ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ನಡೆದ ಸಾಧುಗಳ ಹತ್ಯೆ ವಿಷಯಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಗ್ಗೆ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಅರ್ನಬ್ ಪರ–ವಿರುದ್ಧ ಚರ್ಚೆ ಟ್ವಿಟರ್‌ನಲ್ಲಿ ತಾರಕಕ್ಕೇರಿದೆ.
ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸೋನಿಯಾ ಗಾಂಧಿ ಅಭಿಮಾನಿಗಳು ಅರ್ನಬ್ ಬಂಧನಕ್ಕೆ ಆಗ್ರಹಿಸಿದ್ದಾರೆ. ಸಾವಿರಾರು ಮಂದಿ ಅರ್ನಬ್ ಬಂಧನಕ್ಕೆ ಆಗ್ರಹಿಸಿ ಟ್ವೀಟ್ ಮಾಡಿದ್ದು, #ArrestAntiIndiaArnab #arrestarnabgoswami ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ. ಮತ್ತೊಂದೆಡೆ ಅರ್ನಬ್ ಅವರನ್ನು ಬೆಂಬಲಿಸಿ ಸಾವಿರಾರು ಮಂದಿ ಟ್ವೀಟ್ ಮಾಡಿದ್ದಾರೆ. #IsupportArnabGoswami #WeSupportArnab ಹ್ಯಾಷ್‌ಟ್ಯಾಗ್‌ಗಳೂ ಟ್ರೆಂಡ್ ಆಗಿವೆ.
‘ಸೋನಿಯಾ ವಿರುದ್ಧ ಅರ್ನಬ್ ಮಾಡಿರುವ ಅವಹೇಳನ ಖಂಡನೀಯ. ಅವರ ಹುಚ್ಚುತನ ಮಿತಿ ಮೀರಿದೆ. ಅವರ ಬಗ್ಗೆ ಅವರಿಗೇ ನಾಚಿಕೆಯಾಗಬೇಕು’ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಟ್ವೀಟ್ ಮಾಡಿದ್ದಾರೆ.
ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಾಧುಗಳ ಹತ್ಯೆ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ್ದ ಅರ್ನಬ್, ಈ ವಿಷಯದ ಕುರಿತು ಸೋನಿಯಾ ಗಾಂಧಿ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದರು. ಮೌಲ್ವಿಗಳನ್ನು ಹೀಗೆ ಕೊಂದಿದ್ದರೆ ದೇಶವೀಗ ಸುಮ್ಮನಿರುತ್ತಿತ್ತೇ. ಇಟಲಿಯ ಸೋನಿಯಾ ಗಾಂಧಿ ಈಗ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.