ADVERTISEMENT

Drone Innovation: ಸೂಪರ್‌ ಡ್ರೋನ್ ಪಕ್ಷಿ!

ನೇಸರ ಕಾಡನಕುಪ್ಪೆ
Published 1 ಜುಲೈ 2025, 23:30 IST
Last Updated 1 ಜುಲೈ 2025, 23:30 IST
   

ಡ್ರೋನ್‌ಗಳ ಅನ್ವೇಷಣೆಯ ಬಳಿಕ ಛಾಯಾಗ್ರಹಣದ ಚಿತ್ರಣವೇ ಬದಲಾಗಿರುವುದು ನಿಮಗೆ ತಿಳಿದೇ ಇದೆ ಅಲ್ಲವೇ? ಮನರಂಜನೆ ಕ್ಷೇತ್ರವಂತೂ ಸಾಕಷ್ಟು ಬೆಳೆದಿದೆ. ಇದಿಷ್ಟೇ ಅಲ್ಲದೇ, ನೂರಾರು ಕಿಲೋಮೀಟರ್‌ ಸಾಗಬಲ್ಲ, ಯುದ್ಧಕ್ಕೆ ಬಳಕೆಯಾಗುವ ಡ್ರೋನ್‌ಗಳು, ವೈಜ್ಞಾನಿಕ ಡ್ರೋನ್‌ಗಳು, ಸರಕು ಸಾಗಣೆಯ ಡ್ರೋನ್‌ಗಳು – ಹೀಗೆ, ಡ್ರೋನ್‌ಗಳ ವಿಕಸನ ವೇಗಗತಿಯಲ್ಲಿ ಸಾಗುತ್ತಿದೆ. ಈ ವಿಕಸನದ ಹಾದಿಗೆ ಈಗ ಹೊಸ ಸೇರ್ಪಡೆಯಾಗಿದೆ. ಅದೇ, ‘ಸೂಪರ್‌’ ಡ್ರೋನ್ ಪಕ್ಷಿಯ ಅನ್ವೇಷಣೆ.

ಡ್ರೋನ್‌ಗಳ ಕಾರ್ಯನಿರ್ವಹಣೆಗೆ ಅತಿ ಪ್ರಮುಖವಾಗಿ ಕಾರ್ಯನಿರ್ವಹಿಸುವುದೇ ‘ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ’ (ಜಿಪಿಎಸ್‌). ಅಂದರೆ, ಭೂಮಿಯ ಮೇಲಿರುವ ನಿಯಂತ್ರಕದ ಸಹಾಯದಿಂದ ರೇಡಿಯೊ ಸಂಜ್ಞೆಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಡ್ರೋನ್‌ ತನ್ನ ದಿಕ್ಕು ದಾರಿಗಳನ್ನು ಸೂಕ್ತರೀತಿಯಲ್ಲಿ ಕಂಡುಕೊಳ್ಳುತ್ತದೆ. ಒಂದು ಇಂಚು ವ್ಯತ್ಯಾಸವಿಲ್ಲದಂತೆ ನಿಗದಿತ ಸ್ಥಳಗಳಿಗೆ ತಲುಪಬಹುದಾದ ಸಾಧ್ಯತೆ ಅವಕ್ಕೆ ಸಿಕ್ಕಿರುವುದೇ ಈ ಜಿಪಿಎಸ್‌ ವ್ಯವಸ್ಥೆಯಿಂದ. ಇದೇ ಜಿಪಿಎಸ್‌ ವ್ಯವಸ್ಥೆಯನ್ನು ಬಳಸಿಕೊಂಡು ಡ್ರೋನ್‌ಗಳನ್ನು ಕೆಲವು ಪ್ರದೇಶಗಳ ಒಳ ಪ್ರವೇಶಿಸದಂತೆ ನಿರ್ಬಂಧಿಸಬಹುದಾದ ಅವಕಾಶವೂ ಇದೆ. ಇದು ಸುರಕ್ಷೆಯ ದೃಷ್ಟಿಯಿಂದ ಅಗತ್ಯವಾದುದು.

