ADVERTISEMENT

ಕಾರ್ಟೊಸ್ಯಾಟ್–3, ಇತರ 13 ಉಪಗ್ರಹಗಳ ಯಶಸ್ವಿ ಉಡಾವಣೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 4:31 IST
Last Updated 27 ನವೆಂಬರ್ 2019, 4:31 IST
ಶ್ರೀಹರಿಕೋಟಾದಿಂದ ಚಿಮ್ಮಿದ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ– ಸಿ47 ರಾಕೆಟ್
ಶ್ರೀಹರಿಕೋಟಾದಿಂದ ಚಿಮ್ಮಿದ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ– ಸಿ47 ರಾಕೆಟ್   

ಶ್ರೀಹರಿಕೋಟ: ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಭೂವೀಕ್ಷಣೆಯ ಕಾರ್ಟೊಸ್ಯಾಟ್‌–3 ಮತ್ತು 13 ವಾಣಿಜ್ಯ ಉದ್ದೇಶದ ನ್ಯಾನೊ ಉಪಗ್ರಹಗಳನ್ನು ಪಿಎಸ್‌ಎಲ್‌ವಿ– ಸಿ47 ರಾಕೆಟ್‌ ಮೂಲಕ ಇಸ್ರೋ ಬುಧವಾರ ಮುಂಜಾನೆ ಇಲ್ಲಿನ ಸತೀಶ್‌ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿತು.

ಈ ಹಿಂದೆ ನ. 25ಕ್ಕೆ ಉಡಾವಣೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಕಾರಣಾಂತರಗಳಿಂದ ಉಡಾವಣೆಯನ್ನು ನ.27ಕ್ಕೆ ಮರು ನಿಗದಿ ಮಾಡಲಾಗಿತ್ತು.

ಕಾರ್ಟೊಸ್ಯಾಟ್‌–3 ಮೂರನೇ ತಲೆಮಾರಿನ, ಚುರುಕುಗತಿಯಿಂದ ಕಾರ್ಯ ನಿರ್ವಹಿಸುವ ಮತ್ತು ಅತ್ಯಧಿಕ ರೆಸಲ್ಯೂಶನ್‌ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ಭೂಮಿಯಿಂದ 509 ಕಿ.ಮೀ ಎತ್ತರದಲ್ಲಿ 97.5 ಡಿಗ್ರಿ ಕೋನದಲ್ಲಿ ಉಪಗ್ರಹಗಳು ನೆಲೆಗೊಳ್ಳಲಿವೆ.

ADVERTISEMENT

‘ಎಕ್ಸ್‌ಎಲ್‌’ ಸಂರಚನೆಯ ಪಿಎಸ್‌ಎಲ್‌ವಿ–ಸಿ 47 21 ನೇ ಹಾರಾಟ ನಡೆಸುತ್ತಿದ್ದು, ಶ್ರೀಹರಿಕೋಟಾದಲ್ಲಿ ನಡೆಯುತ್ತಿರುವ 74 ನೇ ಉಡಾವಣೆಯಾಗಿದೆ. ಬಾಹ್ಯಾಕಾಶ ಇಲಾಖೆಯ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಯು ಅಮೆರಿಕಾದ ಜತೆ ಸಹಯೋಗದಿಂದ 13 ವಾಣಿಜ್ಯ ಉದ್ದೇಶದ ನ್ಯಾನೊ ಉಪಗ್ರಹಗಳನ್ನು ತಯಾರಿಸಲಾಗಿದೆ.

ಕಾರ್ಟೊಸ್ಯಾಟ್‌–3 ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಭೂವೀಕ್ಷಣಾ ಉಪಗ್ರಹ. ಅಧಿಕ ಸ್ಪಷ್ಟತೆಯ ಚಿತ್ರಗಳನ್ನು ಸೆರೆ ಹಿಡಿಯಲಿದೆ. ಇದರ ಒಟ್ಟು ತೂಕ 1625 ಕೆ.ಜಿಗಳು. ಐದು ವರ್ಷಗಳವರೆಗೆ ಕಾರ್ಯ ನಿರ್ವಹಿಸುತ್ತದೆ. ನಗದ ಯೋಜನೆ ನಿರೂಪಣೆ, ಗ್ರಾಮೀಣ ಸಂಪನ್ಮೂಲ, ಮೂಲಸೌಕರ್ಯಗಳ ಅಭಿವೃದ್ಧಿಗೆ, ಕಡಲತೀರದ ಭೂಬಳಕೆ ಮತ್ತು ಭೂಪ್ರದೇಶದ ವ್ಯಾಪ್ತಿಯ ಉದ್ದೇಶಗಳಿಗೆ ಇದನ್ನು ಬಳಸಬಹುದಾಗಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.