ಜೈವಿಕ ತಂತ್ರಜ್ಞಾನ ಮತ್ತು ತಳೀಯವಿಜ್ಞಾನದ ಭಾಗವಾಗಿ, ಎರಡು ಪ್ರಕ್ರಿಯೆಗಳನ್ನು ಸೇರಿಸಿ ಒಂದು ಪ್ರಕ್ರಿಯೆ ಮಾಡುವ ಹೊಸದೊಂದು ಸಾಧ್ಯತೆಯನ್ನು ಒರೆಗಾನ್‌ನ ಸಂಶೋಧಕರು ಜಗದ ಮುಂದಿರಿಸಿದ್ದಾರೆ; ಅದೇ ‘ಮೈಟೋಮಿಯಾಸಿಸ್’!
ಶಾಲೆಯಲ್ಲಿ ಜೀವವಿಜ್ಞಾನದ ಪಾಠವನ್ನು ಕಲಿತ ಎಲ್ಲರಿಗೂ ‘ಮೈಟಾಸಿಸ್’ ಮತ್ತು ‘ಮಿಯಾಸಿಸ್’ ಎಂಬ ಎರಡು ಬಗೆಯ ಕೋಶವಿಭಜನೆಯ ಬಗ್ಗೆ ಕೊಂಚವಾದರೂ ಗೊತ್ತೇ ಇರುತ್ತದಲ್ಲವೇ? ‘ಮೈಟಾಸಿಸ್’ ಎಂಬುದು ಪ್ರತಿ ಜೀವಕೋಶವೂ ಎರಡಾಗಿ ವಿಭಜನೆಗೊಳ್ಳುವ ಪ್ರಕ್ರಿಯೆ; ಇಲ್ಲಿ ಪ್ರತಿ ಹೊಸ ಕೋಶದಲ್ಲೂ ವರ್ಣತಂತುಗಳ ಸಂಖ್ಯೆ ಸ್ಥಿರವಾಗಿರುತ್ತದೆ. ಈ ಪ್ರಕ್ರಿಯೆಯ ಮೂಲಕವೇ ಎಲ್ಲರ ಎತ್ತರ, ದೇಹತೂಕ, ಸುತ್ತಳತೆಯಲ್ಲಿ ಹೆಚ್ಚಳವಾಗುವುದು, ಹಳತಾದ ಅಥವಾ ಸತ್ತಕೋಶಗಳ ಬದಲಿಗೆ ಹೊಸ ಕೋಶ ಹುಟ್ಟುವುದು. ಇನ್ನು ‘ಮಿಯಾಸಿಸ್’ ಎಂಬ ಕೋಶವಿಭಜನೆಯಲ್ಲಿ, ಕೇವಲ ಲೈಂಗಿಕ ಪುನರುತ್ಪತ್ತಿಗಾಗಿ ಅಂಡಕೋಶ ಹಾಗೂ ವೀರ್ಯಾಣುವಿನ ಸೃಷ್ಟಿಯಾಗುತ್ತದೆ. ಈ ಎರಡೂ ಪ್ರಕ್ರಿಯೆಗಳ ಸಮ್ಮಿಲನವೇ ಮೈಟೋಮಿಯಾಸಿಸ್! ಒರೆಗಾನ್ ವಿಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಇಂತಹ ಪ್ರಕ್ರಿಯೆಯನ್ನು ಜಗತ್ತಿಗೆ ಪರಿಚಯಿಸುತ್ತಾ ಚರ್ಮದ ಜೀವಕೋಶಗಳಿಂದ ಅಂಡಾಣುವಿನಂತಹ ಜೀವಕೋಶವನ್ನು ಸೃಷ್ಟಿಸಿದ್ದಾರೆ! ಇದು ಅಂಡಾಣುಗಳಿಗೆ ಸಂಬಂಧಿಸಿದಂತೆ ಇರುವ ಅನೇಕ ಸಂತಾನೋತ್ಪತ್ತಿಯ ಸವಾಲುಗಳಿಗೆ ಸೂಕ್ತ ಜವಾಬು ಎನ್ನುತ್ತಾರೆ ವಿಜ್ಞಾನಿಗಳು.
