ADVERTISEMENT

ಕುತೂಹಲ ಕೆರಳಿಸಿದ ವಿಜ್ಞಾನ ಸಮಾವೇಶ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 13:03 IST
Last Updated 15 ಡಿಸೆಂಬರ್ 2018, 13:03 IST
ಕಲಬುರ್ಗಿಯಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಬೆಂಗಳೂರಿನ ಕ್ಯೂಟಿಪೈ ಸಂಸ್ಥೆಯ ವಿದ್ಯಾರ್ಥಿಗಳು ‘ಸೆನ್ಸರ್‌ ಟ್ಯಾಪ್‌’ ಎಂಬ ರೋಬಾಟಿಕ್‌ ಪ್ರದರ್ಶನ ನೀಡಿದರು
ಕಲಬುರ್ಗಿಯಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಬೆಂಗಳೂರಿನ ಕ್ಯೂಟಿಪೈ ಸಂಸ್ಥೆಯ ವಿದ್ಯಾರ್ಥಿಗಳು ‘ಸೆನ್ಸರ್‌ ಟ್ಯಾಪ್‌’ ಎಂಬ ರೋಬಾಟಿಕ್‌ ಪ್ರದರ್ಶನ ನೀಡಿದರು   

ಕಲಬುರ್ಗಿ: ನಗರದಲ್ಲಿ ಶನಿವಾರ ಆರಂಭವಾದ 26ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶವು ಮೊದಲ ದಿನವೇ ಮಕ್ಕಳಲ್ಲಿ ಕುತೂಹಲವನ್ನು ಹೆಚ್ಚಿಸಿತು.

ಸಮಾವೇಶಕ್ಕೂ ಮುನ್ನ ನಡೆದ ವಿಜ್ಞಾನ ಜಾಥಾದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹುಮ್ಮಸ್ಸಿನಿಂದ ಕುಣಿಯುತ್ತ ಬಂದರು. ಜಾಥಾ ಮುಗಿಯುತ್ತಿದ್ದಂತೆಯೇ, ಪಕ್ಕದಲ್ಲೇ ಇದ್ದ ಜಿಲ್ಲಾ ವಿಜ್ಞಾನ ಕೇಂದ್ರದ ‘ಸಂಚಾರ ವಿಜ್ಞಾನ ಪ್ರದರ್ಶನ’ದ ವಾಹನಕ್ಕೆ ಮುಗಿಬಿದ್ದರು. ಅದರಲ್ಲಿನ ಎಲೆಕ್ಟ್ರಾನಿಕ್‌ ಸಂಶೋಧನಾ ಉಪಕರಣಗಳು, ಮೋಜಿನ ವಿಜ್ಞಾನ, ತ್ರಿ–ಡಿ ತಾರಾಮಂಡಲ, ರಾಕೆಟ್‌ ಉಡಾವಣೆಯ ಮಾದರಿ, ಡೈನೋಸಾರ್‌ಗಳನ್ನು ಕುತೂಹಲದಿಂದ ವೀಕ್ಷಿಸಿದರು.

ಬೆಂಗಳೂರಿನ ಕ್ಯೂಟಿಪೈ ಸಂಸ್ಥೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ರೋಬಾಟಿಕ್‌ ಪ್ರಪಂಚ’ ವಿದ್ಯಾರ್ಥಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿತು. ನೀರು ಮತ್ತು ವಿದ್ಯುತ್‌ನ್ನು ಪೋಲು ಮಾಡುವುದನ್ನು ತಡೆಯಲು ಬಳಸುವ ರೋಬಾಟ್‌ಗಳ ಕಾರ್ಯಕ್ಷಮತೆ ಗಮನ ಸೆಳೆಯಿತು.

ADVERTISEMENT

ಕೆಲವರು ಕಿರು ನಾಟಕಗಳ ಮೂಲಕ ವೈಜ್ಞಾನಿಕ ಪ್ರಯೋಗಗಳನ್ನು ಪ್ರದರ್ಶಿಸಿದರು.

ಸಮಾವೇಶ ಉದ್ಘಾಟಿಸಿದ ಸಮಾಜ ಕಲ್ಯಾಣ ಸಚಿವ ಪ್ರಯಾಂಕ್‌ ಖರ್ಗೆ, ‘ಪದವಿ ಮುಗಿಯುವ ಮುನ್ನವೇ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ವಿಜ್ಞಾನ–ತಂತ್ರಜ್ಞಾನದ ಮಾಹಿತಿ ಪಡೆಯಬಹುದು. ಪ್ರತಿಭೆಗಳನ್ನು ಪೋಷಿಸುವ ಸಲುವಾಗಿ ರಾಜ್ಯ ಸರ್ಕಾರ ಈ ಅವಕಾಶ ಕಲ್ಪಿಸಿದೆ’ ಎಂದು ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್‌ ಹಮ್ಮಿಕೊಂಡಿರುವ ಮೂರು ದಿನಗಳ ಸಮಾವೇಶದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 300ಕ್ಕೂ ಹೆಚ್ಚು ಯೋಜನಾ ವರದಿಗಳನ್ನು ಮಂಡಿಸಲಿದ್ದಾರೆ. ಇಲ್ಲಿ ಆಯ್ಕೆಯಾದ 30 ತಂಡಗಳು ಡಿ. 27ರಿಂದ 31ರವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಪಾಲ್ಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.