ADVERTISEMENT

ಧ್ವಜಾರೋಹಣ ಮಾಡದ ಸಚಿವರು: ಟ್ರೆಂಡ್‌ ಆದ 'ನಮ್ಮ ಧ್ವಜ ನಮ್ಮ ಹೆಮ್ಮೆ'

ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ ಕನ್ನಡ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 18:26 IST
Last Updated 2 ನವೆಂಬರ್ 2020, 18:26 IST
ಟ್ವಿಟರ್‌ ಚಿತ್ರ
ಟ್ವಿಟರ್‌ ಚಿತ್ರ    

ಬೆಂಗಳೂರು: ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವತಿಯಿಂದ ರಾಜ್ಯೋತ್ಸವ ಆಚರಿಸುವಾಗ ಕೆಲವೆಡೆ ಸಚಿವರು ಕನ್ನಡ ಧ್ವಜಾರೋಹಣ ಮಾಡದಿರುವುದಕ್ಕೆ ಕನ್ನಡದ ಅಭಿಮಾನಿಗಳು ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರದ ಈ ನಡೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಸೋಮವಾರ ಸಂಜೆ ‘#ನಮ್ಮ ಧ್ವಜ_ನಮ್ಮಹೆಮ್ಮೆ’ ಹ್ಯಾಷ್‌ಟ್ಯಾಗ್‌ನಲ್ಲಿ ಅಭಿಯಾನ ಹಮ್ಮಿಕೊಂಡಿತ್ತು. ಈ ಅಭಿಯಾನವು ಕರ್ನಾಟಕದಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿತ್ತು. ರಾತ್ರಿ 8 ಗಂಟೆ ಹೊತ್ತಿಗೆ ಈ ಅಭಿಯಾನ ಬೆಂಬಲಿಸಿ 8,300ಕ್ಕೂ ಅಧಿಕ ಟ್ವೀಟ್‌ಗಳು ಹರಿದಾಡಿದವು.

ರಾಜ್ಯೋತ್ಸವದ ದಿನವಾದ ಭಾನುವಾರ ಹಲವು ಜಿಲ್ಲಾಕೇಂದ್ರಗಳಲ್ಲಿ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಕನ್ನಡಧ್ವಜ ಹಾರಿಸದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಲಾಗಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಕನ್ನಡಧ್ವಜ ಹಾರಿಸಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು ಬಾವುಟ ಹಾರಿಸದಂತೆ ತಡೆದ ಶಕ್ತಿ ಯಾವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಟ್ಟಿಟರ್‌ನಲ್ಲಿ ಪ್ರಶ್ನೆ ಮಾಡಿದೆ.

ADVERTISEMENT

ಕ್ರಿಕೆಟಿಗ ದೊಡ್ಡ ಗಣೇಶ್, ‘ನಾನು ಇಂಗ್ಲೆಂಡ್ ಲೀಗ್‌ಗಳಲ್ಲಿ ಕೌಂಟಿ ಕ್ರಿಕೆಟ್ ಆಡಲು ಹೋದಾಗ ಕೂಡ ನನ್ನ ಕಿಟ್‌ನಲ್ಲಿ ನಮ್ಮ ನಾಡಧ್ವಜವನ್ನು ಕೊಂಡೊಯ್ದಿದ್ದೆ. ನಮ್ಮ ಧ್ವಜ ನಮಗೆಂದೆಂದಿಗೂ ಶ್ರೇಷ್ಠ. ನಮ್ಮತನ ಕಳೆದುಕೊಳ್ಳೋದು ಬೇಡ’ ಎಂದು ಟ್ವೀಟ್‌ ಮಾಡಿದ್ದಾರೆ.

‘ರಾಜ್ಯಗಳು ಪ್ರತ್ಯೇಕ ಧ್ವಜವನ್ನು ಹೊಂದಬಾರದು ಎಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ. ಕರ್ನಾಟಕದ ಧ್ವಜವನ್ನು ಹಾರಿಸದಿರುವ ಮೂಲಕ ಸಚಿವರು ಕನ್ನಡಿಗರ ಭಾವನೆಗಳನ್ನು ಅವಮಾನಿಸಿದ್ದಾರೆ’ ಎಂದು ಶ್ರುತಿ ಎಚ್‌.ಎಂ. ಅಭಿಪ್ರಾಯಪಟ್ಟಿದ್ದಾರೆ.

