
‘ಇನ್ನು ಮುಂದೆ ಕರೂರಲ್ಲಿ ಲಂಚ ಹೊಡಿಯಂಗಿಲ್ಲ, ಭ್ರಷ್ಟಾಚಾರ ನಡೆಯಂಗಿಲ್ಲ, ಸರ್ಕಾರಿ ಸಂಸ್ಥೆಗಳು ಸರಿಯಾಗಿ ಕೆಲಸ ಮಾಡ್ಬೇಕು, ಎಲ್ಲ ಗ್ರಾಮ ಪಂಚಾಯ್ತಿ ಮೆಂಬರ್‌ಗಳೂ ಸರಿಯಾಗಿ ಕೆಲಸ ಮಾಡ್ಬೇಕು, ಗ್ರಾಂಟ್ ಇಲ್ಲ ಅಂದ್ರ, ಸ್ಕ್ಯಾಮ್ ಆಯ್ತಂದ್ರ ಕರೂರಿನ ಜನಗಳಿಗೆ ನಾವು ತಿಳಿಸ್ತೀವಿ’
ಇದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕರೂರು ಗ್ರಾಮದಲ್ಲಿ ಹುಟ್ಟಿಕೊಂಡಿರುವ ‘ಕರೂರು ಸೂಪರ್ ವಿಲೇಜ್’ ತಂಡದ ರೀಲ್ಸ್‌ನ ಒಂದು ತುಣುಕು.
ಮಳೆಯಿಂದ ಹದಗೆಟ್ಟು ಹೋದ ಓಣಿಗಳು, ಗುಂಡಿ ಬಿದ್ದ ರಸ್ತೆಗಳು, ಕಸದ ರಾಶಿ, ಪಾಳುಬಿದ್ದ ಶಾಲೆ, ಅವ್ಯವಸ್ಥೆಯ ಆಗರವಾಗಿರುವ ಆಸ್ಪತ್ರೆ... ಹೀಗೆ ಎಲ್ಲಿ ಅದ್ವಾನಗಳಿವೆಯೋ ಅದರ ಮುಂದೆ ನಿಂತು ರೀಲ್ ಮಾಡುವ ‘ಕರೂರು ಸೂಪರ್ ವಿಲೇಜ್’ ತಂಡದ ಸದಸ್ಯರು, ಅದನ್ನು ಗ್ರಾಮಾಡಳಿತಕ್ಕೆ, ಅಧಿಕಾರಿಗಳಿಗೆ, ಜಿಲ್ಲಾಡಳಿತಕ್ಕೆ ತಲುಪಿಸುತ್ತಾರೆ. ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡುತ್ತಾರೆ.
ಇಷ್ಟೇ ಅಲ್ಲ, ತಮ್ಮ ಗ್ರಾಮದ ಅವ್ಯವಸ್ಥೆಯ ಬಗ್ಗೆ ಜನರಲ್ಲಿ ಪ್ರಶ್ನಿಸುವ, ಚಿಂತಿಸುವ ಮನೋಭಾವ ಮೊಳೆಯುವಂತೆ ‘ಕರೂರು ಸೂಪರ್ ವಿಲೇಜ್’ ತಂಡ ಪ್ರೇರೇಪಿಸುತ್ತಿದೆ. ‘ಲಂಚ ಕೊಡಂಗಿಲ್ಲ, ಮುಟ್ಟಂಗಿಲ್ಲ, ಭ್ರಷ್ಟಾಚಾರ ನಡೆಯುವಂಗಿಲ್ಲ’ ಎಂದು ಗ್ರಾಮದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ರೀಲ್ಸ್‌ಗಳ ಮೂಲಕ ಮಾಡುತ್ತಿದೆ.
‘ಗ್ರಾಮಕ್ಕೆ ನಾಯಕರು ಇರಬಾರದು. ಅವರ ಹಿಂದೆ ಹೋದರೆ ನಾವು ಹಿಂಬಾಲಕರಾಗುತ್ತೇವೆ. ಯಾರೋ ರಾಜಕೀಯ ನಾಯಕರು ಹೇಳಿದವರು ಇಲ್ಲಿ ಬಂದು ನಿಂತು ಗೆಲ್ಲೋದಲ್ಲ. ನಾವೇ ನಾಯಕರಾಗಬೇಕು. ನಮ್ಮ ಓಣಿಗೆ ನಮ್ಮವರೇ ಮೆಂಬರ್‌ಗಳಾಗಬೇಕು. ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ದುಡ್ಡು ಪಡಿಲಾರ್ದಂಗೆ ವೋಟು ಹಾಕಬೇಕು’ ಎಂದು ಈ ತಂಡ ಒಂದೂವರೆ ವರ್ಷದಿಂದ ಎಚ್ಚರಿಸುತ್ತಿದೆ.
