ಪ್ರಜಾವಾಣಿ ಚಿತ್ರ
1931ರ ಅ.15 ರಂದು ತಮಿಳುನಾಡಿನ ರಾಮೇಶ್ವರಂ ಎಂಬ ಸಣ್ಣ ಕಡಲ ತೀರದ ಪಟ್ಟಣದಲ್ಲಿ ಜನಿಸಿದ ಬಾಲಕನೊಬ್ಬ ಮುಂದೊಂದು ದಿನ ರಷ್ಯಾದ ರಕ್ಷಣಾ ಘಟಕವೊಂದಕ್ಕೆ ಭೇಟಿ ನೀಡಿದ. ಆ ಸಂದರ್ಭದಲ್ಲಿ ಅಲ್ಲಿ ಅರೆಬರೆಯಾಗಿ ಪೂರ್ಣಗೊಂಡಿದ್ದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯೊಂದನ್ನು ಗಮನಿಸಿ, ಅದರಲ್ಲಿ ಭಾರತದ ಭವಿಷ್ಯವಿದೆ ಎಂದು ಗುರುತಿಸಿದ. ಆ ಬಾಲಕ ಮತ್ತಾರೂ ಅಲ್ಲ. 2015ರ ಜುಲೈ 27 ರಂದು ನಮ್ಮನ್ನು ಅಗಲಿದ ಭಾರತಕ್ಕೆ ಬ್ರಹ್ಮೋಸ್ ಕ್ಷಿಪಣಿ ತಂದು ದೇಶದ ರಕ್ಷಣಾ ಸಾಮರ್ಥ್ಯವನ್ನು ಶಾಶ್ವತವಾಗಿ ಬದಲಾಯಿಸಲು ಶ್ರಮಿಸಿದ ಹಾಗೂ ಅಸಾಧಾರಣ ವೈಜ್ಞಾನಿಕ ಕಾರ್ಯತಂತ್ರದ ದೃಷ್ಟಿಕೋನ ಹೊಂದಿದ್ದ ಡಾ. ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ. ಭಾರತದ 11ನೇ ರಾಷ್ಟ್ರಪತಿಯಾದ ಅಬ್ದುಲ್ ಕಲಾಂ ಅವರನ್ನು ದೇಶ ಪ್ರೀತಿಯಿಂದ ‘ಜನಸಾಮಾನ್ಯರ ರಾಷ್ಟ್ರಪತಿ ’ (ಪೀಪಲ್ಸ್ ಪ್ರೆಸಿಡೆಂಟ್) ಎಂದು ಕೊಂಡಾಡಿತು. ಆದರೆ, ಭಾರತಕ್ಕೆ ಕಲಾಂ ಅವರು ನೀಡಿದ ಅತಿದೊಡ್ಡ ಕೊಡುಗೆ ಎಂದರೆ, ನಮ್ಮ ದೇಶದ ಗಡಿಗಳನ್ನು ಕಾಯುತ್ತಿರುವ ಕ್ಷಿಪಣಿಗಳು ಮತ್ತು ನಮ್ಮ ಲಕ್ಷಾಂತರ ಯುವ ಜನರಲ್ಲಿ ಕಲಾಂ ತುಂಬಿದ ವೈಜ್ಞಾನಿಕ ಮನೋಭಾವ.
ಇಂದು ಕಲಾಂ ಅವರ ಜನ್ಮದಿನವನ್ನು ನಾವು ಆಚರಿಸುವ ಸಂದರ್ಭದಲ್ಲಿ, ಅವರ ಅತ್ಯಂತ ಮಹತ್ವದ ಅಂದರೆ, ಜನರ ಗಮನಕ್ಕೆ ಬಾರದಿರುವ, ಎಲ್ಲರೂ ತಿಳಿದಿರಬೇಕಾದ ಒಂದು ಸಾಧನೆಯನ್ನು ಗಮನಿಸೋಣ. ಅದೇನೆಂದರೆ, ಕಲಾಂ ಅವರ ಕೇವಲ ಒಂದು ರಷ್ಯಾ ಭೇಟಿಯೇ ಭಾರತದ ಮಿಲಿಟರಿ ಸಾಮರ್ಥ್ಯದ ದಿಕ್ಕನ್ನೇ ಬದಲಾಯಿಸಲು ಯಶಸ್ವಿಯಾಗಿತ್ತು. ಬ್ರಹ್ಮೋಸ್ ಕ್ಷಿಪಣಿಯ ಕಥೆ ಕೇವಲ ತಂತ್ರಜ್ಞಾನ ವರ್ಗಾವಣೆಗೆ ಸೀಮಿತವಾದುದಲ್ಲ. ಇದು ಸಾಮಾನ್ಯ ಜನರು ಪೂರ್ಣಗೊಂಡಿರದ ಯೋಜನೆಗಳನ್ನು ಇದೇನು ಅರ್ಧಂಬರ್ದವಾಗಿದೆಯಲ್ಲ ಎನ್ನುವಲ್ಲಿ ಅದರ ಶಕ್ತಿಯನ್ನು ಗುರುತಿಸುವ ಕಲಾಂ ಅವರ ಅಪರೂಪದ ಸಾಮರ್ಥ್ಯಕ್ಕೂ ಇದು ಉದಾಹರಣೆಯಾಗಿದೆ. ಈ ಘಟನೆ ಭಾರತಕ್ಕೆ ತರಬೇಕು ಇಂತಹ ಶಕ್ತಿಯನ್ನು ತರಬೇಕು ಎನ್ನುವ ಕಲಾಂ ಅವರ ಬದ್ಧತೆಯನ್ನೂ ಪ್ರದರ್ಶಿಸಿದೆ.
1990ರ ದಶಕದ ಮಧ್ಯಭಾಗದಲ್ಲಿ, ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಕಲಾಂ ರಷ್ಯಾಗೆ ಅಧಿಕೃತ ಭೇಟಿ ನೀಡಿದ್ದರು. ಆಗ ಶೀತಲ ಸಮರ ಕೊನೆಗೊಂಡು, ಸೋವಿಯತ್ ಒಕ್ಕೂಟ ಕುಸಿತ ಕಂಡು, ರಷ್ಯಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿತ್ತು. ಅದರ ಬಹಳಷ್ಟು ಮಹತ್ವಾಕಾಂಕ್ಷಿ ರಕ್ಷಣಾ ಯೋಜನೆಗಳಿಗೆ ಹಣದ ಕೊರತೆ ಉಂಟಾಗಿ, ರಷ್ಯಾದ ಆದ್ಯತೆಗಳೂ ಬದಲಾಗಿ, ಇಂತಹ ಯೋಜನೆಗಳು ಮೂಲೆಗುಂಪಾಗಿದ್ದವು. ಈ ಭೇಟಿಯ ಸಂದರ್ಭದಲ್ಲಿ, ಕಲಾಂ ಅವರನ್ನು ರಷ್ಯಾದ ಪ್ರಮುಖ ಕ್ಷಿಪಣಿ ವಿನ್ಯಾಸ ಸಂಸ್ಥೆಗಳಲ್ಲಿ ಒಂದಾದ ಎನ್‌ಪಿಒ ಮಶಿನೊಸ್ಟ್ರೊಯೆನಿಯಾಗೆ ಕರೆದೊಯ್ಯಲಾಗಿತ್ತು.
