ADVERTISEMENT

ಚಂದ್ರನಲ್ಲಿ ಲ್ಯಾಂಡರ್‌ ಪತ್ತೆ: ಆರ್ಬಿಟರ್‌ ಕ್ಯಾಮೆರಾ ಸೆರೆ ಹಿಡಿದ ಚಿತ್ರ

ಹೊಸ ಆಶಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 20:15 IST
Last Updated 8 ಸೆಪ್ಟೆಂಬರ್ 2019, 20:15 IST
ಲ್ಯಾಂಡರ್‌
ಲ್ಯಾಂಡರ್‌   

ಬೆಂಗಳೂರು: ಇಸ್ರೊದ ಮಹತ್ವಾಕಾಂಕ್ಷೆಯ ‘ಚಂದ್ರಯಾನ–2’ ವ್ಯೋಮ ನೌಕೆಯ ಭಾಗವಾಗಿರುವ ‘ವಿಕ್ರಂ’ ಲ್ಯಾಂಡರ್‌ ಅನ್ನು ಚಂದ್ರನ ಸುತ್ತ ಸುತ್ತುತ್ತಿರುವ ಆರ್ಬಿಟರ್‌ನ ಕ್ಯಾಮೆರಾ ಪತ್ತೆಹಚ್ಚಿದ್ದು, 14 ದಿನದೊಳಗೆ ಸಂಪರ್ಕಕ್ಕೆ ಸಿಗಬಹುದೇ ಎಂಬ ಹೊಸ ಆಸೆಯೊಂದು ಚಿಗುರಿದೆ.

‘ಸದ್ಯಕ್ಕೆ ಚಂದ್ರನ ಅಂಗಳದಲ್ಲಿರುವ ಲ್ಯಾಂಡರ್‌ನ ಚಿತ್ರವನ್ನು ಮಾತ್ರ ಆರ್ಬಿಟರ್ ಸೆರೆ ಹಿಡಿದಿದೆ. ಲ್ಯಾಂಡರ್‌ ಇನ್ನೂ ಇಸ್ರೊದ ಸಂಪರ್ಕಕ್ಕೆ ಬಂದಿಲ್ಲ. ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸಲು ನಿರಂತರ ಪ್ರಯತ್ನ ಸಾಗಿದೆ’ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ತಿಳಿಸಿದ್ದಾರೆ.

ಆರ್ಬಿಟರ್‌ನಲ್ಲಿರುವ ಕ್ಯಾಮೆರಾದ ಗುಣಮಟ್ಟ ಇದುವರೆಗೆ ರವಾನಿಸಲಾದ ಯಾವುದೇ ಚಂದ್ರಯಾನ ವ್ಯೋಮನೌಕೆಗಳ ಪೈಕಿ ಅತ್ಯಂತ ಉತ್ಕೃಷ್ಟವಾದುದು ಎಂದು ಹೇಳಲಾಗಿದ್ದು, ಹೀಗಾಗಿಯೇ 100 ಕಿ.ಮೀ. ಎತ್ತರದಿಂದಲೇ ಚಂದ್ರನ ಅಂಗಳದ 0.3 ಮೀಟರ್‌ ಪ್ರದೇಶದಲ್ಲಿನ ಚಿತ್ರವನ್ನೂ ಗ್ರಹಿಸುವ ಸಾಮರ್ಥ್ಯ ಪಡೆದಿದೆ. ಹೀಗಾಗಿ ಅದರ ಕಣ್ಣಿಗೆ ಲ್ಯಾಂಡರ್‌ ಪತ್ತೆಯಾಗಿದೆ. ಮುಂದಿನ ದಿನಗಳಲ್ಲಿ ಇದೇ ಕ್ಯಾಮೆರಾ ವಿಜ್ಞಾನ ಲೋಕಕ್ಕೆ ಬಹಳ ದೊಡ್ಡ ಕೊಡುಗೆ ನೀಡಲಿದೆ.

ADVERTISEMENT

ಲ್ಯಾಂಡರ್‌ನಿಂದ ಮತ್ತೆ ಸಂದೇಶ ಸಿಗಬಹುದೇ ಎಂಬ ಕೋಟಿ ಪ್ರಶ್ನೆಗಳು ಎದುರಾಗಿದ್ದು, ಇಸ್ರೊ ವಿಜ್ಞಾನಿಗಳು ಅದಕ್ಕಾಗಿ ಅವಿರತ ಪ್ರಯತ್ನಿಸುತ್ತಲೇ ಇದ್ದಾರೆ. ‘ಈಗಲೂ ಅದು ಸೌರ ಫಲಕದ ಮೂಲಕ ಬ್ಯಾಟರಿಯ ರೀಚಾರ್ಜ್‌ ಮಾಡಬಹುದು.ಆದರೆ ಒಂದೊಂದು ಕ್ಷಣ ಕಳೆದಂತೆ ಆ ಅವಕಾಶ ಕಡಿಮೆಯಾಗುತ್ತಿದೆ’ ಎಂದು ಇಸ್ರೊದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆರ್ಬಿಟರ್‌ನ ಜೀವಿತಾವಧಿ 1 ವರ್ಷ ಎಂದು ಮೊದಲಿಗೆ ತಿಳಿಸಲಾಗಿತ್ತು. ಆದರೆ ಅದು ಏಳು ವರ್ಷ ಚಂದ್ರನ ಸುತ್ತ ಸುತ್ತತ್ತ ಇರಬಹುದು ಎಂದು ಇಸ್ರೊ ಅಧ್ಯಕ್ಷರು ತಿಳಿಸಿದ್ದಾರೆ. ಹೀಗಾಗಿ ಆರ್ಬಿಟರ್‌ ಇನ್ನು ಮುಂದೆ ಕೇಂದ್ರಬಿಂದುವಾಗುವ ಸಾಧ್ಯತೆ ಇದೆ.

