ADVERTISEMENT

ರೈಲು ಹಳಿಗಳೇ ಸೌರ ವಿದ್ಯುತ್‌ ಸ್ಥಾವರ!

ಸೂರ್ಯನಾರಾಯಣ ವಿ.
Published 9 ಸೆಪ್ಟೆಂಬರ್ 2025, 23:40 IST
Last Updated 9 ಸೆಪ್ಟೆಂಬರ್ 2025, 23:40 IST
<div class="paragraphs"><p>ವಾರಾಣಸಿಯ ಬನಾರಸ್‌ ಲೋಕೋಮೋಟಿವ್‌ ವರ್ಕ್ಸ್‌ ಆವರಣದಲ್ಲಿ ಸೌರ ಫಲಕ ಅಳವಡಿಸಿರುವ ಹಳಿಯ ಮೇಲೆ ರೈಲ್ವೆ ಎಂಜಿನ್‌ ಸಂಚರಿಸಿದ ಕ್ಷಣ&nbsp; &nbsp; &nbsp; </p></div>

ವಾರಾಣಸಿಯ ಬನಾರಸ್‌ ಲೋಕೋಮೋಟಿವ್‌ ವರ್ಕ್ಸ್‌ ಆವರಣದಲ್ಲಿ ಸೌರ ಫಲಕ ಅಳವಡಿಸಿರುವ ಹಳಿಯ ಮೇಲೆ ರೈಲ್ವೆ ಎಂಜಿನ್‌ ಸಂಚರಿಸಿದ ಕ್ಷಣ     

   

ಚಿತ್ರ: ರೈಲ್ವೆ ಸಚಿವಾಲಯದ ‘ಎಕ್ಸ್‌’ ಖಾತೆ

ಈ ವರ್ಷದ ಜೂನ್‌ ಅಂತ್ಯದಲ್ಲಿ ಭಾರತೀಯ ರೈಲ್ವೆಗೆ ಸಂಬಂಧಿಸಿದ ಒಂದು ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ‘ಭಾರತವು ರೈಲ್ವೆ ಹಳಿಗಳನ್ನು ವಿದ್ಯುತ್‌ ಸ್ಥಾವರನ್ನಾಗಿ ಪರಿವರ್ತಿಸುತ್ತಿದೆ’ ಎಂದು ಆ ಪೋಸ್ಟ್‌ ಹೇಳಿತ್ತು. ಸುಸ್ಥಿರ ಮೂಲಸೌಕರ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವಂತಹ ಬೆಳವಣಿಗೆ ಇದಾಗಿದ್ದು, ‘ಸನ್‌ ವೇಸ್‌’ (Sun Ways) ಎಂಬ ಭಾರತದ ಸ್ಟಾರ್ಟ್‌ಅಪ್‌ ಕಂಪನಿಯು ರೈಲು ಹಳಿಗಳ ಮಧ್ಯೆ ಸೌರಫಲಕಗಳನ್ನು ಅಳವಡಿಸಿ ಸೌರ ವಿದ್ಯುತ್‌ ಉತ್ಪಾದಿಸಲು ಹೊರಟಿದೆ ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿತ್ತು. ದೇಶದ ಪ್ರಮುಖ ಸುದ್ದಿ ಸಂಸ್ಥೆ ಪಿಟಿಐ, ಜುಲೈ 7ರಂದು ಈ ಪೋಸ್ಟ್‌ ಬಗ್ಗೆ ಫ್ಯಾಕ್ಟ್‌ಚೆಕ್‌ ಮಾಡಿತ್ತು. ‘ಭಾರತೀಯ ರೈಲ್ವೆಯು ಹಳಿಗಳ ನಡುವೆ ಸೌರಫಲಕಗಳನ್ನು ಅಳವಡಿಸುವ ಯೋಜನೆ ಕೈಗೆತ್ತಿಕೊಂಡಿಲ್ಲ; ಪೋಸ್ಟ್‌ನಲ್ಲಿರುವ ಚಿತ್ರ ಸ್ವಿಟ್ಜರ್ಲೆಂಡ್‌ಗೆ ಸಂಬಂಧಿಸಿದ್ದಾಗಿದ್ದು, ಸನ್‌ ವೇ ಕಂಪನಿ ಭಾರತದಲ್ಲ,  ಸ್ವಿಟ್ಜರ್ಲೆಂಡ್‌ನದ್ದು. ಅಲ್ಲಿ ಅದು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಂಡಿದೆ’ ಎಂದು ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿತ್ತು.   

