ಹಣ್ಣುಗಳು
ಹಣ್ಣುಗಳು ನಮ್ಮ ಆಹಾರದ ಪ್ರಮುಖ ಭಾಗ. ಇವು ನಮ್ಮ ಪೋಷಣೆ ಮತ್ತು ಬೆಳವಣಿಗೆಗೆ ಅತ್ಯವಶ್ಯವಾಗಿ ಬೇಕಾದ ಆಹಾರದ ವಿಧ; ಸೂಕ್ಷ್ಮ ಪೋಷಕಾಂಶಗಳ ಆಕರ; ತುರ್ತಾಗಿ ನಮ್ಮ ದೇಹಕ್ಕೆ ಚೈತನ್ಯ ನೀಡಬಲ್ಲ ಶಕ್ತಿಯ ಆಕರ. ನಮ್ಮ ಆಹಾರದಲ್ಲಿ ಇಷ್ಟೆಲ್ಲಾ ಮಹತ್ವದ ಪಾತ್ರ ವಹಿಸುವ ಹಣ್ಣುಗಳು ಅಷ್ಟೇ ಬೇಗ ಹಾಳಾಗಿ ಹೋಗುವಂಥವು. ಹಾಗಾಗಿ ಹಣ್ಣುಗಳನ್ನು ದೀರ್ಘಕಾಲ ಸಂರಕ್ಷಿಡುವುದು ಅನಿವಾರ್ಯ. ಕಟಾವು ಮಾಡಿದ ನಂತರ ಒಣಗಿಸುವುದು, ಉಪ್ಪಿನಕಾಯಿ ತಯಾರಿಸುವುದು, ಫರ್ಮೆಂಟೇಶನ್ (ಹುದುಗುವಿಕೆ), ಸಕ್ಕರೆ ಪಾಕದಲ್ಲಿ ನೆನೆಸಿಡುವುದು ಮುಂತಾದ ಸಾಂಪ್ರದಾಯಿಕ ವಿಧಾನಗಳನ್ನು ನಾವು ಕೂಡ ಅನುಸರಿಸುತ್ತಿದ್ದೆವು. ಇವು ಇಂದಿಗೂ ಬಳಕೆಯಲ್ಲಿವೆಯೆನ್ನಿ. ಆದರೆ ಈ ವಿಧಾನಗಳಲ್ಲಿ ಹಣ್ಣನ್ನು ಸಂರಕ್ಷಿಸಿ ಅದರಿಂದ ಸಿಗಬೇಕಾದ ಪೋಷಣೆಯನ್ನೇನೊ ಪಡೆದುಕೊಳ್ಳಬಹುದು, ಆಯಾ ಹಣ್ಣುಗಳ ಋತುಮಾನದಿಂದಾಚೆಗೂ! ಆದರೆ ಈ ವಿಧಾನದಿಂದ ತಾಜಾ ಹಣ್ಣುಗಳು ತಿನ್ನಲು ಸಿಗದೆ ಹಣ್ಣನ್ನು ಬೇರೆ ರುಚಿಯಲ್ಲಿ ಸವಿಯಬಹುದಷ್ಟೆ. ವಿಜ್ಞಾನದಲ್ಲಿ ನಾವು ಮುಂದುವರೆದಂತೆ, ಹಣ್ಣುಗಳನ್ನು ಯಥಾವತ್ತಾಗಿ ಶೈತ್ಯಾಗಾರಗಳಲ್ಲಿ ಸಂಗ್ರಹಿಸುವುದು (ಡೀಪ್ ಫ್ರೀಜಿಂಗ್), ಹಣ್ಣಿನ ರಸಗಳನ್ನು ತೆಗೆದು ಬಾಟಲಿಗಳಲ್ಲಿ ಸಂಗ್ರಹಿಸುವುದು (ಕ್ಯಾನಿಂಗ್), ಒಣಗಿಸಬಹುದಾದ ಹಣ್ಣುಗಳಾದರೆ ಒಣಗಿಸುವುದು, ಫರ್ಮೆಂಟೇಷನ್ ಮತ್ತು ಸಕ್ಕರೆ ಪಾಕದಲ್ಲಿ ಸಂಗ್ರಹಿಸುವುದು, ಹೈಡ್ರೋಫೋಬಿಕ್ ಸರ್ಫೇಸ್ ಟ್ರೀಟ್ಮೆಂಟ್ (ತೇವಾಂಶವನ್ನು ಹೀರಿಕೊಳ್ಳದ ಸಿಲೇನುಗಳು, ಫ್ಲೂರೋಕಾರ್ಬನ್ನುಗಳಂತಹ ರಾಸಾಯನಿಕಗಳನ್ನು ಹಣ್ಣುಗಳ ಹೊರಪದರಕ್ಕೆ ಲೇಪಿಸುವುದು), ತುಸು