ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳು ಬಿರುಸಿನಿಂದ ನಡೆಯುತ್ತಿರುವುದು ಯಾರಿಗೆ ತಾನೇ ತಿಳಿದಿಲ್ಲ! ದಿನೇ ದಿನೇ ಪಂದ್ಯಗಳ ನಡುವಿನ ಆಟ ಕಾವೇರಿರುತ್ತಿರುವ ಮಧ್ಯೆಯೇ ಕ್ರೀಡಾಂಗಣದಲ್ಲಿ ಪುಟಪುಟನೇ ಓಡಾಡುವ ‘ರೋಬೊ ನಾಯಿ’ಯನ್ನು ನೀವು ನೋಡಿರಬೇಕಲ್ಲವೇ? ‘ಚಂಪಕ್’ ಎಂಬ ಹೆಸರನ್ನೂ ಅದಕ್ಕೆ ನಾಮಕರಣ ಮಾಡಲಾಗಿದೆ.
ಓಡುವುದು, ನೆಗೆಯುವುದು, ಕೈಕುಲುಕುವುದು – ಹೀಗೆ ಹಲವು ಬಗೆಯ ಆಂಗಿಕ ಪ್ರದರ್ಶನಗಳನ್ನು ಮಾಡುವ ಪ್ರಯತ್ನವನ್ನು ಈ ರೋಬೊ ನಾಯಿ ಮಾಡುತ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ಡಬ್ಲ್ಯೂಟಿವಿಷನ್ ಮತ್ತು ಆಮ್ನಿಕ್ಯಾಮ್ ಸಹಯೋಗದಲ್ಲಿ ಈ ರೋಬೊವನ್ನು ನಿರ್ಮಿಸಲಾಗಿದೆ. ಇಂತಹುದೇ ಮತ್ತೊಂದು ವಿಸ್ಮಯದ ರೋಬೊವನ್ನು ಅಮೆರಿಕದ ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ಕೂಲ್ ಆಫ್ ಕೆಮಿಕಲ್ ಅಂಡ್ ಬಯೋ ಮಾಲಿಕ್ಯುರ್ ಎಂಜಿನಿಯರಿಂಗ್ ಸಂಸ್ಥೆಯ ಎಂಜಿನಿಯರುಗಳು ಈಗ ಸಂಶೋಧಿಸಿದ್ದಾರೆ. ಇದರ ವಿಶೇಷವೇನೆಂದರೆ, ಇದು ಜಂತುಹುಳುವಿನಿಂದ ಸ್ಫೂರ್ತಿಯನ್ನು ಪಡೆದು ನಿರ್ಮಾಣವಾಗಿರುವ ರೋಬೊ. ಜಂತುಹುಳುವಿನ ರಚನೆ, ಅದರ ಚಲನವಲನವನ್ನು ಅಧ್ಯಯನ ನಡೆಸಿ, ಅದನ್ನೇ ಅನುಕರಿಸುವಂತೆ ಈ ರೋಬೊವನ್ನು ವಿಜ್ಞಾನಿಗಳು ನಿರ್ಮಿಸಿದ್ದಾರೆ.
ಕೇವಲ ಐದು ಇಂಚು ಗಾತ್ರವಿರುವ ಈ ರೋಬೊ ಹತ್ತು ಅಡಿಗಳಷ್ಟು ಎತ್ತರವನ್ನು ಜಿಗಿಯುವ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಸ್ಕೆಟ್ ಬಾಲ್‌ನ ನೆಟ್ ಸುಮಾರು 10 ಅಡಿಗಳಷ್ಟು ಎತ್ತರದಲ್ಲಿ ಇರುತ್ತದೆ. ಈ ನೆಟ್ ಅನ್ನು ತಲುಪಿ ಅದರೊಳಗಿಂದ ತೂರಿ ಆಚೆ ಬಂದು ಈ ರೋಬೊ ಗಮನ ಸೆಳೆದಿದೆ. ಆದರೆ, ಇಲ್ಲಿ ಆಶ್ಚರ್ಯಪಡಬೇಕಾದ್ದು ಈ ರೋಬೊವನ್ನು ಇಷ್ಟು ಎತ್ತರವನ್ನು ಜಿಗಿದಿದೆಯಲ್ಲ ಎಂಬ ವಿಚಾರಕ್ಕಲ್ಲ. ಈ ರೋಬೊಗೆ ಕಾಲುಗಳೇ ಇಲ್ಲ. ಆದರೂ, ಇದಕ್ಕೆ ಅಷ್ಟು ಎತ್ತರವನ್ನು ಜಿಗಿಯುವಷ್ಟು ಶಕ್ತಿ ಇದೆ ಎನ್ನುವುದೇ ಇದರ ಹೆಗ್ಗಳಿಕೆಯಾಗಿದೆ ಎಂದು ವಿಜ್ಞಾನಿಗಳು ವ್ಯಾಖ್ಯಾನಿಸಿದ್ದಾರೆ.
