ADVERTISEMENT

ಚಂದ್ರನ ಮೂಲಕ ಬ್ರಹ್ಮಾಂಡದ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 15:09 IST
Last Updated 5 ಡಿಸೆಂಬರ್ 2024, 15:09 IST
ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದ ವಿಜ್ಞಾನಿಗಳು
ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದ ವಿಜ್ಞಾನಿಗಳು   

ಬೆಂಗಳೂರು: 2040ರ ವೇಳೆಗೆ ಚಂದ್ರನ ಅಂಗಳದಲ್ಲಿ ಮಾನವನನ್ನು ಇಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ( ಇಸ್ರೊ) ಮಹತ್ವದ ಯೋಜನೆಗೆ ದೇಶದ ಪ್ರಮುಖ ವಿಜ್ಞಾನ ಸಂಶೋಧನಾ ಸಂಸ್ಥೆಗಳು ಕೈಜೋಡಿಸಿವೆ.

ಚಂದ್ರನನ್ನು ಕೇಂದ್ರವಾಗಿಟ್ಟುಕೊಂಡು ಬ್ರಹ್ಮಾಂಡದ ಅಧ್ಯಯನ ನಡೆಸುವ ಉದ್ದೇಶದಿಂದ ಇಲ್ಲಿನ ರಾಮನ್‌ ಸಂಶೋಧನಾ ಸಂಸ್ಥೆಯಲ್ಲಿ  ಭಾರತದ ಮುಂದಿನ ಚಂದ್ರಯಾನಗಳು ಮತ್ತು ಬ್ರಹ್ಮಾಂಡದ ಅಧ್ಯಯನ ಕುರಿತು ಮೂರು ದಿನಗಳ ವಿಚಾರಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು ಮತ್ತು ಉದ್ಯಮಗಳ ಪ್ರತಿನಿಧಿಗಳು ಭಾಗವಹಿಸಿ ಮಹತ್ವದ ವಿಷಯಗಳನ್ನು ಚರ್ಚಿಸಿದರು.

'ಚಂದ್ರನ ಮೇಲೆ ಮಾನವನನ್ನು ಕಳುಹಿಸಿ ಅಲ್ಲಿನ ಅಧ್ಯಯನಕ್ಕೆ ಮಾತ್ರ ಸೀಮಿತವಾಗದೆ, ಬ್ರಹ್ಮಾಂಡದ ಬಗ್ಗೆಯೂ ಸಂಶೋಧನೆ ನಡೆಸಿ ಮಾಹಿತಿಗಳನ್ನು ಕಲೆ ಹಾಕಲು ನಿರ್ಧರಿಸಲಾಗಿದೆ. ಭೂಮಿ ಅಥವಾ ಬಾಹ್ಯಾಕಾಶದ ಇತರ ಸ್ಥಳಕ್ಕಿಂತ ಬ್ರಹ್ಮಾಂಡದ ಅಧ್ಯಯನಕ್ಕೆ ಚಂದ್ರನ ಮೇಲಿನ ವಾತಾವರಣವೇ ಅತ್ಯಂತ ಪ್ರಶಸ್ತ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟರು’ ಎಂದು ರಾಮನ್‌ ಸಂಶೋಧನಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಆಸ್ಟ್ರೊನಾಮಿಕಲ್ ಸೊಸೈಟಿ ಆಫ್‌ ಇಂಡಿಯಾ (ಎಎಸ್‌ಐ) ವಿಚಾರಸಂಕಿರಣವನ್ನು ಹಮ್ಮಿಕೊಂಡಿತ್ತು. ಇದರಲ್ಲಿ, ರಾಮನ್‌ ಸಂಶೋಧನಾ ಸಂಸ್ಥೆ (ಆರ್‌ಆರ್‌ಐ) ಮತ್ತು ಯು.ಆರ್‌.ರಾವ್‌ ಸ್ಯಾಟಿಲೈಟ್‌ ಸೆಂಟರ್‌ (ಯುಆರ್‌ಎಸ್‌ಸಿ), ಇಸ್ರೊ ಮತ್ತು ಇತರ ಸಂಸ್ಥೆಗಳ  ಸಂಶೋಧಕರೂ ಸೇರಿ 60 ಮಂದಿ ಭಾಗವಹಿಸಿದ್ದರು.

ಚಂದ್ರನ ಮೇಲಿಂದ ಬಾಹ್ಯಾಕಾಶದ ಹವಾಮಾನವನ್ನು ಅರ್ಥೈಸುವುದು, ಭವಿಷ್ಯದ ಚಂದ್ರಯಾನಗಳ ಮೂಲಕ ಖಗೋಳದ ಪ್ರಯೋಗಗಳನ್ನು ನಡೆಸುವುದು, ಮುಖ್ಯವಾಗಿ ಅತಿನೇರಳೆ ಮತ್ತು ಕ್ಷ–ಕಿರಣಗಳನ್ನು ಗಮನಿಸುವುದು, ಚಂದ್ರನ ರೇಡಿಯೊ ನಿಶಬ್ದ‌ತೆ ಬಳಸಿ ಬ್ರಹ್ಮಾಂಡದಲ್ಲಿ ಅನ್ವೇಷಣೆ ನಡೆಸುವುದು, ಉಲ್ಕೆಗಳು ಮತ್ತು ಕಾಸ್ಮಿಕ್‌ ಕಿರಣಗಳ ಅಧ್ಯಯನ ನಡೆಸುವ ಕುರಿತು ಚರ್ಚೆ ನಡೆದಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.