ADVERTISEMENT

ಅಪರಾಧಿಗಳ ಬೇಟೆಗೆ ‘ಟಚ್ ಡಿಎನ್ಎ’

ಎಲ್.ಶಶಿಕುಮಾರ್
Published 29 ಏಪ್ರಿಲ್ 2025, 21:44 IST
Last Updated 29 ಏಪ್ರಿಲ್ 2025, 21:44 IST
   

ಅಪರಾಧಿಗಳಿಗೆ ಶಿಕ್ಷೆಯಾಗುವುದು ಎಷ್ಟು ಮುಖ್ಯವೋ, ನಿರಪರಾಧಿಗಳಿಗೆ ಶಿಕ್ಷೆ ಆಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ‘ಟಚ್ ಡಿಎನ್ಎ’ ತಂತ್ರಜ್ಞಾನ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಪ್ರತಿ ಮನುಷ್ಯನಲ್ಲಿನ ಡಿಎನ್ಎ ಗುಣಲಕ್ಷಣಗಳು ವಿಭಿನ್ನ, ಒಬ್ಬ ವ್ಯಕ್ತಿಗಿದ್ದಂತೆ ಇನ್ನೊಬ್ಬನಿಗಿರುವುದಿಲ್ಲ. ಈ ಆಧಾರದ ಮೇಲೆ ವ್ಯಕ್ತಿಯನ್ನು ಪತ್ತೆ ಹಚ್ಚಿ ತನಿಖೆಯನ್ನು ಮುಂದುವರಿಸಲು ಇಂದು ತನಿಖಾಧಿಕಾರಿಗಳಿಗೆ ನೆರವಾಗುತ್ತಿರುವುದು ‘ಟಚ್ ಡಿಎನ್ಎ’ ತಂತ್ರಜ್ಞಾನ.

‘ಟಚ್ ಡಿಎನ್ಎ’ ಎಂಬುದು ಅಪರಾಧಸ್ಥಳದಲ್ಲಿ ಉಳಿದಿರುವ ಸಣ್ಣ ಪ್ರಮಾಣದ ಡಿಎನ್ಎಯನ್ನು ವಿಶ್ಲೇಷಿಸಲು ಬೇಕಾದ ಒಂದು ವಿಧಿವಿಜ್ಞಾನದ ವಿಧಾನವಾಗಿದೆ. ಇದನ್ನು ‘ಟ್ರೇಸ್ ಡಿಎನ್ಎ’ ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ‘ಸ್ಪರ್ಶ ಡಿಎನ್ಎ’ ಎಂದು ಹೇಳಬಹುದೇನೋ! ಇಂದು ಸಮಾಜದಲ್ಲಿ ಕೊಲೆ, ದರೋಡೆ, ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮೊದಲಾದ ಅಪರಾಧಗಳು ಹೆಚ್ಚುತ್ತಿವೆ. ಇಂತಹ ಅಪರಾಧಗಳ ತನಿಖೆಯಲ್ಲಿ ನಿಜವಾದ ಅಪರಾಧಿಗಳನ್ನು ಕಂಡುಹಿಡಿಯಲು ಟಚ್ ಡಿಎನ್ಎ ತಂತ್ರಜ್ಞಾನದ ಪಾತ್ರ ಅತ್ಯಂತ ಮಹತ್ವದಾಗಿದೆ.