ಅಲ್ಲಿ, ಒಂದು ರಷ್ಯನ್ ಘಟಕದಲ್ಲಿ ಕಲಾಂ ಅವರು ಒಂದು ಅಸಾಧಾರಣವಾದುದನ್ನು ಗಮನಿಸಿದರು. ಅದೊಂದು ಅರ್ಧ ಪೂರ್ಣಗೊಂಡಿದ್ದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಯೋಜನೆಯಾಗಿದ್ದು, ಅದನ್ನು ಪಿ-800 ಆನಿಕ್ಸ್ ಎಂದು ಕರೆಯಲಾಗಿತ್ತು. ರಷ್ಯನ್ನರು ಆ ವೇಳೆಗೆ ಜಗತ್ತಿನ ಅತ್ಯಂತ ವೇಗದ ಕ್ರೂಸ್ ಕ್ಷಿಪಣಿಗಳಲ್ಲಿ ಒಂದನ್ನು ನಿರ್ಮಿಸಲು ತಯಾರಿ ನಡೆಸುತ್ತಿದ್ದರೂ, ಹಣಕಾಸಿನ ಕೊರತೆ ಮತ್ತು ಸೋವಿಯತ್ ಒಕ್ಕೂಟದ ಪತನದ ನಂತರ ಉಂಟಾದ ಕೋಲಾಹಲದ ಪರಿಣಾಮವಾಗಿ ಯೋಜನೆ ಮೂಲೆ ಗುಂಪಾಗಿತ್ತು. ಬೇರೆ ಯಾರಾದರೂ ಇದನ್ನು ಗಮನಿಸಿದ್ದರೆ, ರಷ್ಯಾ ಕೈಚೆಲ್ಲಿದ ಯಾವುದೋ ಯೋಜನೆ ಎಂದು ಸುಮ್ಮನಾಗಿರುತ್ತಿದ್ದರೇನೋ. ಆದರೆ, ಡಾ. ಕಲಾಂ ಇದರಲ್ಲಿ ಭಾರತಕ್ಕೆ ಒಂದು ಸುವರ್ಣಾವಕಾಶ ಇದೆ ಎನ್ನುವುದನ್ನು ಗುರುತಿಸಿದ್ದರು!
ಅವರ ವೈಜ್ಞಾನಿಕ ಮನಸ್ಸು ತಕ್ಷಣವೇ ಕ್ಷಿಪಣಿಯ ಸಾಮರ್ಥ್ಯವನ್ನು ಗುರುತಿಸಿತ್ತು. ಈ ಕ್ಷಿಪಣಿ ತಂತ್ರಜ್ಞಾನ ಏನಾದರೂ ಪೂರ್ಣಗೊಂಡರೆ, ಆಗ ಭಾರತ ತಾನು ಹೊಂದಿರುವ ಕ್ಷಿಪಣಿ ಸಾಮರ್ಥ್ಯಗಳಿಂದ ಎಷ್ಟೋ ದಶಕಗಳ ಮುಂದಕ್ಕೆ ಚಲಿಸಿದಂತಾಗಲಿದೆ ಎನ್ನುವುದನ್ನು ಕಲಾಂ ಅರಿತಿದ್ದರು. ಶಬ್ದದ ವೇಗಕ್ಕಿಂತ ಬಹುತೇಕ ಮೂರು ಪಟ್ಟು ಹೆಚ್ಚಿನ ವೇಗದಲ್ಲಿ ಸಾಗಬಲ್ಲ ಈ ಕ್ಷಿಪಣಿಯನ್ನು ಈಗಾಗಲೇ ಚಾಲ್ತಿಯಲ್ಲಿರುವ ಯಾವುದೇ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಿಂದ ತಡೆಯಲು ಸಾಧ್ಯವಿರಲಿಲ್ಲ. ಈ ಕ್ಷಿಪಣಿಯನ್ನು ನೌಕೆಗಳು, ಸಬ್‌ಮರೀನ್‌ಗಳು, ಯುದ್ಧ ವಿಮಾನಗಳು ಮತ್ತು ಭೂ ಆಧಾರಿತ ಲಾಂಚರ್‌ಗಳು ಸೇರಿದಂತೆ ಬೇರೆ ಬೇರೆ ವೇದಿಕೆಗಳಿಗೆ ಅಳವಡಿಸಲು ಸಾಧ್ಯವಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ರಷ್ಯನ್ನರಿಗೆ ನಿಂತು ಹೋಗಿದ್ದ ಈ ಯೋಜನೆಯನ್ನು ಪೂರ್ಣಗೊಳಿಸಲು ಹಣಕಾಸಿನ ಅವಶ್ಯಕತೆ ಇದ್ದುದರಿಂದ, ಅವರು ಸಹಯೋಗ ಹೊಂದಲು ಸಿದ್ಧವಾಗಿದ್ದರು. ಇದೇ ವೇಳೆ ಭಾರತಕ್ಕೆ ಈ ಅತ್ಯಾಧುನಿಕ ತಂತ್ರಜ್ಞಾನದ ಅವಶ್ಯಕತೆ ಇತ್ತು.
ಇದಾದ ನಂತರ ನಡೆದದ್ದೇ ಕಲಾಂ ಕಮಾಲ್!. ತನ್ನ ತಾಂತ್ರಿಕ ಪ್ರಾವೀಣ್ಯತೆಯನ್ನು ರಾಜತಾಂತ್ರಿಕ ಕೌಶಲ ಮತ್ತು ಕಾರ್ಯತಂತ್ರದ ದೃಷ್ಟಿಯೊಡನೆ ಕಲಾಂ ಬೆರೆಸಿದ್ದರು. ಇದು ಕೇವಲ ಆಯುಧ ವ್ಯವಸ್ಥೆಯೊಂದರ ಖರೀದಿಯಲ್ಲ ಎನ್ನುವುದನ್ನು ಅರಿತಿದ್ದ ಕಲಾಂ, ಭಾರತ ಕೇವಲ ಖರೀದಿದಾರನಾಗುವ ಬದಲು ಸಹ ಉತ್ಪಾದಕ ಮತ್ತು ಸಹ ಮಾಲೀಕನಾಗುವಂತಹ ಸಹಯೋಗವನ್ನು ನಿರ್ಮಿಸಬೇಕೆಂದು ಯೋಜಿಸಿದ್ದರು. ಒಂದು ವೇಳೆ ಸಮರ್ಪಕವಾಗಿ ರೂಪುಗೊಂಡರೆ, ಈ ಸಹಯೋಗದಿಂದ ಭಾರತಕ್ಕೆ ಅವಶ್ಯಕ ತಂತ್ರಜ್ಞಾನ ಲಭಿಸಲಿದ್ದು, ಭಾರತೀಯ ವಿಜ್ಞಾನಿಗಳು ಇದನ್ನು ಕಲಿತುಕೊಂಡು, ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ತಂತ್ರಜ್ಞಾನದಲ್ಲಿ ಪ್ರವೀಣರಾಗಲು ಸಾಧ್ಯ ಎಂದು ಕಲಾಂ ಸರಿಯಾಗಿಯೇ ಗುರುತಿಸಿದ್ದರು.
ಕಲಾಂ ಅವರ ಉತ್ಸಾಹ ಮತ್ತು ಬದ್ಧತೆ ಎಲ್ಲರನ್ನೂ ಮೋಡಿ ಮಾಡುವಂತದ್ದು. ಅವರು ಭಾರತದ ರಾಜಕೀಯ ಮತ್ತು ಮಿಲಿಟರಿ ವ್ಯವಸ್ಥೆಗಳ ಮನ ಒಲಿಸಿ, ಅರ್ಧಕ್ಕೆ ನಿಂತು ಹೋಗಿದ್ದ ರಷ್ಯನ್ ಯೋಜನೆ ಭಾರತದ ಪಾಲಿಗೆ ಚಿತ್ರಣವನ್ನೇ ಬದಲಾಯಿಸುವಂತಹ ಆಯುಧವಾಗಬಹುದು ಎಂದು ಅರ್ಥ ಮಾಡಿಸಿದ್ದರು. ರಷ್ಯಾದ ಜೊತೆ ಮುಂದಿನ ಮಾತುಕತೆಯ ಸಂದರ್ಭದಲ್ಲೂ ಕಲಾಂ ಅವರು ದುರ್ಬಲ ಸ್ಥಾನದಿಂದ ಮಾತನಾಡದೆ, ಸಮಾನ ಭಾಗೀದಾರನ ರೀತಿಯಲ್ಲೇ ಮಾತನಾಡಿದ್ದರು. ರಷ್ಯಾಗೆ ಕ್ಷಿಪಣಿ ಯೋಜನೆಯನ್ನು ಪೂರ್ಣಗೊಳಿಸಲು ಅತ್ಯಂತ ಅಗತ್ಯವಿದ್ದ ಬಂಡವಾಳ ಮತ್ತು ಬದ್ಧತೆಯ ಸಹಭಾಗಿತ್ವವನ್ನು ಭಾರತ ಒದಗಿಸುವುದಾಗಿ ಕಲಾಂ ಭರವಸೆ ನೀಡಿದ್ದರು.
