ಅಂತರಿಕ್ಷ ನೌಕೆಗಳೆಂದರೆ ಟನ್‌ಗಟ್ಟಲೇ ತೂಕದ, ನೂರಾರು ಅಡಿಗಳಷ್ಟು ಉದ್ದದ ವಾಹನಗಳೆನ್ನುವುದು ಹಳೆಯ ಲೆಕ್ಕಾಚಾರ. ಇದೀಗ ಕೇವಲ ಒಂದು ಪೇಪರ್ ಕ್ಲಿಪ್ ಗಾತ್ರದ ಅಂತರಿಕ್ಷ ನೌಕೆಯೊಂದು ಸಿದ್ಧವಾಗಿದೆ. ಅದೂ ಅಲ್ಲದೇ, ಆ ನೌಕೆಯು ಅಂತರಿಕ್ಷದ ಅತಿ ವಿಸ್ಮಯಕಾರಿ ಗುಣಲಕ್ಷಣಗಳನ್ನು ಹೊಂದಿರುವ ಕಪ್ಪುರಂಧ್ರ (ಬ್ಲ್ಯಾಕ್ ಹೋಲ್)ದ ಮೂಲಕ ಸಂಚರಿಸಲಿದೆ. ಈ ಸಂಶೋಧನೆಯನ್ನು ಬಾಹ್ಯಾಕಾಶ ಕ್ಷೇತ್ರದ ಬಹು ಮಹತ್ತರವಾದ ಸಂಶೋಧನೆ ಎಂದೇ ಈಗ ಭೌತವಿಜ್ಞಾನಿಗಳು ವಿಶ್ಲೇಷಿಸುತ್ತಿದ್ದಾರೆ.
ನಮ್ಮ ತಿಳಿವಳಿಕೆಯ ಪ್ರಕಾರ ನಮ್ಮ ಸೂರ್ಯ ಅತಿ ಚಿಕ್ಕ ನಕ್ಷತ್ರಗಳಲ್ಲಿ ಒಂದು. ಹಲವು ದೈತ್ಯ ನಕ್ಷತ್ರಗಳೂ ಅಂತರಿಕ್ಷದಲ್ಲಿವೆ. ಅವು ಸೂರ್ಯನಿಗಿಂತ ಸುಮಾರು ಒಂದು ಸಾವಿರದಿಂದ ಒಂದು ಲಕ್ಷ ಪಟ್ಟು ದೊಡ್ಡ ಗಾತ್ರವನ್ನು ಹೊಂದಿರುವುದಾಗಿ ಸಂಶೋಧನೆಗಳನ್ನು ಹೇಳುತ್ತವೆ. ನಕ್ಷತ್ರಗಳಲ್ಲಿರುವ ಜನಜನಕವೆಲ್ಲಾ ಉರಿದು ಖಾಲಿಯಾದ ಮೇಲೆ, ಇಂತಹ ಬೃಹತ್ ನಕ್ಷತ್ರಗಳಲ್ಲಿ ಒತ್ತಡ ಹೆಚ್ಚಾಗಿ ಅವು ಸ್ಫೋಟಿಸುತ್ತವೆ. ಅದನ್ನು ‘ಸೂಪರ್‌ನೋವಾ’ ಎಂದು ಕರೆಯುತ್ತಾರೆ. ಈ ಸ್ಫೋಟದ ಬಳಿಕ ನಕ್ಷತ್ರದ ತಿರುಳು ಮಾತ್ರ ಉಳಿದು, ಅದು ಮತ್ತಷ್ಟು ಕುಸಿಯಲಾರಂಭಿಸುತ್ತದೆ. ಅದರ ಗುರುತ್ವಬಲ ಅತೀವವಾದುದು. ಅದು ಬೆಳಕನ್ನೂ ಹೊರಹೋಗಲು ಬಿಡುವುದಿಲ್ಲ. ಇದೇ ಕಪ್ಪುರಂಧ್ರ. ಅದರ ಅತೀವ ಬಲದಿಂದಾಗಿ ಅಂತರಿಕ್ಷದಲ್ಲಿ ಕಾಲ, ದೇಶ ಮತ್ತು ವಸ್ತುಗಳನ್ನು ಬದಲಿಸುವಂಥ ಅಥವಾ ಮಾರ್ಪಾಟು ಮಾಡುವಂತ ಶಕ್ತಿಯನ್ನು ಹೊಂದಿರುತ್ತವೆ. ಅಂತಹ ಕಪ್ಪುರಂಧ್ರದ ಮೂಲಕವೇ ಈ ಪೇಪರ್ ಕ್ಲಿಪ್ ಗಾತ್ರದ ಅಂತರಿಕ್ಷ ನೌಕೆ ಸಂಚರಿಸಲು ಸಿದ್ಧವಾಗಿದೆ!
