ADVERTISEMENT

ಬಾವಲಿಯಲ್ಲಿ ಆರು ಹೊಸ ಕೊರೊನಾ ವೈರಸ್‌ ಪತ್ತೆ: ಅಧ್ಯಯನ ವರದಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 12:23 IST
Last Updated 15 ಏಪ್ರಿಲ್ 2020, 12:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಮ್ಯಾನ್ಮಾರ್‌ನಲ್ಲಿ ಕಂಡುಬರುವ ಬಾವಲಿಗಳಲ್ಲಿ ಆರು ಹೊಸ ಕೊರೊನಾ ವೈರಸ್‌ಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಸಾವಿರಾರು ರೀತಿಯ ಕೊರೊನಾ ವೈರಾಣುಗಳು ಬಾವಲಿಗಳಲ್ಲಿ ಇರಬಹುದು ಎಂದು ತಜ್ಞರು ಅಂದಾಜಿಸಿದ್ದು, ಅವುಗಳನ್ನು ಇನ್ನೂ ಪತ್ತೆ ಹಚ್ಚಬೇಕಿದೆ ಎಂದಿದ್ದಾರೆ.

ಈ ಕುರಿತು ಅಮೆರಿಕದ ಸ್ಮಿತ್‌ಸೊನಿಯನ್ ನ್ಯಾಷನಲ್‌ ಝೂ ಆ್ಯಂಡ್‌ ಕನ್ಸರ್ವೇಷನ್ ಬಯಾಲಾಜಿ ಇನ್ಸ್‌ಟಿಟ್ಯೂಟ್‌ ವಿಜ್ಞಾನಿಗಳು ‘ಪ್ಲಾಸ್‌ ಒನ್‌’ ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಅಧ್ಯಯನ ವರದಿ ಪ್ರಕಟಿಸಿದ್ದಾರೆ.

2016ರ ಮೇ ತಿಂಗಳಿಂದ 2018ರ ಆಗಸ್ಟ್‌ ವರೆಗೆ ನಡೆಸಿದ ಅಧ್ಯಯನದಲ್ಲಿ 750ಕ್ಕೂ ಹೆಚ್ಚು ಬಾವಲಿಗಳ ಲಾಲಾರಸ ಹಾಗೂ ಮಲದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ADVERTISEMENT

ಬಾವಲಿಗಳಲ್ಲಿ ಎಷ್ಟು ವಿಧದ ಕೊರೊನಾ ವೈರಸ್‌ಗಳು ಇರಬಹುದು ಎಂಬ ಬಗ್ಗೆ ವಿಸ್ತೃತ ಅಧ್ಯಯನಕ್ಕೆ ಈ ಸಂಶೋಧನೆ ನೆರವಾಗುವ ಜೊತೆಗೆ, ಅವುಗಳಿಂದ ಹರಡಬಹುದಾದ ಸೋಂಕು ರೋಗ ಹಾಗೂ ಅದನ್ನು ತಡೆಗಟ್ಟುವ ಕುರಿತು ಮತ್ತಷ್ಟೂ ಸಂಶೋಧನೆ ಕೈಗೊಳ್ಳಬಹುದಾಗಿದೆ ಎಂದೂ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಹೊಸದಾಗಿ ಪತ್ತೆ ಮಾಡಲಾಗಿರುವ ವೈರಸ್‌ಗಳಿಗೂ ಸಾರ್ಸ್‌, ಸಾರ್ಸ್‌–ಸಿಒವಿ–2 ಹರಡಿದ್ದ ವೈರಸ್‌ಗಳಿಗೂ ನಿಕಟ ಸಂಬಂಧ ಇಲ್ಲ. ಆದರೆ, ವನ್ಯಜೀವಿಗಳ ಆರೋಗ್ಯ, ಪರಿಸರ ಹಾಗೂ ಮಾನವನ ಆರೋಗ್ಯದ ಜೊತೆ ಇರುವ ನಂಟಿನ ಬಗ್ಗೆ ಕೋವಿಡ್‌–19 ಪಿಡುಗು ನಮ್ಮನ್ನು ಯೋಚಿಸುವಂತೆ ಮಾಡುತ್ತದೆ’ ಎಂದು ಸಂಸ್ಥೆಯ ಜಾಗತಿಕ ಆರೋಗ್ಯ ಕಾರ್ಯಕ್ರಮದಡಿ ಕಾರ್ಯನಿರ್ವಹಿಸಿದ್ದ ಮಾರ್ಕ್‌ ವ್ಯಾಲಿಟುಟ್ಟೊ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.