ADVERTISEMENT

ಇಸ್ರೊ ನಂಬಿಕೆ | ರಾಕೆಟ್‌ಗಳಿಗೆ ‘ರಾಹು’ ಕಂಟಕ, ಉಡಾವಣೆಗೂ ಉಂಟು ತಿಮ್ಮಪ್ಪನ ನಂಟು

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 5:45 IST
Last Updated 23 ಜುಲೈ 2019, 5:45 IST
   

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ(ಇಸ್ರೋ) ಹಲವು ಗ್ರಹಗಳಿಗೆ ಉಪಗ್ರಹಗಳನ್ನು ಕಳುಹಿಸಿದ್ದರೂ, ವಿಜ್ಞಾನಿಗಳು ಹೊಂದಿರುವ ಧಾರ್ಮಿಕ ಭಾವನೆ ಹಾಗೂ ನಂಬಿಕೆಗಳನ್ನುಪ್ರತಿಯೊಂದು ಉಡಾವಣೆ ಸಂದರ್ಭದಲ್ಲಿಯೂ ಅನುಸರಿಸಲಾಗಿದೆ ಎಂದುಇಸ್ರೋದ ನಿವೃತ್ತ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಐಎಎನ್‌ಎಸ್‌ ವರದಿ ಮಾಡಿದೆ.

ರಾಹುಕಾಲದ ಸಂದರ್ಭದಲ್ಲಿ ಯಾವುದೇ ಉಪಗ್ರಹ ಉಡಾವಣೆಗೆ ಸಮಯ ನಿಗದಿಪಡಿಸುವುದಿಲ್ಲ. ಆಸಮಯದಲ್ಲಿ ಯಾವುದೇ ಕೆಲಸ ಪ್ರಾರಂಭಿಸುವುದು ಶುಭಕರವಲ್ಲ ಎಂದೂ ಅವರು ಉಲ್ಲೇಖಿಸಿದ್ದಾರೆ.

‘ಅನ್ಯಗ್ರಹಗಳಲ್ಲಿ ಕಾರ್ಯಾಚರಣೆ ನಡೆಸಲು ಕೈಗೊಳ್ಳುವ ಯೋಜನೆಗಳ ಯಶಸ್ಸನ್ನುಉಡಾವಣೆ ಸಮಯದೊಂದಿಗೆ ಹೋಲಿಸುವುದು ಕಾಕತಾಳಿಯವಲ್ಲ. ನೌಕೆಯು ಅನ್ಯಗ್ರಹದ ಕಕ್ಷೆಯ ನಿರೀಕ್ಷಿತ ಗುರಿಯನ್ನು ನಿಗದಿತ ಸಮಯದಲ್ಲಿ ತಲುಪಿದೆಯೇ ಎಂಬುದರ ಮೇಲೆಯೋಜನೆಯ ಯಶಸ್ಸು ನಿರ್ಧಾರವಾಗುತ್ತದೆ. ಹಾಗಾಗಿಯೇ ಶುಭ ಗಳಿಗೆಯಲ್ಲಿ ಉಡಾವಣೆಗೆ ಸಮಯ ನಿಗದಿಪಡಿಸಲಾಗುತ್ತದೆ’ ಎಂದು ವಿವರಿಸಿದ್ದಾರೆ.

