ADVERTISEMENT

ಅಪರೂಪದ ವಿದ್ಯಮಾನ: ಮೇ 13ರಂದು ದರ್ಶನ ನೀಡಲಿ‌ದೆ 'ಸ್ವಾನ್' ಧೂಮಕೇತು

​ಪ್ರಜಾವಾಣಿ ವಾರ್ತೆ
Published 12 ಮೇ 2020, 9:06 IST
Last Updated 12 ಮೇ 2020, 9:06 IST
ಪ್ರಾತಿನಿಧಿಕ ಚಿತ್ರ (ಚಿತ್ರ ಕೃಪೆ: ನಾಸಾ)
ಪ್ರಾತಿನಿಧಿಕ ಚಿತ್ರ (ಚಿತ್ರ ಕೃಪೆ: ನಾಸಾ)   

ಬೆಂಗಳೂರು: ಆಗಸದಲ್ಲಿ ಬುಧವಾರ (ಮೇ.13) ಬೆಳಿಗ್ಗೆ ಅಪರೂಪದ ವಿದ್ಯಮಾನವೊಂದು ಘಟಿಸಲಿದೆ. ಆಗಸದಿಂದ ಭೂಮಿಯ ಅತಿ ಹತ್ತಿರಕ್ಕೆ ಪ್ರಕಾಶಮಾನವಾದ ಧೂಮಕೇತು ಹಾದು ಹೋಗಲಿದೆ. ಇದಕ್ಕೆ 'ಸ್ವಾನ್' ಎಂದು ಹೆಸರಿಡಲಾಗಿದೆ.

ಯಾವುದೇ ದೂರದರ್ಶಕದ ಸಹಾಯವಿಲ್ಲದೆ ಬರಿಗಣ್ಣಿನಿಂದ ಈ ಧೂಮಕೇತುವನ್ನು ವೀಕ್ಷಿಸಬಹುದಾಗಿದೆ. ಭೂಮಿಯಿಂದ 8.33 ಕೋಟಿ ಕಿ.ಮೀ. ದೂರದಲ್ಲಿ 'ಸ್ವಾನ್' ಹಾದು ಹೋಗಲಿದೆ. ಸೆಕೆಂಡ್‌ಗೆ 40ರಿಂದ 50 ಕಿ.ಮೀ. ವೇಗದಲ್ಲಿ ಇದು ಬರಲಿದೆ. ಈ ರೀತಿ ಭೂ ಸನಿಹಕ್ಕೇ ಬಂದು ಬರಿಗಣ್ಣಿಗೆ ಗೋಚರಿಸುವ ಧೂಮಕೇತುಗಳು ಬಹಳ ವಿರಳ. ಹೀಗಾಗಿ, 'ಸ್ವಾನ್' ಗೋಚರಿಸುವಿಕೆ ಕುತೂಹಲ ಕೆರಳಿಸಿದೆ ಎನ್ನುತ್ತಾರೆ ವಿಜ್ಞಾನಿಗಳು‌.

'ಬುಧವಾರ ಬೆಳಿಗ್ಗೆ 4.30ರಿಂದ 5 ಗಂಟೆ ಸಮಯದಲ್ಲಿ ಈ ಧೂಮಕೇತು ಕಾಣಿಸಿಕೊಳ್ಳಲಿದೆ. ಆದರೆ, ಈ ಸಮಯಕ್ಕೆ ಸೂರ್ಯನ ಬೆಳಕು ಕೂಡ ಹರಡುವುದರಿಂದ ಕಣ್ಣಿಗೆ ಸ್ಪಷ್ಟವಾಗಿ ಕಾಣುವುದು ಕಷ್ಟ' ಎನ್ನುತ್ತಾರೆ ಜವಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಜಿ. ಗಲಗಲಿ.

ADVERTISEMENT

'ಈ ಧೂಮಕೇತು 5.7 ಪ್ರಕಾಶಮಾನವನ್ನು (ಮ್ಯಾಗ್ನಿಟ್ಯೂಡ್ ) ಹೊಂದಿದೆ. 6ರಷ್ಟು ಕಾಂತಿ ಹೊಂದಿರುವ ಯಾವುದೇ ಆಕಾಶಕಾಯ ಬರಿಗಣ್ಣಿಗೆ ಕಾಣುತ್ತದೆ. ಇದೇ ಧೂಮಕೇತು ರಾತ್ರಿಯ ವೇಳೆ ಸುಳಿದಿದ್ದರೆ ಬರಿಗಣ್ಣಿಗೆ ಕಾಣುತ್ತಿತ್ತು. ಬೆಳಗಿನ ಜಾವ ಆಗಿರುವುದರಿಂದ ಟೆಲಿಸ್ಕೋಪ್ ಬಳಸಿ ನೋಡಬಹುದು. ಆದರೆ, ಊರಿನ ಹೊರಗೆ ಹೋಗಿ ನೋಡುವುದು ಸೂಕ್ತ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.