ಜಟಿಲವಾದ ಹೊರಪದರವಿರುವ ಹಣ್ಣುಗಳಿಗೆ ನೈಸರ್ಗಿಕ ಪಾಲಿಮರುಗಳಾದ ಕೈಟೋಸಾನು, ಶರ್ಕರಗಳ ಪದರವನ್ನು ಲೇಪಿಸುವುದು – ಹೀಗೆ ಹಲವಾರು ವಿಧಾನಗಳಿಂದ ಹಣ್ಣನ್ನು ಹಾಳಾಗದಂತೆ ಶೇಖರಿಸುವ ಅವಧಿಯನ್ನು ವಿಸ್ತರಿಸುವುದನ್ನು ಆರಂಭಿಸಿದೆವು.
ಇನ್ನು, ಹೆಚ್ಚಿನ ಪ್ರಮಾಣದಲ್ಲಿ ಬೆಳೆದ, ವೇಗವಾಗಿ ಹಾಳಾಗಿಹೋಗುವಂತಹ ಹಣ್ಣುಗಳೆಲ್ಲವನ್ನು ದೀರ್ಘಕಾಲದವರೆಗೆ ತಾಜಾ ರೂಪದಲ್ಲಿ ಬಳಸಬೇಕಾದರೆ ಮತ್ತು ಆರ್ಥಿಕವಾಗಿಯೂ ನಷ್ಟವಾಗದಂತೆ ಖಾತರಿವಹಿಸಲು ಇನ್ನೂ ಆಧುನಿಕವಾದ ಸಂರಕ್ಷಣಾ ವಿಧಾನ ಅನಿವಾರ್ಯವಾಗಿತ್ತು. ಜೆನೆಟಿಕ್ ಮಾಡಿಫಿಕೇಶನ್, ಶೈತ್ಯಾಗಾರಗಳಲ್ಲಿ ಶೇಖರಿಸುವ ಮತ್ತು ಫಾರ್ಮಾಲ್ಡಿಹೈಡ್, ಕಾಫರ್ ಸಲ್ಫೇಟ್, ಪೊಟ್ಯಾಶಿಯಂ ಸಾರ್ಬೇಟ್ ಇತ್ಯಾದಿಗಳಂತಹ ರಾಸಾಯನಿಕಗಳನ್ನು ಬಳಸಿ ಸಂರಕ್ಷಿಸುವ ವಿಧಾನಗಳನ್ನು ಕೂಡ ಅನ್ವೇಷಿಸಲಾದರೂ ಇವು ಆರ್ಥಿಕವಾಗಿಯೂ ದುಬಾರಿ ಮತ್ತು ಇಂಗಾಲ ಹೊರಸೂಸುವಿಕೆಯಿಂದಾಗಿ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತವೆ. ಹಾಗಾಗಿ ಈ ಎಲ್ಲ ಅಡ್ಡಪರಿಣಾಮಗಳನ್ನು ನಿವಾರಿಸುತ್ತ ನಾವು ಬೆಳೆದ ಹಣ್ಣುಗಳನ್ನು ಪರಿಣಾಮಕಾರಿಯಾಗಿ ಸಂರಕ್ಷಿಸುವ ವಿಶೇಷ, ಸುಲಭ ಹಾಗೂ ಪರಿಸರಸ್ನೇಹಿ ಪರಿಹಾರವೊಂದನ್ನು ಚೀನಿವಿಜ್ಞಾನಿಗಳು ಪತ್ತೆ ಮಾಡಿದ್ದಾರಂತೆ. ಅದುವೇ ಕಂಪ್ಯೂಟರ್ ಸಹಾಯದಿಂದ ‘ಮಾಲಿಕ್ಯುಲಾರ್ ಸಿಮ್ಯಲೇಷನ್ ’ ತಂತ್ರವನ್ನು ಬಳಸಿಕೊಂಡು ಪ್ರೋಟೀನು ಸಂಯೋಜನೆಯೊಂದನ್ನು ಸಿದ್ದಪಡಿಸಿ ಹಣ್ಣಿನ ಮೇಲ್ಭಾಗಕ್ಕೆ ಲೇಪನ ಮಾಡುವುದು! ಈ ಸುದ್ದಿಯನ್ನು ಮೊನ್ನೆ ನೇಚರ್ ಪತ್ರಿಕೆಯಲ್ಲಿ ಚೀನಾದ ಶಾಂಕ್ಸಿ ನಾರ್ಮಲ್ ಯೂನಿವರ್ಸಿಟಿಯ ವಿಜ್ಞಾನಿಗಳು ವರದಿ ಮಾಡಿದ್ದಾರೆ.