ಇದೀಗ ಜಿಪಿಎಸ್‌ ಸಂಜ್ಞೆಗಳೇ ಬೇಕಿಲ್ಲದ, ತನಗೆ ತಾನೇ ತನ್ನ ಸ್ವಂತ ಬುದ್ಧಿಯಿಂದ ಲೆಕ್ಕಾಚಾರಗಳನ್ನು ಹಾಕಿಕೊಂಡು ತನಗೆ ಬೇಕಾದ ಅಥವಾ ಪೂರ್ವನಿಗದಿತ ಜಾಗಗಳಿಗೆ ತಲುಪುವ ಡ್ರೋನ್‌ಗಳನ್ನು ಹಾಂಗ್‌ಕಾಂಗ್‌ ವಿಶ್ವವಿದ್ಯಾಲಯದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಹಾಗೂ ವಿಜ್ಞಾನಿ ಪ್ರೊ. ಫೂ ಝಾಂಗ್‌ ಅವರ ತಂಡವು ಅನ್ವೇಷಿಸಿದೆ. ಇದಕ್ಕೆ ಅವರ ತಂಡವು ‘ಸೂಪರ್‌’ ಡ್ರೋನ್ ಪಕ್ಷಿ ಎಂಬ ಹೆಸರನ್ನೂ ಇಟ್ಟಿದ್ದಾರೆ.

ADVERTISEMENT

ಈ ಡ್ರೋನ್‌ಗೆ ಅವರು ಪಕ್ಷಿ ಎಂದು ಕರೆದಿರುವುದಕ್ಕೆ ಕೆಲವು ಕಾರಣಗಳಿವೆ. ಮೊದಲನೆಯ ಕಾರಣ ಪಕ್ಷಿಗಳ ಸಂಚಾರಕ್ಕೆ ಇತರರ ಆಜ್ಞೆ ಬೇಕಿಲ್ಲ. ಅವಕ್ಕೆ ಸ್ವಂತ ಬುದ್ಧಿ ಇರುತ್ತದೆ. ಎರಡನೇ ಕಾರಣ ಬಹುತೇಕ ಪಕ್ಷಿಗಳು ಕತ್ತಲಾದ ಮೇಲೇ ವಿರಾಮ ಪಡೆಯುವುದು ನಿಜವಾದರೂ ಕೆಲವು ಪಕ್ಷಿಗಳು ನಿರಂತರವಾಗಿ ಸಾವಿರಾರು ಕಿಲೋಮೀಟರ್‌ ಗುಳೆ ಹೋಗುವ ಶಕ್ತಿಯನ್ನು ಹೊಂದಿರುತ್ತವೆ. ಇದೇ ಕಾರಣಕ್ಕಾಗಿ ಈ ಡ್ರೋನ್‌ ಅನ್ನು ಪಕ್ಷಿ ಎಂದು ಈ ವಿಜ್ಞಾನಿಗಳು ಕರೆದಿದ್ದಾರೆ.

ಏನಿದು ತಂತ್ರಜ್ಞಾನ?