ಅಪರಾಧಿಗಳ ತನಿಕಖೆಯಲ್ಲಿ ಬೆರಳಚ್ಚು ತಂತ್ರಜ್ಞಾನ, ಸಾಕ್ಷಿಗಳ ಆಧಾರ, ಪ್ರೊಟೀನ್ ಗುಂಪುಗಳ ಆಧಾರ ಹಾಗೂ ಇತರ ಆಧಾರಗಳನ್ನು ಹೆಚ್ಚು ಬಳಸಲಾಗುತ್ತಿತ್ತು. ಆದರೆ ಪ್ರಸ್ತುತ ಟಚ್ ಡಿಎನ್ಎ ತoತ್ರಜ್ಞಾನವನ್ನು ಹೆಚ್ಚು ಬಳಸುತ್ತಿದ್ದಾರೆ. ಡಿಎನ್ಎಯು ಜೀವಕೋಶದ ನ್ಯೂಕ್ಲಿಯಸ್‌ನ ಕ್ರೋಮೋಸೋಮ್‌ಗಳಲ್ಲಿ ಇರುತ್ತದೆ. ಇದರ ಕೆಲಸ ಮನುಷ್ಯನ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುವುದು. ಆದ್ದರಿಂದ ಇದನ್ನು ‘ಬ್ಲೂ ಪ್ರಿಂಟ್ ಆಫ್ ಲೈಫ್’ ಎಂದು ಕರೆಯುತ್ತೇವೆ. ಟಚ್ ಡಿಎನ್ಎ ತಂತ್ರಜ್ಞಾನ ಅತ್ಯಂತ ನಿಖರವಾದದ್ದು, ಹಾಗೂ ಯಾರೇ ಎಲ್ಲೇ ಪ್ರಯೋಗ ಮಾಡಿದರು ಒಂದೇ ಫಲಿತಾಂಶ ಸಿಗುತ್ತದೆ.

ADVERTISEMENT

ಟಚ್ ಡಿಎನ್ಎ ಒಬ್ಬ ವ್ಯಕ್ತಿಯಿಂದ ಇತರ ವಸ್ತುಗಳಿಗೆ ವರ್ಗಾವಣೆ ಆಗುತ್ತದೆ. ಅದು ಜೀವಕೋಶಗಳ ಮುಖಾಂತರ, ಮುಖ್ಯವಾಗಿ ವ್ಯಕ್ತಿಯ ಕೈಯಿಂದ ಆತ ಸ್ಪರ್ಶಿಸುವ ವಸ್ತುವಿಗೆ ಕ್ಷಣಮಾತ್ರದಲ್ಲಿ ರವಾನೆಯಾಗುವ ಅಂಶ ಬೆರಗು
ಗೊಳಿಸುವಂತಹದ್ದು. ಟಚ್ ಡಿಎನ್ಎಗೆ ಯಾವುದೇ ರಕ್ತ ಅಥವಾ ವೀರ್ಯವನ್ನು ನೋಡುವ ಅಗತ್ಯವಿಲ್ಲ. ಇದಕ್ಕೆ ನಮ್ಮ ಚರ್ಮದ ಹೊರಗಿನ ಪದರದಿಂದ ಏಳು ಅಥವಾ ಎಂಟು ಕೋಶಗಳು ಮಾತ್ರ ಬೇಕಾಗುತ್ತವೆ. ಪ್ರತಿಯೊಬ್ಬರ ಡಿಎನ್ಎಯ ಒಳಗೆ, ಜೀನ್‌ಗಳ ನಡುವೆ ಪುನರಾವರ್ತಿತ ಸರಣಿಗಳು ಇರುತ್ತವೆ. ಇವನ್ನು ‘ತಾಂಡೆಮ್ ಪುನರಾವರ್ತನೆ’ (ತಾಂಡೆಮ್‌ ರಿಪೀಟ್‌) ಎನ್ನುತ್ತಾರೆ. ಈ ಪುನರಾವರ್ತನೆಯ ಅನುಕ್ರಮವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ವಿಶೇಷ ಪ್ರಯೋಗಾಲಯ ತಂತ್ರಗಳನ್ನು ಬಳಸಿಕೊಂಡು ಪ್ರತಿ ವ್ಯಕ್ತಿಗೆ ಒಂದು ಅನನ್ಯ ಪುನರಾವರ್ತನೆಯ ಮಾದರಿಯನ್ನು ನಾವು ಕಂಡುಕೊಳ್ಳಬಹುದು. ರಕ್ತಸಂಬಂಧಿಕರ ನಡುವೆ ಡಿಎನ್ಎ ಅನುಕ್ರಮಗಳು ಪರಸ್ಪರ ಸಂಬಂಧವಿಲ್ಲದ ವ್ಯಕ್ತಿಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಹೋಲುತ್ತವೆ. ಇದು ಹಲವಾರು ಪ್ರಕರಣಗಳಲ್ಲಿ ರಕ್ತಸಂಬಂಧಗಳನ್ನು ಸ್ಥಾಪಿಸಲು ಸಹಾಯ ಮಾಡುವುದಲ್ಲದೆ, ಅಪರಾಧಿಗಳ ಪತ್ತೆದಾರಿಕೆಗೂ ಅವಕಾಶವನ್ನು ಮಾಡಿಕೊಡುತ್ತದೆ.