‘ಲೈಸೋಜೈಮು’ ಎನ್ನುವ ಕಿಣ್ವಗಳಲ್ಲಿರುವ ಡೈ ಸಲ್ಫೈಡ್ ಬಂಧಗಳನ್ನು ಇಳಿಸಿ ಹಾಗೂ ಆಲ್ಫಾ ಸುರುಳಿ ಆಕಾರವನ್ನು ರೂಪಾಂತರಿಸಿ, ಸೋಡಿಯಂ ಆಲ್ಜಿನೇಟ್ ಮತ್ತು ಸೆಲ್ಯುಲೋಸಿನ ಸೂಕ್ಷ್ಮಕಣಗಳೊಂದಿಗೆ ಹೊಂದಿಸಿ ಸಿದ್ದಪಡಿಸಿರುವ ಪ್ರೊಟೀನ್ ಇದು. ಸೋಡಿಯಂ ಆಲ್ಜಿನೇಟ್ ನೀರಿನಲ್ಲಿ ಕರಗುವ ಒಂದು ನೈಸರ್ಗಿಕ ಪಾಲಿಸ್ಯಾಕರೈಡ್ ಆಗಿದ್ದು ಎಮಲ್ಸಿಕಾರಕವಾಗಿ ಬಳಸಬಹುದಾಗಿದೆ. ಸೆಲ್ಯುಲೋಸು ಒಂದು ನೈಸರ್ಗಿಕ ಪಾಲಿಮರ್. ಈ ಮೂರು ಪದಾರ್ಥಗಳನ್ನು ಬಳಸಿ ತಯಾರಿಸಿದ ಈ ಪ್ರೋಟೀನು ಹಣ್ಣಿನ ಹೊರಪದರೊಂದಿಗೆ ಬೆರೆತುಕೊಂಡು ಹಣ್ಣಿನಲ್ಲಿರುವ ನೀರಿನಾಂಶವನ್ನು ಹೊರಬಿಡದೆ, ಸೂಕ್ಷ್ಮಾಣುಜೀವಿಗಳನ್ನು ಬೆಳೆಯಗೊಡದಂತೆ ಹಣ್ಣನ್ನು ರಕ್ಷಿಸುತ್ತದೆ. ಈ ಪ್ರೋಟೀನು ನೀರನ್ನು ಇಷ್ಟಪಡದ ಸ್ವಭಾವದಾದ್ದರಿಂದ ಹೊರಗಿನಿಂದ ಹಣ್ಣಿನ ಮೇಲೆ ನೀರು ಬಿದ್ದರೂ ಅದನ್ನು ಹೀರಿಕೊಳ್ಳುವುದಿಲ್ಲ. ಲೇಪಿಸಲೂ ಸುಲಭ. ತನ್ಮೂಲಕ ಹಣ್ಣನ್ನು ಕೆಡದಂತೆ ಸಂಪೂರ್ಣವಾಗಿ ರಕ್ಷಿಸಿಡುತ್ತದೆ.