ADVERTISEMENT
ತಿಮ್ಮಪ್ಪನ ಸನ್ನಿಧಿಯಲ್ಲಿ ಇಸ್ರೋ ಅಧ್ಯಕ್ಷ ಕೆ.ಶಿವನ್

ರಾಕೆಟ್‌ ಉಡಾವಣೆಗೆ ಮುನ್ನ ತಿಮ್ಮಪ್ಪನಿಗೆ ಪೂಜೆ
ಇಸ್ರೋ ಅಧಿಕಾರಿಗಳುಪ್ರತಿ ರಾಕೆಟ್‌ ಕಾರ್ಯಾಚರಣೆ ಆರಂಭಕ್ಕೂ ಮುನ್ನ ಆಂಧ್ರಪ್ರದೇಶದ ತಿರುಪತಿ ತಿರುಮಲದಲ್ಲಿರುವ ವೆಂಕಟೇಶ್ವರ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ರಾಕೆಟ್‌ ಪ್ರತಿಕೃತಿಯನ್ನು ದೇವರ ಪಾದದ ಬಳಿ ಇಟ್ಟು ಯೋಜನೆಯ ಯಶಸ್ಸಿಗಾಗಿ ಮೊರೆ ಇಡುತ್ತಾರೆ.

ವರ್ಷಗಳು ಉರುಳಿದಂತೆ ಉಡಾವಣಾ ಕೇಂದ್ರವಾದ ಶ್ರೀಹರಿಕೋಟಾದ ಸುತ್ತಲೂ ಇರುವ ಇನ್ನೂ ಕೆಲವು ದೇವಾಲಯಗಳನ್ನುಈ ಪಟ್ಟಿಗೆ ಸೇರಿಸಿಕೊಳ್ಳಲಾಗಿದ್ದು, ಹಿರಿಯ ಅಥವಾ ಕಿರಿಯ ಅಧಿಕಾರಿಗಳು ತೆರಳಿ ಪ್ರಾರ್ಥಿಸುವುದು ರೂಢಿಯಲ್ಲಿದೆ.ಮಾತ್ರವಲ್ಲದೆ, ಉಡಾವಣೆಗೂ ಮುನ್ನ ರಾಕೆಟ್‌ನ ವಿವಿಧ ಹಂತದ ಸಂಯೋಜನೆ ಸಂದರ್ಭಗಳಲ್ಲಿಯೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.

ಯೋಜನಾ ನಿರ್ದೇಶಕರು ರಾಕೆಟ್‌ ಉಡಾವಣೆ ದಿನದಂದು ಹೊಸ ಶರ್ಟ್‌ ಧರಿಸುತ್ತಿದ್ದರುಎಂದು ಮತ್ತೊಬ್ಬ ನಿವೃತ್ತ ವಿಜ್ಞಾನಿ ಹೇಳಿಕೊಂಡಿದ್ದರು.ಈ ವಿಚಾರಗಳು ಆಗಾಗ್ಗೆ ಸುದ್ದಿಯಾಗುತ್ತಿರುತ್ತದೆ.

ನಂಬರ್‌ 13 ಅಶುಭ
ಇಸ್ರೋ ಅಧಿಕಾರಿಗಳು ‘13’ ಸಂಖ್ಯೆಯನ್ನು ಅಶುಭ ಎಂದು ಭಾವಿಸಿದಂತಿದೆ. ಉಡಾವಣಾ ವಾಹಕಗಳಪಟ್ಟಿಯಲ್ಲಿಪಿಎಸ್‌ಎಲ್‌ವಿ ಸಿ–12 ಬಳಿಕ ‘13’ ಸಂಖ್ಯೆಯನ್ನು ಸೇರಿಸದೆ ಮುಂದಿನ ಉಡಾವಣೆ ವೇಳೆ ವಾಹಕಕ್ಕೆ ‘14’ ಎಂದು ಹೆಸರು ಇಟ್ಟದ್ದು ಏಕೆ ಎಂಬುದರ ಬಗ್ಗೆ ಇದುವರೆಗೆ ಯಾವೊಬ್ಬ ಅಧಿಕಾರಿಯೂ ಸ್ಪಷ್ಟನೆ ನೀಡಿಲ್ಲ.