ಅಪರಾಧಸ್ಥಳದಲ್ಲಿ ದಾಳಿಕೋರರು ಬಲಿಪಶುಗಳು, ಶಸ್ತ್ರಾಸ್ತ್ರಗಳು ಅಥವಾ ಇನ್ನಾವುದನ್ನಾದರೂ ಮುಟ್ಟಿದಾಗ ಉಳಿದಿರುವ ಚರ್ಮದ ಕೋಶಗಳನ್ನು ಟಚ್ ಡಿಎನ್ಎ ವಿಧಾನದಲ್ಲಿ ವಿಶ್ಲೇಷಿಸಲಾಗುತ್ತದೆ. ಹೀಗಾಗಿಯೇ ಈ ವಿಧಾನಕ್ಕೆ ‘ಟಚ್ ಡಿಎನ್ಎ’ ಎಂದು ಹೆಸರಿಸಿರುವುದು. ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಿರ್ವಹಿಸಿದ ಹೆಚ್ಚಿನ ಪ್ರಕರಣಗಳು ಟಚ್ ಡಿಎನ್ಎ ವಿಧಾನವನ್ನು ಅವಲಂಬಿಸಿವೆ; ಅದು ಸಂಸ್ಥೆಗೆ ಯಶಸ್ಸುಗಳನ್ನೂ ತಂದು ಕೊಟ್ಟಿದೆ. 

ತನಿಖಾಧಿಕಾರಿಗಳು ಮೊದಲು ಅಪರಾಧಸ್ಥಳದಲ್ಲಿ ಉಳಿದಿರುವ ಅತ್ಯಲ್ಪ ಪ್ರಮಾಣದ ಜೀವಕೋಶಗಳನ್ನು ಸಂಗ್ರಹಿಸುತ್ತಾರೆ. ಸಾಮಾನ್ಯ ಡಿಎನ್‌ಎ ಸಂಗ್ರಹಕ್ಕೆ ಅಪರಾಧಿಗಳ ಕೂದಲು, ಕೊಲ್ಲು, ಚರ್ಮ, ರಕ್ತದಂಥವು ನೆರವಾದರೆ ಟಚ್‌ಡಿಎನ್‌ಎ ವಿಧಾನದಲ್ಲಿ ಅಪರಾಧಿಯ ಬೆವರಿನ ಮೂಲಕ ಮಾತ್ರವೇ ಡಿಎನ್‌ಎಯನ್ನು ಪತ್ತೆಹಚ್ಚಲಾಗುತ್ತದೆ. ಜೀವಕೋಶಗಳ ಸಂಗ್ರಹದ ನಂತರ ಪ್ರಯೋಗಾಲಯದಲ್ಲಿ ‘ಪಾಲಿಮರೇಸ್ ಚೈನ್ ಆ್ಯಕ್ಷನ್’ (ಪಿಸಿಆರ್) ಎಂಬ ಪ್ರಕ್ರಿಯೆಯನ್ನು ಬಳಸಿಕೊಂಡು ಆ ಜೀನ್‌ಗಳ ಹಲವು ಪ್ರತಿಗಳನ್ನು ಮಾಡಿಕೊಳ್ಳಲಾಗುತ್ತದೆ. ಮುಂದೆ ವಿಜ್ಞಾನಿಗಳು ಡಿಎನ್‌ಎಯ 13 ನಿರ್ದಿಷ್ಟ ಸ್ಥಳಗಳಿಗೆ ಪ್ರತಿ ದೀಪಕ ಸಂಯುಕ್ತಗಳನ್ನು (ಕೆಮಿ ಲ್ಯುಮಿನಿಸೆನ್ಸ್‌ ಪ್ರೈಮರ್‌) ಬೆರೆಸುತ್ತಾರೆ. ಬಳಿಕ ಆ ವ್ಯಕ್ತಿಯ ನಿರ್ದಿಷ್ಟ ಆನುವಂಶಿಕ ಭಾವಚಿತ್ರವನ್ನು ನೀಡುತ್ತಾರೆ. ಇಡೀ ಪ್ರಕ್ರಿಯೆಗೆ ಕೆಲವೇ ದಿನಗಳು ಸಾಕಾಗುತ್ತವೆ. ಜೀವಕೋಶಗಳ ಈ 13 ಸ್ಥಳಗಳು ಒಬ್ಬರಿಂದ ಒಬ್ಬರಿಗೆ ಹೆಚ್ಚು ವ್ಯತ್ಯಾಸಗಳನ್ನು ಒಳಗೊಂಡಿರುತ್ತವೆ.

