ADVERTISEMENT

ಚಂದ್ರನ ಮೇಲ್ಮೈ ಅಧ್ಯಯನ: 2 ಖಾಸಗಿ ಲ್ಯಾಂಡರ್‌ ಉಡಾವಣೆ ಮಾಡಿದ ‘ಸ್ಪೇಸ್‌ಎಕ್ಸ್‌’

ಚಂದ್ರನ ಮೇಲ್ಮೈ ಅಧ್ಯಯನದ ಉದ್ದೇಶ* ಎರಡು ಲ್ಯಾಂಡರ್‌ಗಳ ಹೊತ್ತೊಯ್ದ ಒಂದೇ ರಾಕೆಟ್

ಪಿಟಿಐ
Published 15 ಜನವರಿ 2025, 14:20 IST
Last Updated 15 ಜನವರಿ 2025, 14:20 IST
ಚಂದ್ರನ ಮೇಲೆ ಇಳಿಸುವುದಕ್ಕಾಗಿ ‘ಸ್ಪೇಸ್‌ಎಕ್ಸ್‌’ ಸಂಸ್ಥೆಯು ಅಮೆರಿಕ ಮತ್ತು ಜಪಾನ್‌ ಕಂಪನಿಗಳ ಎರಡು ಲ್ಯಾಂಡರ್‌ಗಳನ್ನು ಹೊತ್ತ ಫಾಲ್ಕನ್‌ ರಾಕೆಟ್‌ ಅನ್ನು ಬುಧವಾರ ಉಡಾವಣೆ ಮಾಡಿತು –ಎಎಫ್‌ಪಿ ಚಿತ್ರ
ಚಂದ್ರನ ಮೇಲೆ ಇಳಿಸುವುದಕ್ಕಾಗಿ ‘ಸ್ಪೇಸ್‌ಎಕ್ಸ್‌’ ಸಂಸ್ಥೆಯು ಅಮೆರಿಕ ಮತ್ತು ಜಪಾನ್‌ ಕಂಪನಿಗಳ ಎರಡು ಲ್ಯಾಂಡರ್‌ಗಳನ್ನು ಹೊತ್ತ ಫಾಲ್ಕನ್‌ ರಾಕೆಟ್‌ ಅನ್ನು ಬುಧವಾರ ಉಡಾವಣೆ ಮಾಡಿತು –ಎಎಫ್‌ಪಿ ಚಿತ್ರ   

ಕೇಪ್‌ ಕೆನಾವೆರಲ್ (ಅಮೆರಿಕ): ಚಂದ್ರನ ಮೇಲೆ ಇಳಿಸುವುದಕ್ಕಾಗಿ ‘ಸ್ಪೇಸ್‌ಎಕ್ಸ್‌’ ಸಂಸ್ಥೆಯು ಅಮೆರಿಕ ಮತ್ತು ಜಪಾನ್‌ನ ಕಂಪನಿಗಳ ಎರಡು ಲ್ಯಾಂಡರ್‌ಗಳನ್ನು ಬುಧವಾರ ಉಡಾವಣೆ ಮಾಡಿತು.

ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಮಧ್ಯರಾತ್ರಿ ಎರಡು ಲ್ಯಾಂಡರ್‌ಗಳನ್ನು ಹೊತ್ತ ರಾಕೆಟ್‌ ಅನ್ನು ಉಡಾವಣೆ ಮಾಡಲಾಯಿತು. ಹಣ ಉಳಿತಾಯ ಮಾಡುವ ಉದ್ದೇಶದಿಂದ ಒಂದೇ ರಾಕೆಟ್‌ ಮೂಲಕ ಏಕಕಾಲದಲ್ಲಿ ಲ್ಯಾಂಡರ್‌ಗಳನ್ನು ಉಡಾವಣೆ ಮಾಡಲಾಗಿದೆ. ಆದರೆ, ಎರಡೂ ಲ್ಯಾಂಡರ್‌ಗಳು ಬೇರೆ ಬೇರೆ ಸಮಯಗಳಲ್ಲಿ ಚಂದ್ರನ ಅಂಗಳವನ್ನು ತಲುಪಲಿವೆ.