‘ಯೋಜನೆಯೆಲ್ಲವೂ ಯಶಸ್ವಿಯಾಗಿಯೇ ನಡೆದಿತ್ತು. ಆದರೆ ಕೊನೆಯ ಹಂತದ ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಡೆಸುವುದು ಸಾಧ್ಯವಾಗಿಲ್ಲ. ಹೀಗಾಗಿಯೇ ಲ್ಯಾಂಡರ್‌ನ ಸಂಪರ್ಕ ತಪ್ಪಿ ಹೋಯಿತು’ ಎಂದು ಶಿವನ್‌ ಆವರು ಶನಿವಾರ ‘ದೂರದರ್ಶನ’ಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

ಇಸ್ರೊ ಸ್ಫೂರ್ತಿ: ಚಂದ್ರಯಾನ–2 ಯೋಜನೆಯ ಬಳಿಕ ದೇಶವನ್ನು ‘ಇಸ್ರೊ ಸ್ಫೂರ್ತಿ’ಯೇ ಆವರಿಸಿಕೊಂಡಿದ್ದು, ಯಶಸ್ಸು ಮತ್ತು ವೈಫಲ್ಯದಿಂದಾಚೆ ನೋಡುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹರಿಯಾಣದ ರೋಹ್ಟಕ್‌ನಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ರ‍್ಯಾಲಿಯಲ್ಲಿ ಹೇಳಿದರು.

ಅಪ್ಪಳಿಸಿ ಇಳಿದಿರುವ ಸಾಧ್ಯತೆ: ಶಿವನ್‌

ಚಂದ್ರದ ದಕ್ಷಿಣ ಧ್ರುವದ ಮೇಲೆ ಇಳಿಯುತ್ತಿದ್ದ ಲ್ಯಾಂಡರ್‌ನ ವೇಗವನ್ನು ನಿಗದಿತ ರೀತಿಯಲ್ಲಿ ಕಡಿತಗೊಳಿಸಲು ಅಸಾಧ್ಯವಾಗಿದ್ದರಿಂದ ಅದು ಚಂದ್ರನ ಅಂಗಳದಲ್ಲಿಅಪ್ಪಳಿಸಿದ ರೀತಿಯಲ್ಲಿ ಇಳಿದಿರುವ ಸಾಧ್ಯತೆ ಇದೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಪಿಟಿಐಗೆ ತಿಳಿಸಿದ್ದಾರೆ.

‘ಲ್ಯಾಂಡರ್‌ಗೆ ಹಾನಿಯಾಗಿರುವ ಬಗ್ಗೆ ನಮಗೆ ಏನೂ ತಿಳಿದಿಲ್ಲ, ಆದರೆ ಅದರ ಸ್ಥಿತಿಗತಿ ತಿಳಿಯುವ ಪ್ರಯತ್ನ ಮಾತ್ರ ನಿರಂತರವಾಗಿ ನಡೆಯಲಿದೆ’ ಎಂದು ಅವರು ಹೇಳಿದ್ದಾರೆ.

ಹೀಗೆ ಅಪ್ಪಳಿಸಿರುವಾಗ ಲ್ಯಾಂಡರ್‌ಗೆ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ಕೆಲವು ಬಾಹ್ಯಾಕಾಶ ತಜ್ಞರು ಅಂದಾಜಿಸಿದ್ದಾರೆ.‘ಲ್ಯಾಂಡರ್‌ ಅನ್ನು ಹಗುರವಾಗಿ, ಸುರಕ್ಷಿತವಾಗಿ ಚಂದ್ರನಲ್ಲಿ ಇಳಿಯುವಂತೆ ಮಾಡುವುದು ಸಾಧ್ಯವಾಗಲಿಲ್ಲ. ಧಾವಿಸಿ ಬಂದು ಅಪ್ಪಳಿಸಿದ ರೀತಿಯಲ್ಲಿ ಇಳಿದುದರಿಂದ ಅದು ತನ್ನ ನಾಲ್ಕು ಕಾಲುಗಳಲ್ಲಿ ನಿಲ್ಲುವುದು ಸಾಧ್ಯವಾಗಿರಲಿಕ್ಕಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.