ADVERTISEMENT

TRUMP IS DEAD: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಟ್ರಂಪ್‌ ನಿಧನದ ಸುದ್ದಿ

ಏಜೆನ್ಸೀಸ್
Published 30 ಆಗಸ್ಟ್ 2025, 10:22 IST
Last Updated 30 ಆಗಸ್ಟ್ 2025, 10:22 IST
   

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕುರಿತು 'ಟ್ರಂಪ್‌ ಈಸ್‌ ಡೆಡ್‌’ ಎಂಬ ವಾಕ್ಯವು ‘ಎಕ್ಸ್‌’ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

'TRUMP IS DEAD’ ಎಂದು ಇದುವರೆಗೂ 50 ಸಾವಿರಕ್ಕೂ ಅಧಿಕ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ‘Where is Donald Trump’ ಹಾಗೂ ‘it happened’ ಎನ್ನುವುದು ಕೂಡ ‘ಎಕ್ಸ್‌’ನಲ್ಲಿ ಸದ್ದು ಮಾಡುತ್ತಿದೆ.

ಕೆಲವು ದಿನಗಳಿಂದ ಟ್ರಂಪ್‌ ಅವರ ಆರೋಗ್ಯ ಉತ್ತಮವಾಗಿಲ್ಲ ಎಂದು ಕೆಲವು ಅಮೆರಿಕನ್‌ ಮೂಲದ ಮಾಧ್ಯಮಗಳು ವರದಿ ಮಾಡಿದ್ದು ಕೂಡ ಅಮೆರಿಕ ಅಧ್ಯಕ್ಷರ ಭವಿಷ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ADVERTISEMENT

79 ವರ್ಷದ ನಿಧನ ಹೊಂದಿರದ ಅಮೆರಿಕ ಅಧ್ಯಕ್ಷರ ಮರಣ ವಾರ್ತೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಕಾರಣವಾಗಿರುವುದು ಅಲ್ಲಿನ ಉಪಾಧ್ಯಕ್ಷರ ಹೇಳಿಕೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

'ಟ್ರಂಪ್‌ ಈಸ್‌ ಡೆಡ್‌’ ಎಂದಿದ್ಯಾರು?:

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಅವರು ಆ.27ಕ್ಕೆ ‘ಯುಎಸ್‌ಎ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ‘ಒಂದು ವೇಳೆ ಏನಾದರೂ ದುರಂತ ಸಂಭವಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮೃತಪಟ್ಟರೆ ಅವರ ಜಾಗವನ್ನು ನಾನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ’ ಎಂದು ಹೇಳಿದ್ದರು. ಆ ಹೇಳಿಕೆಯು 'ಟ್ರಂಪ್‌ ಈಸ್‌ ಡೆಡ್‌’ ಎಂದು ಹರಿದಾಡುವುದಕ್ಕೆ ಕಾರಣವಾಗಿದೆ.

ಅದೇ ಸಂದರ್ಶನದಲ್ಲಿ ಟ್ರಂಪ್‌ ಅವರು ಆರೋಗ್ಯವಾಗಿದ್ದಾರೆ. ಯಾವುದೇ ಗಂಭೀರ ಕಾಯಿಲೆಯಿಲ್ಲ ಎಂದು ವ್ಯಾನ್ಸ್‌ ಸ್ಪಷ್ಟಪಡಿಸಿದ್ದಾರೆ. ಆದರೆ, ಅಮೆರಿಕದ ಉಪಾಧ್ಯಕ್ಷರ ಹೇಳಿಕೆಯು 'ಟ್ರಂಪ್‌ ಈಸ್‌ ಡೆಡ್‌’ ಆಗಿ ಬದಲಾಗಿದೆ.

ಉಹಾಪೂಹಕ್ಕೆ ಕಾರಣವಾಯ್ತು ಅರ್ಧಕ್ಕೆ ಹಾರಿದ ಬಾವುಟ:

ಅಮೆರಿಕದ ಶ್ವೇತ ಭವನದಲ್ಲಿ ದೇಶದ ಬಾವುಟವನ್ನು ಅರ್ಧಕ್ಕೆ ಹಾರಿಸಲಾಗಿತ್ತು. ದೇಶದಲ್ಲಿನ ಪ್ರಮುಖರು ಮೃತಪಟ್ಟಾಗ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲು ಅಥವಾ ಪ್ರಮುಖ ದುರಂತ ಸಂಭವಿಸಿದಾಗ ದೇಶದ ಧ್ವಜವನ್ನು ಅರ್ಧಕ್ಕೆ ಇಳಿಸಲಾಗುತ್ತದೆ. ಈ ಘಟನೆಯು ಅಧ್ಯಕ್ಷ ಟ್ರಂಪ್‌ ಅವರ ಸಾವಿನ ಉಹಾಪೂಹಕ್ಕೆ ಕಾರಣವಾಗಿತ್ತು. ಶ್ವೇತ ಭವನದೊಳಗೆ ಏನೋ ದುರಂತ ಸಂಭವಿಸಿದೆ ಎನ್ನುವ ಗುಮಾನಿಗೆ ಇದು ಕಾರಣವಾಗಿತ್ತು.