ಡ್ರೋನ್‌ ತಂತ್ರಜ್ಞಾನಕ್ಕೆ ಇದು ಖಂಡಿತವಾಗಿಯೂ ಹೊಸ ಸೇರ್ಪಡೆಯೇ. ಸಾಮಾನ್ಯವಾಗಿ ಅಂತರದೇಶೀಯ ಸಂಚಾರದ ಡ್ರೋನ್‌ಗಳು ಹಗಲಿನ ಸಮಯದಲ್ಲೇ ಸಂಚರಿಸಬೇಕು. ಜೊತೆಗೆ, ಅವುಗಳಿಗೆ ನಿರಂತರವಾಗಿ ಜಿಪಿಎಸ್‌ ವ್ಯವಸ್ಥೆ ಇರಬೇಕು. ಹಾಗಾಗಿ, ಡ್ರೋನ್‌ಗಳನ್ನು ಅರಣ್ಯ ಪ್ರದೇಶಗಳ ಮೂಲಕ ಸಂಚರಿಸದಂತೆ ಸಾಮಾನ್ಯವಾಗಿ ನೋಡಿಕೊಳ್ಳಲಾಗುತ್ತದೆ. ಏಕೆಂದರೆ, ಅರಣ್ಯ ಪ್ರದೇಶದಲ್ಲಿ ಜಿಪಿಎಸ್‌ ಕೆಲವೊಮ್ಮೆ ಸಿಗದೇ ಇರುವುದು, ಜೊತೆಗೆ, ಜಿಪಿಎಸ್‌ ಮೂಲಕ ಡ್ರೋನ್‌ ನಿಯಂತ್ರಿಸುವ ಭೂಮಿಯ ಮೇಲಿನ ಸಾಧನಗಳಿಗೆ ಅಂತರಜಾಲ ಹಾಗೂ ಇತರ ಸಂಪರ್ಕ ತಂತ್ರಜ್ಞಾನಗಳು ಲಭ್ಯವಾಗದೇ ಇರುವುದು. ನೆನಪಿರಲಿ, ಜಿಪಿಎಸ್‌ಗೆ ಮೊಬೈಲ್‌ ಸೇವಾ ಜಾಲ ಬೇಕಿಲ್ಲ. ಅದು ನೇರವಾಗಿ ಉಪಗ್ರಹಗಳಿಂದ ಸಂಪರ್ಕ ಪಡೆಯುತ್ತದೆ. ನಮ್ಮ ಕೃತಕ ಉಪಗ್ರಹಗಳು ಎಷ್ಟೇ ಸುಧಾರಿಸಿದ್ದರೂ ನಮ್ಮ ಭೂಖಂಡದ ಬಹುತೇಕ ಪ್ರಮಾಣವನ್ನು ಆವರಿಸುವ ಶಕ್ತಿ ಇದೆ ಎಂದು ನಾವು ಹೇಳಿಕೊಂಡರೂ ಪರಿಪೂರ್ಣ ಜಾಲವ್ಯಾಪ್ತಿ ಜಿಪಿಎಸ್‌ಗೆ ಸಹ ಇಲ್ಲ. ಹಾಗಾಗಿ, ಅರಣ್ಯಭಾಗದ ಕೆಲವು ಭಾಗಗಳಲ್ಲಿ ಜಾಲವ್ಯಾಪ್ತಿಯ ಕೊರತೆಯಿಂದಾಗಿ ಡ್ರೋನ್‌ ದಾರಿ ತಪ್ಪುವ ಹಾಗೂ ಹಾಳಾಗುವ ಸಾಧ್ಯತೆ ಇರುತ್ತದೆ.

ಹಾಗಾಗಿ, ಇಲ್ಲಿ ಹೊಸ ತಂತ್ರಜ್ಞಾನದ ಸೇರ್ಪಡೆಯಾಗಿದೆ. ಡ್ರೋನ್‌ಗಳಲ್ಲಿ ಜಿಪಿಎಸ್‌, ಮೊಬೈಲ್ ನೆಟ್‌ವರ್ಕ್‌ ವ್ಯವಸ್ಥೆ, ಅಂತರಜಾಲ ಮಾತ್ರವೇ ಅಲ್ಲದೇ ಕೆಲವು ಇತರ ಸೂಕ್ಷ್ಮ ಸಂವಹನ ಸಾಧನಗಳಿರುತ್ತವೆ. ಅಂದರೆ, ಅಡೆ ತಡೆ ಗುರುತಿಸುವ ಸಂವೇದನಾ ಸಾಧನಗಳು. ಇವು ಸಣ್ಣಪುಟ್ಟ ದೂಳಿನ ಕಣಗಳಿಂದ ಹಿಡಿದು, ರೆಂಬೆ ಕೊಂಬೆ, ಕಡಿದಾದ ಕೊರಕಲು, ಕಲ್ಲು ಇತ್ಯಾದಿ ಅಡೆತಡೆಗಳನ್ನು ಗುರುತಿಸಿ ಡ್ರೋನ್‌ಗೆ ದಾರಿ ತೋರುತ್ತವೆ. ಕೆಲವು ಸುಧಾರಿತ ಯುದ್ಧ ಡ್ರೋನ್‌ಗಳಲ್ಲಿ ರೇಡಾರ್‌ ವ್ಯವಸ್ಥೆ ಸಹ ಇರುತ್ತದೆ.