ADVERTISEMENT

ಇದಾಗಿ, ಒಂದೂವರೆ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪೋಸ್ಟ್‌ ನಿಜವಾಗಿರುವ ಸುದ್ದಿ ಉತ್ತರ ಪ್ರದೇಶದಿಂದ ಬಂದಿದೆ. ವಾರಾಣಸಿಯಲ್ಲಿರುವ ಭಾರತೀಯ ರೈಲ್ವೆಯ ಬನಾರಸ್‌ ಲೋಕೋಮೋಟಿವ್‌ ವರ್ಕ್ಸ್‌ (ಬಿಎಲ್‌ಡಬ್ಲ್ಯು) ಘಟಕವು ಸದ್ದಿಲ್ಲದೇ ಹಳಿಗಳ ನಡುವೆ ಸೌರಫಲಕಗಳನ್ನು ಯಶಸ್ವಿಯಾಗಿ ಅಳವಡಿಸಿ ಸೂರ್ಯನ ಶಾಖದಿಂದ ವಿದ್ಯುತ್‌ ಉತ್ಪಾದಿಸುವ ಪ್ರಾಯೋಗಿಕ ಯೋಜನೆಯನ್ನು ಆರಂಭಿಸಿದೆ. ಸ್ವಾತಂತ್ರ್ಯೋತ್ಸವದ ದಿನದಂದು ಈ ಯೋಜನೆಗೆ ಚಾಲನೆ ನೀಡಲಾಗಿದೆ.

2030ರ ವೇಳೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ರೈಲ್ವೆ ಹೊಂದಿದ್ದು, ಆ ದಿಸೆಯಲ್ಲಿ ಈ ಪ್ರಾಯೋಗಿಕ ಯೋಜನೆ ಮಹತ್ವದ ಮೈಲಿಗಲ್ಲು ಎಂದು ರೈಲ್ವೆಯ ಅಧಿಕಾರಿಗಳು ಹೇಳಿದ್ದಾರೆ. ರೈಲ್ವೆ ಮಾತ್ರವಲ್ಲ, 2070ರ ವೇಳೆಗೆ ಶೂನ್ಯ ಇಂಗಾಲ ಉಗುಳುವಿಕೆಯ ರಾಷ್ಟ್ರವಾಗುವ ಗುರಿಯನ್ನು ಭಾರತ ಇಟ್ಟುಕೊಂಡಿದೆ. ಅದನ್ನು ಸಾಧಿಸುವ ನಿಟ್ಟಿನಲ್ಲೂ ಈ ಯೋಜನೆ ಮಹತ್ವದ್ದು. ಸ್ವಿಟ್ಜರ್ಲೆಂಡ್‌ ಬಿಟ್ಟು ಬೇರೆ ದೇಶಗಳಲ್ಲಿ ಇಂತಹ ಪ್ರಯತ್ನ ನಡೆದಂತೆ ಕಾಣುತ್ತಿಲ್ಲ. ಭಾರತದಲ್ಲಂತೂ ಇದು ಮೊದಲ ಪ್ರಯತ್ನ. 

ಬನಾರಸ್‌ನ ಲೋಕೋಮೋಟಿವ್ ವರ್ಕ್ಸ್‌ನ ಎಂಜಿನಿಯರ್‌ಗಳು ಈ ಯೋಜನೆಯ ರೂವಾರಿಗಳು. ಬಿಎಲ್‌ಡಬ್ಲ್ಯು ವರ್ಕ್ಸ್‌ಶಾಪ್‌ನ ಲೈನ್‌–19ರಲ್ಲಿ 70 ಮೀಟರ್‌ನಷ್ಟು ದೂರಕ್ಕೆ 28 ಸೌರಫಲಕಗಳನ್ನು ಅಳವಡಿಸಲಾಗಿದ್ದು, ಇದು 15 ಕಿಲೋ ವಾಟ್‌ನಷ್ಟು ಸೌರ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಒಂದು ಕಿ.ಮೀ ಉದ್ದಕ್ಕೆ ಫಲಕ ಅಳವಡಿಸಿದರೆ 220 ಕಿಲೋ ವ್ಯಾಟ್‌ನಷ್ಟು ಸೌರವಿದ್ಯುತ್‌ ಉತ್ಪಾದಿಸಬಹುದು. ಪ್ರತಿ ಕಿ.ಮೀನಲ್ಲಿ ಒಂದು ದಿನಕ್ಕೆ 880 ಯುನಿಟ್‌ಗಳಂತೆ ಒಂದು ವರ್ಷದಲ್ಲಿ 3.20 ಲಕ್ಷ ಯುನಿಟ್‌ಗಳಷ್ಟು ವಿದ್ಯುತ್‌ ಉತ್ಪಾದಿಸಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ. 

ದೇಶದಲ್ಲಿ ರೈಲ್ವೆಯ ಜಾಲ 1.2 ಲಕ್ಷ ಕಿ.ಮೀನಷ್ಟು ಉದ್ದವಿದೆ. ಈ ತಂತ್ರಜ್ಞಾನವನ್ನು ರೈಲ್ವೆ ಯಾರ್ಡ್‌ಗಳಲ್ಲಿರುವ ಸಮಾನಾಂತರ ಹಳಿಗಳಲ್ಲಿ ಬಳಸಬಹುದು. ಇದರಲ್ಲಿ ಸೌರಫಲಕಗಳ ಅಳವಡಿಕೆಗೆ ಹಳಿಗಳ ನಡುವಿನ ಖಾಲಿ ಜಾಗವನ್ನು ಬಳಸುವುದರಿಂದ ಯೋಜನೆಗಾಗಿ ಭೂಮಿಯನ್ನು ಸ್ವಾಧೀನ ಮಾಡುವ ಅಗತ್ಯವಿಲ್ಲ ಎಂಬುದು ಅಧಿಕಾರಿಗಳ ವಾದ. 