1998ರಲ್ಲಿ, ಉಭಯ ದೇಶಗಳ ಸಮಾನ ಪಾಲುದಾರಿಕೆಯ ಜಂಟಿ ಯೋಜನೆಯಾಗಿ ಬ್ರಹ್ಮೋಸ್ ಏರೋಸ್ಪೇಸ್ ಸ್ಥಾಪನೆಗೊಂಡಿತು. ಇದರ ಹೆಸರೂ ಸಹ ಬ್ರಹ್ಮಪುತ್ರಾ ಮತ್ತು ಮಾಸ್ಕೋವಾ ನದಿಗಳನ್ನು ಒಳಗೊಂಡಿದ್ದು, ಕಲಾಂ ಕನಸು ಕಂಡಿದ್ದ ಸಹಭಾಗಿತ್ವವನ್ನು ಸಮರ್ಥವಾಗಿ ಪ್ರತಿನಿಧಿಸಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಈ ವ್ಯವಸ್ಥೆಯಡಿ ಭಾರತೀಯ ವಿಜ್ಞಾನಿಗಳಿಗೆ ರಷ್ಯನ್ ತಜ್ಞರೊಡನೆ ಕೆಲಸ ಮಾಡುತ್ತಾ ತಂತ್ರಜ್ಞಾನದ ಎಲ್ಲ ಆಯಾಮಗಳನ್ನೂ ಕಲಿಯಲು ಅವಕಾಶ ಲಭಿಸಿತ್ತು. ಕಲಾಂ ರಷ್ಯನ್ ಘಟಕದಲ್ಲಿ ಕೇವಲ ಅರ್ಧ ಪೂರ್ಣಗೊಂಡಿದ್ದ ಒಂದು ಕ್ಷಿಪಣಿಯನ್ನು ಮಾತ್ರವೇ ನೋಡಿರಲಿಲ್ಲ. ಬದಲಿಗೆ, ತಂತ್ರಜ್ಞಾನ ವರ್ಗಾವಣೆಯ ಒಂದು ಸಾಧನ ಮತ್ತು ಭಾರತದ ಸಾಮರ್ಥ್ಯ ವೃದ್ಧಿಸುವ ಒಂದು ಉಪಕರಣವನ್ನೂ ಕಂಡಿದ್ದರು.
ಈ ಯೋಜನೆಯನ್ನು ಪೂರ್ಣಗೊಳಿಸಲು ಬಹುದೊಡ್ಡ ಸವಾಲುಗಳಿದ್ದವು. ರಷ್ಯನ್ನರು ಅರ್ಧ ಪೂರ್ಣಗೊಳಿಸಿದ್ದ ಕ್ಷಿಪಣಿಯನ್ನು ಪೂರ್ತಿಗೊಳಿಸಬೇಕಿತ್ತು. ಪರೀಕ್ಷಿಸಬೇಕಿತ್ತು ಮತ್ತು ಭಾರತದ ಅವಶ್ಯಕತೆಗಳಿಗೆ ತಕ್ಕಂತೆ ಅದನ್ನು ಹೊಂದಿಸಬೇಕಿತ್ತು. ವಿಭಿನ್ನವಾದ ಎಂಜಿನಿಯರಿಂಗ್ ಸಂಸ್ಕೃತಿಗಳು ಮಿಳಿತಗೊಳ್ಳಬೇಕಿತ್ತು. ಅಧಿಕಾರ ವ್ಯವಸ್ಥೆಗಳನ್ನೂ ನಿಭಾಯಿಸಬೇಕಿತ್ತು. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕಿತ್ತು. ಆದರೆ, ಕಲಾಂ ಅವರ ಆರಂಭಿಕ ದೂರದೃಷ್ಟಿ ದಾರಿದೀಪವಾಗಿದ್ದವು. ಕಲಾಂ ಭಾರತಕ್ಕೆ ಈ ಅವಕಾಶವನ್ನೇನೋ ತಂದಿದ್ದರು. ಆದರೆ, ಈ ಮೊದಲು ಕಲಾಂ ಅವರೊಡನೆ ಅಗ್ನಿ ಮತ್ತು ಪೃಥ್ವಿ ಯೋಜನೆಯಡಿ ಕಾರ್ಯ ನಿರ್ವಹಿಸಿದ್ದ ಭಾರತೀಯ ವಿಜ್ಞಾನಿಗಳಿಗೆ ಈಗ ಕಲಾಂ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿಯಿತ್ತು.
ಬ್ರಹ್ಮೋಸ್ 2001ರ ಜೂನ್ 12 ರಂದು ತನ್ನ ಮೊದಲ ಪರೀಕ್ಷಾ ಹಾರಾಟ ನಡೆಸಿದಾಗ ಅದು ಕಲಾಂ ರಷ್ಯನ್ ಘಟಕದಲ್ಲಿ ಗುರುತಿಸಿದ ಕನಸನ್ನು ನನಸಾಗಿಸಿತು. ಈ ವೇಳೆಗಾಗಲೇ ಕಲಾಂ ಭಾರತದಲ್ಲಿ ರಾಷ್ಟ್ರೀಯ ನಾಯಕರಾಗಿ ಹೆಸರಾಗಿದ್ದು, 1998ರ ಪೋಖ್ರಾನ್ - 2 ಅಣ್ವಸ್ತ್ರ ಪರೀಕ್ಷೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ರಷ್ಯನ್ ಕಾರ್ಖಾನೆಯಲ್ಲಿ ಧೂಳು ಹಿಡಿದುಕೊಂಡಿದ್ದ ಕ್ಷಿಪಣಿ ಈಗ ಪೂರ್ಣಗೊಂಡು, ಘಾತಕ ಶಕ್ತಿ ಸಂಪಾದಿಸಿ, ಭಾರತೀಯ ಗುರುತನ್ನೂ ಹೊಂದಿತ್ತು. ಮ್ಯಾಕ್ 2.8 ರಿಂದ ಮ್ಯಾಕ್ 3 ವೇಗದಲ್ಲಿ ಸಾಗಬಲ್ಲ ಈ ಕ್ಷಿಪಣಿ ಅಸಾಧಾರಣ ನಿಖರತೆ ಹೊಂದಿ, 300 ಕೆಜಿ ಸಿಡಿತಲೆಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಸಾಧಿಸಿ, ಜಗತ್ತಿಗೆ ಬೆದರಿಕೆ ಒಡ್ಡುವ ಕ್ಷಿಪಣಿಯಾಗಿ ರೂಪುಗೊಂಡಿತ್ತು.
ಕೇವಲ ಒಂದು ವರ್ಷದ ಬಳಿಕ, ಅಂದರೆ 2002ರಲ್ಲಿ ದೇಶದ ರಕ್ಷಣೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ವಿಜ್ಞಾನಿ ಭಾರತದ 11ನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. 2002 ರಿಂದ 2007ರ ತನಕದ ಅವರ ಅಧ್ಯಕ್ಷೀಯ ಅವಧಿ ಇತರರ ಅವಧಿಗಿಂತ ಸಂಪೂರ್ಣ ಭಿನ್ನವಾಗಿತ್ತು. ವೈಸರಾಯ್‌ಗಳಿಂದ ಹಿಂದಿನ ರಾಷ್ಟ್ರಪತಿಗಳ ತನಕ ಅಧಿಕೃತ ನಿವಾಸವಾಗಿದ್ದ ರಾಷ್ಟ್ರಪತಿ ಭವನ ಕಲಾಂ ಉಪಸ್ಥಿತಿಯಲ್ಲಿ ಅಸಾಧಾರಣವಾಗಿ ಪರಿವರ್ತನೆಗೊಂಡಿತ್ತು. ಕಲಾಂ ರಾಷ್ಟ್ರಪತಿ ಭವನವನ್ನು ಜನ ಸಾಮಾನ್ಯರಿಗೆ, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮುಕ್ತವಾಗಿಸಿದ್ದರು. ಅವರು ಸಾವಿರಾರು ಪತ್ರಗಳಿಗೆ ವೈಯಕ್ತಿಕವಾಗಿ ಉತ್ತರಿಸಿ, ಶಾಲಾ ಮಕ್ಕಳನ್ನು ಭೇಟಿಯಾಗಿ, ತನ್ನ ಸ್ಥಾನ ಲಕ್ಷಾಂತರ ಭಾರತೀಯರಿಗೆ ದೊಡ್ಡ ಕನಸು ಕಾಣಲು, ಕಠಿಣ ಪರಿಶ್ರಮ ಪಡಲು ಸ್ಫೂರ್ತಿ ನೀಡುವಂತೆ ಮಾಡಿದರು.