‘ಬಿಜೆಪಿ ಅಧಿಕಾರದಲ್ಲಿದ್ದಾಗ 2012–13ರಲ್ಲಿ ಕರ್ನಾಟಕದ ಧ್ವಜಕ್ಕೆ ಅಧಿಕೃತ ಮನ್ನಣೆ ನೀಡುವ ಪ್ರಕ್ರಿಯೆ ಆರಂಭವಾಗಿತ್ತು. ಏಳು ವರ್ಷಗಳ ಬಳಿಕ ಇದೇ ಬಿಜೆಪಿ ಸರ್ಕಾರದ ಸಚಿವರು ಕರ್ನಾಟಕದ ಧ್ವಜ ಹಾರಿಸಲು ಭಯಪಡುತ್ತಿರುವುದು ನಿಜಕ್ಕೂ ಲಜ್ಜೆಗೇಡು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಎಸ್‌.ಆರ್‌.ಬೊಮ್ಮಾಯಿ ಹಾಗೂ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ರಾಜ್ಯಗಳು ಸ್ವಂತ ಧ್ವಜ ಹೊಂದುವುದಕ್ಕೆ ಸಂವಿಧಾನ ನಿರ್ಬಂಧಿಸುವುದಿಲ್ಲ ಎಂದು 1994ರಲ್ಲಿ ಸ್ಪಷ್ಟಪಡಿಸಿದೆ’ ಎಂದು ಭರತ್‌ ಪಿ. ಮಾಹಿತಿ ಹಂಚಿಕೊಂಡಿದ್ದಾರೆ.

‘ಕನ್ನಡ ಧ್ವಜಾರೋಹಣ ಮಾಡದ ಮಂತ್ರಿಗಳಿಗೆ ಧಿಕ್ಕಾರ. ಕನ್ನಡವೆಂಬುದು ನಮ್ಮ ಗುರುತು, ನಮ್ಮ ಜೀವ, ನಮ್ಮ ಉಸಿರು, ನಮ್ಮ ಬದುಕು. ಕನ್ನಡ ಬೇಡ‌ ಎನ್ನುವವರು ಕರ್ನಾಟಕಕ್ಕೂ ಬೇಡ. ಕನ್ನಡ ಧ್ವಜಕ್ಕೆ ಅಪಮಾನಿಸಿದವರು ಕನ್ನಡ ದ್ರೋಹಿಗಳು. ಈ ಪ್ರಮಾದಕ್ಕೆ ಕಾರಣರಾದ ಸರ್ಕಾರದ‌ ಮುಖ್ಯ ಕಾರ್ಯದರ್ಶಿಯನ್ನು ವಜಾಗೊಳಿಸಿ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಟ್ವೀಟ್‌ ಮಾಡಿದ್ದಾರೆ.

ಅಮರನಾಥ ಶಿವಶಂಕರ್‌, ‘ಕನ್ನಡದ ಬಾವುಟ ಎಂದೆಂದಿಗೂ ಅಧಿಕೃತವೇ. ಕನ್ನಡ ಬಾವುಟ ಕನ್ನಡಿಗರ ಸ್ವಾಭಿಮಾನದ ಸಂಕೇತ. ಅದಕ್ಕೆ ಮಾನ್ಯತೆಯನ್ನು ಯಾವ ದೊಣೆನಾಯಕನೂ ಕೊಡಬೇಕಿಲ್ಲ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕನ್ನಡ ಧ್ವಜ ಹಾರಿಸಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು ಬಾವುಟ ಹಾರಿಸದಂತೆ ತಡೆದ ಶಕ್ತಿ ಯಾವುದು’ ಎಂದು ಪಿ.ಆಂಜನಪ್ಪ ಪ‍್ರಶ್ನಿಸಿದ್ದಾರೆ.