ಆದರೆ, ಮಿನ್ನೇಸೋಟದ ಮಿನ್ನಿಯಾಪೋಲಿಸ್‌ನಲ್ಲಿರುವ ಅನನ್ಸಿಯೇಷನ್ ​​ಕ್ಯಾಥೋಲಿಕ್ ಶಾಲೆಯಲ್ಲಿ ಭಾರಿ ಗುಂಡಿನ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲು ಅಮೆರಿಕದ ಬಾವುಟವನ್ನು ಧ್ವಜದ ಅರ್ಧಕ್ಕೆ ಇಳಿಸಲಾಗಿತ್ತು ಎಂದು ಶ್ವೇತ ಭವನವು ಸ್ಪಷ್ಟಪಡಿಸಿದೆ.

ಈ ಹಿಂದೆಯೂ ‘ಟ್ರಂಪ್’ ಸತ್ತಿದ್ದರು! :

ಡೊನಾಲ್ಡ್‌ ಟ್ರಂಪ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆಯೂ ಸತ್ತಿದ್ದರು!. 2023ರ ಸೆಪ್ಟೆಂಬರ್‌ನಲ್ಲಿ ಟ್ರಂಪ್‌ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸಕ್ರೀಯವಾಗಿದ್ದಾಗ, ಅವರ ಮಗ ಟ್ರಂಪ್‌ ಜೂನಿಯರ್‌ ಅವರ ಎಕ್ಸ್‌ ಖಾತೆಯಲ್ಲಿ ‘ನನ್ನ ತಂದೆ ನಿಧನರಾಗಿದ್ದಾರೆ. ಅವರ ಜಾಗದಲ್ಲಿ ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಪ್ರತಿಜ್ಞೆ ಮಾಡುತ್ತಿದ್ದೇನೆ’ ಎಂದು ಪೋಸ್ಟ್‌ ಮಾಡಲಾಗಿತ್ತು. ನಂತರ ಅದು ಹ್ಯಾಕರ್‌ ಒಬ್ಬನ ಕೈಚಳಕದಿಂದಾಗ ಘಟನೆ ಎಂದು ಸ್ವತಃ ಟ್ರಂಪ್‌ ಅವರೇ ಸ್ಪಷ್ಟಪಡಿಸಿದ್ದರು.

ಹೆಚ್ಚುವರಿ ಸುಂಕ, ಅಮೆರಿಕದಲ್ಲಿನ ಕಾನೂನು ಬದಲಾವಣೆಗಳು, ಅಂತರರಾಷ್ಟ್ರೀಯ ವಿದ್ಯಮಾನಗಳು ಹಾಗೂ ಉದ್ಯಮಿ ಎಲಾನ್‌ ಮಸ್ಕ್‌ ಮತ್ತು ಟ್ರಂಪ್‌ ನಡುವಿನ ವೈಮನಸ್ಸು ಸೇರಿದಂತೆ ಅಮೆರಿಕ ಅಧ್ಯಕ್ಷರ ವಿರುದ್ದದ ನಿಲುವುಗಳು ಟ್ರಂಪ್‌ ಮೃತಪಟ್ಟಿದ್ದಾರೆ ಎನ್ನುವುದನ್ನು ಬಿಂಬಿಸುವ 'ಟ್ರಂಪ್‌ ಈಸ್‌ ಡೆಡ್‌’ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡಿದೆ.

'ಟ್ರಂಪ್‌ ಈಸ್‌ ಡೆಡ್‌’ ಪೋಸ್ಟ್‌ಗಳನ್ನು ಲೈಕ್‌ ಮತ್ತು ರಿಟ್ವೀಟ್‌ ಮಾಡಿದವರಿಗೆ 50, 100, 500 ಡಾಲರ್‌ಗಳನ್ನು ಕೊಡುತ್ತೇವೆ ಎಂದು ಕೆಲವು ಎಕ್ಸ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳು ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.