ಕಟಾವು ಮಾಡಿತಂದ ಹಣ್ಣುಗಳು ಗಾಳಿಗೆ ತೆರೆದಿಟ್ಟಾಗ ವೇಗವಾಗಿ ಆಕ್ಸಿಡೀಕರಣಕ್ಕೊಳಗಾಗುತ್ತವೆ. ಆಗ ಪೋಷಕಾಂಶಗಳೂ ನಷ್ಟವಾಗಿ, ಸೂಕ್ಷ್ಮಾಣುಜೀವಿಗಳೂ ಹಣ್ಣಿನ ಒಳಪ್ರವೇಶಿಸಲು ಅನುಕೂಲ ವಾತಾವರಣ ಸೃಷಿಯಾಗುತ್ತದೆ. ಆದರೆ ವಿಜ್ಞಾನಿಗಳು ರೂಪಿಸಿರುವ ಪ್ರೊಟೀನ್ ಸಂಯೋಜನೆಯು ಇವೆಲ್ಲವನ್ನೂ ನಿವಾರಿಸುವ ಅತ್ಯುತ್ತಮ ಗುಣವುಳ್ಳವಾಗಿವೆ ಹಾಗೂ ಇದನ್ನು, ಕತ್ತರಿಸಿದ ಹಣ್ಣಿನ ತೊಳೆಗಳನ್ನೂ ತಾಜಾವಾಗಿರಿಸಲು ಬಳಸಬಹುದಾದ್ದರಿಂದ ಜಾಗತಿಕವಾಗಿ ಎದುರಿಸುತ್ತಿರುವ ಆಹಾರ ತ್ಯಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಇದೂ ಒಂದು ಉತ್ತಮ ಮತ್ತು ಸುಸ್ಥಿರ ಪರಿಹಾರವಾಗಿ ಹೊರಹೊಮ್ಮಲಿದೆ ಎನ್ನುವುದು ವಿಜ್ಞಾನಿಗಳ ಆಶಯ.
ಈ ಪ್ರೋಟೀನು ಹಣ್ಣುಗಳ ಅವಧಿಯನ್ನು ಸುಮಾರು ಎರಡರಿಂದ ಐದು ಪಟ್ಟು ವಿಸ್ತರಿಸುವುದಲ್ಲದೆ, ಸುಮಾರು ಹದಿನೇಳು ರೀತಿಯ ಹಣ್ಣುಗಳನ್ನು ಸಂರಕ್ಷಿಸಲು ಈ ತಂತ್ರವನ್ನು ಬಳಸಬಹುದಾಗಿದೆಯಂತೆ. ಹಣ್ಣುಗಳಲ್ಲಿ ಕೆಲವು ಕಟಾವು ಮಾಡಿದ ನಂತರವೂ ಮಾಗಲು ಬೇಕಾದ ಹಾರ್ಮೋನ್, ಇಥಿಲೀನ್ ಉತ್ಪಾದನೆಯಾಗುವುದರಿಂದ ಮಾಗುವುದು ಮುಂದುವರೆಯುತ್ತದೆ. ಉದಾಹರಣೆಗೆ, ಬಾಳೆಹಣ್ಣು, ಮಾವು, ಟೊಮ್ಯಾಟೋ ಇತ್ಯಾದಿ. ಕೆಲವು ಹಣ್ಣುಗಳಲ್ಲಿ ಕಟಾವು ಮಾಡಿದ ನಂತರ ಇಥಿಲೀನ್ ಉತ್ಪಾದನೆಯಾಗದಿರುವುದರಿಂದ ಮರದಲ್ಲಿಯೇ ಪೂರ್ತಿ ಹಣ್ಣಾದ ನಂತರವಷ್ಟೇ ಕಟಾವು ಮಾಡಬೇಕಿರುತ್ತದೆ. ಉದಾಹರಣೆಗೆ ಸ್ಟ್ರಾಬೆರಿ, ಕಿತ್ತಳೆ, ದ್ರಾಕ್ಷಿ ಮುಂತಾದವು. ಆದರೆ ಈ ಪ್ರೊಟೀನನ್ನು ಇಂತಹ ಎರಡೂ ರೀತಿಯ ಹಣ್ಣುಗಳಲ್ಲಿ ಬಳಸಿ ಸಂರಕ್ಷಿಸಬಹುದು ಎನ್ನುವುದು ಮತ್ತೊಂದು ಪ್ರಯೋಜನ.