ಭಾರತದ ರಾಷ್ಟ್ರಪತಿ ಆದ ನಂತರವೂ ಕಲಾಂ ವಿಜ್ಞಾನಿ ಮತ್ತು ರಕ್ಷಣಾ ತಂತ್ರಜ್ಞನೆಂಬ ತನ್ನ ಬೇರುಗಳನ್ನು ಮರೆಯಲಿಲ್ಲ. ಅವರು ದೇಶೀಯ ರಕ್ಷಣಾ ಅಭಿವೃದ್ಧಿಯ ಅವಶ್ಯಕತೆಯನ್ನು ಒತ್ತಿ ಹೇಳುತ್ತಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಮತ್ತು ಸಂಶೋಧನೆಯ ಅಭಿವೃದ್ಧಿಗೆ ಹೂಡಿಕೆ ಮಾಡುವ ಅವಶ್ಯಕತೆಯನ್ನು ಸಾರಿದರು. ತನ್ನ ನೈತಿಕ ಜವಾಬ್ದಾರಿಯನ್ನು ಬಳಸಿಕೊಂಡು ಕಲಾಂ ಶೈಕ್ಷಣಿಕ ಸುಧಾರಣೆ ಮತ್ತು ವೈಜ್ಞಾನಿಕ ಮನೋಭಾವದ ವೃದ್ಧಿಗೆ ಕೊಡುಗೆ ನೀಡಿದರು. ಭಾರತಕ್ಕೆ ಬ್ರಹ್ಮೋಸ್ ಕ್ಷಿಪಣಿ ತಂದ ಕಲಾಂನ ಬಳಿಕ ಭಾರತದ ಮುಂದಿನ ತಲೆಮಾರುಗಳು ಇನ್ನೂ ಮಹತ್ತರವಾದ ತಂತ್ರಜ್ಞಾನಗಳನ್ನು ನಿರ್ಮಿಸುವಂತೆ ಮಾಡಲು ಶ್ರಮಿಸಿದರು.
ಬ್ರಹ್ಮೋಸ್ ಕ್ಷಿಪಣಿಯ ಕಾರ್ಯತಂತ್ರದ ಬಳಕೆಗಳು ಅಸಾಧಾರಣವಾಗಿದ್ದು, ಇದರ ಸಾಮರ್ಥ್ಯ 2025ರ ಮೇ ಅಲ್ಲಿ ಭಾರತ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಸಾಬೀತಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಬಳಿಕ, ಭಾರತ ಸಂಘಟಿತ ಮಿಲಿಟರಿ ಕಾರ್ಯಾಚರಣೆ ನಡೆಸಿ, ಕಲಾಂ ದಶಕಗಳ ಹಿಂದೆ ಕನಸು ಕಂಡಿದ್ದ ಆಯುಧ ವ್ಯವಸ್ಥೆಯ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಿತು.
ಮೇ 7, 2025ರಂದು ಆಪರೇಷನ್ ಸಿಂಧೂರ ಭಾರತದ ಬಹುಮುಖಿ ಆಕ್ರಮಣದ ರೂಪದಲ್ಲಿ ಆರಂಭಗೊಂಡು, ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತದ ಪ್ರತ್ಯಾಕ್ರಮಣ ಸಾಮರ್ಥ್ಯದ ಕೇಂದ್ರದಲ್ಲಿರಿಸಿತ್ತು. ವಿಮಾನಗಳಿಂದ ಮತ್ತು ಭೂಮಿಯಿಂದ ಉಡಾವಣೆಗೊಳ್ಳುವ ಬ್ರಹ್ಮೋಸ್ ಆವೃತ್ತಿಗಳು ಈ ಮಹತ್ವದ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತೀಯ ಮಿಲಿಟರಿ ಪಡೆಗಳ ಪ್ರಮುಖ ಆಯುಧವಾದವು. ಸುಖೋಯಿ–30ಎಂಕೆಐ ಯುದ್ಧ ವಿಮಾನದಿಂದ ಉಡಾವಣೆಗೊಂಡ ಏರ್ ಲಾಂಚ್ಡ್ ಬ್ರಹ್ಮೋಸ್ ಕ್ಷಿಪಣಿಗಳು ಪಾಕಿಸ್ತಾನದ ಭೂ ಪ್ರದೇಶದ ಆಳಕ್ಕೆ ದಾಳಿ ನಡೆಸಿದವು. ಅವುಗಳ ಆಕ್ರಮಣಕ್ಕೆ ಪಾಕಿಸ್ತಾನದ ಮಹತ್ವದ ನೂರ್ ಖಾನ್ ನೆಲೆ ಸೇರಿದಂತೆ ಪ್ರಮುಖ ಕಾರ್ಯತಂತ್ರದ ನೆಲೆಗಳು ಧ್ವಂಸಗೊಂಡವು. ಈ ದಾಳಿಗಳ ನಿಖರತೆಯೂ ಅಸಾಧಾರಣವಾಗಿದ್ದು, ಬ್ರಹ್ಮೋಸ್ ಒಂದು ಮೀಟರ್ ನಿಖರತೆ ಪ್ರದರ್ಶಿಸಿ, ರನ್‌ವೇಗಳು, ಕಮಾಂಡ್ ಕೇಂದ್ರಗಳು, ಆಯುಧ ಸಂಗ್ರಹಣಾ ಕೇಂದ್ರಗಳು ಮತ್ತು ಮಿಲಿಟರಿ ಬಂಕರ್‌ಗಳನ್ನು ನಿಖರವಾಗಿ ಧ್ವಂಸಗೊಳಿಸಿತು.
ಭೂ ಆಧಾರಿತ ಬ್ರಹ್ಮೋಸ್ ಲಾಂಚರ್‌ಗಳು ವಾಯು ದಾಳಿಗೆ ಬೆಂಬಲ ನೀಡಿದವು. ಗಡಿಯಾದ್ಯಂತ ಇದ್ದ ಪಾಕಿಸ್ತಾನಿ ಭಯೋತ್ಪಾದನಾ ನೆಲೆಗಳು ಮತ್ತು ಮಿಲಿಟರಿ ನೆಲೆಗಳನ್ನು ಧ್ವಂಸಗೊಳಿಸಿದವು. ಭಾರತೀಯ ನೌಕಾಪಡೆಯ ಬ್ರಹ್ಮೋಸ್ ಸಜ್ಜಿತ ನೌಕೆಗಳು ಅರಬ್ಬೀ ಸಮುದ್ರದಲ್ಲಿ ನೆಲೆಯಾಗಿ ಭಾರತದ ಸಾಗರ ಪಾರಮ್ಯವನ್ನು ಖಾತ್ರಿಪಡಿಸಿ ಪಾಕಿಸ್ತಾನದ ಮಹತ್ವದ ಸ್ಥಾನಗಳ ಮೇಲೂ ದಾಳಿಗೆ ಸಜ್ಜಾಗಿದ್ದವು. ಭೂ ಸೇನೆ, ವಾಯು ಸೇನೆ ಮತ್ತು ನೌಕಾ ಸೇನೆ ಮೂರೂ ವಿಭಾಗಗಳಿಗೂ ಬಹುಮುಖಿ ಆಯುಧವಾಗಿ ಬ್ರಹ್ಮೋಸ್ ಇರಬೇಕು ಎಂದು ಕಲಾಂ ಹೊಂದಿದ್ದ ದೂರದೃಷ್ಟಿ ನಿರ್ಣಾಯಕವಾಗಿತ್ತು. ಏಕಕಾಲದಲ್ಲಿ ಸೇನೆಯ ಮೂರೂ ವಿಭಾಗಗಳಿಂದಲೂ ಯುದ್ಧ ಸಂದರ್ಭದಲ್ಲೂ ಉಡಾವಣೆಗೊಳ್ಳಬಲ್ಲ ಜಗತ್ತಿನ ಏಕೈಕ ಕ್ರೂಸ್ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಬ್ರಹ್ಮೋಸ್ ಭಾಜನವಾಗಿದೆ.