ಗ್ರಾಮದ ಸಮಸ್ಯೆಗಳು, ನಾಗರಿಕರ ಹಕ್ಕುಗಳಿಗೆ ಸಂಬಂಧಿಸಿದಂತೆ ಈಗಾಗಲೇ ನೂರಾರು ರೀಲ್ಸ್‌ಗಳನ್ನು ಮಾಡಿರುವ ಈ ತಂಡ, ಕರೂರು ಗ್ರಾಮವನ್ನೂ ಮೀರಿ, ಸಾಮಾಜಿಕ ಮಾಧ್ಯಮದಲ್ಲಿ ರಾಜ್ಯದಾದ್ಯಂತ ಸದ್ದು ಮಾಡುತ್ತಿದೆ. ಇದರ ಪ್ರೇರಣೆ ಪಡೆದು ಹಲವು ಕಡೆಗಳಲ್ಲಿ ‘ಸೂಪರ್ ವಿಲೇಜ್’ ತಂಡಗಳು ಸೃಷ್ಟಿಯಾಗುತ್ತಿವೆ.
‘ಕರೂರು ಸೂಪರ್ ವಿಲೇಜ್’ನ ಈ ಅಭಿಯಾನದಿಂದ ಆದ ಅನುಕೂಲಗಳ ಬಗ್ಗೆ ಗ್ರಾಮಸ್ಥರೂ ಮಾತನಾಡಿದ್ದಾರೆ. ‘ನಾವು ಧೈರ್ಯವಾಗಿ ಮಾತಾಡಾಕ ಹತ್ತಿದ್ಮೇಲೆ, ನಮ್ಮೊಣ್ಯಗಾ ಕಸದ ಗಾಡಿ ಬರಾಕ ಹತ್ತೈತಿ. ಆಸ್ಪತ್ರ‍್ಯಗ ಔಷಧಿ ಸಿಗತೈತಿ’ ಎನ್ನುತ್ತಾರೆ ಗ್ರಾಮದ ಆರನೇ ವಾರ್ಡ್‌ನ ಲಕ್ಷ್ಮವ್ವ.
‘ಗ್ರಾಮ ಪಂಚಾಯಿತಿ ನಡೆಸುವ ಗ್ರಾಮಸಭೆಗಳ ಬಗ್ಗೆ ನಮಗೆ ಮಾಹಿತಿಯೇ ಇರುತ್ತಿರಲಿಲ್ಲ. ಕರೂರು ಸೂಪರ್ ವಿಲೇಜ್‌ನ ಹುಡುಗರು ಬಂದ ಮೇಲೆ ಮೊದಲ ಬಾರಿ ನಾವೆಲ್ಲರೂ ಗ್ರಾಮಸಭೆ ನೋಡುವಂತಾಯಿತು’ ಎಂದು ನಾಗರಾಜ ರೆಡ್ಡಿ ಹೇಳುತ್ತಾರೆ.
ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ, ಎಂಟೆಕ್ ಮಾಡಿರುವ ಅಶೋಕ್ ರೆಡ್ಡಿ ‘ಕರೂರು ಸೂಪರ್ ವಿಲೇಜ್’ ಎಂಬ ಇನ್‌ಸ್ಟಾಗ್ರಾಂ ಖಾತೆ ಮೂಲಕ ಮೊದಲಿಗೆ ಗ್ರಾಮ ಜಾಗೃತಿ ರೀಲ್ಸ್ ಮಾಡಲಾರಂಭಿಸಿದರು. ಬಹರೇನ್, ಓಮನ್, ಅಲ್ಜೀರಿಯಾಗಳಲ್ಲಿ ಕೆಲಸ ಮಾಡಿರುವ ಅಶೋಕ್ ರೆಡ್ಡಿ, ಸದ್ಯ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹುಟ್ಟೂರು ಕರೂರಿನಲ್ಲೇ ಉಳಿದುಕೊಂಡಿರುವ ಅವರು, ಗ್ರಾಮದ ಸಮಸ್ಯೆಗಳ ಬಗ್ಗೆ ರೀಲ್ಸ್ ಮಾಡಲು ಶುರು ಮಾಡಿದರು. ನಂತರ ಇದಕ್ಕೆ ಸ್ಪಂದಿಸಿದ ಗ್ರಾಮದ ಯುವಕರು ಒಬ್ಬೊಬ್ಬರಾಗಿ ಅಶೋಕ್ ರೆಡ್ಡಿಯನ್ನು ಸೇರಿಕೊಂಡರು. ಈಗ ಈ ಬಳಗದಲ್ಲಿ ಹದಿನಾರು ಮಂದಿ ಇದ್ದಾರೆ.