ಇಂತಹ ಜೈವಿಕ ಪ್ರಕ್ರಿಯೆಯನ್ನು ಸಾಧ್ಯವಾಗಿಸೋಕೆ ಸಂಶೋಧಕರು ಪ್ರಯೋಗದ ಪ್ರತಿ ಹಂತದಲ್ಲೂ ಅನೇಕ ತಂತ್ರಜ್ಞಾನಗಳ ಬಳಕೆ ಮಾಡಿರುತ್ತಾರೆ; ಉದಾಹರಣೆಗೆ, ಎಸ್.ಸಿ.ಎನ್.ಟಿ. ತಂತ್ರಜ್ಞಾನ. ‘ಸೊಮಾಟಿಕ್ ಸೆಲ್ ನ್ಯೂಕ್ಲಿಯರ್ ಟ್ರಾನ್ಸ್‌ಫರ್’ ಎಂಬ ಈ ತಂತ್ರಜ್ಞಾನದ ಮೂಲಕ ಸಾಮಾನ್ಯ ಜೀವಕೋಶಗಳಿಂದ ಕೋಶಕೇಂದ್ರವನ್ನು ತೆಗೆದು, ಅಂಡಾಣುವಿಗೆ ವರ್ಗಾಯಿಸುವುದು; ಇಂತಹ ಪ್ರಕ್ರಿಯೆಯನ್ನು ಮುಂಚೆ ಕೂಡ ಬಳಸಲಾಗಿದೆ, ಡಾಲಿ ಎಂಬ ಜಗತ್ಪ್ರಸಿದ್ಧ ಕುರಿಯನ್ನು ಸೃಷ್ಟಿಸುವ ಪ್ರಯೋಗದಲ್ಲಿ; ಅಂದರೆ, ಅಲೈಂಗಿಕ ಸಂತಾನೋತ್ಪತ್ತಿಯ ಮೂಲಕ ತದ್ರೂಪುಸೃಷ್ಟಿಯನ್ನು ಮಾಡಲಾದ ಸಂದರ್ಭದಲ್ಲಿ. ಆದರೆ ತಂತ್ರಜ್ಞಾನ ಒಂದೇ ಆದರೂ ಈ ಹೊಸ ಸಂಶೋದನೆಯ ಫಲವಾದ ಮೈಟೋಮಿಯಾಸಿಸ್‌ನಲ್ಲಿನ ಫಲಿತಾಂಶ ವಿಭಿನ್ನ. ಇಲ್ಲಿ ಚರ್ಮದ ಜೀವಕೋಶದೊಳಗಿನ ನ್ಯೂಕ್ಲಿಯಸ್ ಅನ್ನು, ಕೋಶಕೇಂದ್ರ ತೆಗೆದ ಅಂದರೆ ಖಾಲಿಮಾಡಲಾದ ಅಂಡಾಣುವಿನೊಳಗೆ ಸೇರಿಸಲಾಗುತ್ತದೆ. ಫಲೀಕರಣ ಸಂಭವಿಸುವ ಮೊದಲು, ಸಂಶೋಧಕರು ‘ಮೈಟೊಮಿಯಾಸಿಸ್’ ನಡೆಯುವಂತೆ ರಾಸಾಯನಿಕವಾಗಿ ಪ್ರಚೋದಿಸುತ್ತಾರೆ. ಇದರಿಂದಾಗಿ ಪುನರ್ನಿರ್ಮಾಣಗೊಂಡ ಮೊಟ್ಟೆಯು, ಅದರ ಅರ್ಧದಷ್ಟು ವರ್ಣತಂತುಗಳನ್ನು ತ್ಯಜಿಸಿ, ನೈಸರ್ಗಿಕ ಮೊಟ್ಟೆಯಂತಾಗುತ್ತದೆ; ಅಂದರೆ ಅರ್ಧ ಪ್ರಮಾಣದ ವರ್ಣತಂತುಗಳನ್ನು ಹೊಂದಿರುತ್ತದೆ. ಇದರ ಫಲಿತಾಂಶವೇ, ಪ್ರಯೋಗಾಲಯದಲ್ಲಿ ಸೃಜಿಸಲಾದ ‘ಹ್ಯಾಪ್ಲಾಯ್ಡ್ ಮೊಟ್ಟೆ’! ನಂತರ ಇದನ್ನು ತಂದೆಯ ಅಥವಾ ಡೋನರ್‌ನ ವೀರ್ಯದೊಂದಿಗೆ ಸೇರಿಸಿ ಫಲವತ್ತಾಗಿಸಬಹುದು. ಸಂತಾನೊತ್ಪತ್ತಿ ಸಮಸ್ಯೆಯಿಂದ ಬಳಲುತ್ತಿರುವ ದಂಪತಿಗಳು, ಈ ತಂತ್ರಜ್ಞಾನದಿಂದ, ತಮಗೆ ಅನುವಂಶಿಕವಾಗಿ ಸಂಬಂಧಿತ ಮಗುವನ್ನು ಪಡೆಯಲು ಸಾಧ್ಯವಾಗುತ್ತದೆ. ಜೀನ್ ಥೆರಪಿ ತಂತ್ರಜ್ಞಾನದಲ್ಲಿ ಪರಿಣತರಾದ ಸಂಶೋಧಕರು ನೂರಿಯಾ ಮಾರ್ಟಿ ಗುಟಾರೆಝ್, ಶೌಕ್ರಾಟ್ ಮಿತಾಲಿಪೋವ್, ಪೌಲಾ ಅಮಾಟೋರ ಮತ್ತವರ ತಂಡದ ಮಹತ್ತರ ಕೊಡುಗೆಯಿದು; ಅನೇಕ ದಶಕಗಳಿಂದಲೂ ಕುತೂಹಲ ಕೆರಳಿಸಿದ್ದ ಈ ಸಂಶೋಧನೆಯು, ತನ್ನ ಧನಾತ್ಮಕ ಫಲಿತಾಂಶದಿಂದ ಪ್ರಯೋಗಾಲಯದಲ್ಲಿ ಅಂಡಾಣುಸೃಷ್ಟಿಯನ್ನು ಸಾಧ್ಯವಾಗಿಸಿದೆ.
