ADVERTISEMENT

ಅಮೃತಸರ ರೈಲು ದುರಂತ: ಚಾಲಕನ ಹೆಸರು ಇಮ್ತಿಯಾಜ್ ಅಲಿ ಅಲ್ಲ!

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 13:40 IST
Last Updated 22 ಅಕ್ಟೋಬರ್ 2018, 13:40 IST
   

ಅಮೃತಸರ: ಅಮೃತಸರದಲ್ಲಿ 100ಕ್ಕಿಂತಲೂ ಹೆಚ್ಚು ಜನರ ಮೇಲೆ ರೈಲು ನುಗ್ಗಿಸಿ ಹತ್ಯೆ ಮಾಡಿದ ರೈಲು ಚಾಲಕನ ಹೆಸರು ಇಮ್ತಿಯಾಜ್ ಅಲಿ ಎಂದಾಗಿತ್ತು! ಹೀಗೊಂದು ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ಯಾವುದೇ ಘಟನೆ/ ದುರಂತಗಳು ಸಂಭವಿಸಿದಾಗಲೂ ಅಲ್ಲೊಂದು 'ಕೋಮುಸೌಹಾರ್ದ ಕದಡುವ' ವದಂತಿಗಳು ಹರಿದಾಡುತ್ತವೆ. ದಸರಾ ಹಬ್ಬದ ವೇಳೆ ಅಮೃತಸರದಲ್ಲಿ ಸಂಭವಿಸಿದ ದುರಂತದಲ್ಲಿಯೂ ಇದು ನಡೆದಿದೆ.ಜೋದಾ ಪಾಠಕ್ ಬಳಿ ರಾವಣ ದಹನದ ವೇಳೆ ಗುರುವಾರ ರಾತ್ರಿರೈಲಿಗೆ ಸಿಲುಕಿ 61 ಜನ ಮೃತ ಪಟ್ಟಿದ್ದರು.ಈ ಸುದ್ದಿಯ ಬೆನ್ನಲ್ಲೇ ರೈಲು ಚಲಾಯಿಸಿದ ವ್ಯಕ್ತಿಯ ಹೆಸರು ಇಮ್ತಿಯಾಜ್ ಅಲಿ ಎಂಬ ವದಂತಿ ಹರಡಿತ್ತು. ಈ ವದಂತಿಯ ಜಾಡು ಹಿಡಿದು ಹೊರಟ ಆಲ್ಟ್ ನ್ಯೂಸ್ ಸತ್ಯ ಏನೆಂಬುದನ್ನು ವರದಿ ಮಾಡಿದೆ.

ಫೇಸ್‍ಬುಕ್, ಟ್ವಿಟರ್‌ನಲ್ಲಿ ಅಮೃತಸರ ದುರಂತವನ್ನು ಮುಸ್ಲಿಂ ಚಾಲಕನಿಂದ ಟ್ರೈನ್ ಜಿಹಾದ್ ಎಂದು ಬಿಂಬಿಸಿರುವ ಸಂದೇಶಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಕೆಲವೊಂದು ಟ್ವೀಟ್ ಗಳು ಹೀಗಿವೆ.

ಅಮೃತಸರ ರೈಲು ದುರಂತದಲ್ಲಿ ಚಾಲಕನ ಧರ್ಮ ಯಾವುದು ಎಂಬುದನ್ನು ತಿಳಿಯಲು ಯಾರಾದರೂ ಪ್ರಯತ್ನಿಸಿದ್ದೀರಾ?
ನಿಮಗೆ ಗೊತ್ತಾ?
ಇಮ್ತಿಯಾಜ್ ಅಲಿ
ರೈಲು ಇಷ್ಟೊಂದು ವೇಗದಲ್ಲಿ ಚಲಿಸಿದ್ದು ಯಾಕೆ ಎಂಬುದು ತಿಳಿಯಿತಾ?

ADVERTISEMENT

250ಕ್ಕಿಂತಲೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ರೈಲಿನ ಚಾಲಕನ ಹೆಸರು ಇಮ್ತಿಯಾಜ್ ಖಾನ್.ಇನ್ನುಳಿದದ್ದು ನಿಮಗೆ ಅರ್ಥವಾಗುತ್ತದೆ.ಇದೊಂದು ಅಪಘಾತ ಅಲ್ಲ ಸಾಮೂಹಿಕ ಹತ್ಯೆ.


