ADVERTISEMENT

ಟ್ವಿಟರ್ ನೂತನ ಸಿಇಒ ಪರಾಗ್ ಅಗರವಾಲ್ ತಿಂಗಳ ಸಂಬಳ ಎಷ್ಟು ಗೊತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2021, 13:56 IST
Last Updated 30 ನವೆಂಬರ್ 2021, 13:56 IST
‘ಟ್ವಿಟರ್‌’ ನೂತನ ಸಿಇಒ ಪರಾಗ್ ಅಗರವಾಲ್
‘ಟ್ವಿಟರ್‌’ ನೂತನ ಸಿಇಒ ಪರಾಗ್ ಅಗರವಾಲ್   

ಬೆಂಗಳೂರು: ಪ್ರಖ್ಯಾತ ಮೈಕ್ರೊಬ್ಲಾಗಿಂಗ್ ತಾಣವಾದ ‘ಟ್ವಿಟರ್‌’ ನೂತನ ಸಿಇಒ ಆಗಿ ಭಾರತ ಮೂಲದ ತಂತ್ರಜ್ಞ ಪರಾಗ್ ಅಗರವಾಲ್ ನೇಮಕವಾಗಿದ್ದಾರೆ. ಈ ಸುದ್ದಿ ಭಾರತೀಯರಿಗೆ ಹರ್ಷ ತಂದಿದೆ.

ಟ್ವಿಟರ್ ಕಂಪನಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಹಾಗೂ ನಿರ್ಗಮಿತ ಸಿಇಒ ಜಾಕ್ ಡೋರ್ಸಿ ಅವರ ಶಿಫಾರಸಿನ ಮೇಲೆಪರಾಗ್ ಅಗರವಾಲ್ ಈ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ.

ಈ ಬೆನ್ನಲ್ಲೇ ಸಿಇಒ ಹುದ್ದೆಗೆಪರಾಗ್ ಅವರಿಗೆ ಟ್ವಿಟರ್ ಎಷ್ಟು ವೇತನ ಪಾವತಿಸುತ್ತಿದೆ? ಎಂಬ ಪ್ರಶ್ನೆಗಳು ಸಹಜವಾಗಿ ಕೇಳಿ ಬರುತ್ತಿವೆ. ಪರಾಗ್ ಅವರಿಗೆ ಟ್ವಿಟರ್ ವಾರ್ಷಿಕವಾಗಿ 1 ಮಿಲಿಯನ್ ಡಾಲರ್ ವೇತನವನ್ನು ಪಾವತಿಸುತ್ತದೆ. ಅಂದರೆ ತಿಂಗಳಿಗೆ ಪರಾಗ್ ಅವರು ₹62,56,000 ಪಡೆಯಲಿದ್ದಾರೆ. ಇದರ ಜೊತೆಗೆ ಬೋನಸ್‌ಗಳೂ ಪ್ರತ್ಯೇಕವಾಗಿ ಅವರಿಗೆ ಲಭಿಸುತ್ತವೆ.

ADVERTISEMENT

ಟ್ವಿಟರ್ ಕಂಪನಿಯು ಯುಎಸ್ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸೆಂಜ್‌ಗೆ (ಎಸ್‌ಇಸಿ) ಸಲ್ಲಿಸಿದ ದಾಖಲೆಯಲ್ಲಿ ಈ ಅಂಶ ಬಹಿರಂಗವಾಗಿದೆ.

ಇದಲ್ಲದೇ ಪರಾಗ್ ಅವರು 12.5 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ನಿಯಂತ್ರಿತ ಷೇರುಗಳನ್ನು (ಆರ್‌ಎಸ್‌ಯು) ಕಂಪನಿ ಕಡೆಯಿಂದ ಸ್ವೀಕರಿಸಲಿದ್ದಾರೆ.

ಮುಂಬೈ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್‌ ಎಂಜಿನಿಯರಿಂಗ್ ಪದವಿ ಮುಗಿಸಿರುವ ಪರಾಗ್ ಅವರು, ಅಮೆರಿಕದ ಸ್ಟ್ಯಾನ್‌ಪೋರ್ಡ್ ಯುನಿವರ್ಸಿಟಿಯಿಂದ ಪಿಎಚ್‌ಡಿ ಪಡೆದಿದ್ದಾರೆ. 2011 ರಲ್ಲಿ ಟ್ವಿಟರ್ ಸೇರಿದ್ದ ಪರಾಗ್, ಆ ಕಂಪನಿಯ ಕೃತಕ ಬುದ್ಧಿಮತ್ತೆಹಾಗೂ ಜಾಗತಿಕ ಮಾರುಕಟ್ಟೆ ಬೆಳೆಸಲು ಅಮೋಘ ಕೊಡುಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂಬೈ ಮೂಲದ ಪರಾಗ್ ಅವರ ತಾಯಿ ಶಿಕ್ಷಕಿಯಾಗಿದ್ದು, ಅವರ ತಂದೆ ಪರಮಾಣು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪರಾಗ್ ಪತ್ನಿ ವಿನೀತಾ ಅಗರವಾಲ್ ವೆಂಚರ್ ಕ್ಯಾಪಿಟಲ್‌ನಲ್ಲಿ ಹೂಡಿಕೆದಾರರಾಗಿದ್ದಾರೆ. ಪರಾಗ್–ವಿನೀತಾ ದಂಪತಿಗೆ ಆನ್ಯಾ ಎಂಬ ಒಂದು ಮಗು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.