ADVERTISEMENT

ಎನ್‌ಪಿಆರ್‌ಗೆ ದಾಖಲೆ | ಕೇಂದ್ರ ಸಚಿವರ ಭರವಸೆ ಉಲ್ಲಂಘಿಸಿದ ಕರ್ನಾಟಕ ಬಿಜೆಪಿ ಘಟಕ

ಇದೆಂಥ ಅಣಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2020, 6:27 IST
Last Updated 9 ಫೆಬ್ರುವರಿ 2020, 6:27 IST
ಬಿಜೆಪಿ ಕರ್ನಾಟಕ ಮಾಡಿರುವ ಟ್ವೀಟ್ (twitter.com/BJP4Karnataka)
ಬಿಜೆಪಿ ಕರ್ನಾಟಕ ಮಾಡಿರುವ ಟ್ವೀಟ್ (twitter.com/BJP4Karnataka)   

ಬೆಂಗಳೂರು: ದೆಹಲಿ ವಿಧಾನಸಭಾ ಚುನಾವಣೆ ಸಂದರ್ಭ ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿ ಕೈಲಿ ಹಿಡಿದು ಮತಗಟ್ಟೆ ಕೇಂದ್ರಕ್ಕೆ ಬಂದ ಮುಸ್ಲಿಂ ಮಹಿಳೆಯರ ವಿಡಿಯೊ ತುಣುಕಿನೊಂದಿಗೆ ಬಿಜೆಪಿ ಕರ್ನಾಟಕ ಘಟಕ ಶನಿವಾರ ಮಾಡಿದ್ದಟ್ವೀಟ್‌ ಇದೀಗ ದೇಶಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿದೆ.

‘ನಾವು ಕಾಗದಗಳನ್ನು ತೋರಿಸುವುದಿಲ್ಲ(ಕಾಗಜ್ ನಹಿ ದಿಖಾಯೆಂಗೇ ಹಮ್) ಎನ್ನುವ ಹೋರಾಟದ ಘೋಷಣೆಯನ್ನೇ ಬಿಜೆಪಿ ಕರ್ನಾಟಕ ಘಟಕ ವ್ಯಂಗ್ಯ ಮಾಡಿದೆ. ಇದು ಒಂದು ಸಮುದಾಯದ ಬಗ್ಗೆ ಆ ಪಕ್ಷಕ್ಕಿರುವ ನಿಲುವಿನ ಪ್ರತೀಕ’ಎಂದು ಹಲವರು ಆರೋಪಿಸಿದ್ದಾರೆ.

‘ಕಾಗಜ್ ನಹಿ ದಿಖಾಯೆಂಗೇ ಹಮ್’ ಸಾಲಿನೊಂದಿಗೆ ಆರಂಭವಾಗುವ ಬಿಜೆಪಿ ಕರ್ನಾಟಕ ಘಟಕದ ಟ್ವೀಟ್, ‘ದಾಖಲೆಗಳನ್ನು ಜೋಪಾನವಾಗಿರಿಸಿಕೊಳ್ಳಿ. ಅವನ್ನು ಎನ್‌ಪಿಆರ್‌ (ರಾಷ್ಟ್ರೀಯ ಜನಸಂಖ್ಯೆ ನೋಂದಣಿ)ವೇಳೆ ತೋರಿಸಬೇಕಾಗುತ್ತೆ’ ಎನ್ನುವ (ಎಚ್ಚರಿಕೆ?)ಸಾಲುಗಳನ್ನೂಟ್ವೀಟ್‌ ಮಾಡಿದೆ.

ADVERTISEMENT

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಶೇಖ್ ಫರ್ಹಾ ಎಂಬಾಕೆ, ‘ಭಾರತದ ಅಭ್ಯುದಯಕ್ಕಾಗಿ ನಾವು ನಮ್ಮ ಕಾಗದಗಳನ್ನು (ದಾಖಲೆಗಳನ್ನು) ತೋರಿಸುತ್ತೇವೆ. ನಿಮ್ಮ ಪಕ್ಷದ ದುರಹಂಕಾರ ತಣಿಸಲು ಅಲ್ಲ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದೇಶದ ಜನರು ಇಟ್ಟಿರುವ ನಂಬಿಕೆಯನ್ನು ಈ ಸಾಲು ತೋರಿಸುತ್ತದೆ. ನಿಮ್ಮ ದುರಹಂಕಾರದ ಪಕ್ಷಕ್ಕೆ ಇಂದಿಗೂ ನಮ್ಮದು ಅದೇ ಉತ್ತರ. ಹಂ ಕಾಗಜ್ ನಹಿ ದಿಖಾಯೆಂಗೇ (ನಾವು ದಾಖಲೆಗಳನ್ನು ತೋರಿಸುವುದಿಲ್ಲ)’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕರ್ನಾಟಕ ಘಟಕದ ಈ ಟ್ವೀಟ್‌ನಲ್ಲಿರುವ ಒಕ್ಕಣೆಯು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ ರಾಯ್ಸಂಸತ್ತಿಗೆ ನೀಡಿರುವಹೇಳಿಕೆಗೆ ವ್ಯತಿರಿಕ್ತವಾಗಿರುವುದು ವಿಪರ್ಯಾಸ.

