ವಾಷಿಂಗ್ಟನ್: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಸಂಗಾತಿ ಶಿವೋನ್ ಜಿಲಿಸ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಶೆಲ್ಡನ್ ಲೈಕರ್ಗಸ್ ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಜಿಲಿಸ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಹಾರ್ಟ್ ಇಮೋಜಿಯ ಮೂಲಕ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ.
ಜಿಲಿಸ್ ಅವರು ಎಲಾನ್ ಮಸ್ಕ್ ಒಡೆತನದ ನ್ಯೂರೋಲಿಂಕ್ ಕಂಪನಿಯಲ್ಲಿ ಕಾರ್ಯನಿರ್ವಹಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಇವರಿಗೆ(ಎಲಾನ್–ಜಿಲಿಸ್) ಸ್ಟ್ರೈಡರ್ ಮತ್ತು ಅಜುರೆ ಎಂಬ ಅವಳಿ ಮಕ್ಕಳು ಮತ್ತು ಅರ್ಕಾಡಿಯಾ ಎಂಬ ಮಗಳಿದ್ದಾಳೆ.
‘ಎಲಾನ್ ಅವರೊಂದಿಗೆ ಚರ್ಚಿಸಿದ ನಂತರ ಈ ವಿಷಯವನ್ನು ನೇರವಾಗಿ ಹಂಚಿಕೊಳ್ಳಲು ಇಚ್ಛಿಸುತ್ತಿದ್ದೇನೆ. ಮಗಳು ಅರ್ಕಾಡಿಯಾ ಹುಟ್ಟುಹಬ್ಬದ ದಿನವೇ ಮಗ ಶೆಲ್ಡನ್ ಲೈಕರ್ಗಸ್ ಜನಿಸಿದ್ದಾನೆ’ ಎಂದು ಹೇಳಿದ್ದಾರೆ.
ಶಿವೋನ್ ಜಿಲಿಸ್ ಅವರೊಂದಿಗೆ ನಾಲ್ಕು ಮಕ್ಕಳಲ್ಲದೇ ಎಲಾನ್ ಮಸ್ಕ್ ಅವರು ಮೊದಲ ಹೆಂಡತಿ ಜಸ್ಟಿನ್ ವಿಲ್ಸನ್ ಅವರೊಂದಿಗೆ ಐದು (ವಿವಿಯನ್ –ಗ್ರಿಫಿನ್(ಅವಳಿ), ಕೈ, ಸ್ಯಾಕ್ಸನ್, ಡಾಮಿಯನ್(ತ್ರಿವಳಿ)) ಮಕ್ಕಳನ್ನು ಹೊಂದಿದ್ದಾರೆ. ಮೊದಲ ಮಗು ನೆವಾಡಾ ಅಲೆಕ್ಸಾಂಡರ್ ಹುಟ್ಟಿದ 10 ವಾರಗಳಲ್ಲಿ ನಿಧನ ಹೊಂದಿತ್ತು.
ಇದಲ್ಲದೇ ಮ್ಯೂಸಿಷಿಯನ್ ಗ್ರಿಮ್ಸ್ ಅವರೊಂದಿಗೆ ಎಕ್ಸ್ ಮತ್ತು ಟೆಕ್ನೋ ಮೆಕಾನಿಕಸ್ ಎಂಬಿಬ್ಬರು ಪುತ್ರರನ್ನು ಮತ್ತು ಎಕ್ಸಾ ಡಾರ್ಕ್ ಸೈಡೆರೆಲ್ ಎಂಬ ಮಗಳನ್ನು ಹೊಂದಿದ್ದಾರೆ.
ಇತ್ತೀಚೆಗೆ ಇನ್‌ಫ್ಲ್ಯೂಯೆನ್ಸರ್ ಆಶ್ಲೆ ಸೇಂಟ್ ಕ್ಲೇರ್ ಅವರು ಎಲಾನ್ ಮಸ್ಕ್ ಅವರ ಮಗುವಿಗೆ ತಾಯಿಯಾಗಿರುವುದಾಗಿ ಹೇಳಿಕೊಂಡಿದ್ದರು. ಆದರೆ, ಈ ಬಗ್ಗೆ ಎಲಾನ್ ಮಸ್ಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.