ಇಲ್ಲಿ ಎಸ್.ಸಿ.ಎನ್.ಟಿ. ತಂತ್ರಜ್ಞಾನದ ಜೊತೆಗೆ, ‘ಮೈಕ್ರೋಮ್ಯಾನಿಪುಲೇಟರ್ಗ’ಳನ್ನು ಬಳಸಲಾಗಿದೆ. ಕೋಶಕೇಂದ್ರವನ್ನು ತೆಗೆಯುವುದು, ಮತ್ತೊಂದು ಕೋಶದೊಳಗೆ ಇರಿಸುವುದು, ಬೇಡದ ಜೀನ್‌ಗಳನ್ನು ತೆಗೆದು ಮತ್ತೊಂದನ್ನು ಸೇರಿಸುವುದು - ಇಂತಹ ಸಂದರ್ಭಗಳಲ್ಲಿ ‘ಮೈಕ್ರೋಮ್ಯಾನಿಪುಲೇಟರ್ಗ’ಳ ಬಳಕೆ ಸಾಮಾನ್ಯ. ಇವು ರೋಬೋಟಿಕ್ ಸಾಧನಗಳಾಗಿದ್ದು, ಬರಿಗಣ್ಣಿಗೆ ಕಾಣದ ಜೀವಕೋಶಗಳನ್ನು ಸೂಕ್ಷ್ಮದರ್ಶಕವನ್ನೊಳಗೊಂಡ ಕಣ್ಣುಗಳಿಂದ ಗಮನಿಸಿ, ಸೂಕ್ಷ್ಮಕೈಗಳಿಂದ ಮಾರ್ಪಡಿಸುತ್ತದೆ. ಈ ಜೀವಕೋಶಗಳ ಬೆಳವಣಿಗೆಯನ್ನು ಹಂತಹಂತವಾಗಿ ವೀಕ್ಷಿಸಿ ಅರ್ಥೈಸಿಕೊಳ್ಳೋಕೆ, ‘ಟೈಮ್ ಲ್ಯಾಪ್ಸ್ ಮೈಕ್ರೋ ವಿಡಿಯೋಗ್ರಫಿ’ ತಂತ್ರಜ್ಞಾನವನ್ನೂ ಬಳಸಲಾಗುತ್ತದೆ. ಚರ್ಮದ ಕೋಶದೊಳಗಿನಿಂದ ಕೋಶಕೇಂದ್ರ (ನ್ಯೂಕ್ಲಿಯಸ್) ಹೊರತೆಗೆಯುವ ಮುನ್ನ ಮತ್ತು ನಂತರ, ಆ ಕೋಶಕೇಂದ್ರವನ್ನು ಖಾಲಿಮಾಡಿದ ಅಂಡಾಣುವೊಳಗೆ ಇರಿಸಿದ ನಂತರ, ಮೈಟೋಮಿಯಾಸಿಸ್ ಪ್ರಕ್ರಿಯೆ ಚಾಲೂ ಆಗುವ ಮುನ್ನ ಮತ್ತು ನಂತರದ ಕ್ಷಣಕ್ಷಣದ ಬದಲಾವಣೆಯನ್ನು ಇಲ್ಲಿ ವಿಶ್ಲೇಷಿಸಲು ಈ ತಂತ್ರಜ್ಞಾನ ಸಹಾಯಕ. ಸ್ಟೀರಿಯೋ ಝೂಮ್ ಸೂಕ್ಷ್ಮದರ್ಶಕಗಳು, ಪ್ರತಿಜೀವಕೋಶದ ಪ್ರತಿವರ್ಣತಂತುವಿನಲ್ಲಾಗುವ ಭೌತಿಕ ಬದಲಾವಣೆಗಳನ್ನು ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ. ಪ್ರಯೋಗಾಲಯದಲ್ಲಿ ಮೈಟೋಮಿಯಾಸಿಸ್‌ನಿಂದ ಸೃಜಿಸಿದ ಅಂಡಾಣುವನ್ನು ಫಲವತ್ತಾಗಿಸಿದ ನಂತರ, ಭ್ರೂಣದ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿನ ಸೂಕ್ಷ್ಮ ವ್ಯತ್ಯಾಸಗಳನ್ನು ಸ್ಟೀರಿಯೋ ಝೂಮ್ ಸೂಕ್ಷ್ಮದರ್ಶಕಗಳ ಮೂಲಕ ಮೂರು ಆಯಾಮಗಳಲ್ಲಿ ನೋಡಬಹುದು.