ನಾಲ್ಕು ದಿನಗಳ ಆಪರೇಷನ್ ಸಿಂಧೂರ ಬ್ರಹ್ಮೋಸ್ ಕ್ಷಿಪಣಿಯನ್ನು ಬಳಸಿದ ಮೊದಲ ನೇರ ಚಕಮಕಿಯಾಗಿದ್ದು, ಅದು ಎಲ್ಲ ನಿರೀಕ್ಷೆಗಳನ್ನೂ ಮೀರಿ ತನ್ನ ಸಾಮರ್ಥ್ಯ ಪ್ರದರ್ಶಿಸಿತು. ಇದರ ಸೂಪರ್‌ಸಾನಿಕ್ ವೇಗ (ಶಬ್ದದ ವೇಗಕ್ಕಿಂತ ಬಹುತೇಕ ಮೂರು ಪಟ್ಟು ಹೆಚ್ಚು) ಶತ್ರುಗಳ ರಕ್ಷಣಾ ವ್ಯವಸ್ಥೆಗಳಿಗೆ ಪ್ರತಿಕ್ರಿಯಿಸಲು ಕೇವಲ ಕೆಲವು ಸೆಕೆಂಡುಗಳ ಕಾಲಾವಕಾಶವನ್ನಷ್ಟೇ ನೀಡಿದ್ದು, ಅವುಗಳು ಅಪ್ರಯೋಜಕವಾದವು. ಕ್ಷಿಪಣಿಯ ‘ಫೈರ್ ಆಂಡ್ ಫಾರ್ಗೆಟ್’ ಸಾಮರ್ಥ್ಯ ಭಾರತೀಯ ಪಡೆಗಳಿಗೆ ಬ್ರಹ್ಮೋಸ್ ಅನ್ನು ಉಡಾವಣೆಗೊಳಿಸಿ, ನಂತರ ಬಚ್ಚಿಡಲು ಅವಕಾಶ ಕಲ್ಪಿಸಿದ್ದರಿಂದ ಸಿಬ್ಬಂದಿಗಳು ಮತ್ತು ಉಡಾವಣಾ ವೇದಿಕೆಗಳು ಪ್ರತಿದಾಳಿಗೆ ತುತ್ತಾಗುವುದು ತಪ್ಪಿತು. ಕ್ಷಿಪಣಿಯ ಹೆಚ್ಚಿನ ವ್ಯಾಪ್ತಿಯ ಕಾರಣದಿಂದ, ಭಾರತೀಯ ಯುದ್ಧ ವಿಮಾನಗಳು ಶತ್ರುವಿನ ವಾಯು ಪ್ರದೇಶವನ್ನು ಪ್ರವೇಶಿಸದೆಯೇ ಕ್ಷಿಪಣಿ ಪ್ರಯೋಗಿಸಲು ಸಾಧ್ಯವಾಯಿತು.
ಡಿಆರ್‌ಡಿಒ ಮುಖ್ಯಸ್ಥರು ಬ್ರಹ್ಮೋಸ್ ಕ್ಷಿಪಣಿಯನ್ನು ದಾಳಿಗೆ ಬಳಸಿಕೊಳ್ಳಲಾಯಿತು. ಆಕಾಶ್ ಮತ್ತು ಎಂಆರ್‌ಎಸ್‌ಎಎಂ ನಂತಹ ದೇಶೀಯ ವಾಯು ರಕ್ಷಣಾ ವ್ಯವಸ್ಥೆಗಳು ರಕ್ಷಣೆ ಒದಗಿಸಿದವು ಎಂದು ವಿವರಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಸಾರ್ವಜನಿಕವಾಗಿಯೇ ದೇಶೀಯ ಆಯುಧ ವ್ಯವಸ್ಥೆಗಳನ್ನು, ಅದರಲ್ಲೂ ಬ್ರಹ್ಮೋಸ್ ಕ್ಷಿಪಣಿಯನ್ನು ಶ್ಲಾಘಿಸಿ, ಈ ಕ್ಷಿಪಣಿ ಭಾರತಕ್ಕೆ ನಿರ್ಣಾಯಕ ಯುದ್ಧ ರಂಗದ ಫಲಿತಾಂಶ ಒದಗಿಸಿದೆ ಎಂದರು. ಗೃಹ ಸಚಿವ ಅಮಿತ್ ಶಾ ಅವರು ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಮಿಲಿಟರಿ ನೆಲೆಗಳನ್ನು ನಾಶಪಡಿಸಲು ಭಾರತ ಬ್ರಹ್ಮೋಸ್ ಕ್ಷಿಪಣಿಗಳನ್ನೇ ಬಳಸಿದೆ ಎಂದು ಸ್ಪಷ್ಟಪಡಿಸಿದರು.
ಈ ಯಶಸ್ಸಿನ ಬೆನ್ನಲ್ಲೇ ಭಾರತಕ್ಕೆ ಸಾಕಷ್ಟು ಕಾರ್ಯತಂತ್ರದ ಪರಿಣಾಮಗಳೂ ಎದುರಾದವು. ಆಪರೇಷನ್ ಸಿಂಧೂರದ ಕೆಲವೇ ವಾರಗಳ ಬಳಿಕ, ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಳು ಬ್ರಹ್ಮೋಸ್ ಕ್ಷಿಪಣಿಗಾಗಿ ಬೃಹತ್ ಖರೀದಿ ಆದೇಶ ನೀಡಿದವು. ಈ ಕ್ಷಿಪಣಿ ಭಾರತದ ರಕ್ಷಣಾ ಸಿದ್ಧಾಂತದ ಕೇಂದ್ರವಾಗಿದೆ ಎಂದು ಸಾಬೀತುಪಡಿಸಿದವು. ಬ್ರಹ್ಮೋಸ್ ಕ್ಷಿಪಣಿ ಯುದ್ಧದಲ್ಲೂ ತನ್ನ ಕ್ಷಮತೆ ಸಾಬೀತುಪಡಿಸಿದ್ದು, ಭಾರತದ ಅತ್ಯಂತ ಯಶಸ್ವಿ ರಕ್ಷಣಾ ರಫ್ತಾಗಿ ಹೊರಹೊಮ್ಮಿದೆ. ಬಹಳಷ್ಟು ದೇಶಗಳು ಬ್ರಹ್ಮೋಸ್ ಖರೀದಿಗೆ ಈಗ ಆಸಕ್ತಿ ತೋರಿವೆ. ರಕ್ಷಣಾ ವಿಶ್ಲೇಷಕರ ಪರಿಭಾಷೆಯಲ್ಲಿ ಹೇಳುವುದಾದರೆ, ಆಪರೇಷನ್ ಸಿಂಧೂರ ಭಾರತೀಯ ಮಿಲಿಟರಿ ತಂತ್ರಜ್ಞಾನಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ನಡೆಸಲು ಸೂಕ್ತ ಪ್ರದರ್ಶನವೇ ಆಗಿತ್ತು.
