ADVERTISEMENT

ಚಾಲಕ ಇಲ್ಲದೇ ಓಡುತ್ತಿದ್ದ ಫಿಯೆಟ್‌ ಕಾರು: ವಿಡಿಯೊ ವೈರಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2020, 12:33 IST
Last Updated 15 ಅಕ್ಟೋಬರ್ 2020, 12:33 IST
ಚಾಲಕ ಇಲ್ಲದ ಫಿಯೆಟ್‌ ಕಾರು
ಚಾಲಕ ಇಲ್ಲದ ಫಿಯೆಟ್‌ ಕಾರು    

ಚೆನ್ನೈ: ಹಳೇ ಫಿಯೆಟ್ ಕಾರೊಂದು ಚಾಲಕನಿಲ್ಲದೇ ಹೈವೇಯಲ್ಲಿ ಸಾಗುತ್ತಿರುವ ವಿಚಿತ್ರ ವಿಡಿಯೊವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಜನ ಗೊಂದಲಕ್ಕೀಡಾಗಿದ್ದಾರೆ.

TN 27 A4261ಸ್ವಯಂ ಚಾಲಿತ ಫಿಯೆಟ್‌ ಕಾರು ಯಾವುದೇ ಅಡೆತಡೆ ಇಲ್ಲದೇ, ಚಾಕಚಕ್ಯತೆಯಿಂದ ಟ್ರಕ್‌ಗಳನ್ನು ಓವರ್‌ಟೇಕ್‌ ಮಾಡುತ್ತಾ ಸಾಗುವ ಸನ್ನಿವೇಶ ಕೆಲವೇ ಸೆಕೆಂಡ್‌ಗಳ ವಿಡಿಯೊದಲ್ಲಿ ಇದೆ.

ವೇಗವಾಗಿ ಚಲಿಸುತ್ತಿರುವ ಕಾರಿನಲ್ಲಿ ಮಾಸ್ಕ್‌ಧಾರಿ ಪ್ರಯಾಣಿಕರೊಬ್ಬರು ಎಡಬದಿಯಲ್ಲಿ ಕುಳಿತಿರುವುದು ಬಿಟ್ಟರೆ, ಚಾಲಕನ ಆಸನದಲ್ಲಿ, ಹಿಂಬದಿಯಲ್ಲಿ ಯಾರೂ ಇಲ್ಲ.
ತಾನೇತಾನಾಗಿ ಓಡುತ್ತಿರುವಂತೆ ಕಾಣುತ್ತಿದ್ದ ಫಿಯೆಟ್‌ ಕಾರಿನ ಹಿಂದೆ ಬರುತ್ತಿದ್ದ ಕಾರೊಂದರಲ್ಲಿದ್ದ ಪ್ರಯಾಣಿಕರು ಅದನ್ನು ವಿಡಿಯೊ ಮಾಡಿದ್ದು, ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದಾರೆ. ‘ಇದು ಹೇಗೆ ಸಾಧ್ಯ?’ ಎಂಬ ಅವರು ಪ್ರಶ್ನೆಯನ್ನೂ ಕೇಳಿದ್ದಾರೆ.

ADVERTISEMENT

ಚಾಲಕನೇ ಇಲ್ಲದೇ ಕಾರು ಹೇಗೆ ಓಡಲು ಸಾಧ್ಯ ಎಂಬುದಕ್ಕೆ ನೆಟ್ಟಿಗರು ತಮ್ಮದೇ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ.

‘ಕಾರಿನ ಸೀಟು ಎರಡಾಗಿ ಭಾಗವಾಗಿಲ್ಲ. ಹೀಗಾಗಿ ಚಾಲಕ ಎಡಭಾಗಕ್ಕೆ ಅನಾಯಾಸವಾಗಿ ಬಂದು ಕೂರಬಹುದು. ಫಿಯೆಟ್‌ ಕಾರಿನ ಗಿಯರ್‌ ಲಿವರ್‌ ಸ್ಟೇರಿಂಗ್‌ ಬಳಿ ಇರುತ್ತದೆ. ಹೈವೇ ಬಂದ ಕೂಡಲೇ, ಕಾರನ್ನು ಟಾಪ್‌ಗಿಯರ್‌ಗೆ ಹಾಕಿ ಚಾಲಕ ಎಡಭಾಗಕ್ಕೆ ಬಂದು ಕುಳಿತು ವಾಹನವನ್ನು ತಾನೇ ಓಡಿಸುತ್ತಿದ್ದಾನೆ. ಡ್ರೈವಿಂಗ್‌ ಸ್ಕೂಲ್‌ಗಳಲ್ಲಿರುವಂತೆ ಈ ಕಾರಿನ ಆ್ಯಕ್ಸಿಲರೇಷನ್‌ ಪೆಡಲ್‌ ಎಡ ಬದಿಯಲ್ಲಿ ಇರಬಹುದು. ಏನಾದರೂ ತರ್ತು ಎದುರಾದರೆ, ಚಾಲಕ ಆ ಬದಿಗೆ ಮತ್ತೆ ಹೋಗುತ್ತಾನೆ.

ಸಾಮಾನ್ಯವಾಗಿ ಹೈವೆಯಲ್ಲಿ ಮಾತ್ರವೇ ಹೀಗೆ ಮಾಡಲಾಗುತ್ತದೆ. ನಾನೂ ಅವರನ್ನು ಹೈವೇಗಳಲ್ಲಿ ನೋಡಿದ್ದೇನೆ. ವಿಡಿಯೊ ಮಾಡಿದ್ದೇನೆ,’ ಎಂದಿ ಕಣ್ಣನ್‌ ಎಂಬುವವರು ಹೇಳಿಕೊಂಡಿದ್ದಾರೆ.

‘ಟೆಲ್ಸಾ ಈತನ ತಂತ್ರಜ್ಞಾನವನ್ನು ಕದಿಯಲು ಬರಬಹುದು,’ ಎಂದು ಫೇಸ್‌ಬುಕ್‌ನ ಬಳಕೆದಾರ ಬ್ರೆಂಡನ್‌ ಎಂಬುವವರು ಪೋಸ್ಟ್‌ನಲ್ಲಿ ಕಮೆಂಟ್‌ ಮಾಡಿದ್ದಾರೆ.
‘ಆ ಚಾಲಕ ಅಮೆರಿಕದಿಂದ ಬಂದಿರಬಹುದು,’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.