ಬೆಂಗಳೂರು
ಪ್ರಸ್ತುತ ದಿನಗಳಲ್ಲಿ ಬೆಂಗಳೂರು ಜೀವನ ಬಲು ದುಬಾರಿಯಾಗಿ ಪರಿಣಮಿಸುತ್ತದೆ. ಬೆಂಗಳೂರಿನಲ್ಲಿ ಬಡವರು, ಮಧ್ಯಮ ವರ್ಗದವರು ಹಾಗೂ ಶ್ರೀಮಂತರು ಎಲ್ಲಾ ವರ್ಗದ ಜನರು ವಾಸ ಮಾಡುತ್ತಾರೆ. ಆದರೆ, ಇಲ್ಲಿನ ಕೆಲವು ಪ್ರದೇಶಗಳಲ್ಲಿ ಜೀವನ ಶೈಲಿಯು ಭಾರೀ ದುಬಾರಿಯಾಗಿದೆ.
ಬೆಂಗಳೂರಿನ ಪ್ರತೀ ತಿಂಗಳ ಖರ್ಚುವೆಚ್ಚ ಎಷ್ಟಾಗಲಿದೆ ಎಂಬುದರ ಕುರಿತು ಬೆಂಗಳೂರು ಮೂಲದ ಚಾರ್ಟೆಡ್ ಅಕೌಂಟೆಂಟ್ ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಮೀನಾಲ್ ಗೋಯಲ್ ಎಂಬುವವರು ತಮ್ಮ ಸಾಮಾಜಿಕ ಮಾಧ್ಯಮ ಲಿಂಕ್ಡ್‌ಇನ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ನಾನು ತಿಂಗಳಿಗೆ ಎಷ್ಟು ಖರ್ಚು ಮಾಡುತ್ತಿದ್ದೇನೆ ಎಂಬ ಮಾಹಿತಿ ಇಲ್ಲಿದೆ’ ಎಂದು ಹೇಳಿದ್ದಾರೆ. ಇಬ್ಬರು ವಾಸಿಸುವ 2BHK ಅಪಾರ್ಟ್‌ಮೆಂಟ್‌ನ ಮಾಸಿಕ ಬಾಡಿಗೆ ₹37,000 ಆಗಿದೆ ಎಂದು ಹೇಳಿದ್ದಾರೆ.
ಬಾಡಿಗೆಯ ಜೊತೆಗೆ ತಿಂಗಳ ದಿನಸಿ ಖರ್ಚು ವೆಚ್ಚಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ದಿನಸಿ ಖರ್ಚು ತಿಂಗಳಿಗೆ ₹15,000, ಸಾರಿಗೆ ಖರ್ಚು ₹5,000, ಇತರೆ ಉಪಯುಕ್ತ ವಸ್ತುಗಳ ಖರೀದಿ ವೆಚ್ಚ ₹4,000 ಹಾಗೂ ಮನೆಕೆಲಸದವರಿಗೆ ₹4,000 ಖರ್ಚಾಗುತ್ತಿದೆ. ಹೊರಗೆ ಊಟ ಮತ್ತು ಜಿಮ್ ಸೇರಿದಂತೆ ಇತರ ಚಟುವಟಿಕೆಗಳಿಗೆ ₹17,000 ಖರ್ಚಾಗುತ್ತಿದೆ. ಒಟ್ಟಾರೆ ತಿಂಗಳಿಗೆ ₹82,000 ಖರ್ಚಾಗುತ್ತಿದೆ. ಇದರಂತೆ ವಾರ್ಷಿಕವಾಗಿ ₹9.84 ಲಕ್ಷ ಹಣ ಖರ್ಚಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಚಾರ್ಟೆಡ್ ಅಕೌಂಟೆಂಟ್ ಅವರ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪೋಸ್ಟ್‌ಗೆ ಕಮೆಂಟ್ ಮಾಡುತ್ತಿದ್ದಾರೆ. ‘ನೀವು ಮನರಂಜನೆಗಾಗಿ ವೆಚ್ಚ ಮಾಡುತ್ತಿರುವ ₹17,000 ದುಬಾರಿಯಾಯಿತು. ನೀವು ಹಣಕಾಸನ್ನು ಸರಿಯಾಗಿ ನಿರ್ವಹಿಸಲು ಕಲಿತಿಲ್ಲ’ ಎಂದು ಹೇಳಿದ್ದಾರೆ.
ನಿಮ್ಮ ಖರ್ಚುಗಳು ನಿಮ್ಮ ಆದಾಯವನ್ನು ಅವಲಂಭಿಸಿವೆ. ನೀವು ಹೆಚ್ಚು ದುಡಿಯುತ್ತೀರಿ, ಅದರಂತೆ ಖರ್ಚು ಮಾಡುತ್ತೀರಿ. ನಿಮ್ಮ ಅನವಶ್ಯಕ ಖರ್ಚುಗಳನ್ನು ನಿಲ್ಲಿಸಿ, ಎಸ್‌ಐಪಿಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.