ಅಲ್ಲದೇ, ಸಂರಕ್ಷಿಸಿದಷ್ಟೂ ದಿನಗಳವರೆಗೆ ಪೋಷಕಾಂಶಗಳ ಪ್ರಮಾಣ ಸುಮಾರು ಪ್ರತಿಶತ 60-98ರಷ್ಟು ಉಳಿದಿತ್ತಂತೆ. ಅರ್ಥಾತ್, ಅವಧಿ ವಿಸ್ತರಣೆಯಾದಷ್ಟೂ ಹಲವು ದಿನಗಳವರೆಗೆ ಪೋಷಕಾಂಶಗಳೂ ಸುಸ್ಥಿರವಾಗಿರುತ್ತವೆ. ಹಣ್ಣಿನೊಳಗಿನ ನೀರಿನಾಂಶವನ್ನೂ ನಷ್ಟವಾಗದಂತೆ ಕಾಪಾಡುವುದರಿಂದ ಹಣ್ಣಿನ ತೂಕದಲ್ಲಿಯೂ ಇಳಿಕೆಯಾಗುವುದಿಲ್ಲ. ಇತರೆ ಆಹಾರ ಸಂಸ್ಕರಣಾ ವಿಧಾನಗಳಲ್ಲಿ ಪೋಷಕಾಂಶಗಳು ನಷ್ವವಾಗುವ ಸಾಧ್ಯತೆ ಇದ್ದು, ಇಲ್ಲಿ ಹಣ್ಣುಗಳು ತಾಜಾರೂಪದಲ್ಲಿ ಸಿಗುವುದಲ್ಲದೆ, ಪೋಷಕಾಂಶಗಳನ್ನೂ ಪೂರ್ಣಪ್ರಮಾಣದಲ್ಲಿ ಉಳಿಸಿಕೊಡುತ್ತದೆ. ಹಣ್ಣುಗಳನ್ನು ಸಂರಕ್ಷಿಸುವ ಇತರೆ ವಿಧಾನಗಳಿಗೆ ಹೋಲಿಸಿದರೆ ಇಂಗಾಲ ಹೊರಸೂಸುವಿಕೆಯಲ್ಲಿಯೂ ಸುಮಾರು ಪ್ರತಿಶತ 90ರಷ್ಟು ಇಳಿಕೆಯಾಗುತ್ತದಂತೆ. ಜೊತೆಗೆ ಹೀಗೆ ಲೇಪಿಸುವ ಪ್ರೋಟೀನ್‌ನ ಪದರವು ತಿನ್ನಬಲ್ಲದಾದ್ದರಿಂದ ಅಕಸ್ಮಾತಾಗಿ ಹೊಟ್ಟೆ ಸೇರಿದರೂ ತೊಂದರೆಯಿಲ್ಲ. ಹಣ್ಣುಗಳನ್ನು ಕತ್ತರಿಸುವ ಮುಂಚೆ ಹೊರಪದರವನ್ನು ತೊಳೆಯುವಾಗ ಈ ಪ್ರೊಟೀನ್‌ನ ಲೇಪನವನ್ನು ತೊಳೆದು ಸ್ವಚ್ಛಗೊಳಿಸುವುದೂ ಸುಲಭವಂತೆ. ಸಾಂಪ್ರದಾಯಿಕ ವಿಧಾನಗಳು ಕೆಲವೇ ಹಣ್ಣುಗಳನ್ನು ಮಾತ್ರವೇ ಸಂರಕ್ಷಿಸಲು ಬಳಕೆಯಾದರೆ, ಈ ಪ್ರೊಟೀನ್ ವಿಧಾನವು ವೈವಿಧ್ಯಮಯ ಹಣ್ಣುಗಳನ್ನು ಸಂರಕ್ಷಿಸಲು ಬಳಕೆಯಾಗಬಲ್ಲ, ಆರ್ಥಿಕವಾಗಿಯೂ ಅಗ್ಗವಾಗಿರುವ, ಸುರಕ್ಷಿತ ಹಾಗೂ ಪರಿಸರಸ್ನೇಹಿ ಉಪಾಯ ಎನ್ನುತ್ತಾರೆ, ವಿಜ್ಞಾನಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.