
ಸುಸುಮು ಕಿಟಗಾವ, ರಿಚರ್ಡ್ ರಾಬ್ಸನ್, ಒಮರ್ ಎಂ. ಯಾಘಿ
(ಚಿತ್ರ ಕೃಪೆ: X/@NobelPrize)
ಸ್ಟಾಕ್‌ಹೋಮ್: ಜಪಾನ್‌ನ ಸುಸುಮು ಕಿಟಾಗವಾ, ಬ್ರಿಟನ್‌ನ ರಿಚರ್ಡ್ ರಾಬ್ಸನ್ ಮತ್ತು ಜೋರ್ಡಾನ್‌ನ ಒಮರ್ ಎಂ.ಯಾಘಿ ಅವರು 2025ನೇ ಸಾಲಿನ ರಸಾಯನ ವಿಜ್ಞಾನ ನೊಬೆಲ್ ಪುರಸ್ಕಾರವನ್ನು ಹಂಚಿಕೊಂಡಿದ್ದಾರೆ.
‘ಲೋಹ–ಸಾವಯವ ಚೌಕಟ್ಟು’ (ಎಂಒಎಫ್) ಅಭಿವೃದ್ಧಿಯಲ್ಲಿ ಈ ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆಗಳನ್ನು ಪರಿಗಣಿಸಿ, ನೊಬೆಲ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಹನ್ಸ್ ಎಲೆಗ್ರೆನ್ ಬುಧವಾರ ಇಲ್ಲಿ ತಿಳಿಸಿದ್ದಾರೆ.
ಸುಸುಮು ಕಿಟಾಗವಾ ಜಪಾನ್‌ನ ಕ್ಯೂಟೊ ವಿಶ್ವವಿದ್ಯಾಲಯದಲ್ಲಿ, ರಿಚರ್ಡ್ ರಾಬ್ಸನ್ ಆಸ್ಟ್ರೇಲಿಯಾದ ಮೆಲ್ಬರ್ನ್ ವಿ.ವಿಯಲ್ಲಿ ಹಾಗೂ ಒಮರ್ ಕ್ಯಾಲಿಫೋರ್ನಿಯಾ ವಿ.ವಿಯಲ್ಲಿ ರಸಾಯನ ವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ. ಈ ಮೂವರೂ ವಿಜ್ಞಾನಿಗಳು ಒಟ್ಟು 1.2 ದಶಲಕ್ಷ ಡಾಲರ್ ( ₹10.65 ಕೋಟಿ) ನೊಬೆಲ್ ನಗದು ಪುರಸ್ಕಾರವನ್ನು ಹಂಚಿಕೊಳ್ಳಲಿದ್ದಾರೆ.
ವೈದ್ಯವಿಜ್ಞಾನ ಮತ್ತು ಭೌತವಿಜ್ಞಾನ ಕ್ಷೇತ್ರದ ನೊಬೆಲ್ ಪುರಸ್ಕಾರವನ್ನು ಈಗಾಗಲೇ ಘೋಷಿಸಲಾಗಿದೆ. ಸಾಹಿತ್ಯ ಕ್ಷೇತ್ರದ ನೊಬೆಲ್ ಪುರಸ್ಕಾರ ಗುರುವಾರ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಶುಕ್ರವಾರ ಹಾಗೂ ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರ ಅ.13ರಂದು ಪ್ರಕಟಗೊಳ್ಳಲಿವೆ.
ಮೇರಿ ಬ್ರಂಕೋ, ಫ್ರೆಡ್ ರಾಮ್ಸ್‌ಡೆಲ್ ಹಾಗೂ ಜಪಾನ್‌ನ ಶಿಮೊನ್ ಸಕಾಗುಚಿ ಅವರಿಗೆ ಪ್ರಸಕ್ತ ಸಾಲಿನ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಸೋಮವಾರ ಘೋಷಣೆಯಾಗಿತ್ತು.
ಭೌತಶಾಸ್ತ್ರ ವಿಭಾಗದಲ್ಲಿ 'ಕ್ವಾಂಟಮ್ ಮೆಕ್ಯಾನಿಕಲ್ ಟನಲಿಂಗ್' ಸಂಬಂಧಿತ ಮಹತ್ವದ ಸಂಶೋಧನೆಗಾಗಿ ಬ್ರಿಟನ್‌ನ ಜಾನ್ ಕ್ಲಾರ್ಕ್, ಫ್ರಾನ್ಸ್‌ನ ಮೈಕಲ್ ಎಚ್. ಡೆವೊರೆಟ್ ಮತ್ತು ಅಮೆರಿಕದ ಜಾನ್ ಎಂ. ಮಾರ್ಟಿನಿಸ್ ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.