ಜಿಪಿಎಸ್‌ ಇಲ್ಲದೆಯೂ ದಾರಿ ಹುಡುಕುವಂಥ ಕೃತಕ ಬುದ್ಧಿಮತ್ತೆಯ ಮಿದುಳನ್ನು ಈ ‘ಸೂಪರ್‌’ ಡ್ರೋನ್ ಪಕ್ಷಿಯಲ್ಲಿ ಇರಿಸಲಾಗಿದೆ. ಈ ಮಿದುಳಲ್ಲಿ ಡ್ರೋನ್‌ ಸಂಚರಿಸಬೇಕಾದ ಮಾರ್ಗ, ನಕ್ಷೆ, ಗುರಿ, ವಾಪಸ್‌ ಬರಬೇಕಾದ ಮಾರ್ಗ, ಸಮಯ ಇತ್ಯಾದಿ ಸಂಕೀರ್ಣ ದತ್ತಾಂಶಗಳನ್ನು ಅಡಕಗೊಳಿಸಲಾಗಿರುತ್ತದೆ. ಅವಗೆಂಪು ಬೆಳಕನ್ನು ಬಳಸಿಕೊಂಡು ಪರಿಸರದ ಬದಲಾವಣೆಗಳನ್ನೂ ಗುರುತಿಸುವ ಶಕ್ತಿಯನ್ನು ಈ ಡ್ರೋನ್‌ನಲ್ಲಿ ತುಂಬಲಾಗಿದೆ. ಹಾಗಾಗಿ, ಈ ಡ್ರೋನ್‌ ಕತ್ತಲಲ್ಲೂ ಸುಲಭವಾಗಿ ಸಂಚರಿಸಬಲ್ಲದು. ಹಾಗಾಗಿ, ಡ್ರೋನ್‌ಗಳಿಗೆ ಇರುವ ಅತಿ ಮುಖ್ಯ ದೌರ್ಬಲ್ಯಗಳಾದ ಜಿಪಿಎಸ್ ಲಭ್ಯತೆ ಹಾಗೂ ಬೆಳಕಿನ ಮೂಲಗಳನ್ನೂ ಪಕ್ಕಕ್ಕಿಟ್ಟು ಸ್ವಯಂಚಾಲಿತವಾಗಿ ಹಾಗೂ ಸ್ವಶಕ್ತಿಯ ಸಹಾಯದಿಂದ ತನ್ನ ಗುರಿ ತಲುಪಬಲ್ಲ ಸಾಮರ್ಥ್ಯವನ್ನು ಈ ಡ್ರೋನ್‌ ಹೊಂದಿದೆ.

ಅತಿ ವೇಗದ ಚಾಲನೆ

ಜೊತೆಗೆ ಅತಿ ವೇಗದ ಚಾಲನೆಗೂ ಇದು ಸೈ ಎಂದಿದೆ. ಸದ್ಯಕ್ಕೆ ಕೇವಲ ಹಗುರ ಡ್ರೋನ್‌ಗಳ ತಯಾರಿಯಾಗಿದೆ. ಇದು ಗರಿಷ್ಠ ಗಂಟೆಗೆ 45 ಮೈಲು (ಸುಮಾರು 73 ಕಿಲೋಮೀಟರ್‌) ವೇಗದಲ್ಲಿ ಸಂಚರಿಸುವ ಶಕ್ತಿ ಹೊಂದಿದೆ. ಕೇವಲ ಒಂದು ಅಡಿ ಗಾತ್ರದ ಈ ಡ್ರೋನ್‌ ಒಂದೂವರೆ ಕಿಲೋಗ್ರಾಂ ತೂಕದ ಹೊರೆ ಹೊರವ ಶಕ್ತಿ ಹೊಂದಿದೆ. ಅಂದಾಜು 230 ಅಡಿಗಳಷ್ಟು ದೂರದಲ್ಲಿನ ಅಡೆತಡೆಗಳನ್ನು ಗುರುತಿಸುವ ಡ್ರೋನ್‌ ಯಾವುದೇ ಕಾರಣಕ್ಕೂ ಎಲ್ಲಿಗೂ ಡಿಕ್ಕಿ ಹೊಡೆಯದಂತೆ ಸುರಕ್ಷಿತವಾಗಿ ಚಲಿಸಬಲ್ಲದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.