ಗಮನ ಸೆಳೆದ ಟ್ವೀಟ್‌ಗಳು

ರಾಜಕೀಯ ಪಕ್ಷಗಳು ಅವರವರ ಬಾವುಟ ಹಾರಿಸಿದಾಗ, ಧರ್ಮದ ಬಾವುಟಗಳು ರಾರಾಜಿಸಿದಾಗ ದೇಶದ ಐಕ್ಯತೆಗೆ ತೊಂದರೆ ಆಗುತ್ತಿದೆ ಅನ್ನೋ ಥಿಯರಿ ಬರುವುದಿಲ್ಲ. ನಾಡ ಬಾವುಟ ಹಾರಿಸಬೇಕಾದರೆ ಮಾತ್ರ ಯಾಕೆ ಇಷ್ಟೊಂದು ದೇಶದ ಐಕ್ಯತೆಯ ಬಗ್ಗೆ ಯೋಚನೆ?

- ಮಿಲನ ನೀಲಾ

***

ಕನ್ನಡ ಧ್ವಜವನ್ನೇ ಪ್ರೀತಿಸದವನು ಇನ್ನು ರಾಷ್ಟ್ರ ಧ್ವಜವನ್ನು ಪ್ರೀತಿಸುವನೇ. ಕನ್ನಡ ನಾಡನ್ನೇ ಪ್ರೀತಿಸದವನು ಇನ್ನು ಭಾರತವನ್ನು ಪ್ರೀತಿಸುವನೇ. ಕನ್ನಡದ ಏಕೀಕರಣ ಆದ ನೆನಪಿಗೆ ನಮ್ಮ ಧ್ವಜ ಅದು. ನಮ್ಮ ಅಭಿಮಾನದ ಸಂಕೇತ. ಅದನ್ನು ಹಾರಿಸಿ ಸ್ವಾಭಿಮಾನ ತೋರಿಸೋದು ಬಿಟ್ಟು ನಾಡ ದ್ರೋಹ ಮಾಡಿದ ನಿಮಗೆ ಧಿಕ್ಕಾರ

ರೂಪೇಶ್ ರಾಜಣ್ಣ

***

ನಿಮಗೆ ರಾಜ್ಯದ ಮತದಾರರ ಮತಗಳು ಬೇಕು. ನೀವು ರಾಜ್ಯದಲ್ಲಿ ಸಚಿವರಾಗಲು ಬಯಸುತ್ತೀರಿ. ರಾಜ್ಯದಿಂದ ಎಲ್ಲ ಪ್ರಯೋಜನ ಪಡೆಯುತ್ತೀರಿ. ಇಷ್ಟೆಲ್ಲ ಸವಲತ್ತು ಅನುಭವಿಸುವ ನಿಮಗೆ ಹೆಮ್ಮೆಯಿಂದ ನಾಡ ಬಾವುಟ ಹಾರಿಸಲು ಏಕೇ ಸಾಧ್ಯವಾಗುತ್ತಿಲ್ಲ

ಕುಮಾರ ರೆಡ್ಡಿ

***
ನಾಚಿಕೆ ಗೇಡು ಸರ್ಕಾರ. ನಮ್ಮ ರಾಜ್ಯದಲ್ಲೇ, ನಮ್ಮ ರಾಜ್ಯದ ಧ್ವಜ ಹಾರಿಸಲು ಸರ್ಕಾರಕ್ಕೆ ನಾಚಿಕೆ. ಕರ್ನಾಟಕದ ಹಿತ ಕಾಯದ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು. ರಾಜ್ಯ ದ್ರೋಹಿ ಜನಪ್ರತಿನಿಧಿಗಳ ಕೈಗೆ ಅಧಿಕಾರ ಕೊಟ್ಟ ಪರಿಣಾಮ ಇದು.

ಕಾರ್ತಿಕ್

***

ಕನ್ನಡ ಧ್ವಜಾರೋಹಣ ಮಾಡದ ಕರ್ನಾಟಕ‌ ಸರ್ಕಾರದ ಮಂತ್ರಿಗಳಿಗೆ ಧಿಕ್ಕಾರ. ಕನ್ನಡವೆಂಬುದು ನಮ್ಮ ಗುರುತು,ನಮ್ಮ ಜೀವ, ನಮ್ಮ ಉಸಿರು,ನಮ್ಮ ಬದುಕು. ಅಂತಹ ಬಾವುಟ ಹಾರಿಸೋಕು ಒಂದು ಯೋಗ್ಯತೆ ಬೇಕು, ಆ ಯೋಗ್ಯತೆ ಈ ನಮ್ಮ ಅಯೋಗ್ಯ ಮಂತ್ರಿಗಳಿಗಿಲ್ಲ

