ADVERTISEMENT

ಟ್ವಿಟರ್‌ನ ಹೊಸ ಸಿಇಒ ಅಗರ್ವಾಲರ ಹಳೇ ಟ್ವೀಟ್‌ ಈಗ ಮುನ್ನೆಲೆಗೆ: ಭಾರಿ ಟೀಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 11:19 IST
Last Updated 30 ನವೆಂಬರ್ 2021, 11:19 IST
ಪರಾಗ್‌ ಅಗರ್ವಾಲ್‌
ಪರಾಗ್‌ ಅಗರ್ವಾಲ್‌    

ನವದೆಹಲಿ:ಟ್ವಿಟರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಯಾಗಿ ನೇಮಕವಾಗಿರುವ ಭಾರತ ಮೂಲದ ಪರಾಗ್‌ ಅಗರ್ವಾಲ್‌ ಅವರು 11 ವರ್ಷಗಳ ಹಿಂದಿನ ತಮ್ಮ ಟ್ವೀಟ್‌ಗಾಗಿ ಈಗ ಟೀಕೆಗೆ ಗುರಿಯಾಗಿದ್ದಾರೆ. ಟ್ವಿಟರ್‌ ವೇದಿಕೆಯಲ್ಲೇ ಅವರು ಮೂದಲಿಕೆ ಕೇಳಬೇಕಾಗಿ ಬಂದಿದೆ.

ಟ್ವಿಟರ್‌ನ ಸಿಇಒ ಹುದ್ದೆಗೆ ಜಾಕ್‌ ಡೋರ್ಸಿ ಅವರು ಸೋಮವಾರ ರಾತ್ರಿ ರಾಜೀನಾಮೆ ನೀಡಿದ್ದರು. ಟ್ವಿಟರ್‌ನಲ್ಲಿ ಹಿರಿಯ ತಾಂತ್ರಿಕ ಅಧಿಕಾರಿಯಾಗಿದ್ದ ಪರಾಗ್‌ ಅಗರ್ವಾಲ್‌ ಅವರು ಡೋರ್ಸಿ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಹಾಸ್ಯನಟನೊಬ್ಬನನ್ನು ಉಲ್ಲೇಖಿಸಿ ವರ್ಣಬೇಧ ನೀತಿ ಮತ್ತು ಇಸ್ಲಾಮೋಫೋಬಿಯಾ ಬಗ್ಗೆ ಅಗರ್ವಾಲ್‌ 2010 ರಲ್ಲಿ ಟ್ವೀಟ್‌ ಮಾಡಿದ್ದರು. ತಾವು ಟ್ವಿಟರ್‌ನ ಉದ್ಯೋಗಿಯಾಗಿಲ್ಲದಿದ್ದಾಗ ಮಾಡಿದ್ದ ಟ್ವೀಟ್‌ ಈಗ ಮುನ್ನೆಲೆ ಬಂದಿದೆ.

ADVERTISEMENT

"ಮುಸ್ಲಿಮರು ಮತ್ತು ಉಗ್ರಗಾಮಿಗಳ ನಡುವಿನ ವ್ಯತ್ಯಾಸವನ್ನು ಅವರು ತಿಳಿಸದಿದ್ದರೆ, ನಾನು ಬಿಳಿಯರು ಮತ್ತು ಜನಾಂಗೀಯವಾದಿಗಳ ನಡುವಿನ ವ್ಯತ್ಯಾಸವನ್ನು ಏಕೆ ತೋರಿಸಬೇಕು’ ಎಂದು ಅಗರವಾಲ್ ಅಕ್ಟೋಬರ್ 26, 2010 ರಂದು ಪೋಸ್ಟ್ ಮಾಡಿದ್ದರು.

ಟ್ವಿಟರ್‌ನ ಹೊಸ ಸಿಇಒ ಎಲ್ಲರನ್ನೂ ಸಮಾನವಾಗಿ ಕಾಣುವರೆಂದು ಹೇಗೆ ನಂಬುವುದು ಎಂದು ಕೊಲರಾಡೊವನ್ನು ಪ್ರತಿನಿಧಿಸುವ ರಿಪಬ್ಲಿಕನ್‌ ಪಕ್ಷದ ಕೆನ್‌ ಬಕ್‌ ಪ್ರಶ್ನೆ ಮಾಡಿದ್ದಾರೆ.

ಹೀಗಾಗಿ ಅಗರ್ವಾಲ್‌ ಅವರು ತಮ್ಮ ಟ್ವೀಟ್‌ಗೆ ಸ್ಪಷ್ಟನೆ ನೀಡಿದ್ದಾರೆ. "ನಾನು ‘ಡೈಲಿ ಶೋ‘ನ ಆಸಿಫ್ ಮಾಂಡವಿ ಅವರನ್ನು ಉಲ್ಲೇಖಿಸಿ ಹಾಗೆ ಬರೆದಿದ್ದೆ. ನೀವು ಓದುತ್ತಿರುವ ಲೇಖನವು ನನ್ನ ಪ್ರಸ್ತುತ ಮಾನಸಿಕ ಸ್ಥಿತಿಗಿಂತಲೂ ತುಂಬಾ ಭಿನ್ನವಾಗಿದೆ,’ ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಫೇಸ್‌ಬುಕ್‌ ಅನ್ನು ಗೇಲಿ ಮಾಡಿರುವ ಅವರ ಟ್ವೀಟ್‌ ಕೂಡ ಈಗ ಚರ್ಚೆಗೆ ಗ್ರಾಸವಾಗಿದೆ. ‘ಫೇಸ್‌ಬುಕ್ ಒಂದು ರೀತಿಯ ಜೈಲಿನಂತೆ. ಅದರಲ್ಲಿ ಕುಳಿತರೆ ಸಮಯ ವ್ಯರ್ಥ,‘ ಎಂದು ಅವರು 2011ರ ಫೆ. 5ರಲ್ಲಿ ಬರೆದುಕೊಂಡಿದ್ದರು.

ಈ ಮಧ್ಯೆ, ಅಗರ್ವಾಲ್‌ಗೆ ಶುಭಾಶಯಗಳೂ ಬಂದಿವೆ. ಟ್ವಿಟ್‌ ಮಾಡಿರುವ ಗೂಗಲ್ ಸಿಇಒ ಸುಂದರ್ ಪಿಚೈ, "ಜ್ಯಾಕ್ ನಿಮಗೆ ಶುಭ ಹಾರೈಸುತ್ತೇನೆ, ಅಗರ್ವಾಲ್‌ ಅವರಿಗೆ ಅಭಿನಂದನೆಗಳು’ ಆಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.