ADVERTISEMENT

ಆಸ್ಟ್ರೇಲಿಯಾದಲ್ಲಿ ಸುದ್ದಿ ಹಂಚಿಕೆ ನಿರ್ಬಂಧ ತೆರವಿಗೆ ಫೇಸ್‌ಬುಕ್‌ ಸಮ್ಮತಿ

ಆಸ್ಟ್ರೇಲಿಯಾ ಸರ್ಕಾರ ಘೋಷಣೆ

ಏಜೆನ್ಸೀಸ್
Published 23 ಫೆಬ್ರುವರಿ 2021, 6:33 IST
Last Updated 23 ಫೆಬ್ರುವರಿ 2021, 6:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕ್ಯಾನ್‌ಬೆರಾ: ಆಸ್ಟ್ರೇಲಿಯಾದಲ್ಲಿನ ತನ್ನ ಬಳಕೆದಾರರು ಸುದ್ದಿಗಳ ವೀಕ್ಷಣೆ ಮತ್ತು ಹಂಚಿಕೆ ಮಾಡುವುದರ ಮೇಲೆ ಹೇರಿದ್ದ ನಿರ್ಬಂಧವನ್ನು ಹಿಂಪಡೆಯಲು ಫೇಸ್‌ಬುಕ್‌ ಒಪ್ಪಿದೆ ಎಂದು ಆಸ್ಟ್ರೇಲಿಯಾ ಸರ್ಕಾರ ಮಂಗಳವಾರ ಘೋಷಿಸಿದೆ.

‘ಸುದ್ದಿಗಳನ್ನು ಹಂಚಿಕೊಂಡಾಗ ಹಣ ಪಾವತಿಸಬೇಕು ಎಂಬ ಷರತ್ತಿಗೆ ಸಂಬಂಧಿಸಿದಂತೆ ಇದ್ದ ಮಸೂದೆಯಲ್ಲಿ ಕೆಲವು ತಿದ್ದುಪಡಿಗಳನ್ನು ತರುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಫೇಸ್‌ಬುಕ್‌ ಒಮ್ಮತಕ್ಕೆ ಬಂದಿವೆ’ ಎಂದು ಸಚಿವ ಜೋಶ್‌ ಫ್ರೈಡೆನ್‌ಬರ್ಗ್‌ ಹಾಗೂ ಫೇಸ್‌ಬುಕ್‌ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ತನ್ನ ಜಾಲತಾಣದ ಪುಟಗಳಲ್ಲಿ ಆಸ್ಟ್ರೇಲಿಯಾದ ಸುದ್ದಿಗಳ ಅಳವಡಿಕೆಯನ್ನು ಶೀಘ್ರವೇ ಪುನಃ ಆರಂಭಿಸಲಾಗುವುದು ಎಂಬುದಾಗಿ ಫೇಸ್‌ಬುಕ್‌ ತಿಳಿಸಿದೆ’ ಎಂದು ಸಚಿವ ಫ್ರೈಡೆನ್‌ಬರ್ಗ್‌ ಹಾಗೂ ಸಂವಹನ ಸಚಿವ ಪೌಲ್‌ ಫ್ಲೆಚರ್‌ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗುವ ಸುದ್ದಿಗಳಿಗೆ ಪ್ರತಿಯಾಗಿ ಸಂಬಂಧಿಸಿದ ಮಾಧ್ಯಮ ಸಂಸ್ಥೆಗಳಿಗೆ ಅದು ತನ್ನ ಲಾಭಾಂಶದಲ್ಲಿ ಪಾಲು ನೀಡಬೇಕು ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿತ್ತು. ಈ ವಿಷಯಕ್ಕೆ ಸಂಬಂಧಿಸಿದ ಮಸೂದೆಯನ್ನು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ ಅಂಗೀಕರಿಸಿದೆ. ಸೆನೆಟ್‌ನಲ್ಲಿ ಈ ಮಸೂದೆ ಕುರಿತು ಮಂಗಳವಾರ ಚರ್ಚೆ ನಡೆಯಲಿದೆ.

ಈ ಮಸೂದೆಗೆ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ ಅಂಗೀಕಾರ ನೀಡಿದ ಬೆನ್ನಲ್ಲೇ, ಆಸ್ಟ್ರೇಲಿಯಾದ ಬಳಕೆದಾರರು ತನ್ನ ವೇದಿಕೆ ಮೂಲಕ ಸುದ್ದಿಗಳನ್ನು ವೀಕ್ಷಿಸುವುದನ್ನು ಫೇಸ್‌ಬುಕ್‌ ನಿರ್ಬಂಧಿಸಿತ್ತು.

ತನ್ನ ವೇದಿಕೆಗಳ ಮೂಲಕ ಸುದ್ದಿಗಳನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಗೂಗಲ್‌ ಸಂಸ್ಥೆ ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.

‘ಶೋಕೇಸ್‌ ಎಂಬ ತನ್ನ ವೇದಿಕೆ ಮೂಲಕ ಸುದ್ದಿ, ಮಾಹಿತಿ ಹಂಚಿಕೆಗೆ 500ಕ್ಕೂ ಅಧಿಕ ಪ್ರಕಾಶಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಗೂಗಲ್‌ ತಿಳಿಸಿದೆ.

ಪ್ರಕಾಶಕರೊಂದಿಗೆ ಶೀಘ್ರವೇ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಫೇಸ್‌ಬುಕ್‌ನ ಪ್ರಾದೇಶಿಕ ವ್ಯವಸ್ಥಾಪಕ ನಿರ್ದೇಶಕ ವಿಲಿಯಮ್‌ ಈಸ್ಟನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.