ADVERTISEMENT

'ರೈತರ ಹತ್ಯೆ' ಬಗ್ಗೆ ಟ್ವೀಟ್‌; 250 ಖಾತೆಗಳನ್ನು ನಿರ್ಬಂಧಿಸಿದ ಟ್ವಿಟರ್‌

ಏಜೆನ್ಸೀಸ್
Published 1 ಫೆಬ್ರುವರಿ 2021, 13:09 IST
Last Updated 1 ಫೆಬ್ರುವರಿ 2021, 13:09 IST
ಟ್ವಿಟರ್
ಟ್ವಿಟರ್   

ನವದೆಹಲಿ: ಟ್ವಿಟರ್‌ ಸೋಮವಾರ ಸುಮಾರು 250 ಖಾತೆಗಳನ್ನು ನಿರ್ಬಂಧಿಸಿದೆ. ಸುಳ್ಳು, ಪ್ರಚೋದನಕಾರಿ ಹಾಗೂ ಬೆದರಿಕೆಯ ಟ್ವೀಟ್‌ಗಳನ್ನು ಮಾಡುತ್ತಿದ್ದ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸುವಂತೆ ಗೃಹ ಸಚಿವಾಲಯದಿಂದ ಮನವಿ ಸಲ್ಲಿಕೆಯಾಗಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

'ರೈತರ ಮಾರಣಹೋಮಕ್ಕೆ ಮೋದಿ ಯೋಜನೆ' ಎನ್ನುವ ಅರ್ಥ ಬಹುವಂತಹ ಹ್ಯಾಷ್‌ಟ್ಯಾಗ್‌ ( #ModiPlanningFarmerGenocide) ಬಳಸಿ ಟ್ವೀಟಿಸುತ್ತಿದ್ದ ಖಾತೆಗಳನ್ನು ನಿರ್ಬಂಧಿಸಲಾಗಿದೆ. ರೈತರ ಪ್ರತಿಭಟನೆ ನಡೆಯುತ್ತಿರುವುದರಿಂದ ಕಾನೂನು ಮತ್ತು ಸುವ್ಯವ್ಥೆಯ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಟ್ವಿಟರ್‌ಗೆ ಮನವಿ ಮಾಡಿತ್ತು ಎಂದು ತಿಳಿದು ಬಂದಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಕ್ಯಾರವಾನ್‌ ಮ್ಯಾಗಜೀನ್‌, ಸಿಪಿಎಂ ಮುಖಂಡ ಮೊಹಮ್ಮದ್‌ ಸಲೀಂ, ಕಿಸಾನ್‌ ಏಕ್ತಾ ಮೋರ್ಚಾಗೆ ಸಂಬಂಧಿಸಿದಂತೆ ಕಾಣುವ ಖಾತೆಗಳು ಹಾಗೂ ಎಎಪಿ ಶಾಸಕರ ಖಾತೆಗಳು ಸೇರಿದಂತೆ ನೂರಾರು ಖಾತೆಗಳನ್ನು ಟ್ವಿಟರ್‌ ನಿರ್ಬಂಧಿಸಿದೆ. ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್‌ ರ್‍ಯಾಲಿಯ ಸಂದರ್ಭದಲ್ಲಿ ಪ್ರತಿಭಟನಾಕಾರರೊಬ್ಬರ ಸಾವಿನ ಬಗ್ಗೆ ಸುಳ್ಳು ಮತ್ತು ದಾರಿ ತಪ್ಪಿಸುವಂತಹ ಮಾಹಿತಿ ಹರಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಭಾನುವಾರ ಕ್ಯಾರವಾನ್‌ ಮ್ಯಾಗಜೀನ್‌ನ ಸಂಪಾದಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ADVERTISEMENT

ರೈತರ ಹೋರಾಟದ ಕುರಿತು ಅಭಿಯಾನ ನಡೆಸುತ್ತಿದ್ದ ಹಲವು ಜನಪ್ರಿಯ ಖಾತೆಗಳನ್ನು 'ಕಾನೂನು ಸಂಬಂಧಿಸಿದ' ಮನವಿಯ ಕಾರಣ ನೀಡಿದ ಟ್ವಿಟರ್ ನಿರ್ಬಂಧಿಸಿದೆ. ಇದನ್ನು ನಾವು ಖಂಡಿಸುತ್ತೇವೆ ಹಾಗೂ ನಿರ್ಬಂಧವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸಿಪಿಎಂ ಟ್ವೀಟಿಸಿದೆ.

ಖಾತೆಗಳ ಟೈಮ್‌ಲೈನ್ ನಿರ್ಬಂಧಿಸಿ, 'ಖಾತೆ ತಡೆಹಿಡಿಯಲಾಗಿದೆ' ಎಂದು ನಮೂದಾಗಿದೆ. ಟ್ವಿಟರ್‌ ಪ್ರಕಾರ, ಅಧಿಕೃತ ಮೂಲದಿಂದ ಅಧಿಕೃತವಾದ ಮನವಿ ಸಲ್ಲಿಕೆಯಾದಲ್ಲಿ ಖಾತೆ ಮತ್ತು ಪ್ರಕಟಿತ ವಿಚಾರಗಳನ್ನು ತಡೆಯಹಿಡಿಯಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.