ಆರಂಭದಲ್ಲಿ ‘ರೀಲ್ಸ್ ಹುಡುಗರು’ ಎಂದು ಗುರುತಿಸಿಕೊಂಡಿದ್ದವರು ಈಗ ಗ್ರಾಮದ ಬದಲಾವಣೆಯ ಹರಿಕಾರರು ಎಂದು ಕರೆಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಲಂಚ ಕೇಳಲು ಹಿಂಜರಿಯುತಿದ್ದಾರೆ. ‘ಕರೂರು ಸೂಪರ್ ವಿಲೇಜ್’ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊವೊಂದು ಬಂತೆಂದರೆ, ಅಧಿಕಾರಿಗಳು ತಕ್ಷಣ ಸ್ಪಂದಿಸುತ್ತಾರೆ. ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದ್ದು, ಅದರಲ್ಲಿ ಜಿಲ್ಲಾಮಟ್ಟದವರೆಗಿನ ಅಧಿಕಾರಿಗಳು ಸೇರಿದಂತೆ ಗ್ರಾಮದ 800ಕ್ಕೂ ಹೆಚ್ಚು ಜನ ಇದ್ದಾರೆ. ‘ಅಶೋಕ್ ರೆಡ್ಡಿ ಆರಂಭಿಸಿದ ಈ ಅಭಿಯಾನದಲ್ಲಿ ಹಲವರು ಸೇರಿಕೊಂಡಿದ್ದಾರೆ. ಅಕೌಂಟೆಂಟ್‌ಗಳು, ಸಾಫ್ಟ್‌ವೇರ್ ಎಂಜಿನಿಯಗಳು, ಆಟೋಮೇಷನ್ ಎಂಜಿನಿಯರ್‌ಗಳು, ಖಾಸಗಿ ಶಾಲಾ ಶಿಕ್ಷಕರು, ರೈತರು ಜೊತೆಗೂಡಿದ್ದಾರೆ’ ಎಂದು ಕರೂರು ಸೂಪರ್ ವಿಲೇಜ್ ತಂಡದ ಸದಸ್ಯ ಸಂಜಯ್ ಹೇಳುತ್ತಾರೆ.
‘ನಮ್ಮ ಉದ್ದೇಶ ಒಂದೇ. ನಮ್ಮ ಕರೂರು ಗ್ರಾಮ ಸೂಪರ್ ವಿಲೇಜ್ ಆಗಬೇಕು. ಮೂಲ ಸೌಕರ್ಯಗಳಾದ ನೀರು, ಚರಂಡಿ, ನೈರ್ಮಲ್ಯ, ಒಳ್ಳೆಯ ಆಸ್ಪತ್ರೆ ಮತ್ತು ಲಂಚ ಮುಕ್ತ ಗ್ರಾಮವಾಗಬೇಕು’ ಎನ್ನುತ್ತಾರೆ ಅಶೋಕ್ ರೆಡ್ಡಿ.
‘ಕರೂರು ಇತಿಹಾಸದಲ್ಲಿ ಮೊದಲ ಬಾರಿಗೆ ಊರಿನ ಯುವಕರು ಈ ಮಟ್ಟದಲ್ಲಿ ಧೈರ್ಯ ಮಾಡಿದ್ದಾರೆ. ಅದಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ವಿದ್ಯಾವಂತ ಹುಡುಗರ ಈ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ’ ಎಂದು ಜಗನ್ನಾಥ ರೆಡ್ಡಿ ಹೇಳುತ್ತಾರೆ.