‘ಸೈನ್ಸ್ ರೋಬೊಟಿಕ್ಸ್’ ನಿಯತಕಾಲಿಕೆಯಲ್ಲಿ ಈ ಸಂಶೋಧನೆಯನ್ನು ಭಾರತೀಯ ಮೂಲದ ಸನ್ನಿ ಕುಮಾರ್ ಮತ್ತು ಇಷಾಂತ್ ತಿವಾರಿ ಅವರ ತಂಡವು ಪ್ರಕಟಿಸಿದೆ. ಇವರ ತಂಡದ ಮೊದಲ ಆವಿಷ್ಕಾರವೆಂದರೆ, ಜಂತುಹಳುವಿನ ದೇಹದ ರಚನೆಯ ಅತಿ ಸೂಕ್ಷ್ಮ ಅಧ್ಯಯನ. ಸಾಮಾನ್ಯವಾಗಿ ಸಸ್ತನಿಗಳ ದೇಹವನ್ನೇ ಮನೆ ಮಾಡಿಕೊಳ್ಳುವ ಈ ಜಂತುವು ಸಣ್ಣಕರುಳು, ದೊಡ್ಡಕರುಳಿನಲ್ಲಿ ಸೇರಿಕೊಂಡು ಸಸ್ತನಿಯು ಸೇವಿಸುವ ಆಹಾರವನ್ನೇ ತಾನೂ ತಿನ್ನುತ್ತ ಜೀವಿಸುತ್ತಿರುತ್ತದೆ. ಈ ಹುಳುವು ಎಷ್ಟು ಬಲಶಾಲಿ ಎಂದರೆ, ಜೀರ್ಣಾಂಗ ವ್ಯವಸ್ಥೆಯಲ್ಲಿ ಇರುವ ಹೈಡ್ರೋಕ್ಲೋರಿಕ್ ಆ್ಯಸಿಡ್‌ಗೆ ಸಹಿತ ಈ ಹುಳುವನ್ನು ಅಷ್ಟು ಸುಲಭವಾಗಿ ಕೊಲ್ಲಲು ಸಾಧ್ಯವಾಗುವುದಿಲ್ಲ. ಹಾಗಾಗಿಯೇ, ಶುದ್ಧೀಕರಿಸಿದ ನೀರಿನ ಸೇವನೆ, ಆಗಿಂದ್ದಾಗ್ಗೆ ಜಂತುಹುಳುಗಳನ್ನು ಕೊಲ್ಲುವ ಔಷಧವನ್ನು ಸೇವಿಸಬೇಕು ಎಂದು ವೈದ್ಯರು ಹೇಳುವುದು. ಇಷ್ಟು ಬಲಶಾಲಿಯಾದ ಈ ಹುಳುವು ದೇಹದಲ್ಲಿನ ಅತಿ ಕ್ಲಿಷ್ಟ ರಚನೆಯ ಅಂಗಾಗಗಳ ಮೂಲಕ ಹೇಗೆ ಚಲಿಸುತ್ತದೆ ಎಂಬುದನ್ನು ವಿಜ್ಞಾನಿಗಳು ಅವಲೋಕಿಸಿದ್ದಾರೆ. ಮೊದಲನೆಯದಾಗಿ ಜಂತುಹುಳುವು ಕೊಳವೆಯಾಕಾರದ ಕಾಲುಗಳಿಲ್ಲದ ಜೀವಿ. ಆದರೆ, ಅತಿ ವೇಗವಾಗಿ ಮುನ್ನುಗ್ಗುವ, ಜೀರ್ಣಾಂಗ ದ್ರಾವಣ, ಆಹಾರದ ನಡುವೆಯೂ ಮುನ್ನುಗ್ಗಿ ಪುಟಿಯುವ ಸಾಮರ್ಥ್ಯವನ್ನು ಹೊಂದಿರುವುದನ್ನು ಅಧ್ಯಯನ ಮಾಡಿದ್ದಾರೆ. ಅಲ್ಲದೇ, ಜೀವಿಗಳ ದೇಹದೊಳಕ್ಕೆ ನೀರಿನಿಂದ ಪುಟಿದು ದೇಹದ ಗಾಯ ಅಥವಾ ಇತ್ಯಾದಿ ತೆರೆದ ಭಾಗಗಳಿಂದ ದೇಹದೊಳಗೆ ತೂರಿಕೊಳ್ಳುವ ಚುರುಕುತನ ಇವರನ್ನು ಬೆರಗಾಗಿಸಿದೆ.