ಫಲಕ ತೆರವುಗೊಳಿಸುವ ತಂತ್ರಜ್ಞಾನ

ಆಗಸ್ಟ್‌ 15ರಂದು ನಡೆಸಿದ ಪರೀಕ್ಷಾರ್ಥ ಪ್ರಯೋಗದಲ್ಲಿ ಸೌರಫಲಕಗಳನ್ನು ಅಳವಡಿಸಿದ 78 ಮೀಟರ್‌ ಉದ್ದದ ಹಳಿಯ ಮೇಲೆ ರೈಲ್ವೆ ಎಂಜಿನ್‌ ಅನ್ನು ಓಡಿಸಲಾಗಿತ್ತು. ಫಲಕ ಅಳವಡಿಕೆ ನಂತರ ಎದುರಾಗಬಹುದಾದ ಸವಾಲುಗಳನ್ನು ಪರಿಗಣಿಸಿಯೇ ಇದರ ವಿನ್ಯಾಸ ರೂಪಿಸಲಾಗಿದೆ. ದೇಶೀಯವಾಗಿ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ. ರೈಲು ಸಂಚರಿಸುವಾಗ ರೈಲು ಹಳಿಗಳು ಅದುರುವುದರಿಂದ, ಇದರ ಪ್ರಭಾವವನ್ನು ಕಡಿಮೆ ಮಾಡುವುದಕ್ಕಾಗಿ ಫಲಕಗಳಿಗೆ ರಬ್ಬರ್‌ ಚೌಕಟ್ಟುಗಳನ್ನು ಹೊಂದಿರುವ ಪ್ಯಾಡ್‌ ಬಳಸಲಾಗಿದೆ. ಹಳಿಯ ಕೆಳಗೆ, ಜಲ್ಲಿ ಮೇಲೆ ಹಾಕಲಾಗಿರುವ ಕಾಂಕ್ರೀಟ್‌ ಪಟ್ಟಿಗೆ ಫಲಕಗಳನ್ನು ಅಂಟಿಸಲಾಗಿದೆ. ಇದಕ್ಕಾಗಿ ಇಪಾಕ್ಸಿ ಅಂಟನ್ನು ಬಳಸಲಾಗಿದೆ. ಹಳಿ ನಿರ್ವಹಣೆ, ಸ್ವಚ್ಛತೆಗಾಗಿ ಫಲಕಗಳನ್ನು ಸುಲಭವಾಗಿ ತೆರವುಗೊಳಿಸಬಹುದು ಎಂಬುದು ಅಧಿಕಾರಿಗಳ ವಿವರಣೆ.

ಶೂನ್ಯ ಇಂಗಾಲ ಗುರಿಯೆಡೆಗೆ

ಸುಸ್ಥಿರ ಅಭಿವೃದ್ಧಿ, ನವೀಕರಿಸಬಹುದಾದ ಇಂಧನ ಬಳಕೆಯ ಮೂಲಕ ನಿರ್ವಹಣಾ ವೆಚ್ಚವನ್ನು ಉಳಿತಾಯ ಮಾಡಲು ಯತ್ನಿಸುತ್ತಿರುವ ರೈಲ್ವೆಯು ಸೌರಶಕ್ತಿಯಿಂದ ವಿದ್ಯುತ್‌ ಉತ್ಪಾದಿಸಿ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ಸಾಧಿಸುವತ್ತ ದೃಷ್ಟಿ ನೆಟ್ಟಿದೆ. ಈ ವರ್ಷದ ಫೆಬ್ರುವರಿ ಅಂಕಿ–ಅಂಶಗಳ ಪ್ರಕಾರ, ರೈಲ್ವೆಯು ಈವರೆಗೆ ದೇಶದಾದ್ಯಂತ ಇರುವ 2,249 ರೈಲ್ವೆ ನಿಲ್ದಾಣಗಳು ಹಾಗೂ ಇತರ ಕಟ್ಟಡಗಳಲ್ಲಿ ಒಟ್ಟು 209 ಮೆಗಾ ವಾಟ್‌ ಸಾಮರ್ಥ್ಯದ ಸೌರ ಘಟಕಗಳನ್ನು ಅಳವಡಿಸಿದೆ. 

ಹಳಿಗಳ ನಡುವಿನ ಖಾಲಿ ಜಾಗ ಬಳಸಿ ಸೌರ ವಿದ್ಯುತ್‌ ಉತ್ಪಾದಿಸುವ ರೈಲ್ವೆಯ ಯೋಜನೆಯು 2030ರ ವೇಳೆಗೆ ಇಂಗಾಲ ಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಗುರಿ ಸಾಧನೆಯ ದಿಸೆಯಲ್ಲಿ ಮತ್ತೊಂದು ಪ್ರಯತ್ನ.

ರೈಲ್ವೆ ಹಳಿಗಳ ನಡುವಿನ ಖಾಲಿ ಜಾಗದಲ್ಲಿ ಸೌರಫಲಕ ಅಳವಡಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.