ಆದರೆ, ಅಬ್ದುಲ್ ಕಲಾಂ ಅವರ ನಿರ್ಧಾರದ ನೈಜ ಸಾಮರ್ಥ್ಯ ಆಪರೇಷನ್ ಸಿಂಧೂರಕ್ಕೆ ಸಾಗಿ ಬಂದ ವರ್ಷಗಳಲ್ಲಿ ಪ್ರದರ್ಶಿತವಾಗಿತ್ತು. ಬ್ರಹ್ಮೋಸ್ ಕೇವಲ ಒಂದು ಆಯುಧ ಮಾತ್ರವಲ್ಲ. ಬದಲಿಗೆ, ಅದು ಭಾರತದ ತಾಂತ್ರಿಕ ಬೆಳವಣಿಗೆಗೆ ವೇದಿಕೆಯಾಗಿತ್ತು. ಭಾರತೀಯ ವಿಜ್ಞಾನಿಗಳು ರಾಮ್‌ಜೆಟ್ ಪ್ರೊಪಲ್ಷನ್, ಸೂಪರ್‌ಸಾನಿಕ್ ಏರೋಡೈನಾಮಿಕ್ಸ್, ಆಧುನಿಕ ಗೈಡೆನ್ಸ್ ವ್ಯವಸ್ಥೆ, ಮತ್ತು ವಿವಿಧ ಪ್ಲಾಟ್‌ಫಾರಂಗಳ ಮಿಳಿತಗಳಂತಹ ಸಂಕೀರ್ಣ ತಂತ್ರಜ್ಞಾನಗಳಲ್ಲಿ ಪ್ರಾವೀಣ್ಯತೆ ಸಾಧಿಸಿದರು. ಉತ್ಪಾದನಾ ಕೇಂದ್ರಗಳನ್ನು ಭಾರತದಲ್ಲೇ ಸ್ಥಾಪಿಸಲಾಯಿತು. ಪೂರೈಕೆದಾರರು ಮತ್ತು ಬಿಡಿ ಭಾಗಗಳ ನಿರ್ಮಾಪಕರ ಸಂಪೂರ್ಣ ವ್ಯವಸ್ಥೆಯನ್ನು ಭಾರತದಲ್ಲಿ ಹುಟ್ಟು ಹಾಕಲಾಯಿತು. ಸಾವಿರಾರು ಎಂಜಿನಿಯರ್‌ಗಳು ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನದಲ್ಲಿ ಪ್ರವೀಣರಾದರು.
ಕಾಲಕ್ರಮೇಣ ಬ್ರಹ್ಮೋಸ್ ಕ್ಷಿಪಣಿಯಲ್ಲಿ ದೇಶೀಯ ಬಿಡಿಭಾಗಗಳ ಪ್ರಮಾಣ ಶೇ 70ಕ್ಕೆ ಏರಿಕೆ ಕಂಡಿದೆ. ಭಾರತೀಯ ನಾವೀನ್ಯತೆಗಳು ಕ್ಷಿಪಣಿಯ ಸಾಮರ್ಥ್ಯಗಳನ್ನು ಆರಂಭಿಕ ಹಂತದಿಂದ ಸಾಕಷ್ಟು ಉತ್ತಮ ಪಡಿಸಿವೆ. ಅಂತಾರಾಷ್ಟ್ರೀಯ ತಂತ್ರಜ್ಞಾನಿ ನಿಯಂತ್ರಣ ನಿಯಮಗಳ ಕಾರಣದಿಂದ ಕ್ಷಿಪಣಿಯ ಆರಂಭಿಕ ವ್ಯಾಪ್ತಿ ಕೇವಲ 290 ಕಿಲೋಮೀಟರ್ ಆಗಿತ್ತು. ಆದರೆ, 2016ರಲ್ಲಿ ಭಾರತ ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ ಭಾಗವಾದ ಬಳಿಕ, ಕ್ಷಿಪಣಿಯ ವ್ಯಾಪ್ತಿಯನ್ನು 450 ಕಿಲೋಮೀಟರ್‌ಗೆ ಹೆಚ್ಚಿಸಲಾಗಿದೆ. ಹೊಸ ಆವೃತ್ತಿಗಳಂತೂ 800 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿ ಹೊಂದಿವೆ. ಬಳಿಕ ನಿರ್ಮಾಣಗೊಂಡ ಹೊಸ ಆವೃತ್ತಿಗಳಲ್ಲಿ ಜಲಾಂತರ್ಗಾಮಿ ಉಡಾಯಿತ ಗಾಳಿಯಲ್ಲಿ ಯುದ್ಧ ವಿಮಾನಗಳಿಂದ ಉಡಾವಣೆ ನಡೆಸಬಲ್ಲ ಆವೃತ್ತಿಗಳೂ ಸೇರಿದ್ದು, ಹೈಪರ್‌ಸಾನಿಕ್ ಆವೃತ್ತಿಯೂ ಈಗ ನಿರ್ಮಾಣದ ಹಂತದಲ್ಲಿದೆ. ವಿದ್ಯಾರ್ಥಿಯಾಗಿದ್ದ ಭಾರತ ತನ್ನ ಗುರುಗಳಿಂದ ಕಲಿತದ್ದು ಮಾತ್ರವಲ್ಲದೆ, ಸ್ವತಂತ್ರವಾಗಿಯೂ ಪ್ರಯತ್ನಗಳನ್ನು ನಡೆಸುತ್ತಾ, ಒಂದು ಕಾಲದಲ್ಲಿ ಕಷ್ಟ ಎಂದು ಭಾವಿಸಲಾಗಿದ್ದ ಮಿತಿಗಳನ್ನೂ ದಾಟಿ ಮುನ್ನಡೆಯುತ್ತಿದೆ.
ಬ್ರಹ್ಮೋಸ್ ಭಾರತದ ಮೊತ್ತಮೊದಲ ಯುದ್ಧ ಪ್ರಮಾಣಿತ ರಫ್ತು ಆಯುಧವಾಗಿ ಯಶಸ್ಸು ಕಂಡಾಗ ಇದು ಸಾಬೀತಾಯಿತು. ಕಲಾಂ ದೃಷ್ಟಿಕೋನದಿಂದ ಹೊರಹೊಮ್ಮಿ, ಆಪರೇಷನ್ ಸಿಂಧೂರದ ಸಂದರ್ಭದಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ ಬ್ರಹ್ಮೋಸ್ ಕ್ಷಿಪಣಿಗೆ ಈಗ ವಿವಿಧ ದೇಶಗಳು ಬೇಡಿಕೆ ಸಲ್ಲಿಸಿವೆ. 2022ರಲ್ಲಿ ಫಿಲಿಪೈನ್ಸ್ ಬ್ರಹ್ಮೋಸ್ ಕ್ಷಿಪಣಿಯ ಮೊದಲ ಗ್ರಾಹಕನಾಗಿತ್ತು. ಬಳಿಕ ವಿಯೆಟ್ನಾಂ, ಇಂಡೋನೇಷ್ಯಾ, ಮತ್ತು ಹಲವು ಇತರ ರಾಷ್ಟ್ರಗಳೂ ಬ್ರಹ್ಮೋಸ್ ಕ್ಷಿಪಣಿಗೆ ಅಪಾರ ಆಸಕ್ತಿ ತೋರಿವೆ. ಜಾಗತಿಕ ಆಯುಧ ಮಾರುಕಟ್ಟೆಯಲ್ಲಿ ಸುದೀರ್ಘ ಕಾಲ ಗ್ರಾಹಕ ಮಾತ್ರವಾಗಿದ್ದ ಭಾರತ, ಈಗ ಅತ್ಯಾಧುನಿಕವಾದ, ಯುದ್ಧದಲ್ಲಿ ಸಾಮರ್ಥ್ಯ ತೋರಿದ ಆಯುಧದ ವ್ಯಾಪಾರಿಯೂ ಆಗಿದೆ. ರಷ್ಯಾದ ಕಾರ್ಖಾನೆಯಲ್ಲಿ ಬಾಕಿಯಾಗಿದ್ದ ಯೋಜನೆ ಇಂದು ಜಗತ್ತೇ ಕಣ್ಣರಳಿಸಿ ನೋಡುವ ಆಯುಧವಾಗಿದ್ದು, ʼಮೇಡ್ ಇನ್ ಇಂಡಿಯಾʼ ಹೆಗ್ಗುರುತನ್ನೂ ಹೊಂದಿದೆ. ಅದರೊಡನೆ, ಯುದ್ಧದಲ್ಲಿ ಅಪಾರ ಯಶಸ್ಸು ಸಾಧಿಸಿದ ಆಯುಧ ಎಂಬ ಗೌರವವನ್ನೂ ಮುಡಿಗೇರಿಸಿಕೊಂಡಿದೆ.