ಕಪ್ಪುರಂಧ್ರಗಳಲ್ಲಿ ಒತ್ತಡ ಅತೀವವಾಗಿರುವ ಕಾರಣ, ಅದು ಎಲ್ಲವನ್ನೂ ‘ಸ್ವಾಹ’ ಮಾಡಿಬಿಡಬಲ್ಲದು. ಹೀಗಿರುವಾಗ ದೊಡ್ಡ ಗಾತ್ರದ ಅಂತರಿಕ್ಷ ನೌಕೆಗಳಿಗೂ ಅದರ ಹತ್ತಿರ ಹೋಗಲೂ ಸಾಧ್ಯವಾಗುವುದಿಲ್ಲ. ಈ ಪೇಪರ್ ಕ್ಲಿಪ್ ಗಾತ್ರದ ಅಂತರಿಕ್ಷ ನೌಕೆಯು ಅತಿ ಸೂಕ್ಷ್ಮಾತಿ ಸೂಕ್ಷ್ಮವಾಗಿರುವ ಕಾರಣ, ಅದನ್ನು ಕಪ್ಪುರಂಧ್ರದ ಮೂಲಕ ಏಕೆ ಸಂಚರಿಸುವಂತೆ ಮಾಡಬಾರದು ಎಂಬ ಕುತೂಹಲ ವಿಜ್ಞಾನಿಗಳಿಗೆ ಮೂಡಿದೆ. ಜಗತ್ಪ್ರಸಿದ್ಧ ಭೌತವಿಜ್ಞಾನಿ ಕೊಸಿಮೊ ಬಾಂಬಿ ಅವರ ತಂಡವು ‘‘ಸೆಲ್ ಪ್ರೆಸ್ ಐಸೈನ್ಸ್’ ವಿಜ್ಞಾನ ನಿಯತಕಾಲಿಕೆಯಲ್ಲಿ ತಮ್ಮ ಸಂಶೋಧನೆಯನ್ನು ಪ್ರಕಟಿಸಿದ್ದಾರೆ.
ಇದು ನ್ಯಾನೊ ತಂತ್ರಜ್ಞಾನದಲ್ಲಿ ತಯಾರಾದ ವಿಶೇಷ ಅಂತರಿಕ್ಷ ನೌಕೆ. ಅಂತರಿಕ್ಷ ನೌಕೆಯೊಂದರಲ್ಲಿ ಇರಬೇಕಾದ ಸಂವಹನ ಸಾಧನಗಳು, ಕ್ಯಾಮೆರಾಗಳು, ಮೈಕ್ರೋಫೋನ್, ಎಕ್ಸ್–ರೇ, ಇನ್‌ಫ್ರಾರೆಡ್ ಸಂವೇದಕಗಳು – ಇಂಥವನ್ನು ಈ ಅಂತರಿಕ್ಷ ನೌಕೆ ಹೊಂದಿರಲಿದೆ. ಆದರೆ ಎಲ್ಲವೂ ಅತಿ ಸೂಕ್ಷ್ಮ ಗಾತ್ರದಲ್ಲಿ. ನ್ಯಾನೋ ಎಂದರೆ ಮಾನವನ ಕೂದಲನ್ನು ಒಂದು ಸಾವಿರ ಭಾಗಗಳಾಗಿ ಸೀಳಿದರೆ ಸಿಗುವ ಒಂದು ಸೀಳಿನ ಭಾಗ. ಅಷ್ಟು ತೆಳು ಒಂದು ನ್ಯಾನೊ. ಈ ನ್ಯಾನೊ ಸಾಮಗ್ರಿಗಳನ್ನು ಬಳಸಿ ಈ ಮೇಲೆ ಉಲ್ಲೇಖಿಸಿದ ಎಲ್ಲ ಸಾಧನಗಳೂ ಈ ಅಂತರಿಕ್ಷ ನೌಕೆಯಲ್ಲಿ ಇರುತ್ತವೆ. ಅಂತಿಮವಾಗಿ ಎಲ್ಲ ಸಾಧನಗಳನ್ನೂ ಸೇರಿಸಿ ಒಂದು ಪೇಪರ್ ಕ್ಲಿಪ್ ಗಾತ್ರಕ್ಕೆ ಈ ನೌಕೆ ಬರುತ್ತದೆ.
