ADVERTISEMENT

ಸೌರ ಮಂಡಲದಾಚೆಯ ಮೂರು ಗ್ರಹ ಪತ್ತೆ ಮಾಡಿದ್ದ ಕೆಪ್ಲರ್ ದೂರದರ್ಶಕ

​ಪ್ರಜಾವಾಣಿ ವಾರ್ತೆ
Published 31 ಮೇ 2023, 16:12 IST
Last Updated 31 ಮೇ 2023, 16:12 IST
   

ನವದೆಹಲಿ: ಸೌರಮಂಡಲದಾಚೆ ಪರಿಭ್ರಮಿಸುತ್ತಿರುವ ಮೂರು ಗ್ರಹಗಳ ಗುಂಪೊಂದನ್ನು ಖಭೌತ ವಿಜ್ಞಾನಿಗಳ ತಂಡವೊಂದು ಗುರುತಿಸಿದೆ. ಈ ಗ್ರಹಗಳು, ನಾಸಾದ ಕೆಪ್ಲರ್‌ ಬಾಹ್ಯಾಕಾಶ ದೂರದರ್ಶಕವು ಕೊನೆಯದಾಗಿ ಪತ್ತೆ ಮಾಡಿರುವ ಆಕಾಶಕಾಯಗಳಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಗ್ರಹಗಳು ಗಾತ್ರದಲ್ಲಿ ಭೂಮಿ ಹಾಗೂ ನೆಪ್ಚೂನ್‌ನಷ್ಟಿದ್ದು, ಸಂಬಂಧಪಟ್ಟ ನಕ್ಷತ್ರಗಳ ಸಮೀಪದ ಕಕ್ಷೆಗಳಲ್ಲಿ ಸುತ್ತುತ್ತಿವೆ. ಈ ಗ್ರಹಗಳಿಗೆ ‘ಕೆ2–416 ಬಿ’, ‘ಕೆ2–417 ಬಿ’ ಹಾಗೂ ‘ಎಪಿಕ್ 246251988 ಬಿ’ ಎಂದು ಹೆಸರಿಡಲಾಗಿದೆ.

‘ಕೆಪ್ಲರ್‌ ದೂರದರ್ಶಕವು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಕ್ಕೂ ಕೆಲ ದಿನಗಳ ಮೊದಲು ಈ ಗ್ರಹಗಳನ್ನು ಪತ್ತೆ ಮಾಡಿದೆ. ಹೀಗಾಗಿ ಇದೊಂದು ರೋಮಾಂಚಕ ವಿದ್ಯಮಾನ. ತನ್ನ ಕೊನೆಯ ದಿನಗಳಲ್ಲಿ ಕೂಡ ಕೆಪ್ಲರ್‌ ದೂರದರ್ಶಕವು ಸೌರ ಮಂಡಲದಾಚೆ ಇರಬಹುದಾದ ಗ್ರಹಗಳನ್ನು ಪತ್ತೆ ಮಾಡುವ ಕಾರ್ಯವನ್ನು ಅದ್ಭುತವಾಗಿ ಮಾಡಿತ್ತು ಎಂಬುದನ್ನು ಇದು ತೋರಿಸುತ್ತದೆ’ ಎಂದು ಅಮೆರಿಕದ ವಿಸ್ಕನ್‌ಸಿನ್– ಮ್ಯಾಡಿಸನ್ ವಿಶ್ವವಿದ್ಯಾಲಯದಲ್ಲಿ ಖಭೌತವಿಜ್ಞಾನಿಯಾಗಿರುವ ಎಲೀಸ್ ಇಂಚಾ ಹೇಳಿದ್ದಾರೆ.

ADVERTISEMENT

ಇಂಚಾ ನೇತೃತ್ವದಲ್ಲಿ ನಡೆದ ಅಧ್ಯಯನ ವರದಿಯು ‘ಮಂಥ್ಲಿ ನೋಟಿಸಸ್‌ ಆಫ್‌ ದಿ ರಾಯಲ್ ಅಸ್ಟ್ರಾನಾಮಿಕಲ್‌ ಸೊಸೈಟಿ’ ಎಂಬ ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.