ಈ ಬಗ್ಗೆ ಎದುರಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಮತ್ತೊಬ್ಬ ಅಧಿಕಾರಿ‘ಆ ಸಂಖ್ಯೆಯೊಂದಿಗೆ ಇದುವರೆಗೆ ಯಾವುದೇ ರಾಕೆಟ್‌ನ ‌‌ವಿನ್ಯಾಸ ಮಾಡಿಲ್ಲ’ ಎಂದು ತಿಳಿಸಿದ್ದರು.ಪಿಎಸ್‌ಎಲ್‌ವಿ ಸಿ–14 ಮೂಲಕ ಆರು ಯುರೋಪಿಯನ್‌ ನ್ಯಾನೋ ಸ್ಯಾಟಲೈಟ್‌ಗಳನ್ನೂಕಕ್ಷೆಗೆ ಸೇರಿಸಲಾಗಿತ್ತು.

ವಿಚಿತ್ರವೆಂದರೆ, ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಉಡಾವಣೆ ಮಾಡಿದ್ದ ಅಪೋಲೋ–13 ನೌಕೆ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವಲ್ಲಿ ವಿಫಲವಾದ ಬಳಿಕ, ಅದು ತನ್ನ ಮುಂದಿನ ಯಾವ ಯೋಜನೆಗೂ ‘13’ ಸಂಖ್ಯೆಯನ್ನು ಬಳಸಿಕೊಂಡಿಲ್ಲ.

ಮಂಗಳವಾರ ಮಂಗಳಕ್ಕೆ ಜಿಗಿದ ‘ಮಾಮ್‌’
ಇಸ್ರೋ ಇತಿಹಾಸದಲ್ಲಿ ಸಂಪ್ರದಾಯ ಮುರಿದು ಮೊದಲ ಸಲ ಮಂಗಳವಾರ ನಭಕ್ಕೆ ಜಿಗಿದ ಖ್ಯಾತಿ ಮಾರ್ಸ್‌ ಆರ್ಬಿಟರಿ ಮಿಷನ್‌(ಮಾಮ್‌)ನ ಪಿಎಸ್‌ಎಲ್‌ವಿ–12ಗೆ ಸಲ್ಲುತ್ತದೆ. ಕೇವಲ ₹ 450 ಕೋಟಿ ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿತ್ತು.

‘ಪಿಎಸ್‌ಎಲ್‌ವಿ–12 ಇಸ್ರೋ ಇತಿಹಾಸದಲ್ಲಿ ಮೊದಲ ಬಾರಿಗೆ ಮಂಗಳವಾರ (2013ರ ನವೆಂಬರ್‌ 5) ಉಡಾವಣೆಗೊಂಡಿದೆ. ಸಾಮಾನ್ಯವಾಗಿ ಮಂಗಳವಾರವನ್ನು ಅಮಂಗಳದ ದಿನ ಎಂದೇ ಭಾವಿಸಲಾಗುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಆದರೆ, ಅದೇ ಯೋಜನೆಯಲ್ಲಿ ಭಾಗವಾಗಿದ್ದ ಮತ್ತೊಬ್ಬ ಅಧಿಕಾರಿ ‘ಮಂಗಳವಾರವೇ ನನ್ನ ಪಾಲಿಗೆ ಅದೃಷ್ಟದ ದಿನ’ ಎಂದು ಹೇಳಿಕೊಂಡಿದ್ದರು.

ಈ ಎಲ್ಲ ನಂಬಿಕೆಗಳ ಬಗ್ಗೆ ಇಸ್ರೋ ಸಂಸ್ಥೆಯ ಮಾಜಿ ಮುಖ್ಯಸ್ಥರೊಬ್ಬರು ಸ್ಪಷ್ಟನೆ ನೀಡಿ, ‘ಇವೆಲ್ಲವೂ ವೈಯಕ್ತಿಕ ನಂಬಿಕೆಗಳು. ದೇವರು ಮತ್ತು ವಿಷದ ವಿಚಾರದಲ್ಲಿ ಯಾರೊಬ್ಬರೂ ಮತ್ತೊಂದು ಅವಕಾಶ ಪಡೆಯುವುದು ಅಸಾಧ್ಯ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.