ಇಂತಹ ಪ್ರಯೋಗಗಳೇನು ಒಂದೆರಡು ಘಂಟೆಯಲ್ಲೋ, ದಿನಗಳಲ್ಲೋ ಮುಗಿದು ಬಿಡುತ್ತವೆಯೇ? ವಾರಗಳು, ತಿಂಗಳುಗಳು, ವರ್ಷಗಳೇ ಹಿಡಿದಾವು; ಅಲ್ಲಿಯವರೆಗೂ ಪ್ರಯೋಗದ ಭಾಗವಾಗಿರುವ ಜೀವಕೋಶಗಳು ಇದ್ದ ಹಾಗೇ ಇರಬೇಕಲ್ಲವೇ? ದ್ರವರೂಪದ ಸಾರಜನಕವನ್ನು ಬಳಸಲಾಗುವ ಶೀತಲೀಕರಣ ತಂತ್ರಜ್ಞಾನವನ್ನು, ಜೀವಕೋಶಗಳ ಯಥಾಸ್ಥಿತಿ ಕಾಪಾಡಲು ಉಪಯೋಗಿಸಲಾಗುತ್ತದೆ. ಆದರೆ, ಶೀತಲೀಕೃತ ಸ್ಥಿತಿಯಲ್ಲೇ ಇದ್ದರೆ, ಕೋಶವು ಬೆಳೆಯುವುದು ಹೇಗೆ? ಹಾಗಾಗಿ, ಈ ಪ್ರಯೋಗಕ್ಕೆ ಬೇಕಾದಂತಹ ತಾಪಮಾನ, ಆರ್ದ್ರತೆ, ಅನಿಲ ಸಾಂದ್ರತೆಯಂತಹ ಅಂಶಗಳನ್ನು ಸರಿದೂಗಿಸುವ ವಿಶೇಷ ‘ಇಂಕ್ಯುಬೇಟರ್ಗ’ಳನ್ನು ವಿವಿಧ ಹಂತಗಳಲ್ಲಿ ಬಳಸಲಾಗುತ್ತದೆ. ಇಲ್ಲಿ ಲೈವ್ ಸೆಲ್ ಇಮೇಜಿಂಗ್ ವ್ಯವಸ್ಥೆ, ಸುಧಾರಿತ ತಾಪಮಾನ ನಿಯಂತ್ರಣ ವ್ಯವಸ್ಥೆ ಮತ್ತು ರಿಮೋಟ್ ಮಾನಿಟರಿಂಗ್ ತಂತ್ರಜ್ಞಾನ ಬಳಸಲಾಗುತ್ತದೆ; ಹೀಗೆ, ವಿಜ್ಞಾನದ ಅನೇಕ ಶಾಖೆಗಳ ಜ್ಞಾನದ, ಪ್ರಕ್ರಿಯೆಗಳ ಮತ್ತು ತಂತ್ರಜ್ಞಾನಗಳ ಸಮ್ಮಿಲನದ ಫಲಿತಾಂಶವಾಗಿ ಹೊಸ ಸಾಧ್ಯತೆಗಳು ಜಗತ್ತಿಗೆ ದಿನೇದಿನೇ ಅಚ್ಚರಿ, ಅನುಕೂಲ, ಭರವಸೆಗಳನ್ನು ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.