ಟೋಕಿಯೊ ಮೂಲದ ಕಂಪನಿ ‘ಐ–ಸ್ಪೇಸ್‌’ ಎರಡು ವರ್ಷಗಳ ಹಿಂದೆ ಸಹ ಚಂದ್ರನ ಅಂಗಳಕ್ಕೆ ಲ್ಯಾಂಡರ್‌ ಅನ್ನು ಕಳುಹಿಸಿತ್ತು. ಆದರೆ, ಅದು ಪತನಗೊಂಡಿತ್ತು.

ADVERTISEMENT

ಈ ಬಾರಿ ಕಳುಹಿಸಲಾದ ಲ್ಯಾಂಡರ್‌ನಲ್ಲಿರುವ ರೋವರ್‌ನಲ್ಲಿ ಚಂದ್ರನ ಮೇಲ್ಮೈನಲ್ಲಿರುವ ಮಣ್ಣನ್ನು ಸಂಗ್ರಹಿಸಲು ಸಲಕರಣೆಯನ್ನು ಅಳವಡಿಸಲಾಗಿದೆ. ಚಂದ್ರನ ಮೇಲ್ಮೈನಲ್ಲಿರುವ ಮಣ್ಣು ಮತ್ತು ಆಹಾರ, ಜಲಮೂಲಗಳ ಬಗ್ಗೆ ಇದು ಅಧ್ಯಯನ ನಡೆಸುವ ಉದ್ದೇಶವನ್ನು ಹೊಂದಿದೆ.

ಟೆಕ್ಸಾಸ್‌ ಮೂಲದ ‘ಫೈರ್‌ಫ್ಲೈ’ ಏರೊಸ್ಪೇಸ್‌ ಕಂಪನಿ ಇದೇ ಮೊದಲ ಬಾರಿಗೆ ಚಂದ್ರನಲ್ಲಿಗೆ ಲ್ಯಾಂಡರ್ ಅನ್ನು ಕಳುಹಿಸಿದೆ. ಇದು ನಾಸಾಕ್ಕಾಗಿ 10ಕ್ಕೂ ಹೆಚ್ಚು ಅಧ್ಯಯನಗಳನ್ನು ನಡೆಸುವ ಉದ್ದೇಶ ಹೊಂದಿದೆ. ಇದು ಕಳುಹಿಸಿರುವ ಲ್ಯಾಂಡರ್‌ 6.6 ಅಡಿ ಎತ್ತರ ಇದ್ದು, ಮಾರ್ಚ್‌ ಆರಂಭದಲ್ಲಿ ಚಂದ್ರನ ಉತ್ತರ ಧ್ರುವದಲ್ಲಿರುವ ‘ಮೇರ್‌ ಕ್ರಿಸಿಯಂ’ ಎಂಬ ಹೆಸರಿನ ಜ್ವಾಲಾಮುಖಿ ಕುಳಿಯಲ್ಲಿ ಇಳಿಯಲಿದೆ.

ಫೈರ್‌ಫ್ಲೈ ಏರೊಸ್ಪೇಸ್‌ ಲ್ಯಾಂಡರ್‌ಗಿಂತ ಐ–ಸ್ಪೇಸ್‌ ಲ್ಯಾಂಡರ್ ದೊಡ್ಡದಾಗಿದ್ದು, ಚಂದ್ರನ ಅಂಗಳವನ್ನು ತಲುಪಲು ನಾಲ್ಕರಿಂದ ಐದು ತಿಂಗಳನ್ನು ತೆಗೆದುಕೊಳ್ಳಲಿದೆ. ಮೇ ಕೊನೆಯ ವಾರ ಅಥವಾ ಜೂನ್‌ ಆರಂಭದಲ್ಲಿ ಇದು ಚಂದ್ರನ ಉತ್ತರ ಧ್ರುವದಲ್ಲಿರುವ ‘ಮೇರ್‌ ಫ್ರಿಗೊರಿಸ್‌’ ಎಂದು ಕರೆಯುವ ಸ್ಥಳದಲ್ಲಿ ಇಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.