2007ರಲ್ಲಿ ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಕಲಾಂ, ತನ್ನ ಅಚ್ಚುಮೆಚ್ಚಿನ ಕಾರ್ಯವಾದ ಯುವ ಜನರಿಗೆ ಪಾಠ ಮಾಡುವ ಕೆಲಸದಲ್ಲೇ ತೊಡಗಿಕೊಂಡರು. ಅವರು ತನ್ನ ಅಂತಿಮ ವರ್ಷಗಳನ್ನು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುವುದರಲ್ಲಿ, ಉಪನ್ಯಾಸ ನೀಡುವುದರಲ್ಲಿ, ಮತ್ತು ಪುಸ್ತಕಗಳನ್ನು ಬರೆದು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುವುದಕ್ಕೇ ಮೀಸಲಾಗಿಸಿದರು. ಅವರು ಭಾರತದ ರಕ್ಷಣಾ ಸಾಮರ್ಥ್ಯದ ಕುರಿತು ಅಪಾರ ಹೆಮ್ಮೆಯಿಂದ ಮಾತನಾಡುತ್ತಿದ್ದರೂ, ಎಲ್ಲೂ ತನ್ನ ಕೊಡುಗೆಗಳನ್ನು ಬಣ್ಣಿಸುತ್ತಿರಲಿಲ್ಲ. ಜುಲೈ 27, 2015ರಂದು ಕಲಾಂ ಅವರ ಸಾವೂ ಅವರು ಅತ್ಯಂತ ಪ್ರೀತಿಸುತ್ತಿದ್ದ ಬೋಧನಾ ಸಮಯದಲ್ಲೇ ಅವರನ್ನು ಅರಸಿ ಬಂದಿತ್ತು. ಐಐಎಂ ಶಿಲ್ಲಾಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಕುಸಿದು ಬಿದ್ದರು. ಅವರ ಅಂತಿಮ ಮಾತುಗಳು ಮುಂದಿನ ತಲೆಮಾರುಗಳಿಗೂ ಭೂಮಿಯನ್ನು ವಾಸಯೋಗ್ಯವಾಗಿಸುವ ಕುರಿತಾಗಿದ್ದವು.
ಆಪರೇಷನ್ ಸಿಂಧೂರದ ಯಶಸ್ಸನ್ನು ನೋಡಲು ಕಲಾಂ ನಮ್ಮ ನಡುವೆ ಇಲ್ಲವಾದರೂ, ಈ ಕಾರ್ಯಾಚರಣೆ ಅವರು ರಷ್ಯನ್ ಆಯುಧ ಘಟಕದಲ್ಲಿ ಕಂಡ ಕನಸಿನ ಸಾಕಾರ ರೂಪವಾಗಿದೆ. ಅವರು ಗುರುತಿಸಿ, ಭಾರತಕ್ಕೆ ತಂದಿದ್ದ ಅರ್ಧ ನಿರ್ಮಾಣಗೊಂಡಿದ್ದ ಕ್ಷಿಪಣಿ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಪಡೆಗಳು ಕೈಗೊಂಡ ಅತ್ಯಂತ ನಿರ್ಣಾಯಕ, ಮಹತ್ವದ ಮಿಲಿಟರಿ ಕಾರ್ಯಾಚರಣೆಯ ಬೆನ್ನೆಲುಬಾಗಿತ್ತು. ಪ್ರತಿಯೊಂದು ದಾಳಿ, ನಾಶಗೊಂಡ ಪ್ರತಿಯೊಂದು ಗುರಿ, ಆಪರೇಷನ್ ಸಿಂಧೂರದಲ್ಲಿ ಯಶಸ್ವಿಯಾದ ಪ್ರತಿಯೊಂದು ಕಾರ್ಯಾಚರಣೆಯೂ ಅಬ್ದುಲ್ ಕಲಾಂ ಅವರ ದೂರದೃಷ್ಟಿ ಮತ್ತು ಭಾರತದ ತಾಂತ್ರಿಕ ಸಾಮರ್ಥ್ಯದ ಕುರಿತು ಅವರಿಟ್ಟ ನಂಬಿಕೆಗಳನ್ನು ಪ್ರತಿನಿಧಿಸಿದ್ದವು.
ಇಂದು ವಿವಿಧ ಆವೃತ್ತಿಗಳ ಬ್ರಹ್ಮೋಸ್ ಕ್ಷಿಪಣಿಗಳು ಭಾರತದ ಗಡಿ ಕಾಯುತ್ತಿವೆ. ಯುದ್ಧ ನೌಕೆಗಳಲ್ಲಿ ಗಸ್ತು ತಿರುಗುತ್ತಿವೆ, ಮೊಬೈಲ್ ಲಾಂಚರ್‌ಗಳಲ್ಲಿ ಉಡಾವಣೆಗೆ ಸನ್ನದ್ಧವಾಗಿ ನಿಂತಿವೆ. ಯುದ್ಧ ವಿಮಾನಗಳಲ್ಲೂ ಅಳವಡಿತವಾಗಿವೆ. ಇಂದು ಬ್ರಹ್ಮೋಸ್ ಕೇವಲ ಒಂದು ಮಿಲಿಟರಿ ಹಾರ್ಡ್‌ವೇರ್ ಅಷ್ಟೇ ಅಲ್ಲ. ಬ್ರಹ್ಮೋಸ್ ಸ್ಮಾರ್ಟ್ ಸಹಭಾಗಿತ್ವ, ತಾಂತ್ರಿಕ ಗ್ರಹಿಕೆ ಮತ್ತು ಸ್ವದೇಶೀ ಅಭಿವೃದ್ಧಿ ಎಂಬ ಅಬ್ದುಲ್ ಕಲಾಂ ಅವರ ತತ್ವಗಳನ್ನು ಅಳವಡಿಸಿಕೊಂಡಿದೆ. ಆಪರೇಷನ್ ಸಿಂಧೂರದ ಮೂಲಕ ಬ್ರಹ್ಮೋಸ್ ಕೇವಲ ಪ್ರದರ್ಶನಕ್ಕಲ್ಲ, ಬದಲಿಗೆ ನೈಜ ಯುದ್ಧದಲ್ಲೂ ಭಾರತದ ರಾಷ್ಟ್ರೀಯ ಶಕ್ತಿಯ ಪ್ರತೀಕ ಎಂದು ತೋರಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಸದಾ ತಂತ್ರಜ್ಞಾನ ಪಡೆದುಕೊಳ್ಳುವವರಾಗಿಯೇ ಉಳಿಯಬೇಕಿಲ್ಲ. ಬದಲಿಗೆ ದೂರದೃಷ್ಟಿ ಮತ್ತು ಬದ್ಧತೆ ಇದ್ದರೆ ತಂತ್ರಜ್ಞಾನಗಳ ನಿರ್ಮಾತೃಗಳೂ ಆಗಬಹುದು, ಜಾಗತಿಕ ಗುಣಮಟ್ಟದ, ಸಾಮರ್ಥ್ಯ ಸಾಬೀತಾದ ಆಯುಧಗಳ ರಫ್ತುದಾರರೂ ಆಗಬಹುದು ಎನ್ನುವುದನ್ನು ಬ್ರಹ್ಮೋಸ್ ಸಾಬೀತುಪಡಿಸಿದೆ.
