ADVERTISEMENT

ನ್ಯೂಯಾರ್ಕ್‌ ಟೈಮ್ಸ್ ಲೇಖಕ ಮೋದಿಯನ್ನು ಹೊಗಳಿದ್ದು ನಿಜವೇ?

ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸಂದೇಶ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 14:51 IST
Last Updated 16 ಡಿಸೆಂಬರ್ 2018, 14:51 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಬೆಂಗಳೂರು: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ವಾಟ್ಸ್‌ಆ್ಯಪ್‌ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ವೈರಲ್ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿ ಅಮೆರಿಕದ ಪತ್ರಿಕೆ ನ್ಯೂಯಾರ್ಕ್‌ ಟೈಮ್ಸ್ ಲೇಖಕ ಬರೆದಿರುವ ಸಂದೇಶ ಅದು ಎಂದು ಪ್ರತಿಪಾದಿಸಲಾಗಿತ್ತು. ಆದರೆ, ಅದು ನಕಲಿ ಎಂಬುದು ಬಯಲಾಗಿದೆ.

‘‘ನ್ಯೂಯಾರ್ಕ್ ಟೈಮ್ಸ್...

* ಭಾರತದ ಮತದಾನ ಮಾದರಿಯ ಕೆಲವು ಅಂಶಗಳು ಸ್ಪಷ್ಟವಾಗಿವೆ, ಭಾರತದ ಸಾರ್ವಜನಿಕರು ಯಾವತ್ತೂ ದೂರು ಹೇಳುತ್ತಾರೆ. ಅದು ಈರುಳ್ಳಿ ಅಥವಾ ತೊಗರಿ ಬೇಳೆ ಬಗ್ಗೆ ಅಲ್ಲದಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬಗ್ಗೆ ಆಗಿರುತ್ತದೆ. ಅವರಿಗೆ ಎಲ್ಲವೂ ಕಡಿಮೆ ಬೆಲೆಗೆ ದೊರೆಯಬೇಕು. ಆದರೆ, ಕೃಷಿಕರಿಗೂ ಹೆಚ್ಚಿನ ಬೆಲೆ ದೊರೆಯಬೇಕು.ಭಾರತದ ಸಾರ್ವಜನಿಕರಿಗೆ ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ಬಗ್ಗೆ ಗೊತ್ತಿಲ್ಲ...’’ ಇದೇ ರೀತಿಯಹಲವು ಅಂಶಗಳಿರುವ ಸಂದೇಶವೊಂದು ‘ನ್ಯೂಯಾರ್ಕ್‌ ಟೈಮ್ಸ್‌ ಲೇಖಕ’ ಎಂಬ ಹೆಸರಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ADVERTISEMENT

ಈ ಸಂದೇಶ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಬಗ್ಗೆ ಕನಿಕರ ಮೂಡಿಸುತ್ತದೆ. ಮೋದಿ ಮಾಡುತ್ತಿರುವ ಕೆಲಸವನ್ನು ಭಾರತದ ಜನ ಮರೆಯುತ್ತಿದ್ದಾರೆ ಎಂಬ ಅರ್ಥ ಸೂಚಿಸುತ್ತದೆ.

ಮೋದಿ ಅವರು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿರುವ ರೇಣುಕಾ ಜೈನ್ ಎಂಬುವವರು ಇದೇ 14ರಂದು ಫೇಸ್‌ಬುಕ್‌ನಲ್ಲಿ ಈ ಸಂದೇಶ ಪ್ರಕಟಿಸಿದ್ದಾರೆ.

ಈ ಸಂದೇಶವನ್ನು ಅನೇಕ ಮಂದಿ ಫೇಸ್‌ಬುಕ್ ಟೈಮ್‌ಲೈನ್‌ಲ್ಲಿ ಹಂಚಿಕೊಂಡಿದ್ದಾರೆ.

ಈ ಸಂದೇಶ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿಯೂ ವೈರಲ್ ಆಗಿದೆ.

ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ವೈರಲ್ ಆಗಿರುವ ಸಂದೇಶ

ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಇಂತಹ ಲೇಖನವೇ ಪ್ರಕಟವಾಗಿಲ್ಲ

ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಮೋದಿ ಅವರನ್ನು ಹೊಗಳಿ ಲೇಖನವೇ ಪ್ರಕಟವಾಗಿಲ್ಲ ಎಂದುಆಲ್ಟ್‌ನ್ಯೂಸ್ ಸುದ್ದಿತಾಣ ವರದಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿರುವ ಸಂದೇಶದಲ್ಲಿ ಲೇಖಕ ಯಾರು ಎಂಬುದನ್ನೂ ಉಲ್ಲೇಖಿಸಲಾಗಿಲ್ಲ.ಕಾಗುಣಿತ ತಪ್ಪುಗಳು, ವ್ಯಾಕರಣ ತಪ್ಪುಗಳೂ ಅನೇಕ ಇವೆ. ಉದಾಹರಣೆಗೆ:‘increased’ ಶಬ್ದವನ್ನು ‘increasesed’ ಎಂದು,‘their’ ಅನ್ನು ‘thier’,‘promote’ ಅನ್ನು ‘pramote’ ಎಂದೂ ಬರೆಯಲಾಗಿದೆ. ಇದೊಂದು ಸುಳ್ಳು ಸಂದೇಶ ಎಂಬುದಕ್ಕೆ ಈ ತಪ್ಪುಗಳೇ ಮೊದಲ ಸುಳಿವು ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟವಾದ ಲೇಖನದ ಸ್ಕ್ರೀನ್‌ಶಾಟ್

ನರೇಂದ್ರ ಮೋದಿ ಅವರ ಕುರಿತಾಗಿ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನಗಳ ಬಗ್ಗೆ ಜಾಲಾಡಿದಾಗ, ಡಿಸೆಂಬರ್ 11ರಂದು ಕೊನೆಯ ಲೇಖನ ಪ್ರಕಟವಾಗಿರುವುದು ಕಂಡುಬಂದಿದೆ. ಅದರಲ್ಲಿ, ’ಭಾರತದ ಸೆಮಿಫೈನಲ್ ಚುನಾವಣೆಯಲ್ಲಿ ಮೋದಿ ಅವರ ಪಕ್ಷಕ್ಕೆ ಹಿನ್ನಡೆ’ ಎಂಬರ್ಥದ ಶೀರ್ಷಿಕೆ ಇದೆ. ಆ ಲೇಖನದಲ್ಲಿ ಎಲ್ಲಿಯೂ ವೈರಲ್ ಆಗಿರುವ ಸಂದೇಶದಲ್ಲಿರುವ ಅಂಶಗಳು ಕಂಡುಬಂದಿಲ್ಲ ಎಂದು ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.