ADVERTISEMENT

ಕೋವಿಡ್‌–19: ಮಾನವರ ಮೇಲೆ ದೇಶಿ ಲಸಿಕೆ ಪ್ರಯೋಗಿಸಲು ಒಪ್ಪಿಗೆ

ಇದೇ ಸೋಮವಾರದಿಂದ ದೆಹಲಿ ಏಮ್ಸ್‌ನಲ್ಲಿ ಕೋವಾಕ್ಸಿನ್’ ಟ್ರಯಲ್ಸ್

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 11:18 IST
Last Updated 19 ಜುಲೈ 2020, 11:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೋವಿಡ್‌–19 ವೈರಾಣು ನಿಯಂತ್ರಿಸಲು ಅಭಿವೃದ್ಧಿಪಡಿಸಿರುವ ದೇಶಿ ಲಸಿಕೆ ‘ಕೋವಾಕ್ಸಿನ್‌’ ಕ್ಲಿನಿಕಲ್‌ ಟ್ರಯಲ್ಸ್ ಇದೇ ಸೋಮವಾರದಿಂದ‌ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಆರಂಭವಾಗಲಿದೆ.

‘ಕೋವಾಕ್ಸಿನ್‌’ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ದೇಶದ 12 ಸ್ಥಳಗಳನ್ನು ಆಯ್ಕೆ ಮಾಡಿದೆ. ಬಿಹಾರದ ರಾಜಧಾನಿ ಪಟ್ನಾ, ರೊಹ್ಟಕ್‌ ಸೇರಿದಂತೆ ಹಲವೆಡೆ ಈಗಾಗಲೇ ಮೊದಲ ಮತ್ತು ದ್ವಿತೀಯ ಹಂತದ ಪರೀಕ್ಷೆಗೆ ಚಾಲನೆ ದೊರೆತಿದೆ.

ಒಂದು ವೇಳೆ ಲಸಿಕೆ ಈ ಪರೀಕ್ಷೆಯಲ್ಲಿ ಯಶಸ್ವಿಯಾದರೆ ಕೋವಿಡ್‌–19 ವೈರಸ್‌ ತಡೆಗೆ ದೇಶಿ ಲಸಿಕೆ ಮಾರುಕಟ್ಟೆಗೆ ಬರಲಿದೆ. ಈ ಎಲ್ಲಸಕಾರಾತ್ಮಕ ಬೆಳವಣಿಗೆಗಳನ್ನು ಗಮನಿಸಿದರೆ ಶೀಘ್ರದಲ್ಲಿಯೇ ಸಿಹಿ ಸುದ್ದಿಯೊಂದು ದೊರೆಯುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ADVERTISEMENT

ಲಸಿಕೆ ಪ್ರಯೋಗಕ್ಕೆ ಒಪ್ಪಿಗೆ

‘ಕೋವಾಕ್ಸಿನ್‌ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಲು ಏಮ್ಸ್‌ನ ಮೌಲ್ಯ ರಕ್ಷಣಾ ಸಮಿತಿಯು ಶನಿವಾರ ಒಪ್ಪಿಗೆ ಸೂಚಿಸಿದೆ‘ ಎಂದು ಏಮ್ಸ್‌ ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕ ಡಾ. ಸಂಜಯ್‌ ರಾಯ್ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ‌ ತಿಳಿಸಿದ್ದಾರೆ.