ಕರೂರು ಸೂಪರ್ ವಿಲೇಜ್ ತಂಡದ ಪ್ರೇರಣೆ ಪಡೆದು ರಾಜ್ಯವಲ್ಲದೇ, ಹೊರ ರಾಜ್ಯಗಳಲ್ಲೂ ಸೂಪರ್ ವಿಲೇಜ್ ತಂಡಗಳು ರಚನೆಯಾಗುತ್ತಿವೆ.
ಸಿರುಗುಪ್ಪ ತಾಲ್ಲೂಕಿನ ದೇಶನೂರು, ಹೊಸಪೇಟೆ ತಾಲ್ಲೂಕಿನ ಜಿ. ನಾಗಲಾಪುರ, ಕೂಡ್ಲಿಗಿ ತಾಲ್ಲೂಕಿನ ಹುರಳಿಹಾಳು, ಗೋಕಾಕ್ ತಾಲ್ಲೂಕಿನ ಮೆಳವಣಿಕೆ, ಜೇವರ್ಗಿ ತಾಲ್ಲೂಕಿನ ಇಜೇರಿ, ಅಲ್ಲದೆ ಸೀಮಾಂಧ್ರದ ಪೆದ್ದ ಹರಿವಾಣಂ ಸೇರಿದಂತೆ ಹತ್ತಾರು ಗ್ರಾಮ ಪಂಚಾಯಿತಿಗಳಲ್ಲಿ ಸೂಪರ್ ವಿಲೇಜ್ ತಂಡಗಳು ಹುಟ್ಟಿಕೊಂಡಿವೆ. ಗ್ರಾಮ ಪಂಚಾಯಿತಿಗಳ ಆಡಳಿತ ಸುಧಾರಣೆಗಳ ಹಕ್ಕೊತ್ತಾಯಕ್ಕೆ ಪ್ರೇರಣೆಯಾಗಿವೆ. ರೀಲ್ಸ್ ಬರೀ ಮನರಂಜನೆಗಾಗಿ ಅಲ್ಲ, ಅದು ಜನ ಜಾಗೃತಿಗಾಗಿಯೂ, ಗ್ರಾಮದ ಅಭ್ಯುದಯಕ್ಕಾಗಿಯೂ ಬಳಕೆ ಆಗುತ್ತದೆ. ಸಮಾಜದಲ್ಲಿನ ಬದಲಾವಣೆಗೂ ಕಾರಣವಾಗುತ್ತದೆ. ಸಾಮಾಜಿಕ ಮಾಧ್ಯಮಗಳನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ.
ಕರೂರು ಗ್ರಾಮ ಪಂಚಾಯಿತಿಯನ್ನು ಸೂಪರ್ ವಿಲೇಜ್ ಮಾಡುವ ಕನಸು ಹೊತ್ತ ರೀಲ್ಸ್‌ನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ನ್ಯಾಯಕ್ಕಾಗಿ ಮೊರೆ ಇಡುವುದು. ಭ್ರಷ್ಟಾಚಾರ ಮುಕ್ತ ಗ್ರಾಮ ಪಂಚಾಯಿತಿಗಾಗಿ ‘ದುಡ್ಡಿಗೆ ಮತ ಮಾರಿಕೊಳ್ಳಬೇಡಿ’ ಎಂಬ ಕಳಕಳಿ ಮನವಿ ಮಾಡುವುದು. ಜನರೇ ಸೂಚಿಸುವ ವ್ಯಕ್ತಿ ವಾರ್ಡಿನ ಸದಸ್ಯನಾಗಬೇಕು ರಾಜಕೀಯ ಪಕ್ಷ ಸೂಚಿಸುವವನಲ್ಲ ಎಂಬ ಅಭಿಯಾನ. ಗ್ರಾಮ ಪಂಚಾಯಿತಿಗೆ ವಾರ್ಷಿಕ ಒಂದು ಕೋಟಿ ಅನುದಾನ ಬರುತ್ತದೆ ಎಂಬುದನ್ನು ಜನರಿಗೆ ತಿಳಿಸುವುದು ಅನುದಾನ ಬಳಕೆ ಕುರಿತು ಸಾರ್ವಜನಿಕರು ಪ್ರಶ್ನಿಸಬೇಕು ಎಂಬುದನ್ನು ರೀಲ್ಸ್ ಒಳಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.