ಅದೇ ಗುಣವನ್ನು ವಿಜ್ಞಾನಿಗಳು ಈ ರೋಬೊವಿನ ವಿನ್ಯಾಸದಲ್ಲಿ ತಂದಿದ್ದಾರೆ. ಸದ್ಯಕ್ಕೆ ಅಧ್ಯಯನದ ಉದ್ದೇಶದಿಂದ ಕೇವಲ ಐದು ಇಂಚಿನ ರೋಬೊ ತಯಾರಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಅಗತ್ಯಗಳಿಗೆ ತಕ್ಕಂತೆ ವಿವಿಧ ಗಾತ್ರಗಳಲ್ಲಿ ಈ ರೋಬೊವಿನ ನಿರ್ಮಾಣ ಮಾಡಬಹುದಂತೆ. ಕಾಲುಗಳಿಲ್ಲದ ಜಂತುಹುಳುವನ್ನೇ ಆಕಾರದಲ್ಲಿ ಹೋಲುವ ರೋಬೊವನ್ನು ರಬ್ಬರೀಕರಿಸಿದ ವಸ್ತುವಿನಿಂದ ನಿರ್ಮಾಣ ಮಾಡಲಾಗಿದೆ. ಅತಿ ವೇಗವಾಗಿ ಕುಗ್ಗುವ–ಹಿಗ್ಗುವ ಮೂಲಕ ಇದು ಹಿಂದೆ–ಮುಂದೆ ಚಲಿಸಬಹುದು. ಕಾಲುಗಳಲ್ಲಿದ ಬಹುತೇಕ ಜೀವಿಗಳು ಹೀಗೆಯೇ ಚಲಿಸುವುದು. ಉದಾಹರಣೆಗೆ ಹಾವುಗಳು.
ನ್ಯಾನೋ ರಬ್ಬರ್ ಎಲಾಸ್ಟಿಕ್ ‘ದೇಹ’ ಮತ್ತು ನ್ಯಾನೋ ಬ್ಯಾಟರಿಯನ್ನು ಹೊಂದಿರುವ ಈ ರೋಬೊವಿನಲ್ಲಿ ಅತಿ ಸೂಕ್ಷ್ಮ ರೇಡಿಯೋ ಟ್ರಾನ್ಸ್‌ಮಿಟರ್ ಇದ್ದು, ತನ್ನ ಸಂಚಾರ ಸೂಚನೆಯನ್ನು ಅದರಿಂದ ಗ್ರಹಿಸಿ ಅದಕ್ಕೆ ತಕ್ಕಂತೆ ವರ್ತಿಸುತ್ತದೆ. ಮೊದಲ ಪ್ರಯತ್ನದಲ್ಲೇ ಐದು ಇಂಚಿನ ಈ ರೋಬೊ 10 ಅಡಿ ಎತ್ತರಕ್ಕೆ ನೆಗೆದಿದೆಯಂತೆ.
ಈ ಕಾಲಿಲ್ಲದ. ಹುಳುವಿನ ಆಕಾರದ ರೋಬೊ ಮುಂದೆ ಎಲ್ಲೆಲ್ಲಿ ನಮ್ಮ ಪ್ರಯೋಜನಕ್ಕೆ ಒದಗಲಿದೆ ಎಂದು ಕಾದು ನೋಡೋಣ.
ಎಲ್ಲೆಲ್ಲಿ ಗುರುತ್ವ ಬಲದ ಹಿಡಿತದಿಂದ ಬಿಡಿಸಿಕೊಂಡು ಬೇಗನೇ ಮೇಲೇರುವ ಅಗತ್ಯ ಇರುತ್ತದೋ ಅಲ್ಲೆಲ್ಲಾ ಇದರ ಬಳಕೆಯ ಅಗತ್ಯವಿದೆ. ಗಗನಚುಂಬಿ ಕಟ್ಟಡಗಳ ನಿರ್ಮಾಣ, ರಾಕೆಟ್‌ಗಳ ಉಡಾವಣೆಯಲ್ಲಿ ಗುರುತ್ವ ಬಲದಿಂದ ಬಿಡಿಸಿಕೊಂಡು ಚುರುಕಾಗಿ ಅಂತರಿಕ್ಷ ಸೇರಬೇಕಾದ ಕೆಲಸ, ಇತ್ಯಾದಿ. ಈ ಬಗೆಯ ಕೆಲಸಗಳಲ್ಲಿ ಹಾಲಿ ಇರುವ ತಂತ್ರಜ್ಞಾನಗಳ ಸಹಾಯದಿಂದ ಈ ರೋಬೊ ಉಪಕಾರಿಯಾಗಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.