸಖಂಡದ ಮೇಲೆ ಪುಟ್ಟ ಕೋಶ ಚೀಲವನ್ನು ಜೀವಿಯು ಸೃಷ್ಟಿಸುತ್ತದೆ. ಇದರಿಂದ ಮೀನಿಗೆ ಮತ್ತು ಮನುಷ್ಯರಿಗೆ ಯಾವುದೇ ಹಾನಿ ಇಲ್ಲ ಎನ್ನುತ್ತಾರೆ ಸಂಶೋಧಕರು.

ಮೀನಿನ ಮಾಂಸಖಂಡಗಳ ಒಳಭಾಗದಲ್ಲಿ ಬಹುತೇಕ ಶೂನ್ಯ ಆಮ್ಲಜನಕ ವಾತಾವರಣವಿರುವುದರಿಂದ ಈ ಜೀವಿಗಳು, ಆಮ್ಲಜನಕ ಇಲ್ಲದೆಯೇ ಉಸಿರಾಡಿಕೊಂಡು ಬದುಕುತ್ತವೆ. ಇವುಗಳಲ್ಲಿ ಮೈಟೋಕಾಂಡ್ರಿಯಾ ಜೀನೋಮ್‌ ಇಲ್ಲದಿರುವುದನ್ನು ಗಮನಿಸಲಾಗಿದೆ. ಬಹುತೇಕ ಜೀವಿಗಳಲ್ಲಿ ಮೈಟೋಕಾಂಡ್ರಿಯಾ ಆಮ್ಲಜನಕರ ಸಹಕಾರದೊಂದಿಗೆ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ. ಈ ಜೀವಿ ಹೇಗೆ ಶಕ್ತಿ ಸಂಪಾದಿಸುತ್ತಿದೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ ಎಂಬುದು ವಿಜ್ಞಾನಿಗಳ ಮಾತು.

ಆಮ್ಲಜನಕದ ಅವಲಂಬನೆ ಇಲ್ಲದ ಮತ್ತಷ್ಟು ಜೀವಿಗಳನ್ನು ಪತ್ತೆ ಮಾಡಲು ಈ ಸಂಶೋಧನೆ ಸ್ಫೂರ್ತಿ ನೀಡಿದೆ ಎಂದಿದ್ದಾರೆ ಸಂಶೋಧಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.