ಇಂದು ನಾವು ವಿಜ್ಞಾನಿ, ಮಿಸೈಲ್ ಮ್ಯಾನ್, ರಾಷ್ಟ್ರಪತಿ, ಶಿಕ್ಷಕ, ಎಲ್ಲಕ್ಕೂ ಹೆಚ್ಚಾಗಿ ಭಾರತದ ಹೆಮ್ಮೆಯ ಪುತ್ರನಾದ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಸ್ಮರಿಸುತ್ತಿದ್ದೇವೆ. ಅದರೊಡನೆ, ಅವರು ನೇರವಾಗಿ ಅಭಿವೃದ್ಧಿಪಡಿಸಿದ ಕ್ಷಿಪಣಿಗಳನ್ನು ಮಾತ್ರವಲ್ಲದೆ, ಇತರರು ಗುರುತಿಸಲು ವಿಫಲರಾದರು. ಕಲಾಂ ಯಶಸ್ವಿಯಾಗಿ ಗುರುತಿಸಿದ ಅವಕಾಶಗಳನ್ನೂ ನೆನೆಯುತ್ತೇವೆ. ಅಂದು ರಷ್ಯಾದಲ್ಲಿ ಅರ್ಧ ನಿರ್ಮಾಣಗೊಂಡಿದ್ದ ಕ್ಷಿಪಣಿಯನ್ನು ನೋಡಿದಾಗ, ಅದು ಭಾರತದ ಸುರಕ್ಷಿತ ಭವಿಷ್ಯ ನಿರ್ಮಾಣಕ್ಕೆ ನೆರವಾಗಬಹುದು ಎಂದು ಕಲಾಂ ಗುರುತಿಸಿದ್ದು ಇತಿಹಾಸ ಎಂದಿಗೂ ಮರೆಯಲು ಸಾಧ್ಯವಿಲ್ಲದ, ಅಸಾಧಾರಣ ಭವಿಷ್ಯವಾಣಿಯೇ ಸರಿ! ಅವರ ನಿಧನದ ಒಂದು ದಶಕದ ಬಳಿಕ ನಡೆದ ಆಪರೇಷನ್ ಸಿಂದೂರ ಅವರ ದೂರದೃಷ್ಟಿ ನೂರು ಪ್ರತಿಶತ ಸರಿ ಎನ್ನುವುದನ್ನು ಸಾಬೀತುಪಡಿಸಿತು.
ಕಲಾಂರ ದೂರದೃಷ್ಟಿ ರಷ್ಯಾದಲ್ಲಿ ಮೂಲೆಗುಂಪಾಗಿದ್ದ ಯೋಜನೆಯನ್ನು ಭಾರತದಲ್ಲಿ ಯಶಸ್ವಿಯಾಗಿಸಿ, ಯುದ್ಧರಂದಗಲ್ಲಿ ಗೆಲುವು ತಂದುಕೊಡುವ ಆಯುಧವಾಗಿಸಿತ್ತು. ಅವರ ಅಧ್ಯಕ್ಷೀಯ ಅವಧಿಯಲ್ಲಿ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನೂ ವಿನಯದಿಂದ, ಜನರಿಗೆ ಕೈಗೆಟಕುವ ರೀತಿಯಲ್ಲಿ ಮತ್ತು ಪ್ರಜೆಗಳ ಕುರಿತ ನೈಜ ಪ್ರೀತಿಯಿಂದ ನಡೆಸಬಹುದು ಎನ್ನುವುದನ್ನು ದೇಶ ಕಂಡಿತ್ತು. ರಾಮೇಶ್ವರಂನಲ್ಲಿ ದಿನಪತ್ರಿಕೆ ಮಾರಾಟ ಮಾಡುತ್ತಿದ್ದ ಓರ್ವ ಬಾಲಕ ದೇಶದ ಅತ್ಯುನ್ನತ ಹುದ್ದೆ ತಲುಪಿದರೂ ತನ್ನ ಬೇರುಗಳು ಮತ್ತು ಭಾರತಕ್ಕಾಗಿ ತನ್ನ ಕೆಲಸಗಳನ್ನು ಮರೆಯಲು ಸಾಧ್ಯವಿಲ್ಲ ಎನ್ನುವುದನ್ನು ಕಲಾಂ ಜೀವನ ಸಾಬೀತುಪಡಿಸಿದೆ. ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತಕ್ಕೆ ತಂದ ಕಲಾಂ ದೂರದೃಷ್ಟಿ, ಹಲವು ದಶಕಗಳ ಬಳಿಕವೂ ಭಾರತೀಯ ಪಡೆಗಳು ರಾಷ್ಟ್ರೀಯ ಸಾರ್ವಭೌಮತ್ವವನ್ನು ರಕ್ಷಿಸಲು ಬೇಕಾದ ನಿರ್ಣಾಯಕ ಮೇಲುಗೈ ಹೊಂದುವಂತೆ ಮಾಡಿದೆ. ಇದನ್ನು ಆಪರೇಷನ್ ಸಿಂದೂರ ಪರಿಣಾಮಕಾರಿಯಾಗಿ ಸಾಬೀತುಪಡಿಸಿದೆ.
ತನ್ನ ಕುಟುಂಬಕ್ಕೆ ನೆರವಾಗುವ ಸಲುವಾಗಿ ರಾಮೇಶ್ವರಂನಲ್ಲಿ ದಿನಪತ್ರಿಕೆ ಮಾರಾಟ ಮಾಡುತ್ತಿದ್ದ ಬಾಲಕ ಜಗತ್ತಿನ ಅತ್ಯಂತ ವೇಗದ ಕ್ರೂಸ್ ಕ್ಷಿಪಣಿಯನ್ನು ಭಾರತಕ್ಕೆ ತಂದಿದ್ದ. ಜನಸಾಮಾನ್ಯರ ರಾಷ್ಟ್ರಪತಿ ಎನಿಸಿಕೊಂಡ. ಇತರರ ಕಣ್ಣುಗಳು ಗುರುತಿಸಲು ಸಾಧ್ಯವಾಗದ್ದನ್ನೂ ಕಲಾಂ ಕಣ್ಣುಗಳು ಗುರುತಿಸಿದ್ದವು. ಇತರರು ಸಾಧ್ಯವೇ ಇಲ್ಲ ಎಂದಿದ್ದನ್ನೂ ಕಲಾಂ ಅವರ ಬದ್ಧತೆ ಸಾಧ್ಯವಾಗಿಸಿತ್ತು. ಬ್ರಹ್ಮೋಸ್ ಕೇವಲ ಒಂದು ಆಯುಧವಲ್ಲ. ಇದು ಡಾ. ಅಬ್ದುಲ್ ಕಲಾಂ ಅವರ ಮೇಧಾಶಕ್ತಿಗೆ ಒಂದು ಹೆಗ್ಗುರುತು. ಅರ್ಧ ಪೂರ್ಣಗೊಂಡ ಯೋಜನೆಯಲ್ಲೇ ಭವಿಷ್ಯ ಕಾಣಬಲ್ಲ ಅಸಾಧಾರಣ ಬುದ್ಧಿವಂತಿಕೆ ಅವರಲ್ಲಿತ್ತು. ಅದನ್ನು ಪ್ರಯೋಗಾಲಯಗಳಲ್ಲಿದ್ದ ವಿಜ್ಞಾನಿಗಳಿಂದ ಯುದ್ಧಭೂಮಿಯಲ್ಲಿರುವ ಯೋಧರು, ತರಗತಿಯಲ್ಲಿರುವ ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಯೊಬ್ಬ ಭಾರತೀಯನ ಭವಿಷ್ಯ ರಕ್ಷಣೆಗಾಗಿ ಪೂರ್ಣಗೊಳಿಸಬೇಕು ಎನ್ನುವ ಕನಸೂ ಅವರಲ್ಲಿತ್ತು. ಆಪರೇಷನ್ ಸಿಂದೂರ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಕ್ರಮಗಳ ಪರಂಪರೆಯಾಗಿದ್ದು, ಬ್ರಹ್ಮೋಸ್ ಭಾರತದ ನ್ಯಾಯದ ಖಡ್ಗ ಮತ್ತು ಸಾರ್ವಭೌಮತ್ವದ ಗುರಾಣಿಯಾಗಿರುವುದಕ್ಕೆ ಸಾಕ್ಷಿಯಾಯಿತು.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.