‘ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್‌ಪಿಆರ್‌) ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಸಂಗ್ರಹಿಸುವುದಿಲ್ಲ. ಆಧಾರ್‌ ಸಂಖ್ಯೆ ಕುರಿತ ಮಾಹಿತಿ ನೀಡುವುದು ಸಹ ಕಡ್ಡಾಯವಲ್ಲ’ ಎಂದು ರಾಯ್ ಸಂಸತ್ತಿಗೆ ನೀಡಿದ್ದ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದರು.

‘ಎನ್‌ಪಿಆರ್‌ ಸಿದ್ಧಪಡಿಸುವುದಕ್ಕೆ ಸಂಬಂಧಿಸಿಕೆಲವು ರಾಜ್ಯಗಳು ತಮ್ಮ ಅಸಮಾಧಾನ– ಆತಂಕವನ್ನು ವ್ಯಕ್ತಪಡಿಸಿವೆ. ಈ ಅಂಶಗಳ ಕುರಿತಂತೆ ಆಯಾ ರಾಜ್ಯಗಳ ಜೊತೆ ಕೇಂದ್ರ ಚರ್ಚೆ ನಡೆಸುತ್ತಿದೆ. ಜನಸಂಖ್ಯೆ ಹಂಚಿಕೆಕುರಿತಂತೆ ಪ್ರತಿ ವ್ಯಕ್ತಿ, ಕುಟುಂಬದ ಮಾಹಿತಿಯನ್ನು ಪರಿಷ್ಕರಿಸಲಾಗುತ್ತದೆ‘ ಎಂದೂ ಅವರು ತಮ್ಮ ಹೇಳಿಕೆ ವೇಳೆ ಉಲ್ಲೇಖಿಸಿದ್ದರು.

‘ಎನ್‌ಪಿಆರ್ ಒಂದು ಸಾಮಾನ್ಯ ಆಡಳಿತಾತ್ಮಕ ಕಾರ್ಯ. ಜನಸಂಖ್ಯೆ ಮಾಹಿತಿ ಪರಿಷ್ಕರಿಸುವುದರಿಂದ ಬಡವರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ. ಈ ಮಾಹಿತಿ ಆಧರಿಸಿ ಯಾರನ್ನೂ ನಾವು ಬಂಧಿಸುವುದಿಲ್ಲ, ವಿಚಾರಣೆಗೂ ಒಳಪಡಿಸುವುದಿಲ್ಲ. ವಿರೋಧ ಪಕ್ಷಗಳು ಎನ್‌ಪಿಆರ್‌ ಬಗ್ಗೆ ದೇಶದಲ್ಲಿ ಸುಳ್ಳು ಮಾಹಿತಿ ಹರಡುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದರು.

‘ಎನ್‌ಪಿಆರ್ ಮತ್ತು ಎನ್‌ಆರ್‌ಸಿ (ರಾಷ್ಟ್ರೀಯ ನಾಗರಿಕ ನೋಂದಣಿ) ಸಂಪರ್ಕದ ಯಾವುದೇ ಆಲೋಚನೆ ಇಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ತಮ್ಮ ನಿಲುವು ಸ್ಪಷ್ಟಪಡಿಸಿದ್ದರು.

‘ಆದರೆ ಬಿಜೆಪಿ ಕರ್ನಾಟಕ ಘಟಕವು ತನ್ನಟ್ವೀಟ್ ಮೂಲಕ ಬೇರೆಯದೇ ಆದ ಸಂದೇಶ ನೀಡಿದೆ’ ಎನ್ನುವ ಆತಂಕವನ್ನು ಹಲವರುವ್ಯಕ್ತಪಡಿಸಿದ್ದಾರೆ. ‘ಮೋದಿ ಆಶಯಕ್ಕೆ ಸ್ಪಂದಿಸುವಂತೆ ನಡೆದುಕೊಳ್ಳಿ. ದೇಶವನ್ನು ಹಳಿ ತಪ್ಪಿಸಬೇಡಿ’ ಎಂದು ಕೆಲವರುಕಾಮೆಂಟ್‌ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.