ರಸ್ತೆಯಲ್ಲಿದ್ದ ಜನರನ್ನು ರೈಲ್ವೆ ಹಳಿಯಲ್ಲಿ ನಿಲ್ಲಿಸಿದ್ದು ಕಾಂಗ್ರೆಸ್. ನವಜೋತ್ ಕೌರ್ ಅವರ ಬೆಂಬಲಿಗರು ಇದನ್ನೇ ದಿಟ್ಟತನ ಎಂದಿದ್ದರು, ಯಾವುದೇ ಅನುಮತಿ ಇಲ್ಲದೆ ಈ ಜಾಗದಲ್ಲಿ ಇದೇ ಮೊದಲ ಬಾರಿ ಹಬ್ಬ ಮಾಡಿದ್ದು.ಆ ರೈಲು ಚಾಲಕ ಇಮ್ತಿಯಾಜ್ ಅಲಿ. ವಾಹ್, ಹತ್ಯೆ ಮಾಡಿದ್ದು ಕಾಂಗ್ರೆಸ್.

ಇನ್ನು ಕೆಲವು ಪೋಸ್ಟ್ ಗಳಲ್ಲಿಚಾಲಕ ಕಾಂಗ್ರೆಸ್ ಪಕ್ಷದವನು ಎಂದು ಹೇಳಲಾಗಿತ್ತು.ಈ ಟ್ವೀಟ್‍ಗಳೆಲ್ಲವೂ ಕಾಪಿ, ಪೇಸ್ಟ್ ಆಗಿರುವುದರಿಂದ ಯಾರ ಬೆಂಬಲಿಗರು ಈ ಟ್ವೀಟ್ ಮಾಡುತ್ತಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತಿದೆ.

ಇಂಥಾ ಟ್ವೀಟ್ ಮಾಡಿದ ಖಾತೆಗಳ ವಿವರಗಳತ್ತ ಕಣ್ಣು ಹಾಯಿಸಿದರೆ ಅದರಲ್ಲಿ “BJP supporter”, “India First”, “Proud Indian” ಮೊದಲಾದ ವಿವರಣೆಗಳು ಸಿಗುತ್ತವೆ.

ನಮಾಜ್ ಮಾಡುವಾಗ ಯಾಕೆ ರೈಲು ನುಗ್ಗುವುದಿಲ್ಲ ಎಂಬ ಟ್ವೀಟ್ ಕೂಡಾ ವೈರಲ್ ಆಗಿತ್ತು.

ನಿಜ ಸಂಗತಿ ಏನು?
ರೈಲ್ವೆ ಆಡಳಿತ ಮಂಡಳಿಗೆ ರೈಲು ಚಾಲಕ ನೀಡಿದ ಲಿಖಿತ ಪ್ರತಿಕ್ರಿಯೆಯ ಪ್ರಕಾರ ಆತನ ಹೆಸರು ಅರವಿಂದ್ ಕುಮಾರ್.

ಲಿಖಿತ ಪ್ರತಿಕ್ರಿಯೆಯಲ್ಲಿ ಏನಿದೆ?
ನಾನು ಅರವಿಂದ್ಕುಮಾರ್
ರೈಲ್ವೆ ಹಳಿಯಲ್ಲಿ ಜನರ ಗುಂಪು ನೋಡಿದೆ, ನಾನು ಎಮೆರ್ಜೆನ್ಸಿ ಬ್ರೇಕ್ ಹಾಕಿ ನಿರಂತರವಾಗಿ ಹಾರ್ನ್ ಹಾಕುತ್ತಾ ಬಂದೆ. ಆದರೂ ಕೆಲವರು ರೈಲಿನಡಿಗೆ ಸಿಲುಕಿದರು. ರೈಲು ಇನ್ನೇನು ನಿಲ್ಲುತ್ತದೆ ಎನ್ನುವಾಗ ಕೆಲವರು ರೈಲಿಗೆ ಕಲ್ಲು ತೂರಾಟ ಮಾಡಿದರು. ಹಾಗಾಗಿ ನಾನು ಪ್ರಯಾಣಿಕರ ಸುರಕ್ಷೆಗಾಗಿ ರೈಲು ಚಲಾಯಿಸಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.