ADVERTISEMENT

ಮಡದಿಗೆ ಮಂಗಳಸೂತ್ರ ಖರೀದಿಸಲು ಬಂದ 93ರ ಅಜ್ಜನಿಗೆ ಅಚ್ಚರಿಯ ಕಾಣಿಕೆ ನೀಡಿದ ಮಾಲೀಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2025, 2:41 IST
Last Updated 19 ಜೂನ್ 2025, 2:41 IST
   

ಜಲ್ನಾ: ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿರುವ ಆಭರಣದ ಮಳಿಗೆಯೊಂದಕ್ಕೆ ವೃದ್ಧ ದಂಪತಿಯೊಂದು ಇತ್ತೀಚೆಗೆ ಭೇಟಿ ನೀಡಿತ್ತು. ಶ್ವೇತವರ್ಣದ ಧೋತಿ, ಕುರ್ತಾ ಹೆಗಲಿನ ಮೇಲೊಂದು ಟವಲ್‌, ತಲೆಗೆ ಟೋಪಿ ಧರಿಸಿ ಕೈಯಲ್ಲೊಂದು ಕೋಲು ಹಿಡಿದಿದ್ದ 93 ವರ್ಷದ ಅಜ್ಜ ಹಾಗೂ ಸಾಧಾರಣ ಸೀರೆಯುಟ್ಟಿದ್ದ ಅಜ್ಜಿಯನ್ನು ಕಂಡ ಅಲ್ಲಿನ ಸಿಬ್ಬಂದಿ, ಆ ದಂಪತಿಯು ಹಣಕಾಸಿನ ನೆರವು ಕೇಳಲು ಅಥವಾ ಭಿಕ್ಷೆ ಬೇಡಲು ಬಂದಿರಬೇಕು ಎಂದು ಭಾವಿಸಿದ್ದರು. ಆದರೆ, ಅವರಿಗೆಲ್ಲ ಅಚ್ಚರಿ ಕಾದಿತ್ತು.

ಜಲ್ನಾ ಜಿಲ್ಲೆಯ ಅಂಭೋರಾ ಜಹಗೀರ್‌ ಗ್ರಾಮದ ರೈತ ಕುಟುಂಬದವರಾದ ನಿವೃತ್ತಿ ಶಿಂದೆ ಹಾಗೂ ಶಾಂತಾಬಾಯಿ ದಂಪತಿಯೇ ಚಿನ್ನದಂಗಡಿಗೆ ಭೇಟಿ ನೀಡಿದ್ದವರು.

ಮಳಿಗೆ ಪ್ರವೇಶಿಸುತ್ತಿದ್ದಂತೆ ಶಿಂದೆ ಅವರು ತನ್ನ ಮಡದಿಗೆ 'ಮಂಗಳಸೂತ್ರ' ಖರೀದಿಸಲು ಬಂದಿರುವುದಾಗಿ ಅಲ್ಲಿನ ಸಿಬ್ಬಂದಿಗೆ ಹೇಳಿದ್ದರು. ಇದು ಅಲ್ಲಿದ್ದವರನ್ನು ಚಕಿತಗೊಳಿಸಿತ್ತು.

ADVERTISEMENT

ಅಜ್ಜ ಇಳಿ ವಯಸ್ಸಿನಲ್ಲೂ ತನ್ನ ಪತ್ನಿಯ ಮೇಲೆ ಹೊಂದಿರುವ ಪ್ರೀತಿಗೆ ಮನಸೋತ ಮಳಿಗೆಯ ಮಾಲೀಕ, ಅವರನ್ನು ಆತ್ಮೀಯವಾಗಿ ಮಾತನಾಡಿಸಿದ್ದರು. ಅವರ ಹಿನ್ನೆಲೆ ವಿಚಾರಿಸಿ, ಎಷ್ಟು ಹಣ ತಂದಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದರು. ನಂತರ, ಕೇವಲ ₹ 20 ಪಡೆದು ದಂಪತಿಗೆ ಆಭರಣವನ್ನು ನೀಡಿದ್ದರು. ಇದರಿಂದ ಭಾವುಕರಾದ ದಂಪತಿ ಕಣ್ಣೀರಾಗಿದ್ದರು.

ಈ ಸಂದರ್ಭದ ವಿಡಿಯೊವನ್ನು 'ಗೋಪಿಕಾ ಜ್ಯುವೆಲರಿ' ಎಂಬ ಖಾತೆಯ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. 20 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೊ ವೀಕ್ಷಿಸಿಸಿದ್ದು, ಶಿಂದೆ ಅವರು ತನ್ನ ಪತ್ನಿ ಮೇಲೆ ಹೊಂದಿರುವ ಪ್ರೀತಿಯನ್ನು ಸಾಕಷ್ಟು ಮಂದಿ ಕೊಂಡಾಡಿದ್ದಾರೆ. ಅಂಗಡಿ ಮಾಲೀಕನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೃದ್ಧ ದಂಪತಿಯ ಕುರಿತು ಮಾತನಾಡಿರುವ ಅಂಗಡಿ ಮಾಲೀಕ, '₹ 1,120 ಇಟ್ಟುಕೊಂಡು, ಪತ್ನಿಯೊಂದಿಗೆ ಅಂಗಡಿಗೆ ಬಂದ ವೃದ್ಧ, ಆಕೆಗೆ ಮಂಗಳಸೂತ್ರ ಖರೀದಿಸಲು ಬಯಸುತ್ತಿರುವುದಾಗಿ ಹೇಳಿದರು. ಅದು ನನಗೆ ತುಂಬಾ ಇಷ್ಟವಾಯಿತು. ಆಶೀರ್ವಾದ ರೂಪದಲ್ಲಿ ಅವರಿಂದ ₹ 20 ತೆಗೆದುಕೊಂಡು ಮಂಗಳಸೂತ್ರವನ್ನು ನೀಡಿದೆ' ಎಂದು ಹೇಳಿದ್ದಾರೆ.

ಶಿಂದೆ ಹಾಗೂ ಶಾಂತಾಬಾಯಿ ಅವರು, ಆಷಾಢ ಏಕಾದಶಿ ಪ್ರಯುಕ್ತ ಪಂಡರಾಪುರಕ್ಕೆ ಕಾಲ್ನಡಿಗೆ ಮೂಲಕ ತೀರ್ಥಯಾತ್ರೆ ಹೊರಟಿದ್ದಾರೆ. ಅದೇ ವೇಳೆ ಅವರು ಚಿನ್ನದಂಗಡಿಗೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.