ADVERTISEMENT

ಪಾರ್ಸಲ್‌ ಆಹಾರದಲ್ಲಿ ‘ಹಾವಿನ ಪೊರೆ‘: ಹೊಟೇಲ್‌ ಬಂದ್‌ ಮಾಡಿಸಿದ ಅಧಿಕಾರಿಗಳು

ಕೇರಳದ ಹೊಟೇಲ್‌

​ಪ್ರಜಾವಾಣಿ ವಾರ್ತೆ
Published 9 ಮೇ 2022, 10:53 IST
Last Updated 9 ಮೇ 2022, 10:53 IST
ಹಾವಿನ ಪೊರೆ ಇದ್ದ ಆಹಾರ
ಹಾವಿನ ಪೊರೆ ಇದ್ದ ಆಹಾರ   

ತಿರುವನಂತಪುರ: ಪಾರ್ಸಲ್‌ ಆಹಾರದಲ್ಲಿ ‘ಹಾವಿನ ಪೊರೆ‘ ದೊರೆತಿದ್ದರಿಂದ ಇಲ್ಲಿನ ಹೊಟೇಲ್‌ವೊಂದನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

ನೆಡುಮಂಗಾಡ್‌ ಪ್ರದೇಶದಲ್ಲಿದ್ದ ಹೊಟೇಲ್‌ ಅನ್ನು ಮುಚ್ಚಲಾಗಿದೆ ಎಂದು ಸ್ಥಳೀಯಆಹಾರ ಸುರಕ್ಷತೆ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಗೃಹಿಣಿಯೊಬ್ಬರು ಇಲ್ಲಿನ ಹೊಟೇಲ್‌ವೊಂದಕ್ಕೆ ಆಹಾರವನ್ನು ಆರ್ಡರ್ ಮಾಡಿದ್ದರು. ಈ ಆಹಾರದಲ್ಲಿ ಹಾವಿನ ಪೊರೆಇರುವುದನ್ನು ಕಂಡು ಅವರು ಪೊಲೀಸರಿಗೆ ದೂರು ನೀಡಿದ್ದರು. ನಂತರ ತಿರುವನಂತಪುರ ಕಾರ್ಪೋರೆಶನ್‌ ಅಧಿಕಾರಿಗಳು ಆ ಹೊಟೇಲ್‌ಗೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಬಂದ್‌ ಮಾಡಿಸಿದ್ದಾರೆ.

ADVERTISEMENT

ಆಹಾರ ಪೂರೈಕೆ ಮಾಡಿದ ಹೊಟೇಲ್‌ ಹಾಗೂ ‘ಹಾವಿನ ಪೊರೆ‘ ಇರುವ ಆಹಾರಪೊಟ್ಟಣದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರದಾಡುತ್ತಿವೆ. ತುಷಾರ್‌ ಕಾಂತ್‌ ಎಂಬುವರು ಈ ಪೋಟೊವನ್ನು ಹಂಚಿಕೊಂಡಿದ್ದು, ಆಹಾರ ಸುರಕ್ಷತೆ ಅಧಿಕಾರಿಗಳು ಹೊಟೇಲ್‌ಗಳ ಅಡುಗೆ ಕೋಣೆ ಹಾಗೂ ಸ್ವಚ್ಛತೆಯನ್ನು ತಪಾಸಣೆ ನಡೆಸಬೇಕು ಎಂದು ಟ್ವೀಟ್‌ ಮಾಡಿದ್ದಾರೆ.

ಈ ಘಟನೆ ನಡೆದ ಬಳಿಕ ಅಧಿಕಾರಿಗಳು ಹೊಟೇಲ್‌ ಪರಿಶೀಲನೆ ಮಾಡಿದ್ದಾರೆ. ಅಡುಗೆ ಕೋಟೆಯಲ್ಲಿ ಸಾಕಷ್ಟು ಗಾಳಿ, ಬೆಳಕಿನ ಸಮಸ್ಯೆ ಇದ್ದು, ತ್ಯಾಜ್ಯವನ್ನು ಅಲ್ಲಿಯೇ ಹಾಕಲಾಗುತ್ತಿತ್ತು ಎಂದು ಹೇಳಿದ್ದಾರೆ.

ಪರವಾನಿಗೆ ಪಡೆದುಕೊಂಡು ಹೊಟೇಲ್‌ ನಡೆಸುತ್ತಿದ್ದೇವೆ, ನಾವು ಸ್ವಚ್ಛತೆಯಿಂದಲೇ ಕೆಲಸ ಮಾಡುತ್ತಿದ್ದೇವೆ,ಆದರೆ ಹಾವಿನ ಪೊರೆ ಹೇಗೆ ಬಂತು ಎಂಬುದು ಅರ್ಥವಾಗುತ್ತಿಲ್ಲ ಎಂದು ಮಾಲೀಕರು ಹೇಳಿದ್ದಾರೆ. ಸದ್ಯ ಹೊಟೇಲ್‌ ಅನ್ನು ತಾತ್ಕಾಲಿಕವಾಗಿಬಂದ್‌ ಮಾಡಲಾಗಿದೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.