ರವಿಕುಮಾರ್‌ ಗೌಡ

***

ಕನ್ನಡಿಗರೇ ನೀವು ಯಾವ ಪಕ್ಷವನ್ನಾದರೂ ಬೆಂಬಲಿಸಿ ಅದು ನಿಮ್ಮ ವೈಯಕ್ತಿಕ ಆಯ್ಕೆ ಆದರೆ ಕನ್ನಡದ ವಿಷಯ ಬಂದಾಗ ಪಕ್ಷಾತೀತರಾಗಿ ಧ್ವನಿ ಎತ್ತಿ! ರಾಜ್ಯ ವಿರೋಧಿಗಳು ದೇಶಪ್ರೇಮಿಗಳಾಗಲು ಸಾಧ್ಯವೇ ಇಲ್ಲ.

ವೇಣು ನಾರಾಯಣಸ್ವಾಮಿ

***

ನಾಡಧ್ವಜಕ್ಕೆ ಅಧಿಕೃತ ಮನ್ನಣೆ ಸಿಗಲಿ: ಸಿದ್ಧರಾಮಯ್ಯ

‘ಕನ್ನಡ ರಾಜ್ಯೋತ್ಸವದ ದಿನ ನಾಡಧ್ವಜ ಹಾರಿಸದೆ ಹಲವು ಜಿಲ್ಲಾಡಳಿತಗಳು ಕಡೆಗಣಿಸಿರುವುದು ಖಂಡನೀಯ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರ ಸಮಕ್ಷಮದಲ್ಲಿಯೇ ನಾಡಧ್ವಜ ಹಾರಿಸಿರುವಾಗ ಜಿಲ್ಲಾಡಳಿತಗಳು ಯಾರ ಕುಮ್ಮಕ್ಕಿನಿಂದ ಉಪೇಕ್ಷಿಸಿವೆ ಎನ್ನುವುದನ್ನು ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ನಾನು ಮುಖ್ಯಮಂತ್ರಿಯಾಗಿದ್ದಾಗ ತಜ್ಞರ ಸಮಿತಿಯನ್ನು ಆಧರಿಸಿ ನಾಡಧ್ವಜವನ್ನು ವಿನ್ಯಾಸ ಮಾಡಿ ಅಂಗೀಕಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೆ. ಮೂರು ವರ್ಷಗಳಾದರೂ ಅದಕ್ಕೆ ಅಂಗೀಕಾರ ನೀಡದೆ ಇರುವುದು, ಕರ್ನಾಟಕದ ನಾಡಧ್ವಜದ ಬಗ್ಗೆ ಬಿಜೆಪಿ ಹೊಂದಿರುವ ಪೂರ್ವಗ್ರಹಕ್ಕೆ ಸಾಕ್ಷಿ’ ಎಂದು ಟ್ವೀಟ್‌ ಮಾಡಿದ್ದಾರೆ.

‘ನಾವು ಪ್ರತ್ಯೇಕ ಧ್ವಜ ಕೇಳುತ್ತಿಲ್ಲ. ರಾಜ್ಯಗಳು ತಮ್ಮದೇ ಧ್ವಜ ಹೊಂದಲು ಸಂವಿಧಾನದಲ್ಲಿ ಯಾವ ಅಡ್ಡಿಯೂ ಇಲ್ಲ. ಬಿಜೆಪಿಯ ಕೇಂದ್ರ ನಾಯಕರ ಅಭಿಪ್ರಾಯ ಏನೇ ಇರಲಿ. ಆ ಪಕ್ಷದ ಸ್ಥಳೀಯ ನಾಯಕರು ಮತ್ತು ಸಂಸದರು ಪ್ರಧಾನಿ ಕಚೇರಿ ಮೇಲೆ ಒತ್ತಡ ಹೇರಿ ನಮ್ಮ ನಾಡಧ್ವಜಕ್ಕೆ ಅಧಿಕೃತ ಮನ್ನಣೆ ಸಿಗುವಂತೆ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.