ADVERTISEMENT

ಕೇರಳದ ರಥ ಬೀದಿಯಲ್ಲಿ ಆಂಬ್ಯುಲೆನ್ಸ್‌ ಸಾಗಿದ ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 12:29 IST
Last Updated 25 ಏಪ್ರಿಲ್ 2019, 12:29 IST
   

ತಿರುವನಂತಪುರ: ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸುವ ಜೀವ ರಕ್ಷಕ ಆಂಬ್ಯುಲೆನ್ಸ್‌ ಅನ್ನು ಬೆಂಗಳೂರಿನಲ್ಲಿ ಪ್ರಯಾಣಿಕರನ್ನು ಸಾಗಿಸಲು ಬಳಸಿಕೊಂಡ ಪ್ರಕರಣ ಬುಧವಾರಷ್ಟೇ ವರದಿಯಾಯಿತು. ಇದರ ಜತೆಗೇ, ಆಂಬ್ಯುಲೆನ್ಸ್‌ಗಳಿಗೆ ವಾಹನ ಚಾಲಕರು ದಾರಿ ಬಿಡುವುದಿಲ್ಲ ಎಂಬ ದೂರುಗಳೂ ಆಗಿದ್ದಾಂಗೇ ಕೇಳಿ ಬರುತ್ತಲೇ ಇರುತ್ತವೆ. ಹೀಗಿರುವಾಗಲೇ ಕೇರಳದಲ್ಲಿ ಆಂಬ್ಯುಲೆನ್ಸ್‌ವೊಂದು ರಥಬೀದಿಯಲ್ಲಿ ಸಾಗಿದ್ದು, ಅದಕ್ಕಾಗಿ ಜನ ದಾರಿ ಮಾಡಿಕೊಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಈ ವಿಡಿಯೋವನ್ನು ರೆಕಾರ್ಡ್‌ ಮಾಡಿದವರಾರರು, ಕೇರಳದ ಯಾವ ಪ್ರದೇಶದಲ್ಲಿ ಈ ಘಟನೆ ನಡೆಯಿತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ. ಆದರೆ, ಆಂಬ್ಯುಲೆನ್ಸ್‌ಗೆ ಜನ ಸ್ಪಂದಿಸಿದ ರೀತಿ ಮಾತ್ರ ಸ್ಫೂರ್ತಿದಾಯಕ.

ಆ ಊರಿಡೀ ಅಂದು ಹಬ್ಬ. ರಸ್ತೆಯುದ್ದಕ್ಕೂ ಬರೀ ರಥಗಳು, ಡೋಲು, ತಾಳ ಮೇಳ, ಮದ್ದಳೆಯ ತಂಡಗಳು, ರಸ್ತೆಯಲ್ಲಿ ಭಕ್ತರು ತುಂಬಿ ತುಳುಕುತ್ತಿರುತ್ತಾರೆ. ಹೀಗಿರುವಾಗಲೇ ಸದ್ದು ಮಾಡುತ್ತಾ ಆಂಬ್ಯುಲೆನ್ಸ್‌ವೊಂದು ವೇಗವಾಗಿ ಬರುತ್ತದೆ. ಇನ್ನು ಆಂಬ್ಯುಲೆನ್ಸ್‌ ಮುಂದೆ ಹೋಗಲು ಸಾಧ್ಯವೇ ಇಲ್ಲವೇನೋ ಎನಿಸುತ್ತದೆ ಆವಿಡಿಯೋ ನೋಡುಗರಿಗೆ. ಆದರೆ, ಜನರೆಲ್ಲ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುತ್ತಾರೆ, ಅಡಚಣೆಯುಂಟಾಗದಂತೆ ಆ ಜನ ನೋಡಿಕೊಳ್ಳುತ್ತಾರೆ, ಆಂಬ್ಯುಲೆನ್ಸ್‌ ನಿರಾಯಾಸವಾಗಿ ಸಾಗಲೆಂದು ದೊಡ್ಡ ದೊಡ್ಡ ರಥಗಳನ್ನೇ ಪಕ್ಕಕ್ಕೆ ಸರಿಸಲು ಪ್ರಯತ್ನಿಸುತ್ತಾರೆ. ಎಲ್ಲಿಯೂ ಯಾರೊಬ್ಬರೂಆಂಬ್ಯುಲೆನ್ಸ್‌ ವಿಚಾರವಾಗಿ ನಿರ್ಲಕ್ಷ್ಯ ತೋರುವುದಿಲ್ಲ. ಸರಿಸುಮಾರು ಐದಾರು ಕಿ.ಮೀಗಳ ದೂರ ಜನ ಒಂದೇ ರೀತಿಯಲ್ಲೇ ಸ್ಪಂದಿಸುತ್ತಾರೆ. ಆಂಬ್ಯುಲೆನ್ಸ್‌ನ ಚಾಲಕ ಡಾಶ್‌ ಬೋರ್ಡ್‌ ಮೇಲೆ ಕ್ಯಾಮೆರಾ ಇರಿಸಿ ಇಡೀ ಪ್ರಯಾಣವನ್ನು ಚಿತ್ರೀಕರಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿದ್ದು ಸಾಕಷ್ಟು ವೈರಲ್‌ ಆಗಿದೆ. ಜನರ ಮೆಚ್ಚುಗೆಗೂ ಪಾತ್ರವಾಗಿದೆ. ಲಕ್ಷಾಂತರ ಜನ ವೀಕ್ಷಿಸಿದ್ದಾರೆ, ಇಷ್ಟಪಟ್ಟಿದ್ದಾರೆ, ಹಂಚಿಕೊಂಡಿದ್ದಾರೆ.

ADVERTISEMENT

ಅಂಬ್ಯುಲೆನ್ಸ್‌ ಬರುತ್ತಿದ್ದರೂ, ಜಾಣ ಕುರುಡರಂತೆ ಮೂಖರಂತೆ ವರ್ತಿಸುವವರಿಗೆ ಇದು ಮಾದರಿ ಎನಿಸುವ ನಡವಳಿಕೆ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.