ADVERTISEMENT

ಹೊಸ ನೀತಿ ಹಿಂಪಡೆಯುವಂತೆ ವಾಟ್ಸ್‌ಆ್ಯಪ್‌ಗೆ ಐ.ಟಿ. ಸಚಿವಾಲಯ ಸೂಚನೆ

ಪಿಟಿಐ
Published 19 ಮೇ 2021, 14:20 IST
Last Updated 19 ಮೇ 2021, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಖಾಸಗಿತನಕ್ಕೆ ಸಂಬಂಧಿಸಿದ ಹೊಸ ನೀತಿಯನ್ನು ಹಿಂಪಡೆಯುವಂತೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸ್‌ಆ್ಯಪ್‌ಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ವಾಟ್ಸ್ಆ್ಯಪ್‌ನ ಖಾಸಗಿ ನಿಯಮದಲ್ಲಿನ ಬದಲಾವಣೆಗಳು ಮತ್ತು ಅವನ್ನು ಜಾರಿಗೆ ತರಲು ಹೊರಟಿರುವ ರೀತಿಯು ಮಾಹಿತಿ ಗೋಪ್ಯತೆಯ ಮೌಲ್ಯವನ್ನು ಕುಗ್ಗಿಸುತ್ತದೆ. ಭಾರತದ ನಾಗರಿಕರ ದತ್ತಾಂಶ ಸುರಕ್ಷತೆ, ಬಳಕೆದಾರರ ಆಯ್ಕೆ ಹಕ್ಕು ಮತ್ತು ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ ಎಂಬುದು ಸಚಿವಾಲಯದ ಅಭಿಪ್ರಾಯ ಎಂದು ಸರ್ಕಾರದ ಮೂಲಗಳು ಹೇಳಿವೆ.

ಈ ಕುರಿತು ಪ್ರತಿಕ್ರಿಯೆ ನೀಡಲು ವಾಟ್ಸ್‌ಆ್ಯಪ್‌ಗೆ ಏಳು ದಿನಗಳ ಕಾಲಾವಕಾಶವನ್ನು ಸಚಿವಾಲಯ ನೀಡಿದೆ. ಒಂದೊಮ್ಮೆ ಪ್ರತಿಕ್ರಿಯೆಯು ತೃಪ್ತಿಕರವಾಗಿಲ್ಲದೇ ಇದ್ದರೆ ಕಾನೂನಾತ್ಮಕ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ತಿಳಿಸಿವೆ.

ADVERTISEMENT

ಮೇ 18ರಂದು ಪತ್ರ ಬರೆದಿರುವ ಸಚಿವಾಲಯವು, ಹೊಸ ನೀತಿಯನ್ನು ಕೈಬಿಡುವಂತೆ ವಾಟ್ಸ್‌ಆ್ಯಪ್‌ಗೆ ಸೂಚನೆ ನೀಡಿದೆ. ಹೊಸ ನೀತಿಯು ಭಾರತದಲ್ಲಿ ಅಸ್ತಿತ್ವದಲ್ಲಿ ಇರುವ ಕಾನೂನು ಮತ್ತು ನಿಯಮಗಳ ಹಲವು ನಿಬಂಧನೆಗಳನ್ನು ಹೇಗೆ ಉಲ್ಲಂಘಿಸುತ್ತದೆ ಎನ್ನುವುದನ್ನೂ ಸಚಿವಾಲಯವು ವಾಟ್ಸ್‌ಆ್ಯಪ್‌ಗೆ ವಿವರಿಸಿದೆ.

ಹೊಸ ನಿಯಮಕ್ಕೆ ಒಪ್ಪಿಗೆ ನೀಡಲು ವಿಧಿಸಿದ್ದ ಮೇ 15ರ ಗಡುವನ್ನು ವಾಟ್ಸ್‌ಆ್ಯಪ್‌ ಈಗಾಗಲೇ ಕೈಬಿಟ್ಟಿದೆ. ಆದರೆ, ಗಡುವು ಕೈಬಿಡುವುದರಿಂದ ಭಾರತೀಯ ಬಳಕೆದಾರರ ದತ್ತಾಂಶ ಸುರಕ್ಷತೆ ಮತ್ತು ಮಾಹಿತಿ ಗೋಪ್ಯತೆಯ ಮೌಲ್ಯಗಳಿಗೆ ಗೌರವ ನೀಡಿದಂತೆ ಆಗುವುದಿಲ್ಲ ಎಂದು ಸಚಿವಾಲಯವು ವಾಟ್ಸ್‌ಆ್ಯಪ್‌ಗೆ ಬರೆದಿರುವ ಪತ್ರದಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.