ಬೋಧಗಯಾದ ಸ್ಪೋಟ ಪ್ರಕರಣದಲ್ಲಿ, ಬಾಂಬ್ ಇಟ್ಟ ವ್ಯಕ್ತಿ ಮುಖವಾಡವನ್ನು ಧರಿಸಿ, ಸನ್ಯಾಸಿಯಂತೆ ವೇಷ ಧರಿಸಿದ್ದ. ಸಿಸಿಟಿವಿ ದೃಶ್ಯಾವಳಿಗಳಿದ್ದರೂ ರಾಷ್ಟ್ರೀಯ ತನಿಖಾ ದಳ ಯಾವುದೇ ತೀರ್ಮಾನಕ್ಕೆ ಬರುವುದು ಕಷ್ಟಕರವಾಗಿತ್ತು. ಬಾಂಬ್ ಇಟ್ಟ ನಂತರ ಅಪರಾಧಿಯು ನಿಲುವಂಗಿಯನ್ನು ಅಲ್ಲೇ ಬಿಟ್ಟು ಹೋಗಿದ್ದನು. ಕೊನೆಗೆ ಟಚ್ ಡಿಎನ್ಎ ವಿಧಾನದಲ್ಲಿ ಆ ನಿಲುವಂಗಿಯಿಂದ ಜೀವಕೋಶದ ಮಾದರಿಗಳನ್ನು ಸಂಗ್ರಹಿಸಲಾಯಿತು. ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸಿದ ನಂತರ ಅವನ ಇರುವಿಕೆಯನ್ನು ಖಾತ್ರಿಪಡಿಸುವಲ್ಲಿ ತನಿಖಾ ದಳವು ಯಶಸ್ವಿಯಾಯಿತು. ಕಳೆದ ವರ್ಷದ 2024ರಲ್ಲಿ ಟಚ್ ಡಿಎನ್ಎ ತಂತ್ರಜ್ಞಾನದಿಂದ ಸುಮಾರು 25 ಸೂಕ್ಷ್ಮ ಪ್ರಕರಣಗಳನ್ನು ಭೇದಿಸಲು ನೆರವಾಗಿ ಅಪರಾಧಿಗಳ ಹೆಡೆಮುರಿ ಕಟ್ಟಿ ಹಾಕಲು ಸಹಾಯವಾಗಿದೆ ಎಂದು ಗುಜರಾತಿನ ನ್ಯಾಯವಿಜ್ಞಾನ ಪ್ರಯೋಗಾಲಯದ ನಿರ್ದೇಶನಾಲಯ ಹೆಮ್ಮೆಯಿಂದ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.