ಅಂತರಿಕ್ಷ ನೌಕೆಗಳಿಗೆ ನಮ್ಮ ಸಾಮಾನ್ಯ ವಾಹನಗಳಿಗೆ ಇರಬೇಕಾದ ಆಕಾರ ಬೇಕಿಲ್ಲ. ಅಂದರೆ ಏರೋಡೈನಾಮಿಕ್ಸ್ ಅಗತ್ಯ ಇರುವುದಿಲ್ಲ. ಬಾಹ್ಯಾಕಾಶದಲ್ಲಿ ಗಾಳಿಯ ಪ್ರತಿರೋಧ ಕಾರಣ, ಯಾವುದೇ ಗಾತ್ರದ ಆಕಾರದ ನೌಕೆಯೂ ವೇಗವಾಗಿ ಸಂಚರಿಸಬಲ್ಲದು. ಹಾಗಾಗಿಯೇ, ಈಗ ಅಂತರಿಕ್ಷದಲ್ಲಿ ಸಂಚರಿಸುತ್ತಿರುವ ಎಲ್ಲ ನೌಕೆಗಳೂ ಕೃತಕ ಉಪಗ್ರಹದಂತೆ ಡಬ್ಬಿಯಂತೆಯೋ, ಆ್ಯಂಟನಾಗಳನ್ನು ಹೊಂದಿರುವ ಸಂಕೀರ್ಣವಾದ ಆಕೃತಿಯಂತೆಯೋ ಇರುತ್ತವೆ. ಈ ಪೇಪರ್ ಕ್ಲಿಪ್ ಗಾತ್ರದ ಅಂತರಿಕ್ಷ ನೌಕೆ ಸಹ ಇದೇ ರೀತಿ ಸಂಕೀರ್ಣವಾದ ಆಕಾರವನ್ನು ಹೊಂದಿದೆ.
ಇದರ ಮುಖ್ಯ ಕೆಲಸ, ರಹಸ್ಯಮಯ ಗುಣಗಳನ್ನು ಹೊಂದಿರುವ ಕಪ್ಪುರಂಧ್ರಗಳನ್ನು ಅಧ್ಯಯನ ಮಾಡುವುದು. ಈ ಅಂತರಿಕ್ಷ ನೌಕೆಯ ವಿಶೇಷತೆಯೆಂದರೆ, ಇದು ಸಂಚರಿಸಲು ಪ್ರತ್ಯೇಕವಾದ ಶಕ್ತಿಮೂಲದ ಅಗತ್ಯವೇ ಇಲ್ಲ. ಇದರಲ್ಲಿರುವ ಸೌರ ಫಲಕಗಳೇ ಶಕ್ತಿಯನ್ನು ಉತ್ಪಾದಿಸುತ್ತವೆ. ಇದಕ್ಕೆ ಅಂತರಿಕ್ಷದ ಯಾವುದೇ ರೀತಿಯ ಬೆಳಕು ಸಾಕು. ಸೂರ್ಯನ ಬೆಳಕು, ನಕ್ಷತ್ರಗಳ ಬೆಳಕು, ಗ್ರಹಗಳು ಪ್ರತಿಫಲಿಸುವ ಬೆಳಕು – ಹೀಗೆ. ಆದರೆ, ಸಂಪರ್ಕಕ್ಕೆ ಮಾತ್ರ ಇದು ಲೇಸರ್ ಆಧಾರಿತ ಶಕ್ತಿ ಮೂಲವನ್ನು ಬಳಸುತ್ತದೆ.
ಇದರ ಹಿಂದಿರುವ ತರ್ಕ ಮಾತ್ರ ಸುಲಭವಾಗಿದೆ. ಲೇಸರ್ ಅತಿ ನೇರವಾಗಿ ಸಂಚರಿಸಬಲ್ಲ ಹಾಗೂ ಹೆಚ್ಚು ಶಕ್ತಿಯನ್ನು ಹೊಂದಿರುವ ಬೆಳಕಿನ ವಿಧ. ಅದು ಅತಿ ನಿಖರವಾಗಿ ದತ್ತಾಂಶವನ್ನು ರವಾನೆ ಮಾಡುತ್ತದೆ. ತಾನು ಕ್ಲಿಕ್ಕಿಸುವ ಚಿತ್ರಗಳು, ದಾಖಲಿಸುವ ಶಬ್ದಗಳು, ಇನ್‌ಫ್ರಾರೆಡ್ ಸಂಜ್ಞೆಗಳನ್ನು ಈ ನೌಕೆಯು ಲೇಸರ್ ಕಿರಣಗಳಿಗೆ ಬದಲಾಯಿಸಿ ಭೂಮಿಗೆ ಕಳುಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.