ಟ್ರಯಲ್ಸ್‌ಗಾಗಿ ಸೋಮವಾರದಿಂದ ಆರೋಗ್ಯವಂತ ವ್ಯಕ್ತಿಗಳ ಹೆಸರು ನೋಂದಣಿ ಮತ್ತುಆರೋಗ್ಯ ತಪಾಸಣೆ ಆರಂಭವಾಗಲಿದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಇಲ್ಲದ 18ರಿಂದ 55 ವರ್ಷದ ಆರೋಗ್ಯವಂತ ವ್ಯಕ್ತಿಗಳನ್ನು ಲಸಿಕೆ ಪ್ರಯೋಗಕ್ಕೆ ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ಲಸಿಕೆ ತಯಾರಿಸಲುಡಿಸಿಜಿಐ, ಹೈದರಾಬಾದ್‌ ಮೂಲದ ಭಾರತ್ ಬಯೋಟೆಕ್‌ ಇಂಟರ್ ನ್ಯಾಷನಲ್‌ ಲಿಮಿಟೆಡ್‌ (ಬಿಬಿಐಎಲ್‌) ಮತ್ತು ದೇಶದ ಮುಂಚೂಣಿ ಫಾರ್ಮಾ ಕಂಪನಿ ಝೈಡಸ್‌ ಕ್ಯಾಡಿಲಾಗೆ ಅನುಮತಿ ನೀಡಿತ್ತು.

ಪುಣೆಯ ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆ (ಎನ್‌ಐವಿ) ಮತ್ತುಐಸಿಎಂಆರ್ ಸಹಯೋಗದಲ್ಲಿ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆಯು ಈ ದೇಶದ ಮೊದಲ ಕೋವಿಡ್‌–19‌ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ದೆಹಲಿಯ ಏಮ್ಸ್‌ ನಲ್ಲಿ‌ ಟ್ರಯಲ್ಸ್‌ಗೆ ಒಟ್ಟು 375 ಜನರನ್ನು ಆಯ್ಕೆ ಮಾಡಲಿದೆ. ಆ ಪೈಕಿ ನೂರು ಜನರನ್ನು ಏಮ್ಸ್‌ ಟಯಲ್ಸ್‌ಗೆ ಆಯ್ಕೆ ಮಾಡಲಾಗುವುದು. ಇನ್ನುಳಿದವರನ್ನು ಬೇರೆ ರಾಜ್ಯಗಳಲ್ಲಿ ನಡೆಯಲಿರುವ‌‌ ಟ್ರಯಲ್ಸ್‌ಗಳಿಗೆ ಕಳಿಸಲಾಗುವುದು.‌

ಎರಡು ದೇಶಿ ಲಸಿಕೆ ಸಿದ್ಧ

ಸದ್ಯ ದೇಶೀಯವಾಗಿಎರಡು ಕೊರೊನಾ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇಲಿ ಮತ್ತು ಮೊಲಗಳ ಮೇಲೆ ಅವನ್ನು ಪ್ರಯೋಗಿಸಲಾಗಿದ್ದು, ಫಲಿತಾಂಶಗಳು ಯಶಸ್ವಿಯಾಗಿವೆ. ಈ ಪರೀಕ್ಷೆಯ ಫಲಿತಾಂಶಗಳನ್ನು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶಕರ (ಡಿಸಿಜಿಐ) ಒಪ್ಪಿಗೆ ಪಡೆಯಲು ಸಲ್ಲಿಸಲಾಗಿತ್ತು.

ಎರಡೂ ಲಸಿಕೆಗಳನ್ನು ಮಾನವರ ಮೇಲೆ ಪ್ರಯೋಗಿಸಲು ಡಿಸಿಜಿಐ ಶನಿವಾರ ಒಪ್ಪಿಗೆ ನೀಡಿದೆ ಎಂದು ಐಸಿಎಂಆರ್ ಪ್ರಧಾನ ನಿರ್ದೇಶಕ ಡಾ. ಬಲರಾಂ ಭಾರ್ಗವ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮೊದಲ ಮತ್ತು ದ್ವಿತೀಯ ಹಂತದ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು Ctaiims.covid19@gmail.com ಇ–ಮೇಲ್‌ ಕಳಿಸಬಹುದು. 7428847499 ಈ ಸಂಖ್ಯೆಗೆ ವಾಟ್ಸ್‌ ಆ್ಯಪ್‌ ಅಥವಾ ದೂರವಾಣಿ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ದೆಹಲಿ ಏಮ್ಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.